ಭಾರತ-ಪಾಕ್ ಸಂಘರ್ಷ | ಜಾಗತಿಕವಾಗಿ ಭಾರತಕ್ಕೆಷ್ಟು ಬೆಂಬಲ ಸಿಕ್ಕಿತು?

Date:

Advertisements
ಭಾರತ-ಪಾಕ್ ಸಂಘರ್ಷದ ಸಮಯವನ್ನು ತನ್ನ ಸ್ವಾರ್ಥಕ್ಕಾಗಿ ಅತ್ಯುತ್ತಮವಾಗಿ ಬಳಸಿಕೊಂಡಿದ್ದು ಅಮೆರಿಕ. ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳೂ ತಮ್ಮ ಮಿತ್ರರೇ ಎಂದು ಹೇಳಿದ ಟ್ರಂಪ್, ಉಭಯ ರಾಷ್ಟ್ರಗಳನ್ನು ಬೆದರಿಸಿದರು. ಅನೇಕ ರಾಷ್ಟ್ರಗಳ ಮೇಲೆ ಹಿಡಿತ ಹೊಂದಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಮಾತು, ನಿರ್ಧಾರ, ನಿಲುವುಗಳೇ ಮೇಲುಗೈ ಸಾಧಿಸುತ್ತವೆ ಎಂದು ಪ್ರತಿಪಾದಿಸಿದರು.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ, 28 ಮಂದಿಯನ್ನು ಕೊಂದು ಕ್ರೌರ್ಯ ಮೆರೆದಿದ್ದರು. ಈ ಕೃತ್ಯ ನಡೆದ ಬಳಿಕ, ಭಾರತ ಮತ್ತು ಪಾಕಿಸ್ತಾನ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿತು. ಭಾರತೀಯ ಸೇನೆಯು ಪಾಕಿಸ್ತಾನದಲ್ಲಿ ಭಯೋತ್ಪಾದಕರ ನೆಲೆಗಳು ಎಂದು ಗುರುತಿಸಲಾದ 9 ಸ್ಥಳಗಳ ಮೇಲೆ ದಾಳಿ ನಡೆಸಿತು. ಭಯೋತ್ಪಾದಕನೊಬ್ಬನ ಕುಟುಂಬವನ್ನು ಕೊಂದಿತು. ಈ ದಾಳಿ-ಪ್ರತಿದಾಳಿಯಿಂದ ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾದ ಸಂಘರ್ಷವು ವಿಕೋಪಕ್ಕೆ ಏರಿದ್ದು, ಬಳಿಕ ಶಮನವಾಗಿದ್ದು, ಕದನ ವಿರಾಮದ ಶ್ರೇಯಸ್ಸನ್ನು ಟ್ರಂಪ್ ತೆರೆದುಕೊಳ್ಳುತ್ತಿರುವುದು ಎಲ್ಲವನ್ನೂ ಗಮನಿಸಿದ್ದೇವೆ. ಆದರೆ, ಇದೇ ಸಂದರ್ಭದಲ್ಲಿ ಹಲವು ರಾಷ್ಟ್ರಗಳು ಹೇಗೆ ಪ್ರತಿಕ್ರಿಯಿಸಿದವು, ಯಾರಿಗೆ-ಹೇಗೆ ಬೆಂಬಲ ನೀಡಿದವು ಎಂಬುದನ್ನೂ ಗಮನಿಸುವ ಅಗತ್ಯವಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ನಾನಾ ರಾಷ್ಟ್ರಗಳು ಖಂಡಿಸಿದವು. ಸಂತಾಪ ಸೂಚಿಸಿದವು. ಹೊರಗಿನ ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವೇ ಇಲ್ಲ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಜೊತೆಗಿರುತ್ತೇವೆಂದು ಹಲವು ರಾಷ್ಟ್ರಗಳು ಘೋಷಿಸಿದವು. ಅವುಗಳಲ್ಲಿ, ಇಂಗ್ಲೆಂಡ್, ರಷ್ಯಾ, ಇಸ್ರೇಲ್, ಅಮೆರಿಕ, ಫ್ರಾನ್ಸ್, ಜಪಾನ್, ಸೌದಿ ಅರೇಬಿಯಾ, ಯುಎಇ ಹಾಗೂ ಕತಾರ್ ಪ್ರಮುಖವಾದವು.

ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ವಿದೇಶಾಂಗ ಸಚಿವ ಗಿಡಿಯೋನ್ ಸಾರ್ ಅವರು, ‘ಇದು ಅತ್ಯಂತ ಘೋರ ಕೃತ್ಯ’ವೆಂದು ಕರೆದರು. ಭಾರತದ ಭದ್ರತಾ ಪಡೆಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ದಾಳಿಯನ್ನು ಖಂಡಿಸಿದರು, ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ಸಂತಾಪ ಸೂಚಿಸಿದರು.

Advertisements

ಜಪಾನ್ ಪ್ರಧಾನಮಂತ್ರಿ ಶಿಗೇರು ಇಶಿಬಾ ಅವರು, ‘ಭಯೋತ್ಪಾದನೆಗೆ ಯಾವುದೇ ಕಾರಣವಿಲ್ಲ. ಭಯೋತ್ಪಾದನೆಯನ್ನು ಸಹಿಸಲಾಗದು’ ಎಂದರು. ಪಹಲ್ಗಾಮ್ ದಾಳಿಯನ್ನು ‘ಕ್ರೂರ ಅಪರಾಧ’ ಎಂದ ರಷ್ಯಾ, ಭಯೋತ್ಪಾದನೆ ವಿರುದ್ದದ ಭಾರತದ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿತು. ಅಗತ್ಯ ರಕ್ಷಣಾ ಶಸ್ತ್ರಗಳನ್ನು ಒದಗಿಸುವುದಾಗಿಯೂ ಭರವಸೆ ನೀಡಿತು.

ಸೌದಿ ಅರೇಬಿಯಾ ಮತ್ತು ಯುಎಇ, ಪ್ಯಾಲೆಸ್ತೀನ್‌ಗಳು ದಾಳಿಯನ್ನು ಕ್ರೂರ ಕೃತ್ಯವೆಂದು ಖಂಡಿಸಿದವು. ಭಾರತದ ಭದ್ರತೆ ಮತ್ತು ಸ್ಥಿರತೆಗಾಗಿ ಬೆಂಬಲ ನೀಡುವುದಾಗಿ ಘೋಷಿಸಿದವು. ಈ ರಾಷ್ಟ್ರಗಳಲ್ಲದೆ, ಶ್ರೀಲಂಕಾ, ಮಾಲ್ಡೀವ್ಸ್ ಹಾಗೂ ಪನಾಮ ಕೂಡ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಭಾರತಕ್ಕೆ ಬೆಂಬಲ ಘೋಷಿಸಿದವು.

ಆದರೆ, ಈ ಎಲ್ಲ ದೇಶಗಳು ಮೌಖಿಕ ಬೆಂಬಲವನ್ನು ಮಾತ್ರವೇ ಘೋಷಿಸಿದವೇ ಹೊರತು, ಸಂಘರ್ಷದ ನೆಲದಲ್ಲಿ ಕಾಣಿಸಿಕೊಳ್ಳಲಿಲ್ಲ. ಭಾರತಕ್ಕೆ ಯಾವುದೇ ರೀತಿಯ ಸಹಕಾರ ನೀಡಲಿಲ್ಲ. ಹಾಗೆ ನೋಡಿದರೆ, ಪಾಕಿಸ್ತಾನಕ್ಕೆ ಟರ್ಕಿ ಮತ್ತು ಅಜರ್ಬೈಜಾನ್ ಬೆಂಬಲ ನೀಡಿದ್ದು ಮಾತ್ರವಲ್ಲ, ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಸಕ್ರಿಯ ಸಹಕಾರ ನೀಡಿದವು.

ಈ ವರದಿ ಓದಿದ್ದೀರಾ?: ಭಾರತದೊಂದಿಗೆ ಕದನ ವಿರಾಮದ ನಂತರ ಪಾಕಿಸ್ತಾನದಲ್ಲಿ ಏನಾಗುತ್ತಿದೆ?

ಸಂಘರ್ಷದ ಸಮಯವನ್ನು ತನ್ನ ಸ್ವಾರ್ಥಕ್ಕಾಗಿ ಅತ್ಯುತ್ತಮವಾಗಿ ಬಳಸಿಕೊಂಡಿದ್ದು ಅಮೆರಿಕ. ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳೂ ತಮ್ಮ ಮಿತ್ರರೇ ಎಂದು ಹೇಳಿದ ಟ್ರಂಪ್, ಉಭಯ ರಾಷ್ಟ್ರಗಳನ್ನು ಬೆದರಿಸಿದರು. ವ್ಯಾಪಾರ, ವಹಿವಾಟಿನ ನಿರ್ಬಂಧದಂತಹ ಬೆದರಿಕೆಯ ಅಸ್ತ್ರಗಳನ್ನು ಬಳಸಿ, ಎರಡು ರಾಷ್ಟ್ರಗಳ ಮೇಲೆ ತಾವು ಹಿಡಿತ ಹೊಂದಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಮಾತು, ನಿರ್ಧಾರ, ನಿಲುವುಗಳೇ ಮೇಲುಗೈ ಸಾಧಿಸುತ್ತವೆ ಎಂಬುದನ್ನು ಹೇಳಿಕೊಳ್ಳಲು ಟ್ರಂಪ್ ಭಾರತ-ಪಾಕ್ ಸಂಘರ್ಷವನ್ನು ಬಳಸಿಕೊಂಡರು.

ಮಾತ್ರವಲ್ಲ, ಭಾರತ ಮತ್ತು ಪಾಕಿಸ್ತಾನವನ್ನು ‘ಕಾಮನ್‌ ಸೆನ್ಸ್‌’ ಇಲ್ಲದವರು ಎಂದು ಬಿಂಬಿಸಿದರು. ತಮ್ಮ ಮಾತು ಕೇಳಿ ‘ಸಾಮಾನ್ಯ ಜ್ಞಾನ’ವನ್ನು ಪ್ರದರ್ಶಿಸಿದ್ದಕ್ಕೆ ಅಭಿನಂದನೆಗಳು ಎಂದು ಹೇಳುವ ಮೂಲಕ ಎರಡೂ ರಾಷ್ಟ್ರಗಳನ್ನು ಛೇಡಿಸಿದರು, ಅಪಮಾನಿಸಿದರು. ಜಾಗತಿಕವಾಗಿ ಒಂದು ರಾಷ್ಟ್ರವನ್ನು ಅವಮಾನಿಸಿದರು. ಆದರೆ, ಭಾರತದ ಪ್ರಧಾನಿ ಮೋದಿ ಅವರು ಟ್ರಂಪ್ ಧೋರಣೆಯನ್ನು ವಿರೋಧಿಸಲೂ ಇಲ್ಲ, ಖಂಡಿಸಲೂ ಇಲ್ಲ. ಎರಡೆರಡು ಬಾರಿ ಟಿವಿ ಮುಂದೆ ಬಂದು ಸಂಘರ್ಷದ ಬಗ್ಗೆ ಮಾತನಾಡಿದ, ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ಅಬ್ಬರ ಮಾತುಗಳನ್ನಾಡಿದ ಮೋದಿ, ಭಾರತವನ್ನು ಟ್ರಂಪ್ ಅವಮಾನಿಸುತ್ತಿದ್ದರೂ ಒಂದೇ ಒಂದು ಖಂಡನೆಯ ಹೇಳಿಕೆ ನೀಡಲಿಲ್ಲ.

ಭಾರತ-ಪಾಕ್ ಸಂಘರ್ಷದಲ್ಲಿ ಭಾರತ ಮೇಲುಗೈ ಸಾಧಿಸಿದರೂ, ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿದರೂ ಟ್ರಂಪ್ ಅವರ ಬಾಯಿ ಬಡುಕುತನ ಮತ್ತು ಮೋದಿ ಅವರ ನಿರ್ಲಕ್ಷ್ಯ, ನಿರ್ಲಜ್ಜದ ಮೌನದಿಂದಾಗಿ ಜಾಗತಿಕವಾಗಿ ಭಾರತ ಅವಮಾನ ಅನುಭವಿಸುವಂತಾಯಿತು. ಭಾರತ ಗೆದ್ದೂ ಸೋಲುವಂತಾಯಿತು.

ಈ ವರದಿ ಓದಿದ್ದೀರಾ?: ಮೋದಿ ವೈಫಲ್ಯದ ಸಂಕೇತವಾಯಿತಾ ‘8PM’?

ಪಹಲ್ಗಾಮ್ ದಾಳಿಯ ನಂತರದ ವಿದ್ಯಮಾನಗಳು ಹೇಗೆ ನಡೆದವೋ, ಯಾವ ಸ್ಥಿತಿಯಲ್ಲಿ ನಡೆದವೋ, ಭಾರತದ ವಿಚಾರದಲ್ಲಿ ಅಮೆರಿಕ ಹೇಗೆ ನಡೆದುಕೊಂಡಿತೋ, ಅಂತಹ ಪರಿಸ್ಥಿತಿಗಳು ಈ ಹಿಂದೆ ಇರಲಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ 1967, 1971 ಮತ್ತು 1999ರಲ್ಲಿ ಯುದ್ಧಗಳು ಮತ್ತು ಬೃಹತ್ ಸಂಘರ್ಷಗಳು ನಡೆದಿವೆ. ಆ ವೇಳೆ, ಜಾಗತಿಕವಾಗಿ ಭಾರತದ ವರ್ಚಸ್ಸು ಗಾಢವಾಗಿತ್ತು. ಈ ಸಂದರ್ಭಗಳಲ್ಲಿ ಯಾವೊಂದು ದೇಶವೂ ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಸ್ವ-ಹಿತಾಸಕ್ತಿಯ ‘ಮೈಲೇಜ್’ ಪಡೆಯಲು ಅವಕಾಶ ಇರಲಿಲ್ಲ. ಉಭಯ ರಾಷ್ಟ್ರಗಳ ಸಮಸ್ಯೆಗಳು ದ್ವಿಪಕ್ಷೀಯ ಮಾತುಕತೆಯಲ್ಲೇ ಮುಗಿಯುತ್ತಿದ್ದವು. ಮೂರನೇ ವ್ಯಕ್ತಿ/ರಾಷ್ಟ್ರಕ್ಕೆ ಆಸ್ಪದವಿರಲಿಲ್ಲ.

1971ರಲ್ಲಿ ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆದಾಗ ಭಾರತಕ್ಕೆ ರಷ್ಯಾ ಸಂಪೂರ್ಣ ಬೆಂಬಲ, ಸಹಕಾರ ನೀಡಿತ್ತು. ಭಾರತ-ರಷ್ಯಾ ನಡುವೆ ಶಾಂತಿ, ಸೌಹಾರ್ದ ಮತ್ತು ಸಹಕಾರದ ಒಪ್ಪಂದಗಳು ನಡೆದಿದ್ದವು. ಆ ವೇಳೆ, ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಬೇರ್ಪಡಿಸುವುದಕ್ಕೆ ಭೂತಾನ್, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಜೊತೆ ನಿಂತಿದ್ದವು. ಆದರೆ, ಆ ಯುದ್ಧ ಮತ್ತು ಬಾಂಗ್ಲಾ ಉದಯದ ಶ್ರೇಯಸ್ಸು ಭಾರತಕ್ಕೆ ಮಾತ್ರವೇ ದೊರೆಯಿತು. ಬೇರಾವುದೇ ರಾಷ್ಟ್ರವು ಅದರ ಯಸ್ಸನ್ನು ತನ್ನದೆಂದು ಹೇಳಿಕೊಳ್ಳಲು ಮುಂದೆ ಬರಲಿಲ್ಲ. ಈ ಸಮಯದಲ್ಲಿ ಅಮೆರಿಕ ಪಾಕಿಸ್ತಾವನ್ನು ಸಕ್ರಿಯವಾಗಿ ಬೆಂಬಲಿಸಿತ್ತು. ಶಸ್ತ್ರಾಸ್ತ್ರಗಳನ್ನು ಒದಗಿಸಿತ್ತು.

ಇನ್ನು, 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ರಷ್ಯಾ, ಸೌದಿ ಅರೇಬಿಯಾ, ಯುಎಇ, ಬಾಂಗ್ಲಾದೇಶಗಳು ಭಾರತದ ಪರವಾಗಿ ನಿಂತವು. ಪಾಕಿಸ್ತಾನದ್ದೇ ತಪ್ಪು ಎಂದು ಸಾರಿದವು. 2016ರ ಉರಿ ದಾಳಿ, 2019ರ ಪುಲ್ವಾಮ ದಾಳಿಗಳು ನಡೆದಾಗ ಈ ರಾಷ್ಟ್ರಗಳು ಭಾರತದ ಪರವಾಗಿಯೇ ನಿಂತವು. ಭಾರತದ ವಾಯುದಾಳಿಯನ್ನು ‘ಆತ್ಮರಕ್ಷಣೆಯ ಹಕ್ಕು’ ಎಂದು ಸಮರ್ಥಿಸಿದವು.

ಈಗಲೂ ಈ ಎಲ್ಲ ರಾಷ್ಟ್ರಗಳು ಭಾರತ ಜೊತೆಗಿವೆ. ಸಂಘರ್ಷಗಳು ನಡೆದಾಗ ಭಾರತಕ್ಕೆ ಬೆಂಬಲ ವ್ಯಕ್ತಪಡಿಸುತ್ತವೆ. ಆದರೆ, ಕದನ ವಿರಾಮ, ಯುದ್ಧ ನಿಲ್ಲಿಸಿದ್ದರ ಕೀರ್ತಿಯನ್ನು ತಮ್ಮ ಮುಡಿಗೇರಿಸಿಕೊಂಡು, ಬೀಗಲು ಆರಂಭಿಸಿವೆ. ಇದರಲ್ಲಿ, ಮೋದಿ ಅವರ ದಿವ್ಯ ಮೌನದ ಪಾತ್ರವೂ ಹೆಚ್ಚಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X