ನಾವೀಗ 2025ರ ಹೊತ್ತಿನಲ್ಲಿದ್ದೇವೆ. ಇಂದಿಗೆ ತಂತ್ರಜ್ಞಾನವು ಕೇವಲ ಸಾಧನವಾಗಿರುವುದನ್ನು ಮೀರಿ ಮಾನವ ಶ್ರಮಕ್ಕೆ ಪರ್ಯಾಯವಾಗಿ ರೂಪಾಂತರಗೊಳ್ಳುತ್ತಿದೆ. ಕೃತಕ ಬುದ್ಧಿಮತ್ತೆ (AI) ವೇಗವಾಗಿ ವಿಕಸಿಸುತ್ತಿರುವ ಪ್ರಸ್ತುತ ವರ್ಧಿತ ವಾಸ್ತವವಾಗಿದ್ದು, ನಾನಾ ಉದ್ಯೋಗ ಕ್ಷೇತ್ರಗಳಲ್ಲಿ ತನ್ನ ಪಾರುಪತ್ಯ ಸಾಧಿಸಲು ಮುಂದಡಿ ಇಟ್ಟಿದೆ. ಮುಂದಿನ ಎರಡು ವರ್ಷಗಳಲ್ಲಿ ಬಹಳಷ್ಟು ಉದ್ಯೋಗಗಳು ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಇತ್ತೀಚಿನ ಜಾಗತಿಕ ಅಧ್ಯಯನಗಳು ಸ್ಪಷ್ಟವಾಗಿ ಹೇಳುತ್ತಿವೆ.
AI ತಜ್ಞರೂ ಆಗಿರುವ ತಂತ್ರಜ್ಞಾನ ವೇದಿಕೆ ರೆಪ್ಲಿಟ್‌ನ ಸ್ಥಾಪಕ ಅಮ್ಜದ್ ಮಸಾದ್ ಇತ್ತೀಚೆಗೆ ‘ದಿ ಡೈರಿ ಆಫ್ ಎ ಸಿಇಒ’ ಎಂಬ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡುತ್ತಾ… AI ಯಾವೆಲ್ಲಾ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿವರಿಸಿದ್ದಾರೆ.
ಅವರು ವಿವರಿಸಿರುವ ಪಟ್ಟಿಯಲ್ಲಿ ಮೊದಲಿಗೆ ಡೇಟಾ ಎಂಟ್ರಿ ಕ್ಲರ್ಕ್ ಮತ್ತು ಗುಣಮಟ್ಟ ಪರಿಶೀಲಕರ ಹುದ್ದೆಗಳಿವೆ. ನಿರಂತರವಾಗಿ ಡೇಟಾವನ್ನು ಕ್ಲಿಕ್ ಮಾಡುವುದು, ಟೈಪ್ ಮಾಡುವುದು ಅಥವಾ ತಪಾಸಣೆ ಮಾಡುವುದು ಸೇರಿದಂತೆ ಕಂಪ್ಯೂಟರ್ ಬೇಸ್ಡ್ ಕೆಲಸಗಳು ಅಭದ್ರತೆ ಎದುರಿಸಲಿವೆ.
“ಕಂಪ್ಯೂಟರ್ ಕೆಲಸಗಳ ಮೇಲೆ ಅವಲಂಬಿತವಾಗಿರುವ ಯಾವುದೇ ಉದ್ಯೋಗ ಈಗ ನಾಶದ ಅಂಚಿಗೆ ಬಂದಿದೆ. ಅದರ ನಾಶಕ್ಕೆ ಹೆಚ್ಚೇನೂ ಸಮಯ ತೆಗೆದುಕೊಳ್ಳುವುದಿಲ್ಲ. ಈ ಉದ್ಯೋಗಿಗಳು ಕೇವಲ ಇನ್ನೆರಡು ವರ್ಷಗಳೊಳಗೆ ಕೆಲಸ ಕಳೆದುಕೊಳ್ಳುತ್ತಾರೆ” ಎಂದು ಅಮ್ಜದ್ ಸ್ಪಷ್ಟವಾಗಿ ಹೇಳುತ್ತಾರೆ.
ಮುಂದುವರೆದು… ಲೆಕ್ಕಪರಿಶೋಧಕರು ಮತ್ತು ವಕೀಲರಂತಹ ಕೆಲ ವಿಶೇಷ ವೃತ್ತಿಗಳೂ AI ದಾಳಿಗೆ ಒಳಗಾಗಬಹುದು ಎಂದೂ ಮಸಾದ್ ಹೇಳಿದ್ದಾರೆ. ಆದರೆ, AI ಗೆ ಅಡಚಣೆ ಆಗದ ಒಂದು ಕ್ಷೇತ್ರವಿದೆ. ಅದು ಆರೋಗ್ಯ ಹಾಗೂ ಪರಿಸರ ಸಂಬಂಧೀ ಕ್ಷೇತ್ರ. ಏಕೆಂದರೆ ಇವುಗಳನ್ನು ನಿಯಂತ್ರಣ ಮಾಡುವುದು ಮತ್ತು ಊಹಿಸುವುದು ಸುಲಭವಲ್ಲ.
ಡಿಜಿಟಲ್ ತಂತ್ರಜ್ಞಾನದಿಂದ ನಿರ್ವಹಿಸಲ್ಪಡುವ ಕೆಲಸಗಳು ಹೆಚ್ಚು ಅಪಾಯದಲ್ಲಿವೆ. ಬರವಣಿಗೆ, ಡೇಟಾ ಪ್ರೊಸೆಸಿಂಗ್ ಹಾಗೂ ಚಿತ್ರ ವಿನ್ಯಾಸ ಸೇರಿದಂತೆ “ಟೆಕ್ಸ್ಟ್ ಇನ್, ಟೆಕ್ಸ್ಟ್ ಔಟ್” ಕೆಲಸಗಳು ಅಪಾಯದ ಅಂಚಿನಲ್ಲಿವೆ ಎನ್ನುತ್ತಾರವರು. ಪ್ರಸ್ತುತ ಕೆಲಸ ನಿರ್ವಹಿಸುತ್ತಿರುವ ಕೃತಕ ಬುದ್ಧಿಮತ್ತೆಯೇ ಆ ಕೆಲಸಗಳನ್ನು ಸಲೀಸಾಗಿ ಮಾಡುತ್ತದೆ. ಮುಂದಿನ ದಿನಗಳಲ್ಲಿ AI ಸಂಪೂರ್ಣವಾಗಿ ಆ ಉದ್ಯೋಗಗಳನ್ನು ಆವರಿಸಿಕೊಳ್ಳುವುದು ಖಚಿತ.
ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾಗಿದ್ದ ಬಾರ್ಟ್ಲೆಟ್ ಅವರು ಹಂಚಿಕೊಂಡ ವಿಡಿಯೋ ಕ್ಲಿಪ್‌ಗೆ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಿಧ ರೀತಿ ಪ್ರತಿಕ್ರಿಯಿಸಿದ್ದಾರೆ. ಒಬ್ಬರು, ಸಾಲದ ದಾಖಲೆಗಳನ್ನು ಸರಿಹೊಂದಿಸುವ, ಕಾಗದಗಳನ್ನು ಸಂರಕ್ಷಿಸುವ ಅಧಿಕಾರಿಗಳು ನಿರ್ವಹಿಸುವ ಸರಳವಾದ ಡೆಸ್ಕ್ ಕೆಲಸಗಳನ್ನು AI ಕಾಯಮ್ಮಾಗಿ ಕೈಗೆತ್ತಿಕೊಳ್ಳಬಹುದು ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೊಬ್ಬರು “AI ಲೆಕ್ಕಪರಿಶೋಧಕರ ಕೆಲಸಗಳನ್ನು ಕಸಿದುಕೊಳ್ಳುತ್ತಿದೆ ಸರಿ. ಆದರೆ, ಮುಂದೆ ಲೆಕ್ಕಪರಿಶೋಧಕರು ಏನು ಮಾಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬರಂತೂ “ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರತಿಯೊಬ್ಬರೂ AI ಪ್ರಭಾವಕ್ಕೆ ಒಳಗಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗಬಹುದೆಂಬ ಗೊಂದಲದಲ್ಲಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: AIನಿಂದ AGIವರೆಗೆ: ಮಾನವ ಬುದ್ಧಿವಂತಿಕೆಯ ಹೊಸ ಕ್ರಾಂತಿ; ಏನಾಗಬಹುದು ಭವಿಷ್ಯದ ಬದುಕು?
AI ಯ ಬೆಳವಣಿಗೆ ಎನ್ನುವುದು ಕೇವಲ ತಾಂತ್ರಿಕ ಪ್ರಗತಿಯ ವಿಷಯವಲ್ಲದೆ ಅದು ಮಾನವ ಉದ್ಯೋಗದ ಸ್ವರೂಪವನ್ನೇ ಹೊಸತಾಗಿ ಬರೆಯುತ್ತಿರುವ ಕ್ರಾಂತಿ. ಅಮ್ಜದ್ ಮಸಾದ್ ಅವರಂತಹ ತಜ್ಞರ ಎಚ್ಚರಿಕೆಗಳು ಇದೊಂದು ತಾತ್ಕಾಲಿಕ ಹರಿವು ಅಲ್ಲ ಎಂಬುದನ್ನು ತೋರಿಸುತ್ತವೆ. ಡೇಟಾ ಎಂಟ್ರಿ, ಲೆಕ್ಕಪರಿಶೋಧನೆ, ಕಾನೂನು ಸಲಹೆ, ಗುಣಮಟ್ಟ ಪರೀಕ್ಷೆ ಮುಂತಾದವುಗಳು ಮೊದಲಿಗೆ ಪ್ರಭಾವಿತವಾಗುವವು ಎಂದು ಊಹಿಸಲಾಗಿದೆ.
ಈ ಬದಲಾವಣೆಯ ನಡುವೆ, ಜನರು ತಮ್ಮ ನೈಪುಣ್ಯಗಳನ್ನು ಕೌಶಲ್ಯಗಳನ್ನು ನವೀಕರಿಸಿಕೊಳ್ಳುವುದು, ಸೃಜನಾತ್ಮಕತೆ, ಭಾವನಾತ್ಮಕ ಬುದ್ಧಿಮತ್ತೆ ಹಾಗೂ ಮನುಷ್ಯ ಸಂಬಂಧೀ ಸನ್ನಿವೇಶಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. AI ಮೂಲಕ ಕೆಲಸಗಳು ಹೋಗುತ್ತವೆ ಎನ್ನುವುದಕ್ಕಿಂತ, ಅದರಿಂದ ಹೊಸ ಅವಕಾಶಗಳೂ ಉಂಟಾಗಬಹುದು ಎಂಬ ದೃಷ್ಟಿಕೋನವು ಈ ಸಮಯದಲ್ಲಿ ಹೆಚ್ಚು ಗಮನಿಸಬೇಕಾದ ಅಂಶ.
ನಮ್ಮ ಉದ್ಯೋಗಾವಕಾಶಗಳ ಭವಿಷ್ಯವು ಯಂತ್ರ ಅಥವಾ ತಂತ್ರಜ್ಞಾನದ ಕೈಯಲ್ಲಿಲ್ಲ. ಅದು ಯಂತ್ರದೊಂದಿಗೆ ನಾವು ಹೇಗೆ ಸಮರ್ಥವಾಗಿ ಕೆಲಸ ಮಾಡುತ್ತೇವೆ ಎಂಬುದರಲ್ಲಿದೆ.