ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಂದಿಗೆ ಯುಗಾಂತ್ಯವಾಗಿದೆ. ಇನ್ಮುಂದೆ ಬಿಬಿಎಂಪಿ ಎನ್ನುವ ಹೆಸರು ಬೆಂಗಳೂರಿಗರ ಜನಮಾನಸದಿಂದ ದೂರವಾಗಲಿದೆ. ಹೌದು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕನಸಿಬ ‘ಗ್ರೇಟರ್ ಬೆಂಗಳೂರು’ ಉದಯಿಸಿದ್ದು, ಸಿಲಿಕಾನ್ ಸಿಟಿಯ ವ್ಯಾಪ್ತಿ ಕೂಡ ದೊಡ್ಡದಾಗಲಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯನ್ನು ಮೇ 15ರಂದು ಜಾರಿಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಬುಧವಾರ ಅಧಿಸೂಚನೆ ಹೊರಡಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಹಿಸಿಕೊಳ್ಳುವವರೆಗೆ ಬಿಬಿಎಂಪಿ ಮುಂದುವರಿಯಲಿದೆ.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ತುಷಾರ್ ಗಿರಿನಾಥ್ ಅವರು ಗುರುವಾರದಿಂದ ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಜಿ) ಕಾಯ್ದೆ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಜಿಬಿಎ ಅಡಿಯಲ್ಲಿ ವಿವಿಧ ನಿಗಮಗಳ ಪುನರ್ರಚನೆ ಪೂರ್ಣಗೊಳ್ಳುವವರೆಗೆ, ನಿಗಮದ ಕಾರ್ಯಚಟುವಟಿಕೆಯಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಹಂತದಲ್ಲಿ, ಜಿಬಿಎ ಅಡಿಯಲ್ಲಿ ಬರುವ ಪ್ರದೇಶಗಳನ್ನು ಸೂಚಿಸಲಾಗುತ್ತದೆ. ಅದು ಮುಗಿದ ನಂತರ, ಈ ಪ್ರದೇಶಗಳನ್ನು ಜಿಬಿಜಿ ಕಾಯ್ದೆಯ ಸೆಕ್ಷನ್ 5 ರ ಪ್ರಕಾರ ನಿಗಮಗಳನ್ನು ರಚಿಸಲು ಮತ್ತಷ್ಟು ವಿಂಗಡಿಸಲಾಗುತ್ತದೆ. ಕಾರ್ಯವಿಧಾನದ ಪ್ರಕಾರ, ಇದು ಅಧಿಸೂಚನೆಯನ್ನು ನೀಡುವುದು ಮತ್ತು ಆಕ್ಷೇಪಣೆ ಸಲ್ಲಿಸುವುದನ್ನು ಸಹ ಒಳಗೊಂಡಿರುತ್ತದೆ ಎಂದು ಗಿರಿನಾಥ್ ವಿವರಿಸಿದ್ದಾರೆ.
ಕಾಯ್ದೆಯ ಪ್ರಕಾರ ಮೂರು ಇಲ್ಲವೇ ಐದು ಪಾಲಿಕೆಯನ್ನಾಗಿ ಮಾಡಿ ಗ್ರೇಟರ್ ಬೆಂಗಳೂರು ಕೇಂದ್ರ, ಗ್ರೇಟರ್ ಬೆಂಗಳೂರು ಉತ್ತರ, ಗ್ರೇಟರ್ ಬೆಂಗಳೂರು ದಕ್ಷಿಣ ಹೀಗೆ ನಾಮಕರಣ ಮಾಡುವ ಸಾಧ್ಯತೆ ಇದೆ. ಜಿಬಿಎ ಆಡಳಿತಾಧಿಕಾರಿ ಅಧಿಕಾರ ಚಲಾಯಿಸಲಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಲಿದ್ದಾರೆ. ಉಳಿದಂತೆ ಸ್ಥಳೀಯ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಗಳು ಮುಖ್ಯಸ್ಥರು ಸದಸ್ಯರಾಗಿರಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಿರ್ಭೀತ ನ್ಯಾಯಮೂರ್ತಿಗಳು ಮತ್ತು ಕಾಕತಾಳೀಯ ಕಾವ್ಯಾತ್ಮಕ ನ್ಯಾಯ
ಗ್ರೇಟರ್ ಬೆಂಗಳೂರಿನಿಂದ ಸಿಲಿಕಾನ್ ಸಿಟಿಯ ವ್ಯಾಪ್ತಿ ಕೂಡ ಹಿರಿದಾಗಲಿದೆ. ನಗರದ ಕೈಗಾರಿಕಾ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಅತ್ತಿಬೆಲೆ, ಬಾಗಲೂರು, ಬೊಮ್ಮಸಂದ್ರ, ಹೆಸರಘಟ್ಟ, ಹಾರೋಹಳ್ಳಿ, ದಾನಸಪುರ, ಕುಂಬಳಗೋಡು ಸೇರಿದಂತೆ ಹಲವು ಪ್ರದೇಶಗಳನ್ನು ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಗೆ ಸೇರಿಸಿಕೊಳ್ಳಲಿದೆ. ಗ್ರೇಟರ್ ಬೆಂಗಳೂರಿನಲ್ಲಿ ಹಲವು ಬದಲಾವಣೆ ಸಾಧ್ಯತೆ ಇದ್ದು,ಕಟ್ಟಡಗಳ ಗಾತ್ರ, ಎತ್ತರ ನಿಯಮಗಳು ಬದಲಾಗುವ ಸಾಧ್ಯತೆ ಇದೆ.
2007ರಲ್ಲಿ ರಚನೆಯಾಗಿದ್ದ ಬಿಬಿಎಂಪಿಯ 2010 ರಲ್ಲಿ ಸ್ಥಳೀಯ ಚುನಾವಣೆಗಳು ನಡೆದಿತ್ತು. ಇಂತಹ ಬಿಬಿಎಂಪಿ ಇಂದು ತನ್ನ ಅಸ್ತಿತ್ವ ಕಳೆದುಕೊಳ್ಳಲಿದ್ದು, ಇಂದಿನಿಂದ ಗ್ರೇಟರ್ ಬೆಂಗಳೂರು ಜಾರಿಯಾಲಿದೆ. ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಇಂತಹ ಟೈಂನಲ್ಲಿ ಗ್ರೇಟರ್ ಬೆಂಗಳೂರಿನ ಆಡಳಿತದ ಬಗ್ಗೆ ಸಹಜವಾಗಿಯೇ ಕುತೂಹಲ, ಪ್ರಶ್ನೆಗಳು ಮುಂದಿವೆ.
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಇಂದಿನಿಂದ ಜಾರಿಯಾಗಲಿದೆ. ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಗುರುವಾರ (ಮೇ 15) ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ಇನ್ನು ಮುಂದೆ ಬೆಂಗಳೂರು – ಗ್ರೇಟರ್ ಬೆಂಗಳೂರು ಆಗಲಿದೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆಯಿದೆ. ರಾಜ್ಯದ ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು” ಎಂದರು.
ಮಳೆ ಅನಾಹುತಕ್ಕೆ ಸೂಕ್ತ ಪರಿಹಾರ
“ರಾಜ್ಯದಲ್ಲಿ ಮಳೆಯಿಂದಾಗಿ ಅನಾಹುತಗಳು ನಡೆಯುತ್ತಿದ್ದು, ಈ ಬಗ್ಗೆ ಸರ್ಕಾರದ ಕ್ರಮದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಮಳೆಯಿಂದಾಗಿ ಸಂಭವಿಸುವ ಅನಾಹುತಗಳಿಗೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
