ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿ ಸಮೀಕ್ಷೆ ನಡೆಸುತ್ತಿರುವಾಗಲೇ ಶಿಕ್ಷಕರೊಬ್ಬರು ಹೃದಯಾಘಾತ ಸಂಭವಿಸಿ ಮೃತಪಟ್ಟ ಘಟನೆ ಚಿಂಚೋಳಿ ತಾಲ್ಲೂಕಿನ ಚತ್ರಸಲಾ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲ್ಲೂಕಿನ ಚತ್ರಸಾಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ನಾಗಶೆಟ್ಟಿ ಬಾಸಪಳ್ಳಿ (56) ಮೃತರು ಎಂದು ತಿಳಿದು ಬಂದಿದೆ.
ಗುರುವಾರ ಸಮೀಕ್ಷೆಗಾಗಿ ಚತ್ರಸಾಲ ಗ್ರಾಮದಲ್ಲಿ ಮನೆಗಳಿಗೆ ಭೇಟಿ ನೀಡಿದ ವೇಳೆ ಬೆಳಿಗ್ಗೆ 11.30ಕ್ಕೆ ಘಟನೆ ನಡೆದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆ ತರಲಾಗಿದ್ದರೂ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಶಿಕ್ಷಕ ನಾಗಶೆಟ್ಟಿ ಅವರು 1998ರಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದರು. ಒಂದೂವರೆ ವರ್ಷದ ಹಿಂದೆ ಗಣಾಪುರದಿಂದ ಚತ್ರಸಾಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿದ್ದರು. ತಾಲ್ಲೂಕಿನ ಬುರುಗಪಳ್ಳಿ ಗ್ರಾಮದ ನಿವಾಸಿಯಾಗಿರುವ ನಾಗಶೆಟ್ಟಿ ಅವರಿಗೆ ತಂದೆ, ಪತ್ನಿ ಹಾಗೂ ಮೂವರು ಪುತ್ರರು ಇದ್ದಾರೆ.