ರಾಷ್ಟ್ರ ಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದ ವಿದ್ಯಾರ್ಥಿ ವಿವಾನ್ ಮಂಜುನಾಥ್‌ನ ಭವಿಷ್ಯ ಉಜ್ವಲವಾಗಲಿ ಎಂದು ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಉತ್ತರ ಪ್ರದೇಶದ ನೋಯ್ಡಾದಲ್ಲಿ ಏಪ್ರಿಲ್ 21ರಿಂದ 27ರ ವರೆಗೆ ಆಯೋಜಿಸಿದ 7ನೇ ಯೂಥ್ ಮೆನ್ ಮತ್ತು ವುಮೆನ್ಸ್ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಬೆಂಗಳೂರು ರಾಜರಾಜೇಶ್ವರಿ ನಗರದ ರಾಕ್ ಬುಲ್ ಅಕಾಡಮಿ ಆಫ್ ಆರ್ಟ್ಸ್ ಬಾಕ್ಸಿಂಗ್ ಕ್ಲಬ್‌ನ ಕ್ರೀಡಾಪಟು, ಬೆಂಗಳೂರು ಡೆಖನ್ ಇಂಟರ್ ನ್ಯಾಷನಲ್ ಶಾಲೆಯ 12ನೇ ತರಗತಿ ವಿದ್ಯಾರ್ಥಿ ವಿವಾನ್ ಮಂಜುನಾಥ್ ಅವರಿಗೆ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆಸಿದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವ ಶಕ್ತಿ ದೇಶದ ಶಕ್ತಿಯಾಗಿದೆ. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಚಿಕ್ಕ ವಯಸ್ಸಿನಲ್ಲಿ ಕೀರ್ತಿ ತಂದ ವಿದ್ಯಾರ್ಥಿ ವಿವಾನ್ ಮಂಜುನಾಥ್‌ಗೆ ಅಭಿನಂದನೆಗಳು. ಶಾಲೆ ಕಾಲೇಜುಗಳು ಮತ್ತು ಕ್ರೀಡಾ ಅಮಾಡೆಮಿ ಮತ್ತು ಕ್ಲಬ್‌ಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಇರುವ ಉತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಶನ್ ಅಧ್ಯಕ್ಷ ಡಾ. ಮಂಜೇಗೌಡ, ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್, ಬಾಕ್ಸಿಂಗ್ ಕೋಚ್ ಚಂದ್ರ ಕುಮಾರ್ ಅವರನ್ನು ಇದೇ ಶಾಸಕ ಇಕ್ಬಾಲ್ ಹುಸೇನ್ ಸನ್ಮಾನಿಸಿದರು.
ಪಯಸ್ವಿನಿ ಮತ್ತು ಕೆ.ಎಸ್.ಮಂಜುನಾಥ್ ದಂಪತಿಯ ಪುತ್ರನಾಗಿರುವ ವಿವಾನ್ ಮಂಜುನಾಥ್, ಉತ್ತರ ಪ್ರದೇಶದ ನೋಯ್ಡಾದಲ್ಲಿ ರಾಷ್ಟ್ರಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ 80ರಿಂದ 85 ಕೆಜಿ ತೂಕದ ವಿಭಾಗದಲ್ಲಿ ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ನಿಂದ ಆಯ್ಕೆಯಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಪಡೆದಿದ್ದಾನೆ.