‘ತಿರಂಗಾ ಯಾತ್ರೆ’ ಯಾರಿಗಾಗಿ? ದೇಶಕ್ಕೋ-ಮೋದಿಗೋ?

Date:

Advertisements
ಬಿಜೆಪಿ ನಡೆಸುತ್ತಿರುವ ತಿರಂಗಾ ಯಾತ್ರೆಯೂ ಭಾರತಕ್ಕಾಗಿಯೂ ಅಲ್ಲ, ಭಾರತೀಯ ಸೇನೆಗಾಗಿಯೂ ಅಲ್ಲ. ಕೇವಲ ಮೋದಿ ಅವರ ಪ್ರಚಾರಕ್ಕಾಗಿ ಎಂಬ ಭಾವ ಬೆಳೆಯುತ್ತಿದೆ.

ಭಾರತ-ಪಾಕ್‌ ನಡುವಿನ ಸಂಘರ್ಷಕ್ಕೆ ಅಲ್ಪವಿರಾಮ ಬಿದ್ದಿದೆ. ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಸಂಘರ್ಷದಿಂದ ಹಿಂದೆ ಸರಿದಿವೆ. ಆದರೂ, ಉಭಯ ರಾಷ್ಟ್ರಗಳ ಗಡಿಯಲ್ಲಿ ಉದ್ವಿಗ್ನತೆ ಮುಂದುವರೆದಿದೆ. ಈಗಲೂ ಗಡಿ ಭಾಗದ ಜನರು ಆತಂಕ, ಭಯದಲ್ಲೇ ಇದ್ದಾರೆ. ಅವರ ಜೀವನ ದುಸ್ತರವಾಗಿದೆ. ಈ ನಡುವೆ, ಸಂಘರ್ಷದಲ್ಲಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಯಶಸ್ಸಿನ ಕುರಿತು ಕೇಂದ್ರ ಸರ್ಕಾರದ ಆಡಳಿತಾರೂಢ ಬಿಜೆಪಿ ದೇಶಾದ್ಯಂತ ತಿರಂಗಾ ಯಾತ್ರೆ ನಡೆಸುತ್ತಿದೆ. ಆದರೆ, ಈ ಯಾತ್ರೆ ಯಾರಿಗಾಗಿ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ತಿರಂಗಾ ಯಾತ್ರೆಯು ದೇಶಕ್ಕಾಗಿಯೋ ಅಥವಾ ಮೋದಿಗಾಗಿಯೋ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಬಹುಮುಖ್ಯ ಕಾರಣವೂ ಒಂದಿದೆ. ಅದೇನೆಂದರೆ, ಇಡೀ ತಿರಂಗಾ ಯಾತ್ರೆಯಲ್ಲಿ ಪ್ರಧಾನಿ ಮೋದಿ ಅವರನ್ನು ಹೀರೋ ಆಗಿ ಬಿಂಬಿಸಲಾಗುತ್ತಿದೆ. ಮೋದಿ ಅವರನ್ನು ಪೋಸ್ಟರ್, ಕಟೌಟ್‌ಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಆದರೆ, ಯಶಸ್ವಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಯನ್ನು ಅಭಿನಂದಿಸುವುದು ಬಿಜೆಪಿಯ ತಿರಂಗಾ ಯಾತ್ರೆಯಲ್ಲಿ ಎಲ್ಲಿಯೂ ಕಾಣುತ್ತಿಲ್ಲ. ಬದಲಾಗಿ, ಭಾರತೀಯ ಸೇನೆಯನ್ನು, ಕಾರ್ಯಾಚರಣೆಯಲ್ಲಿ ಭಾಗಿಯಾದ ಸೇನಾ ಯೋಧರನ್ನು ಅಪಮಾನಿಸುವ, ಅವಮಾನಿಸುವ ಕೃತ್ಯಗಳು ನಡೆಯುತ್ತಿವೆ.

ಇತ್ತೀಚೆಗೆ, ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಸಚಿವ ವಿಜಯ್ ಶಾ ಅವರು, ”ಪಾಕಿಸ್ತಾನದ ಉಗ್ರರನ್ನು ಹೊಡೆಯಲು ಅವರ ಸಹೋದರಿ ಕರ್ನಲ್ ಸೋಫಿಯಾ ಖುರೇಷಿ ಅವರನ್ನೇ ಕಳಿಸಿದ್ದೆವು” ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ, ಆ ಬಗ್ಗೆ ಭಾರತದ ಜನರಿಗೆ ವಿವರಿಸಿದ ಕರ್ನಲ್ ಸೋಫಿಯಾ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಹೇಳಿ ಅಪಮಾನಿಸಿದ್ದಾರೆ. ಸದ್ಯ, ಅವರ ವಿರುದ್ಧ ಮಧ್ಯಪ್ರದೇಶ ಹೈಕೋರ್ಟ್‌ ಸೂಚನೆಯಂತೆ ಎಫ್‌ಐಆರ್ ದಾಖಲಿಸಲಾಗಿದೆ.

Advertisements

ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಇಡೀ ಕಾರ್ಯಾಚರಣೆಯ ಯಶಸ್ಸನ್ನು ಮೋದಿಯ ಮುಡಿಗೇರಿಸಲು ನೋಡುತ್ತಿದೆ. ಹೀಗಾಗಿಯೇ, ಮಧ್ಯಪ್ರದೇಶದಲ್ಲಿ ನಡೆದ ‘ಭಾರತ್ ಶೌರ್ಯ ತಿರಂಗಾ ಯಾತ್ರೆ’ಯಲ್ಲಿ ಮಾತನಾಡಿದ ಮಧ್ಯಪ್ರದೇಶ ಉಪಮುಖ್ಯಮಂತ್ರಿ ಜಗದೀಶ್ ದೇವ್ಡಾ ಅವರು ಮೋದಿ ಅವರನ್ನು ಹೊಗಳುವ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ”ಭಾರತ-ಪಾಕ್‌ ಸಂಘರ್ಷದ ಯಶಸ್ವಿ ಕಾರ್ಯಾಚರಣೆಗಾಗಿ ದೇಶದ ಸೇನೆ ಮತ್ತು ಅದರ ಸೈನಿಕರು ಕೃತಜ್ಞತೆಯ ಸಂಕೇತವಾಗಿ ಮೋದಿ ಅವರ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ. ಭಾರತೀಯ ಸೇನೆಯನ್ನು ಅವಮಾನಿಸಿದ್ದಾರೆ.

“ನಮ್ಮ ಅದ್ಭುತ ಪ್ರಧಾನಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇಡೀ ರಾಷ್ಟ್ರ, ದೇಶದ ಸೈನ್ಯ ಮತ್ತು ಅದರ ಸೈನಿಕರು ಅವರ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ. ಪಾಕಿಸ್ತಾನಕ್ಕೆ ಮೋದಿ ನೀಡಿದ ಸೂಕ್ತ ಉತ್ತರಕ್ಕಾಗಿ ಎಷ್ಟು ಹೊಗಳಿದರೂ ಸಾಲದು” ಎಂದು ದೇವ್ಡಾ ಹೇಳಿದ್ದಾರೆ.

ದೇವ್ಡಾ ಮಾತ್ರವಲ್ಲದೆ, ಇನ್ನೂ ಹಲವು ಬಿಜೆಪಿ ಹಿರಿಯ ನಾಯಕರು ಮೋದಿ ಅವರನ್ನು ಹೊಗಳುವ ಭರಾಟೆಯಲ್ಲಿ ತೊಡಗಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಮೇ 14ರಂದು ನಡೆದ ಭಾರತ್ ಶೌರ್ಯ ತಿರಂಗ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸಿಗೆ ಇಡೀ ರಾಜ್ಯದ ಪರವಾಗಿ ಮೋದಿಗೆ ಕೃತಜ್ಞತೆ ಸಲ್ಲಿಸಿದರು.

ನಮ್ಮ ಯಾತ್ರೆಗಳು ತ್ರಿವರ್ಣ ಧ್ವಜಕ್ಕೆ, ಸೈನಿಕರಿಗೆ, ಮುಖ್ಯವಾಗಿ ಪ್ರಧಾನಿ ಮೋದಿ ಅವರಿಗೆ ಅತ್ಯುನ್ನತ ಗೌರವ ಸಲ್ಲಿಸಲು ಒಂದು ಉತ್ತಮ ಮಾರ್ಗವಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ಮೋದಿ ಅವರು ಇಡೀ ರಾಷ್ಟ್ರ ಒಗ್ಗಟ್ಟಿನಿಂದ ಇರುವಂತೆ ನೋಡಿಕೊಂಡರು. ಸೇನೆಯನ್ನು ಪ್ರೋತ್ಸಾಹಿಸಲು ಆದಂಪುರ ವಾಯುನೆಲೆಗೆ ಭೇಟಿ ನೀಡಿ, ಸೈನಿಕರಿಗೆ ಉತ್ಸಾಹ ತುಂಬಿದರು ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಇನ್ನು, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಚೌದರಿ ಅವರು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಲು ಭಾರತೀಯ ಸೇನೆಗೆ ಸ್ವತಂತ್ರ ನೀಡಿದ ಮೋದಿ ಅವರ ನಾಯಕತ್ವ ಪ್ರಶಂಸನೀಯವೆಂದು ಹೊಗಳಿ ಅಟ್ಟಕ್ಕೇರಿಸಿದರು. “ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ಸಾಮಾನ್ಯವಾಗಿದ್ದ ಕಾಲವಿತ್ತು. ಆದರೆ, ಕಾರ್ಯಾಚರಣೆಯ ಹೆಸರಿನಲ್ಲಿ, ನಾವು ‘ಬಲವಾದ ಖಂಡನೆ’ಯೊಂದಿಗೆ ಸುಮ್ಮನಾಗುತ್ತಿದ್ದೆವು. ಆದರೆ ಇಂದು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ವಿಶ್ವದ ಯಾವುದೇ ಶಕ್ತಿಯು ಭಾರತದ ಸೈನ್ಯದ ಶಕ್ತಿಯ ವಿರುದ್ಧ ನಿಲ್ಲುವ ಧೈರ್ಯ ಮಾಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಮ್ಮ ಸೈನ್ಯವು ಈ ದೊಡ್ಡ ಮಿಲಿಟರಿ ಕಾರ್ಯಾಚರಣೆಯೊಂದಿಗೆ ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದೆ. ಈಗ ಪಾಕಿಸ್ತಾನದೊಂದಿಗಿನ ಮಾತುಕತೆಗಳು ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಮತ್ತು ಭಯೋತ್ಪಾದನೆ ಕುರಿತು ಮಾತ್ರ ಇರುತ್ತದೆ,” ಎಂದು ಚೌಧರಿ ಹೇಳಿದರು.

ಅಲ್ಲದೆ, ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಸಂಪುಟವು ಆಪರೇಷನ್ ಸಿಂಧೂರಕ್ಕಾಗಿ ಸಶಸ್ತ್ರ ಪಡೆಗಳೊಂದಿಗೆ ಮೋದಿಗೆ ಧನ್ಯವಾದ ಹೇಳುವ ವಿಶೇಷ ನಿರ್ಣಯವನ್ನು ಅಂಗೀಕರಿಸಿದೆ. ಸಂಪುಟ ಸಭೆಯ ಸಂದರ್ಭದಲ್ಲಿ ನಿರ್ಣಯವನ್ನು ಓದಿದ ಉತ್ತರ ಪ್ರದೇಶದ ಸಚಿವ ಸುರೇಶ್ ಖನ್ನಾ, “ಇಡೀ ರಾಷ್ಟ್ರವು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿದೆ. ಈ ಕಾರ್ಯಾಚರಣೆಯು ನಮ್ಮ ಶಕ್ತಿ, ಒಗ್ಗಟ್ಟು ಮತ್ತು ರಾಷ್ಟ್ರವನ್ನು ರಕ್ಷಿಸುವ ಸಾಮೂಹಿಕ ಸಂಕಲ್ಪಕ್ಕೆ ಪುರಾವೆಯಾಗಿದೆ. ಆದರೆ ನಮ್ಮ ಪ್ರಧಾನಿ ಮತ್ತು ಕೇಂದ್ರ ಸಚಿವ ಸಂಪುಟವು ಸೈನ್ಯಕ್ಕೆ ಮುಕ್ತವಾಗಿ ಬೆಂಬಲ ನೀಡಿದ್ದರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಉತ್ತಮ ನಾಯಕತ್ವ ನೀಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು” ಎಂದು ಹೇಳಿದರು.

ಗುರುವಾರ ಭೋಪಾಲ್‌ನಲ್ಲಿ ನಡೆದ ತಿರಂಗಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ”ಪ್ರಧಾನಿಯವರ ಹೆಸರು ಪಾಕಿಸ್ತಾನ ಸೇನೆ ಮತ್ತು ‘ಭಯೋತ್ಪಾದಕರು’ ಇಬ್ಬರನ್ನೂ ಕಾಡಿದೆ. ಪಹಲ್ಗಾಮ್‌ ದಾಳಿಯ ಸಮಯದಲ್ಲಿ ಭಯೋತ್ಪಾದಕರು ಮೋದಿಯವರ ಹೆಸರು ಹೇಳಿದ್ದರು. ಹೋಗಿ, ಮೋದಿಗೆ ಹೇಳಿ ಎಂದಿದ್ದರು. ಈಗ ಪಾಕ್ ಸೈನ್ಯ ಮತ್ತು ಭಯೋತ್ಪಾದಕರು ‘ಹೇ ಮೋದಿ, ಹೇ ಮೋದಿ’ ಎಂದು ಹೇಳುವಂತಾಗಿದೆ ಆ ದಿನ ನಮಗೆ 56 ಇಂಚಿನ ಎದೆ ಸಿಕ್ಕಿದೆ. ಅದು ನಮಗೆ ಸಂತೋಷ ತಂದಿದೆ. ಮೋದಿ ನಾಯಕತ್ವದಲ್ಲಿ ನವ ಭಾರತ ಸೃಷ್ಟಿಯಾಗಿದೆ” ಎಂದು ಹೇಳಿದರು.

ಬಿಜೆಪಿ ಆಡಳಿತವಿರುವ ಉತ್ತರಾಖಂಡದಲ್ಲಿ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮಿಲಿಟರಿ ವಸ್ತ್ರ ಧರಿಸಿದ್ದ ಮೋದಿಯವರ ಛಾಯಾಚಿತ್ರವನ್ನು ಹಿಡಿದು ತಿರಂಗ ಯಾತ್ರೆಯಲ್ಲಿ ಭಾಗವಹಿಸಿದ್ದರು. “ಇಂದು, ದೇಶದ ಪ್ರತಿಯೊಬ್ಬ ನಾಗರಿಕರೂ ಪ್ರಧಾನಿ ನರೇಂದ್ರ ಮೋದಿಯವರ ಬಲಿಷ್ಠ ನಾಯಕತ್ವದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ” ಎಂದು ಹೇಳಿದರು.

ಈ ಲೇಖನ ಓದಿದ್ದೀರಾ?: ಭಾರತ-ಪಾಕ್ ನಡುವೆ ಅಕಸ್ಮಾತ್ ಪರಮಾಣು ಯುದ್ಧವಾದರೆ, ಏನಾಗಲಿದೆ?

ಬಿಜೆಪಿ ನಾಯಕರು ಮತ್ತು ಬಿಜೆಪಿ ಆಡಳಿತ ಇರುವ ಸರ್ಕಾರಗಳ ಮುಖ್ಯಮಂತ್ರಿಗಳು, ಸಚಿವರು ತಮ್ಮ ಪಕ್ಷದ ತಿರಂಗಾ ಯಾತ್ರೆಯಲ್ಲಿ ಭಾರತ ಮತ್ತು ಭಾರತದ ಇತಿಹಾಸದ ಬಗ್ಗೆ ಮಾತನಾಡುತ್ತಿಲ್ಲ. ಭಾರತವನ್ನು ನೆನೆಯುತ್ತಿಲ್ಲ. ಯುದ್ಧ, ಕಾರ್ಯಾಚರಣೆಗಳನ್ನು ನಡೆಸಿದ ಭಾರತೀಯ ಸೇನೆಗಳ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ, ಎಲ್ಲದಕ್ಕೂ ಮೋದಿ, ಮೋದಿ ಎನ್ನುತ್ತಿದ್ದಾರೆ. ಎಲ್ಲವೂ ಮೋದಿಯಿಂದಲೇ ಸಾಧ್ಯವೆಂದು ಹೇಳಿಕೊಳ್ಳುತ್ತಿದ್ದಾರೆ.

ಈ ಹಿಂದೆ, 2019ರಲ್ಲಿ ಪುಲ್ವಾಮ ದಾಳಿ ನಡೆದಾಗ, ಭಾರತೀಯ ಸೇನೆ ನಡೆಸಿದ ಬಾಲಾಕೋಟ್‌ ಪ್ರತಿದಾಳಿಯ ವಿಚಾರದಲ್ಲಿಯೂ ಇಡೀ ಕಾರ್ಯಾಚರಣೆಯ ಯಶಸ್ಸನ್ನು ಮೋದಿ ಅವರಿಗೆ ನೀಡಲಾಯಿತು. ಸ್ವತಃ ಮೋದಿ ಅವರೂ ಆ ಕಾರ್ಯಾಚರಣೆ ತಮ್ಮ ಸೂಚನೆ, ಸಲಹೆಯಂತೆಯೇ ನಡೆಯಿತು ಎಂದು ಹೇಳಿಕೊಂಡರು. ಮೋಡ ಕವಿದಾಗ ರೇಡಾರ್‌ಗಳು ಕೆಲಸ ಮಾಡುವುದಿಲ್ಲ. ಆ ಸಮಯದಲ್ಲಿ ದಾಳಿ ಮಾಡಿ ಎಂದು ಭಾರತೀಯ ಸೇನೆಗೆ ನಾನೇ ಸೂಚಿಸಿದ್ದೆ ಎಂದು ಮೋದಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದರು.

ಪ್ರಸ್ತುತ, ಪಹಲ್ಗಾಮ್ ದಾಳಿಯ ನಂತರವಂತೂ ದೇಶದ ಉದ್ದಗಲಕ್ಕೂ ಎಲ್ಲ ಬಿಜೆಪಿ ನಾಯಕರು ಮೋದಿ-ಮೋದಿ ಎನ್ನುತ್ತಿದ್ದಾರೆ. ಭಾರತೀಯ ಸೇನೆಯ ಶ್ರಮ, ಶೌರ್ಯವನ್ನು ಮರೆ ಮಾಚುತ್ತಿದ್ದಾರೆ. ಭಾರತೀಯ ಸೇನೆಯು ಮೋದಿ ಅವರ ಪಾದಗಳಿಗೆ ನಮಸ್ಕರಿಸುತ್ತಿದೆ ಎಂಬ ಉದ್ಧಟತನದ ಹೇಳಿಕೆಗಳನ್ನು ನೀಡುವ ಮೂಲಕ ಸೈನಿಕರನ್ನು ಅವಮಾನಿಸುತ್ತಿದ್ದಾರೆ. ಹೀಗಾಗಿ, ಬಿಜೆಪಿ ನಡೆಸುತ್ತಿರುವ ತಿರಂಗಾ ಯಾತ್ರೆಯೂ ಭಾರತಕ್ಕಾಗಿಯೂ ಅಲ್ಲ, ಭಾರತೀಯ ಸೇನೆಗಾಗಿಯೂ ಅಲ್ಲ. ಕೇವಲ ಮೋದಿ ಅವರ ಪ್ರಚಾರಕ್ಕಾಗಿ ಎಂಬ ಭಾವ ಬೆಳೆಯುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X