ಸುಮಾರು 13 ವರ್ಷಗಳಿಂದ ತಲೆಮೆರೆಸಿಕೊಂಡಿದ್ದ ಅಂತರ್ ಜಿಲ್ಲಾ ಆರೋಪಿಯೊಬ್ಬನನ್ನು ಶಿರಸಿಯ ಹೊಸ ಮಾರುಕಟ್ಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಮಂಗಳಾದೇವಿ ದೇವಸ್ಥಾನ ವ್ಯಾಪ್ತಿಯ ನಿವಾಸಿ ನಿತೀನ್ @ ಮಾದೇಶ @ ಗುಂಡ @ ಅನಿಲ್ ಬಂಧಿತ ಆರೋಪಿ.
2012ರ ಮಾ.14ರಂದು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡು ಹೋದವನು ಕಳೆದ 13 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಧಾರವಾಡ, ಮಂಗಳೂರು, ಶಿವಮೊಗ್ಗ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಓಡಾಡಿಕೊಂಡಿದ್ದ. ಆಧಾರ್ ಕಾರ್ಡಿನಲ್ಲಿ ಹೆಸರು, ವಿಳಾಸವನ್ನು ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದ.
ನಿತೀನ್ ಮೇಲೆ ಶಿವಮೊಗ್ಗ ಜಿಲ್ಲೆ ದೊಡ್ಡಪೇಟೆ ಪೊಲೀಸ್ ಠಾಣೆ, ಧಾರವಾಡ ಜಿಲ್ಲಾ ಸಬ್ ಅರ್ಬನ್ ಪೊಲೀಸ್ ಠಾಣೆ, ಬೆಂಗಳೂರು ದೇವನಳ್ಳಿ ಪೊಲೀಸ್ ಠಾಣೆ ಸೇರಿದಂತೆ ರಾಜ್ಯದ ವಿವಿಧ ಠಾಣೆಗಳಲ್ಲಿ ಹಲವು ಸೆಕ್ಷನ್ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಖಚಿತ ಮಾಹಿತಿ ಮೇರೆಗೆ ನಿನ್ನೆ (ಮೇ.14) ರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರ ಲೇಔಟ್‌ನಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿ: ಶಿರಸಿ | ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಪರಾರಿ
ಆರೋಪಿ ಪತ್ತೆಗೆ ಉತ್ತರ ಕನ್ನಡದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ ಹಾಗೂ ಜಗದೀಶ ಎಂ., ಪೊಲೀಸ್ ಉಪಾಧೀಕ್ಷಕ ಗಣೇಶ ಕೆ. ಎಲ್ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಯಶಸ್ವೀ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.