ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿದ್ದ, ಖಾಸಗಿ ಎಸಿ ಸ್ಲೀಪರ್ ಕೋಚ್ ಬಸ್‌ನಲ್ಲಿ ದಿಢೀರ್ ದಟ್ಟ ಹೊಗೆ ಆತಂಕದ ಸ್ಥಿತಿ ನಿರ್ಮಾಣವಾದ ಘಟನೆ, ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ಶಿರಾಡಿಘಾಟ್ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.

‘ಕುಕ್ಕೆಶ್ರೀ’ ಹೆಸರಿನ ಈ ಖಾಸಗಿ ಬಸ್‌ನ ಟರ್ಬೋ ಬ್ಲಾಸ್ಟ್ ಆಗಿರುವುದೇ ಹೊಗೆ ಆವರಿಸಲು ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬಸ್ಸಿನ ಒಳಗೆ ದಟ್ಟ ಹೊಗೆ ತುಂಬಿಕೊಂಡ ಕೂಡಲೇ, ಚಾಲಕ ತಕ್ಷಣ ರಸ್ತೆಯ ಬದಿಯಲ್ಲಿ ವಾಹನವನ್ನು ನಿಲ್ಲಿಸಿ, ಎಲ್ಲ 36 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಪ್ರಯಾಣಿಕರನ್ನು ಬದಲಿ ಬಸ್‌ನಲ್ಲಿ ಎಲ್ಲರನ್ನೂ ಬೆಂಗಳೂರಿಗೆ ತೆರಳಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಎಂಟು ವರ್ಷದಿಂದ ಕಾಮಗಾರಿ ವಿಳಂಬ: ಬೇಸತ್ತ ಸಾರ್ವಜನಿಕರು
ಈ ಘಟನೆ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಪರಿಶೀಲನೆ ನಡೆಸಿದ್ದಾರೆ. ಬಸ್‌ನ ಯಾಂತ್ರಿಕ ದೋಷದಿಂದ ಹೊಗೆ ಆವರಿಸಿದ್ದು, ಯಾವುದೇ ಬೆಂಕಿಯಿಂದ ಉಂಟಾದ ಘಟನೆಯಲ್ಲ ಎಂದು ತಿಳಿಸಿದರು. ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಪ್ರಯಾಣಿಕರು ತಿಳಿಸಿದರು.