ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮವು ಹಲವು ಮೂಲಭೂತ ಸಮಸ್ಯೆಗಳಿಂದ ಬಳುತ್ತಿದ್ದು, ಆ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ನೀಡುವುದರ ಮೂಲಕ ಸಮಸ್ಯೆ ಬಗೆಹರಿಯದಿದ್ದರೆ; ಧರಣಿ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದರು.
ಈ ವೇಳೆ ಕರ್ನಾಟಕ ರೈತ ಸೇನೆಯ ರಾಜ್ಯಾಧ್ಯಕ್ಷ ವಿರೇಶ ಸೊಬರದಮಠ ಸ್ವಾಮೀಜಿ ಮಾತನಾಡಿ, ನವಲಗುಂದದ ತಿರ್ಲಾಪೂರ ಗ್ರಾಮವು ಹಲವು ಮಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಬಗೆಹರಿಸಲು ಒತ್ತಾಯಿಸಿ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಬೇಡಿಕೆಗಳನ್ನು ಈಡೇರಿಸುವದರಲ್ಲಿ ವಿಫಲರಾಗಿದ್ದಾರೆ. ಕಾರಣ ಸಂಬಂಧಪಟ್ಟ ಅಧಿಕಾರಿಗಳು ಅಭಿವೃದ್ಧಿ ಬಗ್ಗೆ ಒತ್ತುಕೊಡದೇ ಭ್ರಷ್ಟಾಚಾರಕ್ಕೆ ಮನ್ನಣೆ ನೀಡಿದ್ದು ಕಂಡು ಬಂದಿದೆ. ಗ್ರಾಮದ ಅಭಿವೃದ್ಧಿ ಕಡೆಗೆ ಒತ್ತು ಕೊಡುವ ಅಧಿಕಾರಿಗಳನ್ನು ನೇಮಕ ಮಾಡಿ ಗ್ರಾಮದ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಲು ಅಧಿಕಾರಿಗಳ ತಂಡ ರಚನೆ ಮಾಡಲು ಆದೇಶ ಮಾಡಬೇಕೆಂದು ಒತ್ತಾಯಿಸಿದರು.
ಕುಡಿಯುವ ನೀರಿನ ಕೆರೆಯಲ್ಲಿ ಕಸ-ಕಡ್ಡಿ ಬೆಳೆದು ನೀರು ಮಲೀನವಾಗಿದ್ದು ಇದರಿಂದ ಗ್ರಾಮದಲ್ಲಿ ಹಲವಾರು ಜನರಿಗೆ ವಿವಿಧ ಕಾಯಿಲೆಗಳು ಕಂಡು ಬಂದಿವೆ ಸಾವಿರಾರು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕರ್ನಾಟಕ ನೀರಾವರಿ ಇಲಾಖೆಗೆ ಸಂಬಂಧಿಸಿರುವ ಮೂರಂ ಕ್ವಾರಿಗಳು ಅಂದಾಜು 30 ರಿಂದ 35 ಎಕರೆ ಜಮೀನಿದ್ದು ಈ ಕ್ವಾರಿಯನ್ನು ಅಲ್ಪ ಪ್ರಮಾಣದಲ್ಲಿ ಹೂಳೆತ್ತಿ ಕುಡಿಯುವ ನೀರಿಗಾಗಿ ಅಭಿವೃದ್ಧಿ ಪಡಿಸಬೇಕು. 15 ಸಾವಿರ ಜನಸಂಖ್ಯೆ ಹೊಂದಿರುವ ತಿರ್ಲಾಪೂರ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಬಹಳ ಇದ್ದು, ಸಾರ್ವಜನಿಕರ ಆರೋಗ್ಯ ತಪಾಸಣೆಗಾಗಿ ನವಲಗುಂದ, ಹುಬ್ಬಳ್ಳಿಗೆ ಕಡೆಗೆ ಹೋಗುವ ಪರಿಸ್ಥಿತಿ ಬಂದಿದೆ. ನಮ್ಮ ಹೊಲ ನಮ್ಮ ದಾರಿ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. 2019 -2024 ರವರೆಗೆ ಎನ್ಆರ್‌ಜಿ ಯೋಜನೆಯಡಿಯಲ್ಲಿ ಬಹುದೊಡ್ಡ ಕಳಪೆ ಮಟ್ಟದ ಕಾಮಗಾರಿಗಳನ್ನು ಮಾಡಿ ಬಿಲ್ ತೆಗೆದುಕೊಂಡು ಭ್ರಷ್ಟಾಚಾರವ ಎಸಗಿದ್ದಾರೆ.
ಇದನ್ನು ಓದಿದ್ದೀರಾ? ಧಾರವಾಡ | ದ್ವಾಮವ್ವ, ದುರ್ಗವ್ವ ಮೂರ್ತಿ ಹೊತ್ತು ಭಾವೈಕ್ಯ ಮೆರೆದ ಮುಸ್ಲಿಮರು
ನಮ್ಮ ಬೇಡಿಕೆಗಳನ್ನು 15 ದಿನಗಳ ಒಳಗಾಗಿ ಬಗೆಹರಿಸಬೇಕು. ಒಂದುವೇಳೆ ಕ್ರಮಕೈಗೊಳ್ಳದಿದ್ದರೆ; ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಮಾಡುತ್ತೇವೆ. ಧರಣಿ ಮಾಡುವ ಸಾರ್ವಜನಿಕರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ಜಿಲ್ಲಾಧಿಕಾರಿ ಹಾಗೂ ಸರ್ಕಾರ ನೇರ ಹೊಣೆ ಹೊರಬೇಕಾಗುತ್ತ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ತಿರ್ಲಾಪೂರ ಗ್ರಾಮದ ನಾಗರಿಕರು, ರೈತರು ಇದ್ದರು.