ಮಕ್ಕಳ ಸಂರಕ್ಷಣೆ ಕುರಿತ ಕಾಯ್ದೆಗಳ ಅರಿವು ಪ್ರತಿಯೊಬ್ಬರಿಗೂ ಅತ್ಯವಶ್ಯಕ ಎಂದು ಶಹಾಪೂರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಣ್ಣ ದೇಸಾಯಿ ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಮಕ್ಕಳ ಸಂರಕ್ಷಣಾ ಘಟಕದ ಸದಸ್ಯರಿಗೆ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳೆಂದರೆ ಯಾರು, ಯಾವ ಕಾಯ್ದೆಗಳಲ್ಲಿ ಯಾರ್ಯಾರನ್ನು ಮಕ್ಕಳೆಂದು ಕರೆಯುತ್ತಾರೆ ಎಂಬುದನ್ನು ತಿಳಿದಿರಬೇಕು. ಜುವಿನಯಿಲ್ ಜಸ್ಟಿಸ್ ಆಕ್ಟ್ 2015, ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಮ್ ಸೆಕ್ಷುವಲ್ ಅಫೆನ್ಸ್ ಆಕ್ಟ್ (ಪೋಕ್ಸೋ) 2012, ಚೈಲ್ಡ್ ಅಂಡ್ ಅಡೊಲೊಸೆಂಟ್ ಲೇಬರ್ ಪ್ರೊಹಿಬಿಷನ್ ಅಂಡ್ ರೆಗ್ಯುಲೇಶನ್ ಆಕ್ಟ್ 1986. ಪ್ರೋಹಿಬಿಷನ್ ಆಫ್ ಚೈಲ್ಡ್ ಮ್ಯಾರೇಜ್ ಆಕ್ಟ್ 2006, ಮತ್ತು ಮಕ್ಕಳ ಹಕ್ಕುಗಳ ಕುರಿತು ಸವಿಸ್ತಾರವಾಗಿ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು.
ಮಕ್ಕಳ ರಕ್ಷಣಾ ಘಟಕದ ಸದಸ್ಯರಿಗೆ ಹಲವು ಪ್ರಶ್ನೆಗಳನ್ನು ಕೇಳಿ ವಿಷಯಗಳನ್ನು ಅರ್ಥಮಾಡಿಕೊಳ್ಳುವಂತೆ ಮಾಡಿದರು. ಮಕ್ಕಳ ಮದುವೆ ಮಾಡಿದರೆ ಆಗುವ ಶಿಕ್ಷೆಯನ್ನು, ಮಕ್ಕಳಿಗೆ ಕೂಲಿ ಕೆಲಸಕ್ಕೆ ತೆಗೆದುಕೊಂಡರೆ ಆಗುವ ಶಿಕ್ಷೆಯನ್ನು, ಮಕ್ಕಳನ್ನು ಲೈಂಗಿಕವಾಗಿ ಶೋಷಣೆಗೊಳಪಡಿಸಿದರೆ ಮತ್ತು ಯಾವುದೇ ರೀತಿಯ ದೌರ್ಜನ್ಯ ಮಾಡಿದರೆ ಆಗುವ ಶಿಕ್ಷೆಯನ್ನು ವಿಸ್ತಾರವಾಗಿ ತಿಳಿಯಪಡಿಸಿದರು. ಮಕ್ಕಳ ಮೇಲೆ ಅತ್ಯಾಚಾರ ಮಾಡಿದರೆ ಆಗುವ ಶಿಕ್ಷೆಯನ್ನು ಯಾರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಮನವರಿಕೆ ಮಾಡಿದರು. ಮಕ್ಕಳ ರಕ್ಷಣೆ ಕುರಿತು ಏನಾದರೂ ಘಟನೆಗಳು ಕಂಡು ಬಂದರೆ ಕೂಡಲೇ 1098 ಗೆ ಸಂಪರ್ಕಿಸಬೇಕೆಂದು ಕರೆ ನೀಡಿದರು. ಅನಿಲ್ ತೇಜಪ್ಪ ಬಲ್ಲೂರ್ ಕರ್ ವ್ಯವಸ್ಥಾಪಕರು ವರ್ಲ್ಡ್ ವಿಜನ್ ಇಂಡಿಯಾ ಅವರು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಅತಿಥಿಗಳಾಗಿ ಆಗಮಿಸಿದ ಸಂತೋಷ್ ಕುಮಾರ್ ವಿಶ್ವಕರ್ಮ ಅವರು ಮಾತನಾಡಿ, “ಮಕ್ಕಳ ಸಂರಕ್ಷಣೆ ಕುರಿತು, ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಾ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು” ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ಗಂಗಮ್ಮ, ಐಶ್ವರ್ಯ, ಪೂಜಾ, ಪ್ರಕಾಶ್ ಹಾಗೂ 10ನೇ ತರಗತಿಯಲ್ಲಿ ಅಗ್ರ ಶ್ರೇಣಿಯಲ್ಲಿ ಪಾಸಾದ ಹುಸೇನ್ ಬಾಷಾ ಮತ್ತು ಶ್ರೇಯ ಅವರಿಗೆ ಸನ್ಮಾನ ಮಾಡಲಾಯಿತು.
ಇದನ್ನೂ ಓದಿ: ಯಾದಗಿರಿ | ನೀರು ಕುಡಿಯಲು ಹೋದ ಮೂವರು ಬಾಲಕರು ದುರ್ಮರಣ
ಕನ್ಯಾಕೋಳೂರು, ಜೆ ತಾಂಡ, ಹೊತಪೇಟೆ, ರಸ್ತಾಪುರ್ ಶಾರದಹಳ್ಳಿ ವಿಭೂತಿಹಳ್ಳಿ ಬೆನಕನಹಳ್ಳಿ ಮತ್ತು ತಿಪ್ಪನಹಳ್ಳಿ ಗಳಿಂದ ಮಕ್ಕಳ ಸಂರಕ್ಷಣೆ ಘಟಕದ ಸದಸ್ಯರುಗಳು ಮತ್ತು ಮಕ್ಕಳ ಗುಂಪುಗಳ ಸದಸ್ಯರುಗಳು ಸೇರಿದಂತೆ ಸುಮಾರು 55 ಮಂದಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮೈಕಲ್ ಸಂಪತ್ ಕುಮಾರ, ರಾಬರ್ಟ್, ಅಶೋಕ್, ಶಿವು, ಮೇನಕ, ಸಿದ್ದಮ್ಮ ಮತ್ತು ಇತರ ಸ್ವಯಂಸೇವಕರುಗಳು ಭಾಗವಹಿಸಿದ್ದರು.