ಚಳ್ಳಕೆರೆ ತಾಲೂಕು ನಗರಂಗೆರೆ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮಗಳ ತನಿಖೆ ಮಾಡಬೇಕು ಹಾಗೂ ಪಿಡಿಒ ಸೇವೆಯಿಂದ ವಜಾಗೊಳಿಸಬೇಕು. ಹಾಗೂ ಅಕ್ರಮಗಳ ಬಗ್ಗೆ ಧ್ವನಿಯೆತ್ತಿ ಕ್ರಮಕೈಗೊಳ್ಳಲು ಆಗ್ರಹಿಸಿದ ಕರ್ನಾಟಕ ರಾಷ್ಟ್ರ ಸಮಿತಿಯ ಪಕ್ಷದ ನಾಯಕರ ಮೇಲೆ ಸುಖಾಸುಮ್ಮನೆ ಶಾಂತಿ ಭಂಗ ಆರೋಪ ಪ್ರಕರಣಗಳನ್ನು ದಾಖಲಿಸಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೆಆರ್ಎಸ್ ಪಕ್ಷದ ರಾಜ್ಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಕಾರ್ಯಕರ್ತರು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದರು.

ಚಳ್ಳಕೆರೆ ತಾಲೂಕು ನಗರಂಗೆರೆ ಗ್ರಾಮ ಪಂಚಾಯಿತಿಯಲ್ಲಿ ಹಲವು ಅಕ್ರಮಗಳು ಹಾಗೂ ಭ್ರಷ್ಟಾಚಾರ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವತಿಯಿಂದ ಕಾರ್ಯಕರ್ತರು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಚೇರಿಗೆ ಹಲವು ಮನವಿ ಪತ್ರಗಳನ್ನು ನೀಡಿದರೂ, ಇದುವರೆಗೂ ಯಾವುದೇ ರೀತಿಯ ತನಿಖೆ ನಡೆಸದೆ ಹಾಗೂ ಅಕ್ರಮಗಳ ಬಗ್ಗೆ ಕಾನೂನು ಕ್ರಮ ವಹಿಸದೆ ಮತ್ತು ಅಕ್ರಮಗಳಿಗೆ ಕಾರಣರಾದಂತಹ ಅಧಿಕಾರಿಯ ಮೇಲೆ ಕಾನೂನು ಕ್ರಮ ಜರುಗಿಸದೆ ಇರುವುದಕ್ಕೆ ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ತಾವುಗಳು ಈ ಭ್ರಷ್ಟಾಧಿಕಾರಿಯನ್ನು ರಕ್ಷಣೆ ಮಾಡುವ ರೀತಿ ಭಾಸವಾಗುತ್ತಿದೆ ಎಂದು ರಾಜ್ಯ ಮುಖಂಡರು ಆರೋಪಿಸಿದರು. ದೂರು ಅಂಶಗಳ ಮೇಲೆ ಸೂಕ್ತ ತನಿಖೆ ನಡೆಸಿ ಅತಿ ತುರ್ತಾಗಿ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಮನವಿ ಮಾಡಿದರು.

ಅಲ್ಲದೇ ಚಳ್ಳಕೆರೆ ತಾಲೂಕು ತಹಶೀಲ್ದಾರ್ ರೆಹಮನ್ ಪಾಷ ಅವರು ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಒತ್ತಡಕ್ಕೆ ಒಳಗಾಗಿ ಕರ್ತವ್ಯ ಲೋಪವೆಸಗಿ ಕೆಆರ್ಎಸ್ ಪಕ್ಷದ ಕಾರ್ಯಕರ್ತ ಮಹೇಶ ಸಿ ತಂದೆ ಚನ್ನಬಸಪ್ಪ ನಗರಂಗೆರೆ ಹತ್ತಿರ ಬಲವಂತವಾಗಿ ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ. ಇವರ ಮೇಲೆ ತಹಶೀಲ್ದಾರ್ ಕೋರ್ಟಿನಲ್ಲಿ ದಾಖಲಾದ ಸುಳ್ಳು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ತಿಳಿಸಿದರೂ ಕಾಲಾವಕಾಶ ನೀಡದೇ ತುರಾತುರಿಯಲ್ಲಿ ಹಾಜರಾಗಲು ಮೇಲಿನ ಮೇಲೆ ನೋಟೀಸ್ ನೀಡಿ ಕರ್ತವ್ಯ ಲೋಪವೆಸಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಂವಿಧಾನ ಸಾಕ್ಷಿಯಾಗಿ ಮಾದರಿ ಮದುವೆ; ಬುದ್ಧ, ಬಸವ, ಅಂಬೇಡ್ಕರ್ ತತ್ವಗಳ ಪಾಲನೆಗೆ ಕಂಕಣಬದ್ದ
ಚಳ್ಳಕೆರೆ ತಾಲೂಕು ನಗರಂಗೆರೆ ಗ್ರಾಮದ ಮಹೇಶ ಸಿ ತಂದೆ ಚನ್ನಬಸಪ್ಪ ಅವರು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿದ್ದು ಸ್ವಚ್ಛ ಪ್ರಾಮಾಣಿಕ ಜನಪರ ಇರುವಂತ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಯಾಗಿ ಅನ್ಯಾಯ ಒಳಗಾದವರಿಗೆ ಹಾಗೂ ಜನಸಾಮಾನ್ಯರಿಗೆ ನ್ಯಾಯ ಸಮ್ಮತವಾಗಿ ಕರ್ನಾಟಕ ಪಕ್ಷ ವತಿಯಿಂದ ಸ್ಪಂದಿಸುತ್ತಿದ್ದು ಸರ್ಕಾರದ ಯಾವುದೇ ಕೆಲಸ ಕಾರ್ಯಗಳು ವಿಳಂಬ ಹಾಗೂ ಸರ್ಕಾರಿ ಕೆಲಸಕ್ಕೆ ಲಂಚ ಕೇಳಿದರೆ, ಅಂತಹ ಇಲಾಖೆಗಳಲ್ಲಿ ಪ್ರಶ್ನೆ ಮಾಡಿ ನ್ಯಾಯ ಬದ್ಧವಾಗಿ ಜನಸಾಮಾನ್ಯರಿಗೆ ಕೆಲಸವನ್ನು ಮಾಡಿಕೊಂಡು ಬಂದಿರುತ್ತಾರೆ. ಇಂಥವರಿಗೆ ವಿನಾ ಕಾರಣ ತೊಂದರೆ ನೀಡಿದ್ದು, ಇವರ ಮೇಲೆ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದರು.
ಈ ವೇಳೆ ರಾಜ್ಯ, ಜಿಲ್ಲಾ ಘಟಕದ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.