ರಾಜ್ಯದ ಎಲ್ಲ 22 ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ಶೋಕಾಸ್‌ ನೋಟಿಸ್;‌ ಅಧಿಕಾರಿ, ಸಚಿವರ ಸಮರ್ಥನೆ

Date:

Advertisements

ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಇರುವ ಮಾನದಂಡಗಳನ್ನು ಪೂರೈಸಲು ವಿಫಲವಾದ ರಾಜ್ಯದ ಎಲ್ಲ 22 ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ನೋಟಿಸ್‌ ನೀಡಿದೆ. ವೈಫಲ್ಯಕ್ಕೆ ಕಾರಣ ನೀಡುವಂತೆ ಸೂಚನೆ ನೀಡಿದೆ.

ರಾಜ್ಯದಲ್ಲಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಕಾಲೇಜುಗಳಿಗೂ ಇಂತಹ ನೋಟಿಸ್‌ಗಳನ್ನು ನೀಡಲಾಗಿದೆ. ಆದರೆ, ಉತ್ತಮ ಮೂಲಸೌಲಭ್ಯ ಹೊಂದಿರುವ ಮತ್ತು ವಿದ್ಯಾರ್ಥಿಗಳಿಂದ ಅತ್ಯಂತ ಮೆಚ್ಚುಗೆ ಗಳಿಸಿರುವ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಬಿಎಂಸಿಆರ್‌ಐ)ಗೂ ಕೂಡ ನೋಟಿಸ್‌ ನೀಡಿರುವುದು ಶೈಕ್ಷಣಿಕ ಮತ್ತು ವೈದ್ಯಕೀಯ ಸಮುದಾಯವು ಹುಬ್ಬೇರಿಸುವಂತೆ ಮಾಡಿದೆ.

ಎನ್‌ಎಂಸಿ ಪ್ರಾಥಮಿಕವಾಗಿ ಅಧ್ಯಾಪಕರ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿದ್ದು, ವಿಶೇಷವಾಗಿ ಕೊಪ್ಪಳ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪಿಸಲಾದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇರುವ ವೈದ್ಯಕೀಯ ಅಧ್ಯಾಪಕರ ಕೊರತೆಗಳನ್ನು ಉಲ್ಲೇಖಿಸಿದೆ.‌

Advertisements

ನೋಟಿಸ್‌ನಲ್ಲಿ ಹಲವಾರು ನ್ಯೂನತೆಗಳನ್ನು ಪಟ್ಟಿ ಮಾಡಲಾಗಿದೆ: ಹೊರರೋಗಿಗಳ ಸಂಖ್ಯೆ ಅನಧಿಕೃತವಾಗಿರುವುದು, ಅಗತ್ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆ, ಹಲವಾರು ಸಂಸ್ಥೆಗಳಲ್ಲಿ ಅಗತ್ಯ ವೈದ್ಯಕೀಯ ಉಪಕರಣಗಳು ಇಲ್ಲದಿರುವುದು ವೈದ್ಯಕೀಯ ಶಿಕ್ಷಣ ಮತ್ತು ರೋಗಿಗಳ ಆರೈಕೆಗೆ ಅಗತ್ಯವಿರುವ ಕನಿಷ್ಠ ಮಾನದಂಡಗಳನ್ನು ಉಲ್ಲಂಘಿಸುತ್ತದೆ ಎಂದು NMC ಹೇಳಿದೆ.

22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 3,500 MBBS ಸೀಟುಗಳನ್ನು ಹೊಂದಿವೆ. ಇನ್ನು ರಾಜ್ಯ ಸರ್ಕಾರವು 2025-26ನೇ ಸಾಲಿಗಾಗಿ NMCಗೆ ಸುಮಾರು 800 ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲು ಒಂದು ಪ್ರಸ್ತಾವವನ್ನು ಸಲ್ಲಿಸಿದೆ. ಆದರೆ, ಈ ಸೂಚನೆಗಳ ಹಿನ್ನೆಲೆಯಲ್ಲಿ ಎನ್‌ಎಂಸಿ ಈ ಪ್ರಸ್ತಾವವನ್ನು ಸ್ವೀಕರಿಸುವುದೇ ಎಂಬ ಅನುಮಾನವಿದೆ.

ಯಾಕೆಂದರೆ ಈಗಿರುವ ಕಾಲೇಜುಗಳಲ್ಲಿಯೇ ಮೂಲಸೌಕರ್ಯಗಳ ಕೊರತೆ, ಫ್ಯಾಕಲ್ಟಿ ಕೊರತೆ ಹಾಗೂ ವೈದ್ಯಕೀಯ ಉಪಕರಣಗಳ ಕೊರತೆ ಇರುವುದನ್ನು ಗಮನಿಸಿಯೇ ಎನ್‌ಎಂಸಿ ಎಲ್ಲ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೂ ನೋಟಿಸ್‌ ನೀಡಿದೆ.

“ಎನ್‌ಎಂಸಿ ಅಧಿಸೂಚನೆಗಳಲ್ಲಿ ಕೆಲವು ಸ್ಪಷ್ಟತೆಗಳ ಕೊರತೆಯಿದೆ. ಉದಾಹರಣೆಗೆ, ರಾಜ್ಯದಲ್ಲಿ ಅತಿದೊಡ್ಡ ಹೊರರೋಗಿ ವಿಭಾಗವನ್ನು ಹೊಂದಿರುವ ಬಿಎಂಸಿಆರ್‌ಐಗೆ ಔಟ್‌ಪೇಷಂಟ್ ಡಿಪಾರ್ಟ್‌ಮೆಂಟ್(ಒಪಿಡಿ) ಸಂಖ್ಯೆಗಳು ತಪ್ಪಾಗಿವೆಯೆಂದು ತಿಳಿಸಿದೆ. ಆದರೆ ಈ ವಿಂಗಡಣೆಗಳು ಸ್ಪಷ್ಟವಾಗಿಲ್ಲ ಎಂಬ ಸಂದೇಹಗಳಿವೆ. ನೋಟಿಸ್‌ಗಳಲ್ಲಿ ಕಾಲೇಜಿನಲ್ಲಿ ಏನು ಕೊರತೆಗಳಿವೆ, ಯಾವ ಪ್ರಮಾಣದಲ್ಲಿ ಅಥವಾ ಯಾವ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಇದರಿಂದ ಕಾಲೇಜುಗಳಿಗೆ ತಮ್ಮ ಲೋಪಗಳನ್ನು ಗುರುತಿಸಿ ಸರಿಪಡಿಸುವುದು ಕಷ್ಟವಾಗಿದೆ. ಆದ್ದರಿಂದ, ಅವರು ಒಟ್ಟು ಒಪಿಡಿ ಸಂಖ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವುದು ನಮಗೆ ಗೊಂದಲ ಉಂಟುಮಾಡಿದೆ” ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಬಿ ಎಲ್ ಸುಜಾತಾ ರಾಥೋಡ್ ಹೇಳಿದ್ದಾರೆ.

“NMC (ನ್ಯಾಷನಲ್ ಮೆಡಿಕಲ್ ಕಮಿಷನ್) ನೀಡಿರುವ ಶೋಕಾಸ್ ನೋಟಿಸ್‌ಗಳಲ್ಲಿ ಉಲ್ಲೇಖಿಸಲಾದ ಕಾಲೇಜುಗಳ ಲೋಪಗಳನ್ನು (ಉದಾಹರಣೆಗೆ, ಇನ್‌ಫ್ರಾಸ್ಟ್ರಕ್ಚರ್ ಕೊರತೆ, ಫ್ಯಾಕಲ್ಟಿ ಕೊರತೆ, ರೋಗಿಗಳ ಸಂಖ್ಯೆ ಕಡಿಮೆ) ವಿಂಗಡಿಸಿದ ವಿವರಗಳಿಗೆ ಹೆಚ್ಚಿನ ಕಾಲೇಜುಗಳು ಈಗಾಗಲೇ ಸೂಕ್ತ ಸೂಚನೆಗಳೊಂದಿಗೆ ಉತ್ತರಿಸಿವೆ. ಸೀಟುಗಳನ್ನು ಭರ್ತಿ ಮಾಡುವ ಬಗ್ಗೆ ಎನ್‌ಎಂಸಿ ಇನ್ನೂ ಉತ್ತರಿಸಿಲ್ಲ. ಆದಾಗ್ಯೂ, ಈ ಶೋಕಾಸ್ ನೋಟಿಸ್‌ಗಳು ವೈದ್ಯಕೀಯ ಸೀಟುಗಳ ಹೆಚ್ಚಳದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂಬುದು ಸ್ಪಷ್ಟ. ನೋಟಿಸ್‌ಗಳಿಗೆ ಕಾಲೇಜುಗಳು ನೀಡಿದ ಉತ್ತರಗಳು ತೃಪ್ತಿಕರವಾಗಿಲ್ಲದಿದ್ದರೆ, ಎನ್ಎಂಸಿ ದಂಡ ವಿಧಿಸಬಹುದು. ಈ ಹಿಂದೆ 2024-25ರಲ್ಲಿ, NMC 16 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ₹2 ಲಕ್ಷದಿಂದ ₹15 ಲಕ್ಷದಷ್ಟು ದಂಡವನ್ನು ವಿಧಿಸಿತ್ತು” ಎಂದಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ದಿ ಹಿಂದೂ ಪತ್ರಿಕೆಗೆ ಪ್ರತಿಕ್ರಿಯಿಸಿದ್ದು, “ಅಧ್ಯಾಪಕರ ಕೊರತೆಯನ್ನು ನೀಗಿಸಲು, ಸರ್ಕಾರವು ಗುತ್ತಿಗೆ ಆಧಾರದ ಮೇಲೆ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳಲು ಪ್ರಸ್ತಾಪಿಸಿದೆ. ಒಳಮೀಸಲಾತಿ ಪ್ರಕ್ರಿಯೆಗಳಿಂದ ಕಾಯಂ ನೇಮಕಾತಿಗಳ ವಿಳಂಬವಾಗಿದ್ದು, ಹಣಕಾಸು ಇಲಾಖೆಯ ಅನುಮೋದನೆಗಾಗಿ ಕಾಯುತ್ತಿದ್ದೇವೆಂದು ಹೇಳಿದ ಅವರು, ಕಾಲೇಜುಗಳು ಉತ್ತಮ ಮೂಲಸೌಕರ್ಯ ಮತ್ತು ಉಪಕರಣಗಳನ್ನು ಹೊಂದಿವೆ. ಆದರೆ ಈಗ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.

“ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸೀನಿಯರ್‌ ಪ್ರೊಫೆಸರ್‌ಗಳು ಸೇರಿದಂತೆ ಇತರ ಅಧ್ಯಾಪಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅನುಮತಿಸಲಾಗಿದೆ. ಹೆಚ್ಚಿನ ಕಾಲೇಜುಗಳು ಈ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ ಮತ್ತು NMCಯ ಸೂಚನೆಗೆ ಉತ್ತರಿಸಿವೆ” ಎಂದು ಸಚಿವರು ಹೇಳಿದ್ದಾರೆ.

ವೃತ್ತಿಯಲ್ಲಿ ವೈದ್ಯ ಹಾಗೂ ಸಾಮಾಜಿಕ ಹೋರಾಟಗಾರರೂ ಆಗಿರುವ ಡಾ. ವಾಸು ಎಚ್‌ ವಿ ಮಾತನಾಡಿ, “ಒಟ್ಟಾರೆಯಾಗಿ ಎಷ್ಟು ಆಸ್ಪತ್ರೆಗಳಿವೆ. ಎಷ್ಟು ಮಂದಿ ಪೇಷಂಟ್ಸ್‌ ಇದ್ದಾರೆ, ಯಾವ್ಯಾವ ವಿಭಾಗಗಳಿವೆ, ಎಷ್ಟಿವೆ ಹಾಗೂ ಮಡಿಕಲ್‌ ಕಾಲೇಜುಗಳಲ್ಲಿ ಎಷ್ಟು ಪ್ರೊಫೆಸರ್ಸ್‌ ಇದ್ದಾರೆ ಎನ್ನುವಂತಹ ನಿಯಮಗಳಿರುತ್ತವೆ. ಅದರಲ್ಲಿ ಐದು ವರ್ಷ ಅನುಭವವಿರುವ ಅಸಿಸ್ಟೆಂಟ್‌ ಪ್ರೊಫೆಸರ್ಸ್‌, 15 ವರ್ಷ ಅನುಭವವಿರುವ ಸೀನಿಯರ್‌ ಪ್ರೊಫೆಸರ್ಸ್‌ ಇರಬೇಕು. ಆದರೆ ನಮ್ಮ ರಾಜ್ಯದಲ್ಲಿ ಅಷ್ಟು ಜನ ವೈದ್ಯಕೀಯ ಪ್ರೊಫೆಸರ್ಸ್‌ ಇಲ್ಲ” ಎಂದು ಹೇಳಿದರು.

ಈ ಹಿಂದೆ 4 ಖಾಸಗಿ ಮೆಡಿಕಲ್‌ ಕಾಲೇಜುಗಳಿದ್ದವು. ಆ ಅಧಿಕಾರಿಗಳು ಅನುಭವವಿರುವುದಾಗಿ ಅನಧಿಕೃತ ಸರ್ಟಿಫಿಕೇಟ್‌ಗಳನ್ನು ತಂದು ಎರಡು ಮೂರು ಕಡೆ ಕೆಲಸ ಮಾಡುತ್ತಿದ್ದರು. ಕರ್ನಾಟಕದಲ್ಲೇ ಎರಡು ಕಡೆ ಕೆಲಸ ಮಾಡ್ತಿದ್ದೇನೆ ಅಂತ ತೋರಿಸುತ್ತಿದ್ದರು. ಆದರೆ ಅವರು ಕೇರಳ ಮತ್ತು ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೊಂದು ಡೆಂಟಲ್‌ ಕಾಲೇಜಿನಲ್ಲಿಯೂ ಕೆಲಸ ಮಾಡುತ್ತಿದ್ದರು.

ಎನ್‌ಎಂಸಿಯನ್ನು ಇದಕ್ಕೂ ಮುನ್ನ ಎಂಸಿಐ ಅಂತ ಕರೆಯುತ್ತಿದ್ದರು. ಅವರು ಇನ್ಸ್‌ಫೆಕ್ಷನ್‌ಗೆ ಬಂದಾಗ ಮಾತ್ರ ಅಧಿಕಾರಿಗಳು ಅಲ್ಲಿ ಇರುತ್ತಿದ್ದರು. ಉಳಿದಂತೆ ಅವರು ಅಲ್ಲಿ ಕೆಲಸ ಮಾಡ್ತನೇ ಇರಲಿಲ್ಲ. ಪ್ರೈವೇಟ್‌ ಮೆಡಿಕಲ್‌ ಕಾಲೇಜುಗಳು ಈ ರೀತಿ ಮಾಡುತ್ತಿದ್ದುದರಿಂದ ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ಹೊಸ ನಿಯಮಗಳನ್ನು ಜಾರಿಗೊಳಿಸಿತು.

ಅಧಿಕಾರಿಗಳು ಬಯೋಮೆಟ್ರಿಕ್‌ ಮೂಲಕ ಹಾಜರಾತಿ ದಾಖಲಿಸಬೇಕು, ಪ್ರತಿದಿನ ಬಂದಿದ್ದಾರೆ ಎಂಬುದನ್ನು ತೋರಿಸಬೇಕು ಎನ್ನುವಂತಹ ನಿಯಮಗಳು ಶುರುವಾದವು. ಇದಲ್ಲದೇ, ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿಯೂ ಇದೇ ರೀತಿ ನಡೆಯುತ್ತಿತ್ತು.

ಹೇಗೆಂದರೆ, ಅಲ್ಲಿ ಪ್ರೊಫೆಸರ್ಸ್‌ ಇರಲ್ಲ, ಈಗಾಗಲೇ ರೆಕಗ್ನೇಷನ್‌ ಪಡೆದುಕೊಂಡಿರುವ ಮೆಡಿಕಲ್ ಕಾಲೇಜುಗಳಿಂದ‌ ಅಂದರೆ ಉದಾಹರಣೆಗೆ ಮೈಸೂರು ಮೆಡಿಕಲ್‌ ಕಾಲೇಜಿಗೆ ರೆಕಗ್ನೇಷನ್‌ ಬಂದಿರುತ್ತೆ, ಮಂಡ್ಯ ಕಾಲೇಜಿಗೆ ಬಂದಿರುವುದಿಲ್ಲ. ಮಂಡ್ಯ ಮೆಡಿಕಲ್‌ ಕಾಲೇಜಿಗೆ ಮೆಡಿಕಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ಇನ್ಸ್‌ಫೆಕ್ಷನ್‌ಗೆ ಬರೋ ಸಮಯಕ್ಕೆ ತಾತ್ಕಾಲಿಕವಾಗಿ ಟ್ರಾನ್ಸ್‌ಫರ್‌ ಮಾಡಿಸಿಕೊಳ್ಳುವುದು, ಅವರಿಂದ ಒಪ್ಪಿಗೆ ಪಡೆದುಕೊಳ್ಳುವುದು. ಎರಡನೆಯದು, ಯಾರೇ ಬಂದರೂ ಅವರನ್ನೆಲ್ಲ ಸರ್ಟಿಫಿಕೇಟ್‌ ಕೊಡಿ ಅಂತ ಕೇಳೋದು ನೇಮಕ ಮಾಡಿಕೊಳ್ಳುವುದು ನಡೆಯುತ್ತಿತ್ತು.

ಈಗ ಮಂಡ್ಯದಲ್ಲಿ ಮೆಡಿಕಲ್‌ ಕಾಲೇಜು ಶುರು ಮಾಡಿದಾಗ ಸುಳ್ಯದ ಕರುಂಜಿ ವೆಂಕಟರಮಣ ಗೌಡ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡಿದ್ದೀವೆಂದು ಸರ್ಟಿಫಿಕೇಟ್‌ ತಂದರು. ಆ ಕಾಲೇಜು ಶುರು ಆಗಿದ್ದು 2005ರಲ್ಲಿ. ಆದರೆ ಇವರು 2000ನೇ ಇಸವಿಯಿಂದಲೇ ಅಲ್ಲಿ ಕೆಲಸ ಮಾಡಿದ್ದೇವೆಂದು ಸರ್ಟಿಫಿಕೇಟ್‌ ತಂದರು. ಇದರಿಂದಲೇ ಇದು ವಂಚನೆ ಎಂಬುದು ಬಹಿರಂಗಗೊಳ್ಳುತ್ತದೆ.

ಊದಾಹರಣೆಗೆ ವೈದ್ಯಕೀಯ ಅಧ್ಯಾಪಕರೊಬ್ಬರು ದುಬೈನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಬೆಳ್ಳೂರಿನ ಆದಿಚುಂಚನಗಿರಿ ಮೆಡಿಕಲ್‌ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೇವೆಂದು ಸರ್ಟಿಫಿಕೇಟ್‌ ತಂದರು. ಇದರ ವಿರುದ್ಧ ನಾವೂ ಕೂಡ ಫೈಟ್‌ ಮಾಡಿ, ಕೋರ್ಟ್‌ನಲ್ಲಿ ಕೇಸ್‌ ಹಾಕಿ ತನಿಖಾ ಆಯೋಗದಿಂದ ನೇಮಕ ಆಗಿ ಏನೇನೋ ಆಗಿದೆ. ಆದರೆ ಈ ರೀತಿ ಅಕ್ರಮ ಎಸಗಿರುವವರ ವಿರುದ್ಧ ಈವರೆಗೆ ಯಾವುದೇ ಕ್ರಮ ನಡೆದಿಲ್ಲ ಎಂಬುದು ಡಾ. ವಾಸು ಅವರ ಆರೋಪ.

ಅಂದರೆ ಇಷ್ಟು ಜನರನ್ನು ನೇಮಕ ಮಾಡಲು ಆಗದಿರುವ ಪರಿಸ್ಥಿತಿಯಲ್ಲಿ, ಇವರಿಗೆಲ್ಲ ತುಂಬಾ ಒಳ್ಳೆಯ ಸಂಬಳವೂ ಇರುತ್ತದೆ. ಆದರೆ ಇವರೆಲ್ಲ ಕೆಲಸ ಮಾಡಲು ತಯಾರಿರುವುದಿಲ್ಲ.

ಎಲ್ಲವನ್ನೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾಕ್ಟೀಸ್‌ ಮಾಡಿಕೊಂಡು, ಸರ್ಕಾರಿ ಆಸ್ಪತ್ರೆಗಳಲ್ಲಿ ಬಂದು ಸುಮ್ಮನೆ ಕೂರುತ್ತಾರೆ. ಇಂಥ ದುಃಸ್ಥಿತಿಗೆ ಬಂದಿರಲು ಕಾರಣವೇ ಅವಸರ ಅವಸರದಲ್ಲಿ, ಎಲ್ಲೆಡೆ ಮೆಡಿಕಲ್‌ ಕಾಲೇಜುಗಳನ್ನು ಓಪನ್‌ ಮಾಡಿದ್ದು. ಮೆಡಿಕಲ್‌ ಶಿಕ್ಷಣ ಅನ್ನೋದು ತುಂಬಾ ದುಬಾರಿಯಾಗಿದೆ. ಡಾಕ್ಟರ್‌ಗಳು ದೇವಲೋಕದಿಂದ ಬಂದವರಂತೆ ನಡೆದುಕೊಳ್ಳುತ್ತಾರೆ. ಡಾಕ್ಟರ್‌ ಕೆಲಸ ಅನ್ನೋದು ದುಡ್ಡಿನ ಕಾರಣಕ್ಕೂ ಕೂಡ ತುಂಬಾ ಪ್ರಮುಖ ಶಿಕ್ಷಣವಾಗಿದೆ. ಹಾಗಾಗಿ ಇದಕ್ಕೆ ಬೇಡಿಕೆ ಹೆಚ್ಚಳವಾಗಿದೆ.

ಸರ್ಕಾರ ಅವಸರವಾಗಿ ಮೆಡಿಕಲ್‌ ಕಾಲೇಜುಗಳನ್ನು ಓಪನ್‌ ಮಾಡಿದೆ. ಆದರೆ, 2 ಲಕ್ಷ ಸಂಬಳ ನೀಡಿದರೂ ಕೂಡ ಬಂದು ಕೆಲಸ ಮಾಡೋಕೆ ಸಿಬ್ಬಂದಿಗಳು ರೆಡಿ ಇಲ್ಲ. ಈ ನಡುವೆ ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ ಕೆಲಸ ಮಾಡುವುದಕ್ಕೂ ಅವಕಾಶ ಕೊಡಬೇಕು ಎನ್ನುತ್ತಾರೆ. ಇವೆಲ್ಲ ಸಮಸ್ಯೆಗಳು ಬಗೆಹರಿಯದಿದ್ದರೆ ಇದಕ್ಕೊಂದು ಪರಿಹಾರ ಇಲ್ಲವೆಂಬುದು ಡಾ. ವಾಸು ಅವರ ಅಭಿಪ್ರಾಯ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್‌ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಬಿ ಎಲ್ ಸುಜಾತಾ ರಾಥೋಡ್ ಅವರನ್ನು ಸಂಪರ್ಕಿಸಿದ್ದು, ಅವರು ಇಡೀ ದಿನ ಸರ್ಕಾರಿ ಮೀಟಿಂಗ್‌ನಲ್ಲಿ ಇರುವುದಾಗಿ ತಿಳಿದುಬಂದಿದೆ, ಮಾಹಿತಿಗೆ ಲಭ್ಯವಾಗಿಲ್ಲ.

ಎಲ್ಲೆಡೆ ಅವಸರವಾಗಿ ಮೆಡಿಕಲ್‌ ಕಾಲೇಜುಗಳನ್ನು ತೆರದು ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿಲ್ಲವಾದರೆ ಉನ್ನತ ಶಿಕ್ಷಣದ ಕನಸು ಹೊತ್ತು ಬರುವ ಯುವಜನರ ಗತಿಯೇನು?. ಹಣವಂತರು ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಾರೆ. ಆದರೆ ಉನ್ನತ ಶಿಕ್ಷಣಕ್ಕೆ ನಮ್ಮ ರಾಜ್ಯದಲ್ಲಿಯೂ ಸರ್ಕಾರಿ ಕಾಲೇಜುಗಳಿವೆ ಅಲ್ಲಿಯೇ ವಿದ್ಯಾಭ್ಯಾಸ ಮುಂದುವರೆಸಬಹುದು ಎಂಬ ಕನಸು ಹೊತ್ತು ಬರುವ ಮಕ್ಕಳ ಕನಸಿಗೆ ತಣ್ಣೀರು ಎರಚಿದಂತಾಗುತ್ತದೆ.

ಸರ್ಕಾರಗಳು ಅನುದಾನಕ್ಕಾಗಿ ಕೇವಲ ಕಟ್ಟಡಗಳನ್ನು ಎತ್ತರಕ್ಕೆ ನಿಲ್ಲಿಸಿದರೆ ಸಾಲದು. ಅದಕ್ಕೆ ಬೇಕಾದ ಮೂಲಸೌಕರ್ಯಗಳು, ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಭ್ಯಾಸಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸುವುದು ಸೂಕ್ತ. ಇಲ್ಲದಿದ್ದರೆ ಇತ್ತ ಅನುದಾನದ ಹಣವೂ ವ್ಯರ್ಥವಾಗುತ್ತದೆ, ವಿದ್ಯಾರ್ಥಿಗಳಿಗೆ ಸಮರ್ಪಕವಾದ ಶಿಕ್ಷಣವೂ ದೊರೆಯದಂತಾಗುತ್ತದೆ. ಕಸನುಗಳನ್ನು ಹೊತ್ತು ಬರುವ ಬಡ ಯುವಜನರು, ಹಿಂದುಳಿದವರು, ತಳಸಮುದಾಯಗಳ ವಿದ್ಯಾರ್ಥಿಗಳ ಉತ್ಸಾಹ ಕುಗ್ಗುತ್ತದೆ. ಇದರಿಂದ ಮತ್ತೆ ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ.

ಇದನ್ನೂ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಂದಿನ ಮೂರು ವರ್ಷದಲ್ಲಾದರೂ ಸರ್ಕಾರ ಜನಪರವಾಗಿರಬಹುದೇ?

ಇದಕ್ಕೂ ಮೊದಲು, ಏಪ್ರಿಲ್ 25ರಂದು, ಅನುಮತಿ ಪತ್ರದ(LoP) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವೈದ್ಯಕೀಯ ಕಾಲೇಜುಗಳು ತಮ್ಮ ಕಾರ್ಯಾಚರಣೆಯ ಸೌಲಭ್ಯಗಳ ಅಂದರೆ ಸಣ್ಣ ಮತ್ತು ಪ್ರಮುಖ ಆಪರೇಷನ್ ಥಿಯೇಟರ್‌ಗಳ ಸಂಖ್ಯೆ ಹಾಗೂ ಸ್ಥಿತಿಗತಿಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸುವಂತೆ ಎನ್‌ಎಂಸಿ ನಿರ್ದೇಶಿಸಿತ್ತು.

ಇತ್ತೀಚೆಗೆ, ತಮಿಳುನಾಡಿನ 36 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 34 ಕಾಲೇಜುಗಳಿಗೆ NMC ಇದೇ ರೀತಿಯ ಶೋ-ಕಾಸ್ ನೋಟಿಸ್‌ಗಳನ್ನು ನೀಡಿತು, ಇದರಲ್ಲಿ ಸ್ಟ್ಯಾನ್ಲಿ ವೈದ್ಯಕೀಯ ಕಾಲೇಜು ಮತ್ತು ಓಮಂದುರಾರ್ ವೈದ್ಯಕೀಯ ಕಾಲೇಜು ಸೇರಿದಂತೆ ರಾಜ್ಯದ ಕೆಲವು ಪ್ರಮುಖ ಕಾಲೇಜುಗಳು ಸೇರಿವೆ. ಒಂದು ವಾರದೊಳಗೆ ಲಿಖಿತ ಸ್ಪಷ್ಟೀಕರಣಗಳನ್ನು ಸಲ್ಲಿಸುವಂತೆ ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶಿಸಿದೆ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X