ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3 ಕಡೆಗಳಲ್ಲಿ ಯುವಕ ಯುವತಿಯರಿಗಾಗಿ ಸರ್ಕಾರಿ ಜಿಮ್ ಸೆಂಟರ್ ಆರಂಭಿಸುವಂತೆ ಶಾಸಕ ಅಶೋಕ್ ರೈ ಈ ಹಿಂದೆ ಕ್ರೀಡಾ ಸಚಿವರಿಗೆ ಮನವಿ ಮಾಡಿದ್ದು, ಈ ವರ್ಷ ಜಿಮ್ ಸೆಂಟರ್ ಸ್ಥಾಪಿಸುವ ಭರವಸೆ ನೀಡಿದ್ದಾರೆ.
ಕ್ರೀಡಾ ಇಲಾಖೆ ಕಮಿಷನರ್ ಮತ್ತು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸರಕಾರದ ಕಾರ್ಯದರ್ಶಿ ಜೊತೆ ಸಭೆ ನಡೆಸಿದ್ದು ಶೀಘ್ರವೇ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಜಿಮ್ ಕೇಂದ್ರ ಪ್ರಾರಂಭ ಮಾಡುವಂತೆ ಯುವಕರು, ಯುವ ಸಂಘಟನೆಗಳಿಂದ ಈ ಹಿಂದೆಯೇ ಶಾಸಕರಿಗೆ ಹಲವಾರು ಮನವಿಗಳು ಬಂದಿದ್ದವು. ಈ ವಿಚಾರವನ್ನು ಕಳೆದ ಕೆಲವು ತಿಂಗಳ ಹಿಂದೆ ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವರ ಜೊತೆ ಮಾತುಕತೆ ನಡೆಸಿದ ವೇಳೆ ಸಚಿವರು ಅಸ್ತು ಎಂದಿದ್ದರು. ಕ್ರೀಡಾ ಇಲಾಖೆಯ ಮೂಲಕ ಜಿಮ್ ಕೇಂದ್ರ ತೆರೆಯಲು ಅವಕಾಶವಿರುವ ಬಗ್ಗೆ ಶಾಸಕರು ಸಚಿವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಶಾಸಕರು ಮೂರು ಜಿಮ್ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಪ್ರಸ್ತಾವನೆ ಸಚಿವಾಲಯದಿಂದ ಕಮಿಷನರ್ ಅವರಿಗೆ ಬಂದಿದ್ದು ಈ ಬಗ್ಗೆ ಬುಧವಾರ ಕಮಿಷನರ್ ಜೊತೆ ಸಭೆ ನಡೆಸಿ ಬೇಡಿಕೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದ್ದಾರೆ.
ಪ್ರಸ್ತುತ ಪುತ್ತೂರು ನಗರದಲ್ಲಿ ಮಾತ್ರ ಜಿಮ್ ಕೇಂದ್ರ ಇದ್ದು, ಗ್ರಾಮಾಂತರ ಭಾಗದ ಯುವಕರಿಗೆ ಸಮಯಕ್ಕೆ ಸರಿಯಾಗಿ ಜಿಮ್ ಕೇಂದ್ರಕ್ಕ ಬರಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜಿಮ್ ಕೇಂದ್ರ ಪ್ರಾರಂಭ ಮಾಡಿಲ್ಲಿ ಯುವಕರಿಗೆ ಅನುಕೂಲವಾಗಲಿದೆ. ಮುಂಡೂರು ಗ್ರಾಮದಲ್ಲಿ ನಿರ್ಮಾಣವಾಗಲಿರುವ ತಾಲೂಕು ಕ್ರೀಂಡಾಂಗಣ ಸಮತಟ್ಟು ಮಾಡಲು 8 ಕೋಟಿ ಅನುದಾನ ಅಗತ್ಯವಿದ್ದು, ಈ ಅನುದಾನವನ್ನು ಬಿಡುಗಡೆ ಮಾಡುವಂತೆ ಯುವಜನ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಸರ್ಕಾರಿ ಕಾರ್ಯದರ್ಶಿ ರಣದೀಪ್ ಮತ್ತು ಇಲಾಖೆಯ ಆಯುಕ್ತ ಚೇತನ್ ಅವರಿಗೆ ಶಾಸಕರು ಮನವಿ ಮಾಡಿದ್ದಾರೆ. ಮುಂಡೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ಕ್ರೀಡಾಂಗಣ ಈಗಾಗಲೇ ಒಂದು ಹಂತದ ಕಾಮಗಾರಿ ಮುಗಿಸಿದೆ. ಎರಡನೇ ಹಂತ ಸಮತಟ್ಟು ಕಾಮಗಾರಿಗೆ ಶೀಘ್ರವೇ ಅನುದಾನ ಬಿಡುಗಡೆಯಾಗಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ | ‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಸಮಾವೇಶದ ಬ್ಯಾನರ್‌ಗಳನ್ನು ಹರಿದ ಕಿಡಿಗೇಡಿಗಳು
ಮೂರು ಜಿಮ್ ಕೇಂದ್ರದಲ್ಲಿ ಎಲ್ಲಾ ಅಗತ್ಯ ಪರಿಕರಗಳು ಇರಲಿದೆ. ಗ್ರಾಮೀಣ ಯುವಕರನ್ನು ಲಕ್ಷ್ಯವಾಗಿಟ್ಟುಕೊಂಡು ಈ ಕೇಂದ್ರವನ್ನು ತೆರೆಯಲಾಗುತ್ತದೆ. ಫಿಟ್‌ನೆಸ್ ಕಡೆ ಯುವಕರು ಹೆಚ್ಚಿನ ಒಲವು ತೋರುತ್ತಿದ್ದು, ಅವರಿಗೆ ವ್ಯವಸ್ಥೆ ಮಾಡಿಕೊಡಬೇಕಾಗಿದ್ದು ಸರ್ಕಾರದ ಒಂದು ಭಾಗ ಎಂದು ಯುವಕರ ಮನವಿಗೆ ಸ್ಪಂದನೆ ನೀಡುವ ಕೆಲಸವನ್ನು ಮಾಡಲಿದ್ದೇವೆ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.