- ಅಂಡರ್ ಪಾಸ್ ಕಾಮಗಾರಿ ಅವೈಜ್ಞಾನಿಕ ಎಂದ ಸಾರ್ವಜನಿಕರು
- ಸರಿಯಾದ ಡಾಂಬರೀಕರಣವೂ ಇಲ್ಲದ ಪರ್ಯಾಯ ಮಾರ್ಗ
ಉಡುಪಿಯ ಸಂತೆಕಟ್ಟೆಯಲ್ಲಿ ನಡೆಯುತ್ತಿರುವ ಅಂಡರ್‌ಪಾಸ್ ಕಾಮಗಾರಿ ಪ್ರದೇಶದಲ್ಲಿ ದಿನನಿತ್ಯ ಮಣ್ಣು ಕುಸಿಯುತ್ತಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಸಂತೆಕಟ್ಟೆಯಲ್ಲಿ ಆರಂಭಗೊಂಡಿರುವ ಅಂಡರ್ ಪಾಸ್ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಮಣ್ಣು ಕುಸಿಯಲಾರಂಭಿಸಿದೆ. ಇದರಿಂದ ಇಲ್ಲಿ ನಿರ್ಮಿಸಲಾದ ತಡೆಗೋಡೆ ಹಾಗೂ ಸರ್ವಿಸ್ ರಸ್ತೆಗೆ ಹಾನಿಯಾಗಿದೆ. ಅಷ್ಟು ಮಾತ್ರವಲ್ಲದೆ ಮಣ್ಣು ಕುಸಿತ ಹೆಚ್ಚಾಗುತ್ತಿದ್ದು ಇದರಿಂದ ಪಕ್ಕದಲ್ಲೇ ಇರುವ ಬೃಹತ್ ಕಟ್ಟಡ ಹಾಗೂ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.
ಕಾಮಗಾರಿ ನಡೆಯುತ್ತಿರುವ ಪರ್ಯಾಯ ಮಾರ್ಗ ಕೂಡ ಸರಿಯಾದ ಡಾಂಬರೀಕರಣ ಇಲ್ಲದ ಕಾರಣ ಪರದಾಡುವ ವಾಹನ ಸವಾರರು ಪರದಾಡುವ ಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕೂಡಲೇ ಕ್ರಮ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಸಂತೆಕಟ್ಟೆಯಲ್ಲಿ ಅಗತ್ಯ ಇದ್ದದ್ದು ಫ್ಲೈಓವರ್, ಆದರೆ ಅಧಿಕಾರಿಗಳು ಫ್ಲೈಓವರ್ ಮಾಡುವುದನ್ನು ಬಿಟ್ಟು ಅಂಡರ್‌ಪಾಸ್‌ನ ಯೋಜನೆ ಹಾಕಿದ್ದಾರೆ. ಇದುವೇ ಸಮಸ್ಯೆಗೆ ಕಾರಣವಾಗಿದೆ. ಸಂಸದರು, ಜನಪ್ರತಿನಿಧಿಗಳು ಈ ಕಡೆ ಬರೋದೆ ಇಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಉಡುಪಿ ಕಡೆಗೆ ಸಾಗುವಾಗ ಈ ಮುಂಚೆ ಸರ್ವಿಸ್ ರಸ್ತೆ ಬಳಸಲಾಗುತ್ತಿದ್ದು, ಡಿವೈಡರ್ ಒಡೆದು ರಸ್ತೆ ಅಗಲೀಕರಣ ಮಾಡಿದ್ದರೂ ಸೂಕ್ತ ಡಾಂಬರೀಕರಣ ಮಾಡದೆ ಅಗೆದ ರಸ್ತೆಯ ಡಾಂಬರು ತಂದು ಸಮತಟ್ಟು ಮಾಡಲಾಗಿತ್ತು. ಇದೀಗ ಮಳೆಯಲ್ಲಿ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.
ಕೋಟ್ಯಂತರ ರೂಪಾಯಿ ಕಾಮಗಾರಿ ನಡೆಯುತ್ತಿದ್ದರೂ ವೈಜ್ಞಾನಿಕವಾಗಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ : ಶಾರೂಕ್ ತೀರ್ಥಹಳ್ಳಿ