ವರದಕ್ಷಿಣೆ ಕಿರುಕುಳಕ್ಕೆ ಸಾವಿಗೀಡಾದ ಶಾಂತಲಾ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾದ ಲಿಂಗಸೂಗೂರು ಠಾಣೆಯ ಸಿಪಿಐ ಪುಂಡಲೀಕರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಪ್ರಗತಿಪರ ಜಂಟಿ ಸಂಘಟನೆಗಳು ಪ್ರತಿಭಟಿಸಿದರು.
ನಗರದ ಗುರುಭವನದಿಂದ ಆರಂಭಗೊಂಡು, ಬಸ್ ನಿಲ್ದಾಣ, ನಗರದ ಮುಖ್ಯ ರಸ್ತೆಗಳ ಮೂಲಕ ಸಹಾಯಕ ಆಯುಕ್ತ ಕಚೇರಿವರೆಗೆ ಸಿಪಿಐ ವಿರುದ್ಧ ಘೋಷಣೆ ಹಾಕುವ ಮೂಲಕ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಿದರು.
ಮೃತ ಶಾಂತಲಾನ್ನು ಸುನೀಲ್ ಎನ್ನುವ ವ್ಯಕ್ತಿಯ ಜೊತೆ ವಿವಾಹವಾಗಿರುತ್ತದೆ. ಮದುವೆ ನಂತರ ಸುನೀಲ್ ಹಾಗೂ ಅವರ ಕುಟುಂಬಸ್ಥರು ನಿರಂತರ ವರದಕ್ಷಣೆ ಕಿರುಕುಳ, ಮಕ್ಕಳಾಗಿಲ್ಲ ಎಂದು ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದ ಶಾಂತಲಾ ಆರೋಗ್ಯ ಸಂಪೂರ್ಣ ಹದೆಗಟ್ಟು ಸಾವನ್ನಪ್ಪಿದ್ದು, ಈ ಸಂಬಂಧ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಕಳೆದ ತಿಂಗಳು ಏಪ್ರಿಲ್ 09 ರಂದು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣ ದಾಖಲಾಗಿ ಒಂದು ತಿಂಗಳು ಕಳೆದರೂ ಸಿಪಿಐ ಪುಂಡಲೀಕ ಪಟಾತರ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಹಾಗೂ ನೊಂದ ಕುಟುಂಬಸ್ಥರು ಕೇಳಿದರೆ ಉಡಾಫೆ ಉತ್ತರ ನೀಡುವುದು ಮತ್ತು ಆರೋಪಿಗಳ ಜೊತೆ ಶಾಮೀಲಾಗಿ ಕಾಲಹರಣ ಮಾಡಲಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತಕ್ಷಣ ಇವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |ಕಾರ್ಮಿಕರ ಲೇಬರ್ ಕಾರ್ಡ್ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರು, ಶಾಂತಲಾನ್ನು ನಿರಂತರ ವರದಕ್ಷಿಣೆ ಕಿರುಕುಳ, ಮಕ್ಕಳಾಗಿಲ್ಲವೆಂದು ದೈಹಿಕ ಮಾನಸಿಕವಾಗಿ ನೊಂದು ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದು, ಸಾಕ್ಷಿ ಸಮೇತ ಪೊಲೀಸ್ ಠಾಣೆಗೆ ದೂರು ನೀಡಿದರು ಆರೋಪಿಗಳನ್ನು ಬಂಧಿಸುವಲ್ಲಿ ಸಿಪಿಐ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಆರೋಪಿಗಳನ್ನು ಬಂಧಿಸುವಲ್ಲಿ ಸಿಪಿಐ ಜೊತೆ ಠಾಣೆಯಲ್ಲಿ ಚರ್ಚಿಸಿದಾಗ ನಮ್ಮ ಹತ್ತಿರ ಆಪ್ಷನ್ ಇಲ್ಲ, ನಾನು ಬಂಧಿಸಿದರೆ ಕೆಲಸದಿಂದ ವಜಾಗೊಳ್ಳುತ್ತೇನೆ. ನೀವು ಎಲ್ಲಿಗೆ ಹೋಗ್ತೀರಾ ಎಂದು ಉಡಾಫೆ ಉತ್ತರ ಕೊಡುವ ಮೂಲಕ ಮಾತನಾಡಿದ್ದಾರೆ. ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ಪೋಲಿಸರು ಮುಂದಾಗಬೇಕು ಹೊರೆತು ಆರೋಪಿಗಳ ಜೊತೆ ಶಾಮೀಲಾಗಿ ಪ್ರಕರಣವನ್ನು ತಮಗೆ ಸಂಬಂಧವಿಲ್ಲದಂತೆ ಇದ್ದಾನೆ ಎಂದು ಕಿಡಿಕಾರಿದರು.
ಕೂಡಲೇ ಸರಕಾರ ಸಿಪಿಐರನ್ನು ಅಮಾನತುಗೊಳಿಸಿ ಹಾಗೂ ಸಂಬಂಧ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಮುಖಂಡರಾದ ಸಾಹೀರಾ ಬಾನು, ಶಾಂತಕುಮಾರಿ, ಡಿವೈಎಫ್ಐ ನ ಜಿಲ್ಲಾ ಸಮಿತಿ ಸದಸ್ಯ ಚನ್ನಬಸವ ವಂದ್ಲಿಹೊಸೂರು, ಕೆಪಿಆರ್ ಎಸ್ ಮುಖಂಡರಾದ, ಅಪ್ಪಣ್ಣ ಕಾಂಬಳೆ, ನಿಂಗಪ್ಪ ಎಂ, ಆಂಜನೇಯ, ಹನುಮಂತ ಚಲುವಾದಿ, ಮಹಾಂತೇಶ ಬುದ್ದಿನ್ನಿ, ಸಿಐಟಿಯುನ ಶ್ರೀದರ್, ಖಾಜಾ ಮೈನುದ್ದೀನ್, ಬಾಬಾಜಾನಿ, ಶಂಸುದ್ದೀನ್, ಶಾಂತಲಾ ತಂದೆ ನರಸಿಂಗಪ್ಪ, ನಾರಾಯಣ್ ಗೊಂದಳಿ, ತುಕಾರಾಂ, ಶಂಕರ್, ಸುನೀಲ್, ಅನೀಲ್, ನಾಮದೇವ, ಕೃಷ್ಣ, ದೇವು ಸಿಂದೆ, ಬಾಲಕೃಷ್ಣ, ರವಿ ಪಾತಂಗೆ, ರಾಹುಲ್ ಸೇರಿದಂತೆ ಕುಟುಂಬಸ್ಥರು ಇದ್ದರು.