- ಕಾಂಗ್ರೆಸ್ ಬಂದ ಬಳಿಕ ಎಲ್ಲೆಲ್ಲೂ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ ಎಂದಿದ್ದ ಯತ್ನಾಳ್
- ಜೈನಮುನಿ ಹತ್ಯೆ ಅತ್ಯಂತ ಕ್ರೂರ ಘಟನೆ ಎಂದು ಖಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿಯಲ್ಲಿ ನಡೆದ ಜೈನಮುನಿ ಹತ್ಯೆ ಪ್ರಕರಣದ ವಿಚಾರವಾಗಿ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಘಟನೆಗೆ ಸಂಬಂಧಿಸಿ ಕೆಲವರು ರಾಜಕೀಯ ಬೆರೆಸಿದ್ದಾರೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ರಾಜಕೀಯ ಬೆರೆಸದೇ ಇದ್ದರೆ ಮಾತನಾಡುವುದೇ ಗೊತ್ತಿಲ್ಲ ಎಂದು ನೇರವಾಗಿ ಹೇಳಿದರು.
ಮುನಿಗಳಿಗೆ ಸಂತರಿಗೆ ರಕ್ಷಣೆ ಇಲ್ಲದಿದ್ದರೆ ಹೇಗೆ? ಜೈನಮುನಿ ಹತ್ಯೆಗೆ ಹಣಕಾಸು ವ್ಯವಹಾರ ಕಾರಣ ಎಂಬುವುದು ಪೊಲೀಸರು ಒತ್ತಡದಿಂದ ಸೃಷ್ಟಿ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಈಗ ಭಯದ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಆಗಿದೆ. ಎಲ್ಲೆಲ್ಲೂ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹಿಂದೂಗಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದರು.
ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ‘ಜೈನಮುನಿ ಹತ್ಯೆ ಅತ್ಯಂತ ಕ್ರೂರ ಘಟನೆ. ಇದು ಅತ್ಯಂತ ಖಂಡನೀಯ. ಇಂತಹ ಘಟನೆ ನಡೆಯಲೇಬಾರದು. ಘಟನೆಗೆ ಸಂಬಂಧಿಸಿದಂತೆ ಜೈನ ಸಮುದಾಯದವರೊಂದಿಗೆ ಮಾತನಾಡಲು ಈಗಾಗಲೇ ಗೃಹ ಸಚಿವ ಪರಮೇಶ್ವರ್ ಅವರು ಬೆಳಗಾವಿಗೆ ತೆರಳಿದ್ದಾರೆ. ನಾಳೆ ಅಧಿವೇಶನಕ್ಕೆ ಬಂದ ಬಳಿಕ ಸಂಪೂರ್ಣ ವಿವರ ನೀಡಲಿದ್ದಾರೆ. ಒಂದು ವೇಳೆ ಅಗತ್ಯ ಬಿದ್ದರೆ ನಾನೂ ಕೂಡ ಈ ಬಗ್ಗೆ ಉತ್ತರ ನೀಡುತ್ತೇನೆ’ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಜೈನಮುನಿ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹ
ಈ ಸರ್ಕಾರದ ಮೇಲೆ ವಿಶ್ವಾಸ ಇಲ್ಲ. ಹಾಗಾಗಿ ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಒಂದು ಕೋಮಿನ ರಕ್ಷಣೆ ಮಾಡುವುದನ್ನು ಬಿಡಬೇಕು ಎಂದ ಯತ್ನಾಳ್ ಮಾತಿಗೆ, ಸ್ಪೀಕರ್ ಯು.ಟಿ ಖಾದರ್ ಮಧ್ಯ ಪ್ರವೇಶ ಮಾಡಿದರು. ಇದನ್ನು ರಾಜಕೀಯ ಮಾಡಲು ಹೋಗಬೇಡಿ. ವಿಷಯಕ್ಕೆ ಸೀಮಿತವಾಗಿ ಹೇಳಿ ಎಂದು ತಿಳಿಸಿದರು.
ಬಿಜೆಪಿ ಶಾಸಕ ಅಭಯ್ ಪಾಟೀಲ್, ಜೈನ ಮುನಿ ನಾಪತ್ತೆಯಾದ ವಿಚಾರವಾಗಿ ಪೊಲೀಸ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಬಳಿಕ ಅವರ ಹತ್ಯೆ ಬಹಿರಂಗವಾಯಿತು. ಆದರೆ ಹತ್ಯೆ ಆರೋಪಿ ಓರ್ವನ ಹೆಸರು ಮಾತ್ರ ಬಹಿರಂಗವಾಗಿ ಹೇಳಿದ್ದಾರೆ. ಪೊಲೀಸರು ಮತ್ತೋರ್ವನ ಹೆಸರನ್ನು ಬಹಿರಂಗವಾಗಿ ಹೇಳಿಲ್ಲ. ಇದು ಸಂಶಯಕ್ಕೆ ಕಾರಣವಾಗಿದೆ ಎಂದು ಸದನದಲ್ಲಿ ಆರೋಪಿಸಿದರು.