ಆರ್. ಅಶೋಕ್ ಅವರು ಪಿಒಕೆಯನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದ್ದೇವೆ. ಅದನ್ನು ಮರಳಿ ಕೇಳುತ್ತಿಲ್ಲ, ಕೇಳುವುದಿಲ್ಲ ಎಂದಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಮೌನವಾಗಿದೆ. ಅಂದರೆ, ಅಶೋಕ್ ಅಭಿಪ್ರಾಯಕ್ಕೆ ಬಿಜೆಪಿಯ ಸಂಪೂರ್ಣ ಸಹಮತವಿದೆ ಎಂದರ್ಥವೇ?
ಭಾರತ-ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಸದ್ಯ ವಿರಾಮ ಬಿದ್ದಿದೆ. ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಿಸಲಾಗಿದೆ. ಸಂಘರ್ಷಕ್ಕೆ ತಡೆಬಿದ್ದಿದ್ದರೂ, ಎರಡೂ ರಾಷ್ಟ್ರಗಳ ಗಡಿ ಭಾಗದಲ್ಲಿ ಉದ್ವಿಗ್ನತೆಯ ಕಾವು ಇನ್ನೂ ಉಳಿದಿದೆ. ಕದನ ವಿರಾಮಕ್ಕೆ ಭಾರತ ಒಪ್ಪಿಕೊಂಡಿದ್ದರ ಬಗ್ಗೆ ಸ್ವತಃ ಮೋದಿ ಭಕ್ತರೇ ಪ್ರಧಾನಿ ಮೋದಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕದನ ವಿರಾಮ ಬೇಕಿರಲಿಲ್ಲ, ಯುದ್ಧವನ್ನೇ ಮಾಡಬೇಕಿತ್ತು ಎಂದೆಲ್ಲ ಹೇಳುತ್ತಿದ್ದಾರೆ.
ಈ ನಡುವೆ, ಕರ್ನಾಟಕ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಹೇಳಿಕೆ ವಿರೋಧ, ಆಕ್ರೋಶಗಳಿಗೆ ತುತ್ತಾಗಿದೆ. ಮಾತ್ರವಲ್ಲ, ಇದೇ ಬಿಜೆಪಿಯ ಉದ್ದೇಶ ಅಥವಾ ಅಜೆಂಡಾ ಆಗಿರಬಹುದೇ ಎಂಬ ಅನುಮಾನಗಳಿಗೂ ಕಾರಣವಾಗಿದೆ.
ಇತ್ತೀಚೆಗೆ, ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಆರ್ ಅಶೋಕ್, ”ಪಾಕಿಸ್ತಾನಕ್ಕೆ ಪಿಒಕೆ (ಪಾಕ್ ಅತಿಕ್ರಮಿತ ಕಾಶ್ಮೀರ) ಬಿಟ್ಟುಕೊಟ್ಟಿದ್ದು ನಾವು. ಆ ಬಗ್ಗೆ ನಾವು ಪ್ರಶ್ನೆ ಮಾಡಿಲ್ಲ. ಆಗಿಹೋಗಿದ್ದರ ಬಗ್ಗೆ ಮಾತನಾಡುವುದು ಈ ಸಂದರ್ಭದಲ್ಲಿ ಸೂಕ್ತವಲ್ಲ” ಎಂದಿದ್ದಾರೆ.
ಅವರ ಮಾತಿನ ಅರ್ಥದಲ್ಲಿ, ಭಾರತವೇ ಪಿಒಕೆಯನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದೆ. ಅದನ್ನ ಈಗ ನಾವು ವಾಪಸ್ ಪಡೆಯಬೇಕು ಎನ್ನುವುದು, ವಾಪಸ್ ಕೇಳುವುದು ಸೂಕ್ತವಲ್ಲ ಎಂಬುದಾಗಿ ಹೇಳಿದ್ದಾರೆ.
ಅವರ ಹೇಳಿಕೆ ರಾಜ್ಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಅಶೋಕ್ ಹೇಳಿಕೆ ಬೆನ್ನಲ್ಲೇ ಪಿಒಕೆಯನ್ನು ಪಾಕಿಸ್ತಾನವೇ ಇಟ್ಟುಕೊಳ್ಳಲಿ, ಅದು ನಮಗೆ ಬೇಡ, ನಾವು ಪಿಒಕೆಯನ್ನು ಕೇಳುವುದಿಲ್ಲ. ಪಿಒಕೆ ಮರಳಿ ಭಾರತದ ಭಾಗವಾಗಬೇಕು ಎಂಬ ಯಾವುದೇ ಇರಾದೆ ತಮಗಿಲ್ಲ ಎಂಬುದೇ ಬಿಜೆಪಿಯ ಅಜೆಂಡಾ ಅಥವಾ ಉದ್ದೇಶವೇ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿವೆ.
ಕಾಶ್ಮೀರವನ್ನು (POK) ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಾಗಿದೆ ಎಂದ ವಿಪಕ್ಷ ನಾಯಕ!
— Pushpamanjunath Reddy (@royalreddytwitt) May 14, 2025
POK ಹಿಂದಕ್ಕೆ ಕೇಳೋದು ಸೂಕ್ತವಲ್ಲ ಎಂದ ಆರ್. ಅಶೋಕ್!
😡 pic.twitter.com/Sit7fpuMZc
ಸದ್ಯ, ಪಹಲ್ಗಾಮ್ ದಾಳಿಯ ಬಳಿಕ ಭಾರತ-ಪಾಕ್ ನಡುವೆ ಉದ್ಭವಿಸಿದ್ದ ಸಂಘರ್ಷವನ್ನು ತಡೆದದ್ದು ನಾನೇ, ನನ್ನಿಂದ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಯಿತು, ವ್ಯಾಪಾರ ಸಂಬಂಧದ ಅಸ್ತ್ರ ಬಳಸಿ ಎರಡೂ ದೇಶಗಳನ್ನು ಮೌನಗೊಳಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ-ಪದೇ ಹೇಳುತ್ತಿದ್ದಾರೆ.
ಅಂತಾರಾಷ್ಟ್ರೀಯವಾಗಿ ಭಾರತವನ್ನು ಟ್ರಂಪ್ ಅವಮಾನಿಸುತ್ತಿದ್ದರೂ, ಪ್ರಧಾನಿ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟ್ರಂಪ್ ಹೇಳಿಕೆಯನ್ನು ಖಂಡಿಸಿಲ್ಲ. ಅಲ್ಲಗಳೆದಿಲ್ಲ.
ಇನ್ನು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ದೇಶದ ಜನರಿಗೆ ಮಾಹಿತಿ ನೀಡಿದ್ದ ಸೋಫಿಯಾ ಖುರೇಷಿ ಅವರನ್ನು ಉಗ್ರಗಾಮಿಗಳ ಸಹೋದರಿ ಎಂದು ಮಧ್ಯಪ್ರದೇಶ ಬಿಜೆಪಿ ಸಚಿವ ವಿಜಯ್ ಶಾ ನಾಲಿಗೆ ಹರಿಬಿಟ್ಟಿದ್ದಾರೆ. ಆ ಬಗ್ಗೆಯೂ ಮೋದಿ ಮಾತನಾಡಿಲ್ಲ.
ಇದೀಗ, ಆರ್. ಅಶೋಕ್ ಅವರು ಪಿಒಕೆಯನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದ್ದೇವೆ. ಅದನ್ನು ಮರಳಿ ಕೇಳುತ್ತಿಲ್ಲ, ಕೇಳುವುದಿಲ್ಲ ಎನ್ನುತ್ತಿದ್ದಾರೆ. ಪಿಒಕೆ ವಿಚಾರವಾಗಿ ಅಶೋಕ್ ಗಂಭೀರ ಹೇಳಿಕೆ ನೀಡಿದ್ದರೂ, ಪ್ರಧಾನಿ ಮೋದಿ ಆದಿಯಾಗಿ ಯಾವೊಬ್ಬ ಬಿಜೆಪಿ ನಾಯಕರೂ ಖಂಡಿಸಿಲ್ಲ, ಅಶೋಕ್ ಕ್ಷಮೆ ಕೇಳುವಂತೆ ಒತ್ತಾಯಿಸಿಲ್ಲ, ಅಶೋಕ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಅಶೋಕ್ ಹೇಳಿಕೆಯ ವಿಚಾರದಲ್ಲಿ ಬಿಜೆಪಿಗರ ಮೌನವು ಅಶೋಕ್ ನೀಡಿರುವ ಹೇಳಿಕೆಗೆ ಬಿಜೆಪಿಯ ಸಂಪೂರ್ಣ ಸಹಮತವಿದೆ. ಪಿಒಕೆ ವಿಚಾರದಲ್ಲಿ ಅಶೋಕ್ ನೀಡಿರುವ ಹೇಳಿಕೆಯೇ ಬಿಜೆಪಿಯ ನಿಲುವಾಗಿದೆ ಎಂಬ ಅಭಿಪ್ರಾಯವನ್ನು ಮೂಡಿಸಿದೆ.
1971ರ ಯುದ್ಧದ ನಂತರದಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಉಭಯ ರಾಷ್ಟ್ರಗಳು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದವು. ಬಳಿಕ, ಬಿಡುಗಡೆ ಮಾಡಿದವು. ಆದರೆ, ಪಾಕಿಸ್ತಾನ ಸೈನಿಕರನ್ನು ಮಾತ್ರವೇ ಭಾರತ ಬಿಡುಗಡೆ ಮಾಡಿತು, ಭಾರತೀಯ ಸೈನಿಕರನ್ನು ಪಾಕ್ ಬಿಡುಗಡೆ ಮಾಡಲಿಲ್ಲ. ಚಿತ್ರಹಿಂಸೆ ಕೊಟ್ಟು ಕೊಂದಿತು. ಈ ಬಗ್ಗೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಚಕಾರ ಎತ್ತಲಿಲ್ಲವೆಂದು ಬಿಜೆಪಿ/ಸಂಘಪರಿವಾರದ ಐಟಿ ಸೆಲ್‌ಗಳು ಸುಳ್ಳು ಸುದ್ದಿಯನ್ನು ವ್ಯಾಪಕವಾಗಿ ಹರಡುತ್ತಿವೆ.
ಇಂತಹ ಸುಳ್ಳು ಸುದ್ದಿಗಳನ್ನು ನಂಬುವ, ಹಂಚಿಕೊಳ್ಳುವ ಹಿಂದುತ್ವವಾದಿ ಕಾರ್ಯಕರ್ತರು ಅಶೋಕ್ ಹೇಳಿಕೆಯನ್ನೂ ಒಪ್ಪಿಕೊಂಡುಬಿಡಬಹುದು. ಪಿಒಕೆ ಭಾರತದ ಭಾಗವಲ್ಲ, ಭಾರತಕ್ಕೆ ಬೇಡವೆಂಬ ಅಭಿಪ್ರಾಯವನ್ನು ತಮ್ಮಲ್ಲಿ ಆಳವಾಗಿ ಇರಿಸಿಕೊಂಡು ಬಿಡಬಹುದು. ಆದರೆ, ಪಿಒಕೆ ಭಾರತಕ್ಕೆ ಸೇರಿದ್ದು, ಕಾಶ್ಮೀರದ ಭಾಗವನ್ನು ಪಾಕಿಸ್ತಾನ ಅತಿಕ್ರಮಿಸಿಕೊಂಡು, ತನ್ನ ವಶದಲ್ಲಿ ಇರಿಸಿಕೊಂಡಿದೆ. ಆ ಭಾಗ ಎಂದಿಗೂ ಭಾರತದ ಭಾಗವೇ ಆಗಿರುತ್ತದೆ. ಆ ಪ್ರದೇಶವನ್ನು ಭಾರತ ಮರಳಿ ಪಡೆಯುತ್ತದೆ ಎಂಬ ವಿಶ್ವಾಸ ಭಾರತೀಯರಲ್ಲಿದೆ. ಇಂತಹ ಸಂದರ್ಭದಲ್ಲಿ ಅಶೋಕ್‌ರಂತಹ ನಾಯಕರು ನೀಡುವ ಹೇಳಿಕೆಗಳು ಕುಂದಿಸಿಬಿಡುವ ಅಪಾಯವಿದೆ.
ದೇಶದ ವಿಚಾರದಲ್ಲಿ ಹಗುರವಾಗಿ ಮಾತನಾಡುವ, ಸುಳ್ಳು ವದಂತಿಗಳನ್ನು ಹರಡುವ, ವಿವಾದಾತ್ಮಕ ಹೇಳಿಕೆ ಕೊಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಅದಕ್ಕಾಗಿ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು.