ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿದೆ, ಕೊನೆಯ ಸ್ಥಾನದಲ್ಲಿದೆ ಎನ್ನುವ ಹಣೆ ಪಟ್ಟಿ ಅಳಿಸಿ ಹಾಕಿ ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಯಾದಗಿರಿ ಎರಡು ಹೆಜ್ಜೆ ಮುಂದಕ್ಕೆ ಸಾಗಿದೆ.
2024-25ನೇ ಶಾಲಿನ ಪಿಯುಸಿ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ ಕೊನೆಯ ಸ್ಥಾನ ಪಡೆದುಕೊಂಡಿದ್ದ ಯಾದಗಿರಿ ಇದೀಗ 2025ರ ಮೇ 2ರಂದು ಪ್ರಕಟವಾದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಿಂದ ಎರಡು ಹೆಜ್ಜೆ ಮುಂದಕ್ಕೆ ಜಿಗಿದಿದೆ.
ಜಿಲ್ಲೆಯ ನೀಷ್ಟಾ ಚನ್ನರಾಜು ಹಾಗೂ ವರುಣ ದರಬಾರಿ 625ಕ್ಕೆ 622 ಅಂಕ ಪಡೆದು ಜಿಲ್ಲೆಗೆ ಪ್ರಥಮ ರಾಜ್ಯಕ್ಕೆ ನಾಲ್ಕನೆ ಸ್ಥಾನ ಪಡೆದುಕೊಂಡು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಈ ಬಾರಿ ಜಿಲ್ಲೆಯಲ್ಲಿ 7,214 ವಿದ್ಯಾರ್ಥಿಗಳು ಹಾಗೂ 7,822 ವಿದ್ಯಾರ್ಥಿನಿಯರು ಸೇರಿ ಒಟ್ಟು 15,036 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 3,138 ವಿದ್ಯಾರ್ಥಿಗಳು ಹಾಗೂ 4,621 ವಿದ್ಯಾರ್ಥಿನಿಯರು ಸೇರಿ ಒಟ್ಟು 7,759 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಮೂಲಕ ಜಿಲ್ಲೆಗೆ ಶೇ.51.60 ಫಲಿತಾಂಶ ಲಭಿಸಿದೆ. ಅದರಲ್ಲಿ ವಿದ್ಯಾರ್ಥಿಗಳು 43.50%, ವಿದ್ಯಾರ್ಥಿನಿಯರು 59.08% ಪಡೆದು ಎಂದಿನಂತೆ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು 10,539 ಸರ್ಕಾರಿ ವಿದ್ಯಾರ್ಥಿಗಳ ಪೈಕಿ 5132 ವಿದ್ಯಾರ್ಥಿಗಳು ಪಾಸಾಗಿದ್ದಾರೆ (48.70%). 1,099 ಅನುದಾನಿತ ಶಾಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 428 ಮಂದಿ ಪಾಸಾಗಿದ್ದಾರೆ(38.94). ಅನುದಾನ ರಹಿದ ಶಾಲೆಯ ಒಟ್ಟು 3,398 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 2,199 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.64.71 ಫಲಿತಾಂಶ ದೊರಕಿದೆ. ಹಾಗಾಗಿ ಒಟ್ಟು ಜಿಲ್ಲೆಗೆ 51.60% ಫಲಿತಾಂಶ ಲಭಿಸಿದೆ.
ಗ್ರಾಮೀಣ ಭಾಗದ ಫಲಿತಾಂಶ ಮಾಹಿತಿ:
5036 ವಿದ್ಯಾರ್ಥಿಗಳು ಹಾಗೂ 5309 ವಿದ್ಯಾರ್ಥಿನಿಯರು ಸೇರಿ ಒಟ್ಟು 10,345 ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2125 ವಿದ್ಯಾರ್ಥಿಗಳು, 3060 ವಿದ್ಯಾರ್ಥಿನಿಯರು ಸೇರಿ ಒಟ್ಟು 5,185 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ. ಗ್ರಾಮೀಣ ಪ್ರದೇಶದಲ್ಲಿ ಪಾಸಾದ ವಿದ್ಯಾರ್ಥಿಗಳು ಸಂಖ್ಯೆ ಶೇ. 42.20% ಗಂಡು ಮಕ್ಕಳು, ಶೇ.57.64% ಹೆಣ್ಣು ಮಕ್ಕಳು ಪಾಸಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಒಟ್ಟು ಶೇ 50.12 ಫಲಿತಾಂಶ ದೊರಕಿದೆ.
ಇದನ್ನೂ ಓದಿ: ಯಾದಗಿರಿ | ‘ಲುಂಬಿನಿ ವನ’ ಉದ್ಯಾನವನಕ್ಕಿಲ್ಲ ನಿರ್ವಹಣೆ ಭಾಗ್ಯ; ಆಡಳಿತದ ವಿರುದ್ಧ ಜನರ ಆಕ್ರೋಶ
ನಗರ ಪ್ರದೇಶದ ಫಲಿತಾಂಶ ಮಾಹಿತಿ:
ಇನ್ನು ನಗರ ಪ್ರದೇಶದಲ್ಲಿ 2,178 ವಿದ್ಯಾರ್ಥಿಗಳು, 2513 ವಿದ್ಯಾರ್ಥಿನಿಯರು ಸೇರಿ ಒಟ್ಟು 4691 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈಪೈಕಿ 1,013 ವಿದ್ಯಾರ್ಥಿಗಳು, 1,561 ವಿದ್ಯಾರ್ಥಿನಿಯರು ಸೇರಿ ನಗರ ಪ್ರದೇಶದಲ್ಲಿ ಪಾಸಾದವರ ಒಟ್ಟು ಸಂಖ್ಯೆ 2,574 ಇದೆ. ಇದರಿಂದ ಶೇ. 46.51 ಫಲಿತಾಂಶ ಬಂದಿದೆ.
ಉಳಿದಂತೆ ಮಾತೃಭಾಷೆ ಕನ್ನಡದಲ್ಲಿ 11207, ದ್ವಿತೀಯ ಭಾಷೆ ಇಂಗ್ಲಿಷ್‌ನಲ್ಲಿ 9,502, ತೃತೀಯ ಭಾಷೆ ಹಿಂದಿಯಲ್ಲಿ 10219, ಗಣಿತದಲ್ಲಿ 9,368, ವಿಜ್ಞಾನ ವಿಷಯದಲ್ಲಿ 10397, ಸಮಾಜ ವಿಜ್ಞಾನ ವಿಷಯದಲ್ಲಿ 1,0397 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಒಟ್ಟು 6 ಖಾಸಗಿ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ. ಜಿಲ್ಲೆಯ ಶಹಾಪೂರ ತಾಲೂಕಿನ ಒಂದು ಅನುದಾನರಹಿತ ಶಾಲೆ, ಸುರಪುರ ತಾಲೂಕಿನ ಒಂದು ಅನುದಾನರಹಿತ ಶಾಲೆ ಸೇರಿದಂತೆ ಎರಡು ಅನುದಾನರಹಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದುಕೊಂಡು ಕಳಪೆ ಪ್ರದರ್ಶನ ತೋರಿಸಿವೆ.