ಭಾರತವು ಅಮೆರಿಕದ ಸರಕುಗಳ ಮೇಲೆ ಶೇಕಡ 100ರಷ್ಟು ಸುಂಕವನ್ನು ಕಡಿತಗೊಳಿಸಲು ಸಿದ್ಧವಾಗಿದೆ. ನವದೆಹಲಿ ಮತ್ತು ವಾಷಿಂಗ್ಟನ್ ನಡುವೆ ಶೀಘ್ರವೇ ವ್ಯಾಪಾರ ಒಪ್ಪಂದ ನಡೆಯಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿಕೊಂಡಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆಯನ್ನು ನೀಡಿರುವ ಟ್ರಂಪ್, ಆದರೂ ವ್ಯಾಪಾರ ಒಪ್ಪಂದದ ಬಗ್ಗೆ ಆತುರವಿಲ್ಲ ಎಂದಿದ್ದಾರೆ. ಈ ಹಿಂದೆಯೂ ಹಲವು ಬಾರಿ ಭಾರತವು ಅಮೆರಿಕದ ಸರಕುಗಳ ಮೇಲಿನ ಎಲ್ಲಾ ಸುಂಕಗಳನ್ನು ಕೈಬಿಡಲು ಮುಂದಾಗಿದೆ ಎಂದು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್‌ಗೆ ಸಂಪೂರ್ಣವಾಗಿ ಶರಣಾಗುತ್ತಿದ್ದಾರೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಟ್ರಂಪ್ ಮೋದಿ ಸರ್ಕಾರವನ್ನು ತನಗೆ ಬೇಕಾದಂತೆ ತಿರುವು-ಮುರುವುಗೊಳಿಸುತ್ತಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಡೊನಾಲ್ಡ್ ಟ್ರಂಪ್ ಆಡಳಿತದ ಪೌರತ್ವ ನೀತಿ ಆದೇಶಕ್ಕೆ ಅಮೆರಿಕ ಕೋರ್ಟ್ ತಡೆ
ಟ್ರಂಪ್ ಪದೇ ಪದೇ ಈ ಹೇಳಿಕೆ ನೀಡುತ್ತಿರುವ ಹಿನ್ನೆಲೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ಸ್ಪಷ್ಟನೆಯನ್ನು ನೀಡಿದ್ದಾರೆ. “ಯಾವುದೇ ವ್ಯಾಪಾರ ಒಪ್ಪಂದವು ಪರಸ್ಪರ ಪ್ರಯೋಜನಕಾರಿಯಾಗಿರಬೇಕು” ಎಂದಿದ್ದಾರೆ.
ಟ್ರಂಪ್ ಮತ್ತೊಮ್ಮೆ ಭಾರತವನ್ನು “ವಿಶ್ವದ ಅತಿ ಹೆಚ್ಚು ಸುಂಕ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ” ಎಂದು ಬಣ್ಣಿಸಿದ್ದಾರೆ. “ಭಾರತವು ವ್ಯಾಪಾರವನ್ನು ಬಹುತೇಕ ಅಸಾಧ್ಯವಾಗಿಸುತ್ತಾರೆ. ಅಮೆರಿಕಕ್ಕೆ ತಮ್ಮ ಸುಂಕಗಳಲ್ಲಿ ಶೇ.100 ರಷ್ಟು ಕಡಿತಗೊಳಿಸಲು ಸಿದ್ಧರಿದ್ದಾರೆ ಎಂದು ನಿಮಗೆ ತಿಳಿದಿದೆಯೇ” ಎಂದು ಸಂದರ್ಶನಕಾರರನ್ನು ಪ್ರಶ್ನಿಸುತ್ತಾ ಟ್ರಂಪ್ ಸುಂಕದ ಬಗ್ಗೆ ಹೇಳಿಕೆ ನೀಡಿದ್ದರು.
Breaking!🚨
— 𝗩eena Jain (@DrJain21) May 17, 2025
US President Donald Trump : India is ready to cut 100% tarriff on US goods
This is highly dangerous for our Agriculture, Dairy & many other sectors
Modi literally surrendering to Trump 😵💫
pic.twitter.com/t0EqV9h9yU
ಭಾರತದೊಂದಿಗಿನ ಒಪ್ಪಂದ ಶೀಘ್ರವೇ ನಡೆಯಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಟ್ರಂಪ್, “ಒಪ್ಪಂದ ಶೀಘ್ರದಲ್ಲೇ ಆಗಲಿದೆ. ಆದರೆ ನನಗೆ ಯಾವುದೇ ಆತುರವಿಲ್ಲ. ನೋಡಿ, ಎಲ್ಲರೂ ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಾರೆ” ಎಂದಿದ್ದಾರೆ.
“ದಕ್ಷಿಣ ಕೊರಿಯಾ ಒಪ್ಪಂದ ಮಾಡಿಕೊಳ್ಳಲು ಬಯಸುತ್ತದೆ. ಆದರೆ ನಾನು ಎಲ್ಲರೊಂದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ನಾನು ಮಿತಿಯನ್ನು ನಿಗದಿಪಡಿಸಲಿದ್ದೇನೆ. ನಾನು ಇನ್ನೂ ಕೆಲವು ಒಪ್ಪಂದಗಳನ್ನು ಮಾಡಿಕೊಳ್ಳುತ್ತೇನೆ. ಏಕೆಂದರೆ ಅಷ್ಟೊಂದು ಜನರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಒಪ್ಪಂದ ಮಾಡಿಕೊಳ್ಳಲು ಬಯಸುವ 150 ದೇಶಗಳು ನನ್ನ ಬಳಿ ಇವೆ” ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಡೊನಾಲ್ಡ್ ಟ್ರಂಪ್ ಪುನರಾಗಮನ; ಜಾಗತಿಕ ನಾಯಕರಿಗೆ ಶುರುವಾಯಿತೆ ಆತಂಕ?
ಇನ್ನು ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಮಾತುಕತೆಗಳು ನಡೆಯುತ್ತಿವೆ ಎಂದು ಗುರುವಾರ ಜೈಶಂಕರ್ ಹೇಳಿದ್ದಾರೆ. “ಇವು ಸಂಕೀರ್ಣ ಮಾತುಕತೆಗಳು. ಎಲ್ಲವೂ ಆಗುವವರೆಗೆ ಏನನ್ನೂ ನಿರ್ಧರಿಸಲಾಗುವುದಿಲ್ಲ. ಯಾವುದೇ ವ್ಯಾಪಾರ ಒಪ್ಪಂದವು ಪರಸ್ಪರ ಪ್ರಯೋಜನಕಾರಿಯಾಗಿರಬೇಕು. ವ್ಯಾಪಾರ ಒಪ್ಪಂದದಿಂದ ನಮ್ಮ ನಿರೀಕ್ಷೆಯೂ ಅದೇ ಆಗಿದೆ” ಎಂದು ಸ್ಪಷ್ಟಪಡಿಸಿದ್ದರು.
ಇನ್ನು ವ್ಯಾಪಾರ ಒಪ್ಪಂದದ ಮಾತುಕತೆ ನಡೆಯುತ್ತಿದ್ದು, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಪ್ರಸ್ತುತ ವಾಷಿಂಗ್ಟನ್‌ನಲ್ಲಿದ್ದಾರೆ. ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮತ್ತು ಅಮೆರಿಕ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಜೇಮಿಸನ್ ಗ್ರೀರ್ ಅವರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ಈ ಒಪ್ಪಂದದಲ್ಲಿ ಜವಳಿ, ರತ್ನಗಳು ಮತ್ತು ಆಭರಣಗಳು, ಚರ್ಮದ ಸರಕುಗಳು, ಉಡುಪುಗಳು, ಪ್ಲಾಸ್ಟಿಕ್‌ಗಳು, ರಾಸಾಯನಿಕಗಳು, ಸೀಗಡಿ, ಎಣ್ಣೆ ಬೀಜಗಳು, ರಾಸಾಯನಿಕಗಳು, ದ್ರಾಕ್ಷಿಗಳು ಮತ್ತು ಬಾಳೆಹಣ್ಣುಗಳಂತಹ ವಸ್ತುಗಳಿಗೆ ತೆರಿಗೆ ವಿನಾಯಿತಿಯ ಪ್ರಸ್ತಾಪವನ್ನು ಭಾರತ ಅಮೆರಿಕದ ಮುಂದಿಟ್ಟಿದೆ.
ಇನ್ನೊಂದೆಡೆ ಕೆಲವು ಕೈಗಾರಿಕಾ ಸರಕುಗಳು, ಆಟೋಮೊಬೈಲ್‌ಗಳು (ವಿಶೇಷವಾಗಿ ಎಲೆಕ್ಟ್ರಿಕ್ ವಾಹನಗಳು), ವೈನ್‌ಗಳು, ಪೆಟ್ರೋಕೆಮಿಕಲ್ ಉತ್ಪನ್ನಗಳು, ಡೈರಿ ಉತ್ಪನ್ನಗಳು, ಸೇಬುಗಳು ಮತ್ತು ಸಸಿ ಬೀಜಗಳಂತಹ ಕೃಷಿ ವಸ್ತುಗಳಂತಹವುಗಳ ಮೇಲೆ ಭಾರೀ ಸುಂಕ ವಿನಾಯಿತಿಯನ್ನು ಭಾರತ ನೀಡಬೇಕು ಎಂಬುದು ಅಮೆರಿಕದ ಬೇಡಿಕೆಯಾಗಿದೆ.
