ಡಿಜಿಟಲ್‌ ದಿಗ್ಬಂಧನದಲ್ಲಿ ನಾಗೇಶ ಹೆಗಡೆ ದಂಪತಿ (ಭಾಗ-3)

Date:

Advertisements
ಸೈಬರ್‌ ಅಪರಾಧಕ್ಕೆ ಬಲಿಯಾಗಿ ಕೋಟಿಗಟ್ಟಲೆ ಹಣವನ್ನು ಕಳೆದುಕೊಂಡವರ ಕತೆಯನ್ನು ನಾವು ಅಲ್ಲಿ ಇಲ್ಲಿ ಕೇಳಿದ್ದೇವೆ. ಅಂತಹ ಡಿಜಿಟಲ್‌ ಅರೆಸ್ಟ್‌ಗೆ ಬಲಿಯಾಗಿ ಮೂರು ದಿನಗಳ ಕಾಲ ತೀವ್ರ ಸಂಕಟ ಅನುಭವಿಸಿದ ನಾಗೇಶ್‌ ಹೆಗಡೆ ದಂಪತಿಗಳ ಕತೆಯ ಮೊದಲ ಮತ್ತು ಎರಡನೇ ಭಾಗ ಈಗಾಗಲೇ ಪ್ರಕಟಗೊಂಡಿವೆ. ಅಂತಿಮ ಮತ್ತು 3ನೇ ಭಾಗ ಇಲ್ಲಿದೆ... ಮೊದಲ ಎರಡು ಭಾಗಗಳನ್ನು ಓದಿಲ್ಲವಾದರೆ, ಓದಲು ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡಿ

ಮಧ್ಯಾಹ್ನ 3ಕ್ಕೆ ಸರಿಯಾಗಿ ನಮ್ಮ ವಿಡಿಯೊ ಮಾನಿಟರ್‌ನಲ್ಲಿ ಪ್ರಾಸಿಕ್ಯೂಟರ್‌ ದೀಪಕ್‌ ಸಾಯಿನಿ (ದೀಸಾ) ಧ್ವನಿ ಕೇಳಿಬಂತು.

ಇಡಿ ಅಧಿಕಾರಿಗಳು ತನಿಖೆಗೆ ಬಂದಾಗ ಕೇಳುವ ಪ್ರಶ್ನೆಗಳನ್ನೆಲ್ಲ ಈತನೇ ಕೇಳತೊಡಗಿದ. ನಮ್ಮ ಠೇವಣಿ, ಊರಿನಲ್ಲಿನ ನಮ್ಮಿಬ್ಬರ ಸ್ಥಿರಾಸ್ತಿ, ಆಸ್ಟ್ರೇಲಿಯಾದಲ್ಲಿರುವ ಮಗನ ಆಸ್ತಿ ವಿವರ, ಖಾಸಗಿ ಬ್ಯಾಂಕ್‌ಗಳಲ್ಲಿ ಠೇವಣಿ, ಶೇರು ಮಾರ್ಕೆಟ್‌ನಲ್ಲಿ ವಿನಿಯೋಗಿಸಿದ ಮೊತ್ತ ‘ಎಲ್ಲವೂ ಲೆಕ್ಕಕ್ಕೆ ಸಿಗಬೇಕು; ಏನೇ ಚಿಕ್ಕದನ್ನು ಬಚ್ಚಿಟ್ಟಿದ್ದೀರೆಂದು ತನಿಖಾಧಿಕಾರಿಗೆ ಸಂಶಯ ಬಂದರೆ ನಿಮ್ಮ ಪಾಲಿಗೆ ಅದೇ ಉರುಳಾದೀತು; ನಿಮ್ಮ ಮಗನನ್ನೂ ಕರೆಸಬೇಕಾದೀತು’ ಎಂದು ಎಚ್ಚರಿಸಿದ.

ರೇಖಾ ಗಾಬರಿಬಿದ್ದಳು. ‘ಶೇರ್‌ ಮಾರ್ಕೆಟ್‌ ಅಂದರೆ ಮ್ಯೂಚುವಲ್‌ ಫಂಡ್‌ (ಎಮ್ಮೆಫ್‌) ಎಲ್ಲ ವಿವರ ಕೊಡಬೇಕಾ?’ ಕೇಳಿದಳು.

Advertisements

ದೀಸಾ ಅದನ್ನೇ ಗಟ್ಟಿ ಹಿಡಿದ. ಸ್ಟಾಕ್‌ ಮಾರ್ಕೆಟ್‌ನಲ್ಲಿ ಏನೇ ಎಷ್ಟೇ ಇದ್ದರೂ ಎಲ್ಲವನ್ನು ರಿಡೀಮ್‌ (ನಗದು) ಮಾಡಿ, ಬ್ಯಾಂಕ್‌ ಅಕೌಂಟ್‌ಗೆ ಸೇರಿಸಿ ಎಂದ. ನಾನು, ‘ಎಲ್ಲ ಹೂಡಿಕೆಯ ರಿಪೋರ್ಟ್‌ ಇದೆಯಲ್ಲ? ಅದನ್ನೇಕೆ ರಿಡೀಮ್‌ ಮಾಡಬೇಕು?’ ಕೇಳಿದೆ. ‘ಯಾಕಂದ್ರೆ ಶೇರು ಮಾರ್ಕೆಟ್‌ ದಿನಾ ದಿನಾ ಏರಿಳಿತ ಆಗ್ತಾ ಇರ್ತದೆ; ತನಿಖೆ ಚೊಕ್ಕ ಲೆಕ್ಕ ಸಿಗೋದಿಲ್ಲ; ಇಂದೇ ರಿಡೀಮ್‌ ಮಾಡಿ’ ಎಂದ.

ನಾನೆಂದೆ: ‘ಅದೆಲ್ಲ ವ್ಯವಹಾರ ನಮಗೆ ಗೊತ್ತಿಲ್ಲ; ಇಪ್ಪತ್ತು ವರ್ಷಗಳ ಹಿಂದೆ ರಿಟೈರ್‌ ಆಗುವ ವೇಳೆ ಸಿಕ್ಕ ಹಣದಲ್ಲಿ ಒಂದಿಷ್ಟು ಎಮ್ಮೆಫ್‌ ಕೊಂಡಿದ್ದು ಬಿಟ್ಟರೆ ಅದರ ಮೊತ್ತ ಎಷ್ಟಾಗಿದೆ ಎಂತಲೂ ಈಚೆಗೆ ನೋಡಿಲ್ಲ’ ಎಂದೆ.

ದೀಸಾ ಗರಮ್‌ ಆದ. ‘ಎಂಥ ಹಳೇ ಕಾಲದವ್ರೀ ನೀವು!’ ಈಗ ನಿಮ್ಮ ಮೊಬೈಲ್‌ನಲ್ಲೇ ಎಲ್ಲವನ್ನೂ ರಿಡೀಮ್‌ ಮಾಡಬಹುದು. ಗೂಗಲ್‌ ಪ್ಲೇಗೆ ಹೋಗಿ ಅದಕ್ಕೆ ಸಂಬಂಧಿಸಿದ ಆಪ್‌ ಡೌನ್‌ಲೋಡ್‌ ಮಾಡಿ ಎಂದು ಸೂಚಿಸಿದ. ಮತ್ತೆ ತಿರ್ಗಾಮುರ್ಗಾ ಹೇಳಿದ್ದನ್ನೇ ಹೇಳುತ್ತ ನಮ್ಮೆಲ್ಲ ನಗದನ್ನೂ ‘ಒಂದೇ ಕಡೆ ಕೂಡಿಸಿಡಿ. ನನಗೆ ಟೈಮ್‌ ಜಾಸ್ತಿ ಇಲ್ಲ’ ಎಂದ.

ಸಂಜೆ ಆರು ಗಂಟೆ ಆಗಿತ್ತು. ‘ಸರಿ, ಎಲ್ಲ ರೆಡಿ ಇಡಿ; ರಾತ್ರಿ 9ಕ್ಕೆ ಮತ್ತೆ ಕಾಲ್‌ ಮಾಡ್ತೀನಿ’ ಎಂದು ಹೇಳಿ ಮರೆಯಾದ. ವಿಡಿಯೊ ಮಾನಿಟರ್‌ ಸರಿ ಇಡಲು ನಿರ್ದೇಶನ ಬಂತು.

ನನ್ನ ಮಂಕುಬುದ್ಧಿಯ ಘೋರ ಕತ್ತಲಿಗೆ ಈಗ ಮೆಲ್ಲಗೆ ಕಿರುಬೆಳಕು ಫ್ಲ್ಯಾಶ್‌ ಆಗತೊಡಗಿತು. ನಮ್ಮದು ಡಿಜಿಟಲ್‌ ಅರೆಸ್ಟ್‌ ಎಂಬುದು ತುಸು ತುಸು ಹೊಳೆಯತೊಗಿತು. ಮೋಕು ಎಲ್ಲಿ ಹೋದನೋ? ನನ್ನ ಫೇಕ್‌ ಸಿಮ್‌ ಕಾರ್ಡ್‌ ಕತೆ ಎಲ್ಲಿಗೆ ಬಂತೊ? ನನ್ನ ಫೇಕ್‌ ಪಾಸ್‌ಬುಕ್‌ ತನಿಖೆ ಎಲ್ಲಿಗೆ ಬಂತೊ? ಬರೀ ಮನಿ ಲಾಂಡ್ರಿಂಗ್‌ ನೆಪದಲ್ಲಿ ನಮ್ಮ ಬಟ್ಟೆಬರೆ ಎಲ್ಲವನ್ನೂ ಕಳಚಿ ಒಂದೇ ಲಾಂಡ್ರಿ ಗಂಟಿಗೆ ಈ ದೀಸಾ ಸೇರಿಸುತ್ತಿದ್ದಾನೆ.

ಈ ವರದಿ ಓದಿದ್ದೀರಾ?: ದಶಕಗಳ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ: 1 ಲಕ್ಷ ಫಲಾನುಭವಿಗಳಿಗೆ ಕಂದಾಯ ಗ್ರಾಮಗಳ ಹಕ್ಕುಪತ್ರ

ನೋಡೋಣ, ಆದದ್ದಾಗಲಿ ಎಂದು ಎಮ್ಮೆಫ್‌ ನಗದೀಕರಣ ಮಾಡುವ ಆಪ್‌ ಇಳಿಸಿಕೊಂಡೆ. ತುಂಬಾ ಒದ್ದಾಡಿ ಒಂದೆರಡು ಚಿಲ್ಲರೆ ಫಂಡ್‌ಗಳ ರಿಡೀಮ್‌ ಮಾಡಿದೆ. ರಾತ್ರಿ 9ಕ್ಕೆ ದೀಸಾ ಮತ್ತೆ ಬರಲಿದ್ದಾನೆ ಎಂಬ ಘೋಷಣೆ ಬಂತು. ಎಲಾ ಇವನ! ಈತನೇನಾ ನಿನ್ನೆಯ ಭಾರೀ busy Prosecutor? ಎಲ್ಲಾ ಸಮಯ ನನಗೇನೇ ಮೀಸಲಿಟ್ಟಿದ್ದಾನಲ್ಲ!

ಐದನೇ ಬಾರಿಗೆ ದೀಸಾ ಬಂದ. ಮಾಮೂಲಿನಂತೆ ಇಡಿ ದಾಳಿಯ ಬಗ್ಗೆ, ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನಿಯಮಗಳ ಬಗ್ಗೆ ಒಂದಿಷ್ಟು ಕೊರೆದ. ಮುಂಬೈಗೆ ನಾವು ಬರಲೇಬೇಕಾದ ಸಂದರ್ಭ ಬಂದರೆ ಯಾರು ಜಾಮೀನಿಗೆ ನಿಲ್ಲಬಹುದು ಎಂದೆಲ್ಲ ಕೇಳಿದ. ನಮ್ಮ ಬ್ಯಾಂಕಿನ ಎಲ್ಲ ಖಾತೆಗಳಿಂದ ಒಂದೇ ಖಾತೆ ಜಮಾ ಆಯ್ತೆ ಎಂದು ಕೇಳಿದ. ‘ಆನ್‌ಲೈನ್‌ ಬ್ಯಾಂಕಿಂಗ್‌ನಲ್ಲಿ ಠೇವಣಿಯನ್ನು ಒಡೆಯಲು ಆಗ್ತಾ ಇಲ್ಲ’ ಎಂದು ನಾನು ಹೇಳಿದೆ. ಖುದ್ದಾಗಿ ಬ್ಯಾಂಕಿಗೆ ಹೋಗಬೇಕಾಗುತ್ತದೆ ಎಂದೆ. ಎಮ್ಮೆಫ್‌ ಫಂಡ್‌ ಬಗ್ಗೆ ಆತ ಕೇಳಿದ. ಅದೂ ನಗದು ಆಗಿ ಬ್ಯಾಂಕಿಗೆ ಹಣ ಬರಲು 3ರಿಂದ 5 ದಿನ ಬೇಕಂತೆ ಎಂದು ತಿಳಿಸಿದೆ.

‘ಎಲ್ಲಿದೆ ಆ ನಿಯಮ, ಪ್ರೂಫ್‌ ತೋರಿಸಿ’ ಎಂದ. ತೋರಿಸಲು ಹೋದೆ, ಆಗಲಿಲ್ಲ. ‘ನಿಮ್ಮ ನಂಬರ್‌ ಕೊಡಿ’ ಎಂದೆ. ‘ತಗೊಳಿ’ ಎಂದು 7626843351ಗೆ ಎಲ್ಲ ವಿವರಗಳನ್ನು ವಾಟ್ಸಾಪ್‌ ಮಾಡಿ ಎಂದ, ಮಾಡಿದೆ.

ಆತನಿಗೆ ನಿರಾಸೆ ಆಗಿರಬೇಕು.

ತುಸು ಕ್ಷಣ ಬಿಟ್ಟು, ‘ಹೀಗೇ ದಿನ ಕಳೀತಾ ಇದ್ರೆ ನಾವು ಹೀಗೇ ಕತ್ತೆ ಕಾಯ್ತಾ ಇರಬೇಕಾ? ಕೇಳಿದ. ಪ್ರಯಾರಿಟಿ ಇನ್ವೆಸ್ಟಿಗೇಶನ್‌ ಅಂದ್ರೆ ಏನಾರಾ ಗೊತ್ತಾ? ಅರೆಸ್ಟ್‌ ಆಗುವ ಮುಂಚೆ ಮುಂಬೈಗೆ ಚೀಲಭರ್ತಿ ನಗದು ಕ್ಯಾಶ್‌ ತರ್ತಾರೆ ಗೊತ್ತಾ ನಿಮಗೆ’ ಎಂದು ಬಿರುಸಾಗಿ ಕೇಳಿದ. ಆಗಲೇ ರಾತ್ರಿ ಹತ್ತೂವರೆ ಆಗಿತ್ತು. ‘ನಾನು ನಾಳೆ ಬೆಳಗ್ಗೆ 8.30ಕ್ಕೆ ಸಿಗ್ತೇನೆ. ಇನ್ನುಳಿದವನ್ನು ರಿಡೀಮ್‌ ಮಾಡಿ’ ಎಂದು ಹೇಳಿ ಮಾಯವಾದ.

ಈ ವರದಿ ಓದಿದ್ದೀರಾ?: ಭಾರತದೊಂದಿಗೆ ಕದನ ವಿರಾಮದ ನಂತರ ಪಾಕಿಸ್ತಾನದಲ್ಲಿ ಏನಾಗುತ್ತಿದೆ?

ಚೀಲಭರ್ತಿ ನಗದು ಬೇಕಂತೆ. ನಾನೀಗ ನಗೋದು ಬಾಕಿ! ಆದರೆ ಆತ ಹೇಳಿದಂತೆ ತಲೆ ತಗ್ಗಿಸಿ ರಾತ್ರಿ ಎರಡು ಗಂಟೆಯವರೆಗೂ ಕೆಲವು ಮ್ಯೂಚುವಲ್‌ ಫಂಡ್‌ಗಳನ್ನು ನಗದೀಕರಿಸುತ್ತ ಹೋದೆ. ಈ ಕೆಲಸವನ್ನು ಎಂದೋ ಮಾಡಬೇಕಿತ್ತು. ಸಮಯ ಕೂಡಿ ಬಂದಿರಲಿಲ್ಲ. ಎಲ್ಲಾ ಕಡೆ ಚದುರಿ ಹೋಗಿರುವ ಚಿಲ್ಲರೆ ಲೆಕ್ಕವನ್ನು ಸೇರಿಸುವುದು ಸುಲಭ ಅಲ್ಲ. ನನಗೆ ತೆನ್ನಾಲಿ ರಾಮನ ಕತೆ ನೆನಪಿಗೆ ಬಂತು. ಕಳ್ಳರು ಹೊರಗಡೆ ಹೊಂಚು ಹಾಕಿದ್ದು ಗೊತ್ತಾಗಿ ಆತ ಜೋರಾಗಿ ಹೆಂಡತಿಗೆ ಹೇಳಿದ್ನಂತೆ. ‘ನಮ್ಮೆಲ್ಲ ಒಡವೆಗಳನ್ನೂ ಗಂಟುಕಟ್ಟಿ ಬಾವಿಗೆ ಹಾಕಿದ್ದೇನೆ, ಕಳ್ಳರಿಗೆ ಗೊತ್ತಾಗಬಾರದಲ್ಲ!’ ಅಂತ. ಕಳ್ಳರು ರಾತ್ರಿಯಿಡೀ ಆ ಬಾವಿಯ ನೀರನ್ನು ಎತ್ತಿ ಎತ್ತಿ ಕೈದೋಟಕ್ಕೆ ಸುರಿದರಂತೆ. ಕೊನೆಗೆ ತೆನ್ನಾಲಿ, ‘ನಿಲ್ಲಿಸ್ರಪಾ! ಗಿಡಗಳೆಲ್ಲ ಕೊಳೆತು ಹೋಗ್ತವೆ’ ಎಂದು ಕಳ್ಳರಿಗೆ ಕೂಗಿ ಹೇಳಿದ ನಂತರ ಅವರು ಓಡಿದರಂತೆ.

ನಾನೀಗ ಈ ಕಳ್ಳರಿಗಾಗಿ ಗಂಟು ಕಟ್ತಾ ಇದೇನೆ.

ಅನಿರೀಕ್ಷಿತವಾಗಿ ರಾತ್ರಿ ಎರಡು ಗಂಟೆ ಸುಮಾರಿಗೆ ದೀಸಾ ಇಂದ ಮೆಸೇಜ್‌ ಬಂತು. ಮೊದಲ ಬಾರಿಗೆ ಆತ ನನ್ನನ್ನು ‘ಸರ್‌’ ಎಂದು ಸಂಬೋಧಿಸಿ, ‘ನಾಗೇಶ್‌ ಸರ್‌, ಇನ್ನೂ ಮಲಗಿಲ್ವಾ?’ ಕೇಳಿದ. ‘ರಿಡೀಮಿಂಗ್‌ ಮುಗೀತಾ ಇಲ್ಲ’ ಎಂದು ಮತ್ತೆ ಸಂದೇಶ ಕಳಿಸಿದೆ. ‘ಮುಗಿಸಿ ಮಲಗಿ; ಗುಡ್‌ನೈಟ್‌’ ಎಂಬ ಸಂದೇಶ ಬಂತು.

ನನಗೆ ಇದು ನಿಜಕ್ಕೂ ಗುಡ್‌ನೈಟ್‌ ಸಮಯವಾಗಿತ್ತು. ನನ್ನಂತೆ ‘ಡಿಜಿಟಲ್‌ ದಿಗ್ಬಂಧನ’ ಹಾಕಿಸಿಕೊಂಡು ಯಾರು ಯಾರು ಎಷ್ಟೆಷ್ಟು ಕೋಟಿ ಕಳೆದುಕೊಂಡಿದ್ದಾರೆ ಎಂಬೆಲ್ಲ ವಿವರಗಳನ್ನು ಇಂಟರ್‌ನೆಟ್‌ನಲ್ಲಿ ಕಲೆ ಹಾಕುತ್ತ ಹೋದೆ. ಆ ಪಟ್ಟಿ ತೀರಾ ದೀರ್ಘವಾಗಿತ್ತು. ಕೊನೇ ಕ್ಷಣದಲ್ಲಿ ಸಹಾಯವಾಣಿ 1930ಕ್ಕೆ ಫೋನ್‌ ಮಾಡಬೇಕು; ಅಸಲೀ ಸೈಬರ್‌ ಪೊಲೀಸರಿಗೆ ಇವರನ್ನು ಹಿಡಿದು ಕೊಡಬಹುದು ಎಂದುಕೊಂಡೆ.

ನಸುಕು ಮೊಳೆಯುತ್ತಿತ್ತು. ಕ್ಲೈಮ್ಯಾಕ್ಸ್‌ ಹತ್ತಿರ ಬರುತ್ತಿತ್ತು.

ಮೂರನೆಯ ಬೆಳಗ್ಗೆ ಎಂಟೂವರೆಗೆ ದೀಸಾ ಮತ್ತೆ ಹಾಜರಾದ. ಈ ಬಾರಿ ಈತನ ಸೆಶನ್‌ ಕೇವಲ ಒಂದು ಗಂಟೆಯದಾಗಿತ್ತು. ಎಲ್ಲಾ ಮೊತ್ತವೂ ಬ್ಯಾಂಕಿನ ಒಂದೇ ಅಕೌಂಟ್‌ನಲ್ಲಿ ಶೇಖರ ಆಯ್ತೆ ಕೇಳಿದ. ಹೌದೆಂದಾಗ ಮತ್ತೆ ಪ್ರೂಫ್‌ ಕೇಳಿದ. ‘ಸರಿ, ನೀವಿನ್ನು ಬ್ಯಾಂಕಿಗೆ ಹೊರಡಿ. ಆರ್‌ಬಿಐ ನಿಮಗೆ ಹೊಸ ಅಕೌಂಟ್‌ ನಂಬರ್‌ ಕೊಡುತ್ತದೆ. ಅಲ್ಲಿಗೆ ನಿಮ್ಮ ಹಣವನ್ನೆಲ್ಲ ವರ್ಗಾಯಿಸಿ’ ಎಂದ.

‘ಹುಷಾರಾಗಿರಿ! ಇಲ್ಲಿಂದ ಹೊರಡುವಾಗ ಯಾರಿಗೂ ಸಂಶಯ ಬರಬಾರದು. ನಿಮ್ಮ ಕೆಂಗೇರಿ ಪೊಲೀಸರು ನಿಮ್ಮ ಮೇಲೆ ಕಣ್ಣಿಟ್ಟಿರುವ ಸಾಧ್ಯತೆ ಇದೆ. ನಿಮ್ಮದೇ ಕಾರಿನಲ್ಲಿ ಹೋಗ್ತೀರಿ ತಾನೆ? ನಿಮ್ಮ ಎರಡೂ ಫೋನ್‌ಗಳಲ್ಲಿ -ಒಂದರಲ್ಲಿ ವಿಡಿಯೊ ಇನ್ನೊಂದರಲ್ಲಿ ಆಡಿಯೊ ಆನ್‌ ಇರಲಿ. ಎಲ್ಲೂ ಕಾರಿನ ಬಾಗಿಲು ತೆರೆಯಬೇಡಿ. ಬ್ಯಾಂಕ್‌ ಕೌಂಟರ್‌ನಲ್ಲಿ ನಿಮ್ಮದು ಸಹಜ ವರ್ತನೆ ಆಗಿರಲಿ. ನಿಮ್ಮ ರಕ್ಷೆಗೆ ನಾವಿದ್ದೇವೆ’ ಎಂದು ಹೇಳಿ, ಹೊಸ ಅಕೌಂಟ್‌ ನಂಬರ್‌ ಬರೆದುಕೊಳ್ಳಲು ತಿಳಿಸಿದ.

ಅದು, ‘ರಾಜಸ್ತಾನ್‌ ಮರುಧರ ಗ್ರಾಮೀಣ ಬ್ಯಾಂಕ್‌, a/c No. 83097342229 IFS RMGB 0000447, ಖಾತೆದಾರನ ಹೆಸರು ರಾಮಾವತಾರ್‌ ಗುಜ್ಜರ್‌. ಮನೋಹರ್‌ಪುರ’ ಎಂದಿತ್ತು.

ನನಗೀಗ ಧೈರ್ಯ ಬಂದಿತ್ತು. ‘ಅಷ್ಟೂ ಹಣವನ್ನು ಆ ದೂರದ ಅಕೌಂಟ್‌ಗೆ ವರ್ಗಾವಣೆ ಮಾಡಲು ಹೊರಟರೆ ನಮ್ಮ ಎಸ್‌ಬಿಐ ಮ್ಯಾನೇಜರಿಗೆ ಡೌಟ್‌ ಬರೋಲ್ಲವಾ?’ ಕೇಳಿದೆ. ‘ಮಿಸ್ಟರ್‌ ನಾಗೇಶ್‌, ನೀವು ಪತ್ರಕರ್ತರು. ನೆಪ ಹೇಳೋಕೆ ಕಲಿಸಬೇಕಾ? ನಮ್ಮ ಗೆಳೆಯ ಸಂಕಷ್ಟದಲ್ಲಿದ್ದಾನೆ ಅನ್ನಿ. ಹೊರಡಿ ಜಲ್ದೀ!’ ಎಂದು ಅವತರಿಸಿದ.

ಬ್ಯಾಂಕಿಗೆ ಹೊರಟೆವು. ಮೂರು ದಿನಗಳ ನಂತರ ಇದೇ ಮೊದಲ ಬಾರಿ ಹೊರಕ್ಕೆ ಬಂದು ನಾನು ಹೆಬ್ಬಾಗಿಲಿಗೆ ಕೀಲಿ ಸಿಕ್ಕಿಸುತ್ತ ರೇಖಾಗೆ ಎರಡೂ ಫೋನ್‌ ಕೊಟ್ಟೆ. ಲಿಫ್ಟ್‌ನಲ್ಲಿ ಕೆಳಕ್ಕೆ ಹೋಗಿ ಕಾರ್‌ ಬಳಿ ನಿಂತಿರಲು ಅವಳಿಗೆ ಹೇಳಿದೆ.

ಕೊನೆಯ ಕ್ಷಣ ಸನ್ನಿಹಿತವಾಗಿತ್ತು. ನಾನು ಪಕ್ಕದ ಮನೆಗೆ ಧಾವಿಸಿ, ಕಿಟಕಿಯಿಂದಲೇ ಪ್ರಿಯಾಳಿಂದ ಅವಳ ಫೋನ್‌ ಪಡೆದು ತುಸು ಅವಸರದಲ್ಲೇ 1930ಕ್ಕೆ ಕಾಲ್‌ ಮಾಡಿದೆ. ಮುಖ ಬೆವತಿತ್ತು. ಕೈ ಮೆಲ್ಲಗೆ ನಡುಗುತ್ತಿತ್ತು. ‘ಏನಾಯ್ತು ಅಂಕಲ್‌?’ ಎಂದು ಪ್ರಿಯಾ ಕೇಳುವಾಗ ಅತ್ತ ಸೈಬರ್‌ ಸಹಾಯವಾಣಿಯಿಂದ ‘ಕನ್ನಡ ಬೇಕಿದ್ದರೆ 1 ಒತ್ತಿ, ಇಂಗ್ಲಿಷ್‌ ಬೇಕಿದ್ದರೆ 2, ಹಿಂದೀ ಬೇಕಿದ್ದರೆ… ನಾನು ಏನನ್ನೋ ಒತ್ತಿದೆ. ಫೋನ್‌ ಡೆಡ್‌ ಆಯಿತು. ಎರಡನೆ ಬಾರಿಯೂ ಹಾಗೇ.

ನನ್ನ ಗಡಿಬಿಡಿ ನೋಡಿ, ಪ್ರಿಯಾ ತನ್ನ ಗಂಡ, ಅಕ್ಷಯನನ್ನು ಕರೆದಳು. ‘ನಾವು ಡಿಜಿಟಲ್‌ ಅರೆಸ್ಟ್‌ ಆಗಿದ್ದೇವೆ’ ಎಂದು ಅಕ್ಷಯ್‌ಗೆ ಹೇಳುತ್ತ 1930 ಒತ್ತುತ್ತಲೇ ಇದ್ದೆ. ‘ಅಲ್ಲಿಗೆ ಕಾಲ್‌ ಮಾಡಿದರೆ ಪ್ರಯೋಜನ ಇಲ್ಲ, ಡೋಂಟ್‌ ವರಿ ಅಂಕಲ್‌, ಎಲ್ಲಿದೆ ನಿಮ್‌ ಫೋನ್?ʼ’ ಎಂದು ಅಕ್ಷಯ್‌ ಕೇಳಿದ. ನನ್ನ ಉತ್ತರ ಕೇಳಿ, ಹಾಗೇ ಸೀದಾ ಕೆಳಕ್ಕೆ ಧಾವಿಸಿ ಕಾರ್‌ ಪಾರ್ಕ್‌ ಬಳಿ ನರ್ವಸ್‌ ಸ್ಥಿತಿಯಲ್ಲಿದ್ದ ರೇಖಾಳನ್ನು ಮೇಲಕ್ಕೆ ಕರೆತಂದ.

ಆ ಕಡೆಯಿಂದ ಎರಡೂ ಫೋನ್‌ಗಳಿಗೆ ‘ಯಾಕೆ ಡಿಲೇ? ಹೊರಟಿಲ್ವಾ? ಏನ್‌ ಆಗ್ತಾ ಇದೆ?’ ಅಂತ ಆವಾಜ್‌ ಬರ್ತಾನೇ ಇತ್ತು.

ಅಕ್ಷಯ್‌ ಒಂದು ಫೋನ್‌ ಎತ್ತಿ, ‘ಯಾರ್ರೀ ನೀವು?’ ಎಂದು ಕೂಲಾಗಿ ಕೂಗಿದ. ಅತ್ತ ಕಡೆಯಿಂದ ಅದೇ ಪ್ರಶ್ನೆ ಬಂದಾಗ ಅಕ್ಷಯ್ ‘ನಾನು ನಾಗೇಶ ಹೆಗಡೆ ಮಗ, ಯಾರು ನೀನು? ಏನ್‌ ಬೇಕು?’ ಎಂದು ದಬಾಯಿಸಿದ. ‘ನೀನು ಆಸ್ಟ್ರೇಲಿಯಾದಿಂದ ಯಾವಾಗ ಬಂದೆ?’ ಎಂಬ ದೀಸಾನ ಪ್ರಶ್ನೆ ಅತ್ತಿಂದ ಕೇಳುತ್ತಿತ್ತು.

‘ನಾನು ಬೆಳಗ್ಗೆ ಬಂದೆ, ಏನ್‌ ನಾಟಕ ನಿಮ್ಮದು? ಮುಚ್ಚು ಬಾಯಿ!’ ಎಂದು ಹೇಳಿ ಅಕ್ಷಯ್‌ ಎರಡೂ ಫೋನ್‌ಗಳನ್ನು ಡಿಸ್‌ಕನೆಕ್ಟ್‌ ಮಾಡಿದ. ಕುಸಿದಂತಿದ್ದ ನಮ್ಮಿಬ್ಬರನ್ನು ಸೋಫಾ ಮೇಲೆ ಕೂರಿಸಿದ.

(ಆಸ್ಟ್ರೇಲಿಯಾದಿಂದ ಮಗನನ್ನೂ ಅರೆಸ್ಟ್‌ ಮಾಡಿಸಿ ಕರೆತರಬೇಕಾದೀತು ಎಂದು ದೀಸಾ ಎಚ್ಚರಿಸಿದ್ದು ನೆನಪಾಯಿತು. ಮಗ ಈಗ ಅಕ್ಷಯ್‌ ರೂಪದಲ್ಲಿ ಬಂದ!)

‘ಮೊದಲೇ ಯಾಕೆ ಹೇಳಿಲ್ಲ ಅಂಕಲ್‌?’, ಕೇಳಿದ ಅಕ್ಷಯ್‌.

‘1930ರಿದ ಸಹಾಯ ಸಿಕ್ಕಿದ್ರೆ, ಅವರನ್ನ ನೇರ ಬ್ಯಾಂಕಿಗೆ ಕರೆಸಬೇಕು ಅಂತಿದ್ದೆ’ ಎಂದು ಹೇಳಿದೆ.

‘ಅದೇನೂ ಪ್ರಯೋಜನ ಇಲ್ಲ ಅಂಕಲ್‌’ ಎಂದು ಪ್ರಿಯಾ, ಅಕ್ಷಯ್‌ ಇಬ್ಬರೂ ಹೇಳಿದರು. ಅಂಡಮಾನ್‌ನಲ್ಲಿರುವ ಪ್ರಿಯಾಳ ತಂಗಿಗೆ ಹೀಗೇ ನ್ಯಾರ್ಕೊಟಿಕ್ಸ್‌ (ಮಾದಕ ವಸ್ತು) ಪ್ರಕರಣದಲ್ಲಿ ಸಿಲುಕಿಸಿ ಹೈರಾಣು ಮಾಡಿದ್ದರಂತೆ.

ನನ್ನ ಫೋನ್‌ಗೆ ದೀಸಾನ ಮೆಸೇಜ್‌ ಬಂತು. ‘ಗೋ ಹೋಮ್‌! ಐ ವಿಲ್‌ ಸೆಂಡ್‌ ದಿ ಅರೆಸ್ಟ್‌ ಟೀಮ್‌’ ಅಂತ. ಅಕ್ಷಯ್‌ ನಕ್ಕು ಅದನ್ನೂ ಡಿಲೀಟ್‌ ಮಾಡಿದ.

ಅಂತೂ ನಾವೇನೋ ಬಚಾವಾದೆವು. ಕಳ್ಳರು ತಪ್ಪಿಸಿಕೊಂಡರು. ಸೈಬರ್‌ ಕ್ರೈಮ್‌ ಪೊಲೀಸರಿಗೆ ಕೊಡಬೇಕೆಂದಿದ್ದ (ರಾಜಸ್ತಾನದ ಬ್ಯಾಂಕಿನ) ಅಕೌಂಟ್‌ ವಿವರಗಳು ನನ್ನ ಕಿಸೆಯಲ್ಲೇ ಉಳಿದವು.

ಕೊನೇ ಸೀನ್‌ನಲ್ಲೂ ಪೊಲೀಸರು ಬರಲಿಲ್ಲ. ಅಂಥದ್ದೆಲ್ಲ ಸಿನೆಮಾದಲ್ಲಿ ಮಾತ್ರವೇನೊ.

ಉಪಸಂಹಾರ: ಮಧ್ಯಾಹ್ನ ಅಂತೂ ಸಹಾಯವಾಣಿ 1930ರಿಂದ ತುಸು ಪ್ರತಿಕ್ರಿಯೆ ಬಂತು. ‘ನಮ್ಮ ಎಲ್ಲ ಸಿಬ್ಬಂದಿ ಕೆಲಸದಲ್ಲಿದ್ದಾರೆ; ತುಸು ಹೊತ್ತಿನ ನಂತರ ಪ್ರಯತ್ನಿಸಿ’ ಅಂತ. ಥತ್‌! ಲಿಖಿತ ದೂರು ಕೊಡಲೂ ಅಲ್ಲಿ ಅವಕಾಶ ಇಲ್ಲ.

ಟಿವಿಯಲ್ಲಿ ಯುದ್ಧವಿರಾಮದ ಘೋಷಣೆಯ ಸುದ್ದಿ ಬರುತ್ತಿತ್ತು. ನಾನು ನಿರಾಳವಾಗಿ ನಿದ್ದೆಗೆ ಜಾರಿದೆ.

ಸಂಜೆ ಮತ್ತೆ ನಮ್ಮಿಬ್ಬರ ಫೋನ್‌ಗೂ ಒಂದಾದ ಮೇಲೊಂದರಂತೆ ಅನಾಮಧೇಯ ನಂಬರಿನಿಂದ ಕರೆಗಳು ಬರತೊಡಗಿದ್ದವು.

ಯುದ್ಧವಿರಾಮದ ನಂತರವೂ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಬಾಂಬ್‌ ದಾಳಿ ಆಗುತ್ತಿರುವ ವಾರ್ತೆ ಬರುತ್ತಿತ್ತು.

ರಾಷ್ಟ್ರೀಯ ಸೈಬರ್‌ ಅಪರಾಧ ಪತ್ತೆದಳದ ಇಮೇಲ್‌ ವಿಳಾಸ ಪತ್ತೆ ಹಚ್ಚಿದೆ. ಅದುವರೆಗೆ ನಡೆದ ಘಟನೆಗಳ ವಿವರ, ನಕಲಿ ಬ್ಯಾಂಕ್‌ ಅಕೌಂಟ್‌ ನಂಬರ್‌ ಎಲ್ಲವನ್ನೂ ಬರೆದು ಇಮೇಲ್‌ ಹಾಕಿದೆ.

ನನ್ನಿಂದ ಹೆಚ್ಚಿನ ಮಾಹಿತಿ ಕೇಳಿ ಅವರಿಂದ ಸಂದೇಶ ಬರಲಿಲ್ಲ. ಪತ್ರ ತಲುಪಿದ್ದರ ಬಗ್ಗೆ ಅಲ್ಲಿಂದ ಅಟೊಮ್ಯಾಟಿಕ್‌ ರಶೀದಿ ಕೂಡ ಇದುವರೆಗೂ ಬರಲಿಲ್ಲ.

ರೇಖಾಗೆ ಈಗ ‘ಸ್ಟಾಕ್‌ಹೋಮ್‌ ಸಿಂಡ್ರೋಮ್‌’ ಎಂಬ ಕಾಯಿಲೆ ಬಂದಂತಿದೆ. ನಮ್ಮನ್ನು ಹೊಸ್ಟೇಜ್‌ ಆಗಿ ಇಟ್ಟುಕೊಂಡು ಗೋಳಾಡಿಸಿದ ಖೂಳರ ಬಗ್ಗೆ ಅವಳಿಗೆ ಅನುಕಂಪ ಮೂಡಿಬಿಟ್ಟಿದೆ. ಎಂಥ ಚೂಟಿ ಜನ! ಎಷ್ಟು ಕ್ವಿಕ್‌ ಆಕ್ಷನ್‌! ಆದರೆ ಪಾಪ, ಕೋಟಿಗಟ್ಟಲೆ ಹಣವುಳ್ಳವರನ್ನು ಬೇಟೆಯಾಡಬೇಕಿದ್ದ ಈ ಸೂಪರ್‌ ನಟನಟಿಯರು ನಮ್ಮಂಥ ಕಿರುಮೀನನ್ನು ಹಿಡಿಯಲು ಏನೆಲ್ಲ ಶ್ರಮಪಟ್ಟು ಅದರಲ್ಲೂ ವಿಫಲರಾದರಲ್ಲ ಎಂದು ಅವಳು ಮಿಡುಕುತ್ತಿದ್ದಾಳೆ.

ಕೊನೇ ಹನಿ: ಸೋಮವಾರ-ಮೇ 12ರ ಪ್ರಜಾವಾಣಿ ವರದಿ: ಸೈಬರ್‌ ಅಪರಾಧ ಪತ್ತೆಗೆ ಇದುವರೆಗೆ 45 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ತನಿಖಾ ವ್ಯವಸ್ಥೆಯ ಬಲವರ್ಧನೆಗೆ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಹಾಗೂ ಪ್ರಾಸಿಕ್ಯೂಟರ್‌ಗಳಿಗೆ ಸಿಸಿಐಟಿಆರ್‌ ಮೂಲಕ ಹೆಚ್ಚಿನ ತರಬೇತಿಗೆ ವ್ಯವಸ್ಥೆಯಾಗಿದೆ. ಕಳೆದ ವರ್ಷ ₹182.8 ಕೋಟಿ ಹಣವನ್ನು ಅಪರಾಧಿಗಳು ಲಪಟಾಯಿಸಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 65 ಸಾವಿರ ಅಪರಾಧ ಪ್ರಕರಣಗಳು ವರದಿಯಾಗಿವೆ.

(ಹೇಗೆ ವರದಿಯಾದವೊ? ದೂರು ಕೊಡಲೂ ಅವಕಾಶವೇ ಇಲ್ಲವಲ್ಲ!)

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. Sir pls an you send me that mohan Kumar picture,the same story and character come to my life and I lose all my hard earned money from 15 year abroad job.please help to yeshwanthpur police to track that guy number ,I got same rajasthan guy account number but different name.please send me mail .

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X