ಗುಜರಾತ್‌ನ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ‘ಗುಜರಾತ್ ಸಮಾಚಾರ್’ನ ಮಾಲೀಕ ಬಾಹುಬಲಿ ಶಾ ಅವರನ್ನು ಜಾರಿ ನಿರ್ದೇಶನಾಲಯವು (ಇಡಿ) ಆರ್ಥಿಕ ವಂಚನೆ ಆರೋಪದ ಮೇಲೆ ಬಂಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ಟೀಕಿಸಿ ತಮ್ಮ ಪತ್ರಿಕೆಯಲ್ಲಿ ಬರೆದ ಕಾರಣಕ್ಕಾಗಿಯೇ ಅವರನ್ನು ಇಡಿ ಬಂಧಿಸಿದೆ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
“ಆದಾಯ ತೆರಿಗೆ ಇಲಾಖೆಯು ಬಾಹುಬಲಿ ಶಾ ಅವರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ, ಶೋಧ ನಡೆಸಿದೆ. ಇದಾದ ಬೆನ್ನಲ್ಲೇ, ಅವರನ್ನು ಇಡಿ ಬಂಧಿಸಿದೆ. ಅವರ ವಿರುದ್ಧ ಆರ್ಥಿಕ ವಂಚನೆ ಆರೋಪ ಹೊರಿಸಲಾಗಿದೆ. ಆದರೆ, ಅವರ ಬಂಧನಕ್ಕೆ ನಿಜವಾದ ಕಾರಣ ಅವರು ಮೋದಿ ಮತ್ತು ಬಿಜೆಪಿ ಸರ್ಕಾರವನ್ನು ಟೀಕಿಸಿ ಬರೆದಿದ್ದು” ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಶಕ್ತಿಸಿನ್ಹ ಗೋಹಿಲ್ ಹೇಳಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಗೋಹಿಲ್, “ಗುಜರಾತ್ ಸಮಾಚಾರ್ ಪತ್ರಿಕೆಯಲ್ಲಿ ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ವರದಿ ಮಾಡಿದ್ದರು. ಆ ವರದಿಯಲ್ಲಿ ಮೋದಿ ಮತ್ತು ಕೇಂದ್ರ ಸರ್ಕಾರದ ಧೋರಣೆ, ವೈಫಲ್ಯಗಳ ಬಗ್ಗೆ ಪ್ರಶ್ನಿಸಿದ್ದರು. ಆ ಕಾರಣಕ್ಕಾಗಿಯೇ ಅವರನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ. ಈಗ ಅವರನ್ನು ಬಂಧಿಸಲಾಗಿದೆ” ಎಂದು ಆರೋಪಿಸಿದ್ದಾರೆ.
“ಸತ್ಯಕ್ಕಾಗಿ ನಿಲ್ಲುವವರಿಗೆ ಶಿಕ್ಷೆ ನೀಡುವುದೇ ಬಿಜೆಪಿ ಸರ್ಕಾರದ ಧ್ಯೇಯವಾಗಿದೆ. ಪ್ರಮುಖ ಗುಜರಾತಿ ಪತ್ರಿಕೆ ಗುಜರಾತ್ ಸಮಾಚಾರ್ ಯಾವಾಗಲೂ ಅಧಿಕಾರದ ವಿರುದ್ಧ ಗಟ್ಟಿಯಾಗಿ ನಿಂತಿದೆ. ಅದು ಯಾರೇ ಆಗಿದ್ದರೂ, ಅವರ ಸರ್ಕಾರವನ್ನು ಕಠುವಾಗಿ ಟೀಕಿಸುತ್ತದೆ, ಪ್ರಶ್ನಿಸುತ್ತದೆ. ಆದಾಗ್ಯೂ, ಇತ್ತೀಚಿನ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಪತ್ರಿಕೆಯಲ್ಲಿ ಪ್ರಟಕವಾದ ವರದಿ, ಲೇಖನಗಳು ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರನ್ನು ವಿಚಲಿತಗೊಳಿಸಿದೆ. ಹೀಗಾಗಿ, ಬಾಹುಬಲಿ ಶಾ ಅವರ ವಿರುದ್ಧ ಬಿಜೆಪಿ ತನ್ನ ನೆಚ್ಚಿನ ಟೂಲ್ ಕಿಟ್ ಮತ್ತು ಬೇಟೆಗಾರರನ್ನು ಛೂಬಿಟ್ಟಿದೆ” ಎಂದು ಹೋಗಿಲ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಬಿಡದಿ ಗ್ರೌಂಡ್ ರಿಪೋರ್ಟ್: ಹಕ್ಕಿಪಿಕ್ಕಿ ಬಾಲಕಿಯ ಅತ್ಯಾಚಾರ, ಕೊಲೆ ಮುಚ್ಚಿ ಹಾಕುವ ಷಡ್ಯಂತ್ರ ನಡೆದಿದೆಯೇ?
“ಗುಜರಾತ್ ಸಮಾಚಾರ್ ಮತ್ತು ಅದರ ದೂರದರ್ಶನ ಚಾನೆಲ್ GSTv ಸೇರಿದಂತೆ ಇತರ ವ್ಯವಹಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ (ಐಟಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿವೆ. ಗುಜರಾತ್ ಸಮಾಚಾರ್ ಮಾಲೀಕ ಬಾಹುಬಲಿ ಭಾಯಿ ಶಾ ಅವರನ್ನು ಬಂಧಿಸಲಾಗಿದೆ” ಎಂದು ಗೋಹಿಲ್ ಹೇಳಿದ್ದಾರೆ.
“ಸುಮಾರು ಮೂರು ವಾರಗಳ ಹಿಂದೆ ಐಟಿ ದಾಳಿ ನಡೆದಾಗ, ಬಾಹುಬಲಿ ಶಾ ಅವರ ಮನೆಯು ತಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಮಾತೃಮೂರ್ತಿ ಸ್ಮೃತಿಬೆನ್ ಅವರ ಮರಣದಿಂದಾಗಿ ದುಃಖದಲ್ಲಿ ಮುಳುಗಿತ್ತು. ಬಾಹುಬಲಿ ಶಾ ಅವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರಾಗಿದ್ದಾರೆ. ಅವರ ಮೇಲೆ ಮೋದಿ ಸರ್ಕಾರ ದಾಳಿ ನಡೆಸುತ್ತಿದೆ. ಸರ್ಕಾರದ ಈ ಅತಿರೇಕವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಕೆಲವು ಮಾಧ್ಯಮಗಳು ತಮ್ಮ ಕೆಲಸವನ್ನು ನಿರ್ದಯವಾಗಿ ಮುಂದುವರೆಸಿವೆ. ಪ್ರತಿಯೊಂದು ಮಾಧ್ಯಮವೂ ಗೋದಿ ಮೀಡಿಯಾ ಅಲ್ಲ, ತಮ್ಮ ಆತ್ಮವನ್ನು ಮಾರಲು ಸಿದ್ಧವಾಗಿಲ್ಲ ಎಂಬುದನ್ನು ಬಿಜೆಪಿ ತಿಳಿದುಕೊಳ್ಳಬೇಕು. ಸರ್ಕಾರದ ತಪ್ಪುಗಳನ್ನು ಟೀಕಿಸುವ ಗುಜರಾತ್ ಸಮಾಚಾರ್ ಸೇರಿದಂತೆ ಎಲ್ಲ ಮಾಧ್ಯಮಗಳೊಂದಿಗೆ ನಾನು ನಿಲ್ಲುತ್ತೇನೆ” ಎಂದು ಗೋಹಿಲ್ ಪೋಸ್ಟ್ ಮಾಡಿದ್ದಾರೆ.