ಬಹುದಿನಗಳ ಬೇಡಿಯಾಗಿದ್ದ ಕುಷ್ಟಗಿ-ತಳಕಲ್ ಗ್ರಾಮ ಮಾರ್ಗದ ಹೊಸ ರೈಲು ಸಂಚಾರಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಕುಷ್ಟಗಿಯಲ್ಲಿ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಈ ವೇಳೆ ಸಚಿವ ವಿ.ಸೋಮಣ್ಣ ಮಾತನಾಡಿ, “ದೇಶದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡಬೇಕು. ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಾಗ ಪಕ್ಷ ಬೇಧ ಮರೆತು ದೇಶ ಪ್ರೇಮ ತೋರಿದ್ದೇವೆ. ದೇಶದ ಎಲ್ಲ ರೈಲು ಮಾರ್ಗಗಳನ್ನು ವಿದ್ಯುದೀಕರಣ ಮಾಡಲಾಗುತ್ತಿದೆ. ಅದೇ ಯೋಜನೆಯಲ್ಲಿ ಕುಷ್ಟಗಿ ಹಾಗೂ ತಳಕಲ್ ಮಾರ್ಗವನ್ನೂ ವಿದ್ಯುದೀಕರಣ ಮಾಡಲಾಗುವುದು” ಎಂದರು.
ಕುಷ್ಟಗಿ, ಯಲಬುರ್ಗಾ, ಕುಕನೂರು ತಾಲೂಕುಗಳ ಜನರು ಬಹುದಿನಗಳ ಕನಸು ನನಸಾಗಿದ್ದು ಕಂಡು ಹರ್ಷ ವ್ಯಕ್ತಪಡಿಸಿದರು. ಕುಷ್ಟಗಿ ರೈಲ್ವೆ ನಿಲ್ದಾಣದಲ್ಲಿ ಸಾವಿರಾರು ಜನ ಜಮಾಯಿಸಿದ್ದರು. ಕುಷ್ಟಗಿಯಿಂದ ತಳಕಲ್‌ವರೆಗೂ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸಲು ಅನುಮತಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಸಚಿವರು ಆದೇಶಿಸಿದರು.

ನಿತ್ಯ ಬೆಳಿಗ್ಗೆ 7 ಗಂಟೆಗೆ ಕುಷ್ಟಗಿಯಿಂದ ಹೊರಡುವ ರೈಲು 10-30ಕ್ಕೆ ತಲುಪುತ್ತದೆ. ಹುಬ್ಬಳ್ಳಿಯಿಂದ ಸಂಜೆ 5 ಗಂಟೆಗೆ ಹೊರಡುತ್ತದೆ. ಕುಷ್ಟಗಿ ಹಾಗೂ ತಳಕಲ್ ನಡುವಿನ 56 ಕಿಮೀ ದೂರದ ಈ ಮಾರ್ಗದಲ್ಲಿ ರೈಲು ಕುಷ್ಟಗಿಯಿಂದ ಹೊರಡುವಾಗ ಲಿಂಗನಬಂಡಿ, ಹನುಮಾಪುರ, ಯಲಬುರ್ಗಾ, ಸಂಗನಾಳ, ಕುಕನೂರು ಹಾಗೂ ತಳಕಲ್ ಮಾರ್ಗದ ಮೂಲಕ ಹುಬ್ಬಳ್ಳಿ ತಲುಪಲಿದೆ.
ಇದನ್ನೂ ಓದಿ: ಕೊಪ್ಪಳ | ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಇಬ್ಬರ ಬಂಧನ
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ, ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.