ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಸೋಮವಾರ ಚಾಲನೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಯೋಜನೆಯ ಲೋಗೋ ಕೂಡ ಬಿಡುಗಡೆ ಮಾಡಿದರು. ನಂತರ 10 ಕೆಜಿ ಅಕ್ಕಿಯ ಪೈಕಿ ಐದು ಕೆಜಿ ಅಕ್ಕಿಯ 170 ರೂ. ಹಣವನ್ನು ಮೈಸೂರು, ಕೋಲಾರ ಜಿಲ್ಲೆಯ ಫಲಾನುಭವಿಗಳ ಖಾತೆಗೆ ಹಾಕುವ ಮೂಲಕ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯದಲ್ಲಿ 1.28 ಕೋಟಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರು ಇದ್ದಾರೆ. ಇದರಲ್ಲಿ ಶೇ 99 ರಷ್ಟು ಕಾರ್ಡುಗಳು ಆಧಾರ್ ಜೋಡಣೆ ಹೊಂದಿವೆ. ಶೇ. 82 ರಷ್ಟು ಪಡಿತರ ಚೀಟಿಗಳು ಅಂದರೆ 1.06 ಪಡಿತರ ಚೀಟಿಗಳು. ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಜೋಡಣೆಯಾಗಿವೆ. ಈ ಖಾತೆಗಳಿಗೆ ನಗದು ವರ್ಗಾವಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಉಳಿದ ಕಾರ್ಡುದಾರರಿಗೆ ಖಾತೆ ತೆರೆಯಲು ಮಾಹಿತಿ ನೀಡಲಾಗುವುದು. 1.27 ಕೋಟಿ ಕಾರ್ಡುಗಳಲ್ಲಿ ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರೆಂದು ಗುರುತಿಸಲಾಗಿದ್ದು ಅವರ ಖಾತೆಗೆ ನಗದು ವರ್ಗಾಯಿಸಲಾಗುವುದು. ಶೇ. 94 ರಷ್ಟು ಕುಟುಂಬಗಳ ಮುಖ್ಯಸ್ಥರು ಮಹಿಳೆಯರು ಹಾಗೂ ಶೇ. 5 ರಷ್ಟು ಪುರುಷರು ಇದ್ದಾರೆ ಎಂದು ಮಾಹಿತಿ ನೀಡಿದರು.