ಜಾತ್ಯತೀತ ಹಾಗೂ ಬಹುತ್ವ ಸಂಸ್ಕೃತಿಯು ಭಾರತದ ಬೆನ್ನೆಲುಬಾಗಿದ್ದು, ಬುದ್ಧ-ಬಸವರ ತತ್ವಾದರ್ಶ ಹಾಗೂ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಡಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಹೇಳಿದರು.
ಬಳ್ಳಾರಿ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ವಿಚಾರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಮೂರು ಮಹಾನ್ ವ್ಯಕ್ತಿಗಳ ಆಶಯಗಳು ಭಾರತದ ಸಂವಿಧಾನದ ರೂಪದಲ್ಲಿ ಮೂಡಿ ಬಂದಿವೆ. ಸಂವಿಧಾನವು ದೇಶದಲ್ಲಿರುವ ಎಲ್ಲ ವರ್ಗದವರಿಗೆ ಅನ್ವಯಿಸುತ್ತದೆ. ವ್ಯಕ್ತಿ ಮತ್ತು ಸಮುದಾಯ ಪ್ರಗತಿ ಹೊಂದಲು ನಮ್ಮಲ್ಲಿರುವ ಕೀಳರಿಮೆ ಮನಸ್ಥಿತಿಯಿಂದ ಹೊರಬರಬೇಕು” ಎಂದು ಪ್ರತಿಪಾದಿಸಿದರು.
ಬೌದ್ಧ ಸಾಹಿತಿ ಆಯುಷ್ಮಾನ್ ಬುದ್ಧಘೋಷ್ ದೇವೇಂದ್ರ ಹೆಗ್ಗಡೆ ಮಾತನಾಡಿ, “ಬುದ್ಧ ಕಾಲಾತೀತ ಪುರುಷ. ಎಲ್ಲ ಕಾಲಕ್ಕೂ ಸಾಗುವ ಬುದ್ಧನ ವಿಚಾರಗಳು ಅಂದಿನಿಂದ ಇಲ್ಲಿಯವರಗೆಗೂ ಪ್ರಸ್ತುತವಾಗಿವೆ. ಬುದ್ಧನ ಪಂಚಶೀಲವು ಎಲ್ಲ ಜಾತಿ, ಧರ್ಮ, ಜನಾಂಗಕ್ಕೆ ಬೆಳಕನ್ನು ನೀಡುವುದಾಗಿದೆ. ಪ್ರತಿಯೊಂದು ಸಮಸ್ಯೆಗೂ ಬುದ್ಧನಲ್ಲಿ ಪರಿಹಾರವಿದೆ. ಇಂದಿನ ಯುವ ಪೀಳಿಗೆಗೆ ಬುದ್ಧನ ಪರಿಚಯ ಇಲ್ಲದಂತಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಸಾಹಿತಿ ಹಾಗೂ ವಿವಿಯ ಸಿಂಡಿಕೇಟ್ ಸದಸ್ಯ ಪ್ರೊ. ಅಮರೇಶ್ ನುಗಡೋಣಿ ಮಾತನಾಡಿ, “ಬಸವಣ್ಣನ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಇವರ ವಿಚಾರಗಳು ಪ್ರೇರಣೆಯಾಗಿವೆ. ಬಸವಣ್ಣನವರ ವಚನಗಳು ಮತ್ತು ಅವರಲ್ಲಿದ್ದ ಜ್ಞಾನದ ಅರಿವು ಹೊಸತನದೆಡೆಗೆ ಸಾಗುವುದಾಗಿದೆ” ಎಂದರು.
ವಿವಿಯ ಕುಲಪತಿ ಪ್ರೊ.ಎಂ ಮುನಿರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, “ಅನ್ಯಾಯಕ್ಕೆ ಒಳಗಾದ ಪ್ರತಿಯೊಂದು ಜಾತಿಗೆ ನ್ಯಾಯ ದೊರಕಿಸಿದವರು ಅಂಬೇಡ್ಕರ್ ಅವರು. ಬುದ್ಧ, ಬಸವ ಅಂಬೇಡ್ಕರ್‌ರವರ ವೈಚಾರಿಕತೆಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಕುಟುಂಬ, ಸಮಾಜ, ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿ: ಬಳ್ಳಾರಿ | ಜೋಳದ ರಾಶಿ ದೊಡ್ಡನಗೌಡರ ಕಲಾಸೇವೆ ಅಪಾರ: ಎನ್ ಬಸವರಾಜ್
ವಿವಿಯಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿ ಕುಲಸಚಿವ ಎಸ್ ಎನ್ ರುದ್ರೇಶ್, ಮೌಲ್ಯಮಾಪನ ಕುಲಸಚಿವ ಪ್ರೊ. ಎನ್ ಎಂ ಸಾಲಿ, ಕಾರ್ಯಕ್ರಮ ಸಂಚಾಲಕ ಪ್ರೊ. ಎನ್ ಶಾಂತನಾಯ್ಕ್, ಡಾ.ಸುಷ್ಮಾ ಜೋಗನ್, ಡಾ. ಶ್ರೀದೇವಿ ಆಲೂರು, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.