ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕು ಹಲ್ಲರೆ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕಕ್ಕೆ ಕಿಡಿಗೇಡಿಗಳು ಕೆಸರೆರಚಿ ಅವಮಾನಿಸಿದ್ದಾರೆ.
ಇತ್ತೀಚಿಗೆ ಕಿಡಿಗೇಡಿಗಳ ಹೇಯ ಕೃತ್ಯ ಹೆಚ್ಚಿದ್ದು ಅಲ್ಲಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಹರಿಯುವುದು, ಮಲ ಎರಚುವುದು, ಕೆಸರು ಎರಚಿ ವಿಕೃತಿ ಮೆರೆಯುವಂತ ಘಟನೆಗಳು ಒಂದರ ಮೇಲೊಂದರಂತೆ ಘಟಿಸುತ್ತಿರುವುದು ನಿಜಕ್ಕೂ ವಿಷಾಧನಿಯ ಸಂಗತಿ.
ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗುರಿಯಾಗಿಸಿಕೊಂಡ ಕಿಡಿಗೇಡಿಗಳು ಹೀನವಾಗಿ ನಡೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಿದ್ದು ಪೊಲೀಸ್ ಇಲಾಖೆ ಸಹ ಇಂತಹ ವಿಚಾರದಲ್ಲಿ ಕಠಿಣವಾದ ಕ್ರಮ ಕೈಗೊಳ್ಳುವಲ್ಲಿ, ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ವಿಫಲವಾಗಿದೆ.
ಘಟನೆ ನಡೆದು ಎಷ್ಟೇ ದಿನ ಆದರೂ ಕಾನೂನಾತ್ಮಕ ಕ್ರಮ ಆಗದಿರುವುದು, ಆರೋಪಿಗಳು ಪತ್ತೆಯಾಗದಿರುವುದು ಶೋಚನಿಯ. ಇಂತಹದ್ದೇ ಘಟನೆ ಹಲ್ಲರೆಯಲ್ಲಿ ಕಳೆದ ರಾತ್ರಿ ಕರೆಂಟ್ ಇಲ್ಲದ ವೇಳೆಯಲ್ಲಿ ಕಿಡಿಗೇಡಿಗಳು ಕೇಸರಿರಿಚಿ ವಿಕೃತಿ ಮೆರೆದಿದ್ದಾರೆ.
ಇದೇ ಗ್ರಾಮದಲ್ಲಿ ಈ ಹಿಂದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ನಡೆದಿತ್ತು. ಆ ಸಂದರ್ಭದಲ್ಲಿ ಶಾಸಕರಾದ ದರ್ಶನ್ ದ್ರುವನಾರಾಯಣ್ ಹಾಗೂ ಅನಿಲ್ ಚಿಕ್ಕಮಾಧು ಸಂಧಾನ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಪರಿಶಿಷ್ಟ ಜಾತಿ ಒಳ ಮೀಸಲಾತಿ ಸಮೀಕ್ಷೆ ಪ್ರಗತಿ ಪರಿಶೀಲನೆ
ಸದರಿ ಘಟನೆ ಸಂಭಂದವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿ ಟಿವಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.