ಸರ್ಕಾರದಿಂದ 1 ಲಕ್ಷ ಕುಟುಂಬಗಳಿಗೆ ಮೇ 20ರಂದು ಕಂದಾಯ ಗ್ರಾಮಗಳ ಮಾನ್ಯತೆಯ ಹಕ್ಕುಪತ್ರ ವಿತರಣೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಸಾಕಷ್ಟು ಹೊಸ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಸಂದರ್ಶನದ ವಿವರ ಈ ಕೆಳಗಿನಂತಿದೆ.
ನಾಗರಿಕ ಸಮಾಜದಲ್ಲಿ ಮೂಲ ಸೌಲಭ್ಯಗಳಿಂದ ವಂಚಿತರಾದ ಮತ್ತು ಹಿಂದುಳಿದ ಜನ ಸಮೂಹಕ್ಕೆ ಸಹಾಯವಾಗುವ ಕಂದಾಯ ಗ್ರಾಮಗಳ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಬೃಹತ್ ಕಾರ್ಯಕ್ರಮವನ್ನು ಮೇ 20ರಂದು ಹೊಸಪೇಟೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಆಯೋಜಿಸಿದೆ. ಇದು ಚರಿತ್ರೆಯಲ್ಲೇ ದಾಖಲಾಗುವ ಸಂಗತಿ.
ಈ ಹಿನ್ನೆಲೆಯಲ್ಲಿ ಈ ದಿನ.ಕಾಮ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. ಸಾಕಷ್ಟು ಹೊಸ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಸಂದರ್ಶನದ ವಿವರ ಈ ಕೆಳಗಿನಂತಿದೆ.
ಈ ದಿನ.ಕಾಮ್: ರಾಜ್ಯ ಕಾಂಗ್ರೆಸ್ ಸರ್ಕಾರ ಮೇ 20 ಕ್ಕೆ ಎರಡು ವರ್ಷ ಪೂರೈಸುತ್ತಿದ್ದು, ಈ ಸಂದರ್ಭದಲ್ಲಿ 1 ಲಕ್ಷ ಫಲಾನುಭವಿಗಳಿಗೆ ನಿಮ್ಮ ಇಲಾಖೆಯಿಂದ ಕಂದಾಯ ಗ್ರಾಮ ಮಾನ್ಯತೆ ಹಕ್ಕುಪತ್ರ ನೀಡುತ್ತಿದ್ದೀರಿ. ಇದು ಚರಿತ್ರೆಯಲ್ಲೇ ದಾಖಲಾಗುವ ಸಂಗತಿ. ಆದರೆ, ಎಂಟು ವರ್ಷದಿಂದ ಏಕೆ ಈ ಕಾರ್ಯ ವಿಳಂಬವಾಯಿತು? ಏನು ಕಾರಣಗಳನ್ನು ಗುರುತಿಸುತ್ತೀರಿ?
ಕೃಷ್ಣ ಬೈರೇಗೌಡ: 2016-17ರಲ್ಲೇ ಈ ಕಾರ್ಯಕ್ರಮ ಆರಂಭವಾಗಿದೆ. ಈವರೆಗೂ ಮುಗಿದಿಲ್ಲವಲ್ಲ ಎಂಬುದೇ ಪ್ರಮುಖ ವಿಷಯ. ಬಡವರ ಕೆಲಸ ಇಷ್ಟೊತ್ತಿಗೆ ಮುಗಿಯಬೇಕಿತ್ತು. ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವಿದ್ದಾಗ ಕರ್ನಾಟಕ ಭೂಕಂದಾಯ ಕಾಯಿದೆಗೆ ತಿದ್ದುಪಡಿ ತಂದು ಮೂಲ ಸೌಕರ್ಯಗಳಿಂದ ವಂಚಿತರಾಗಿರುವ ಕಡು ಬಡವರಿಗೆ ಕಂದಾಯ ಗ್ರಾಮಗಳನ್ನು ರಚಿಸಿ ಶಾಶ್ವತ ಪರಿಹಾರ ನೀಡಲು ತೀರ್ಮಾನಿಸಲಾಗಿತ್ತು. ಇದರಲ್ಲಿ ತಾಂಡಾ, ಆಡಿ, ಹಟ್ಟಿ ಬರುತ್ತವೆ, ಗೊಲ್ಲ ಸಮುದಾಯ, ಕೆಲವು ಕಡೆ ಭೋವಿ ಸಮಾಜದವರು ಇದ್ದಾರೆ, ನಾಯ್ಕರ ಹಟ್ಟಿಗಳಿವೆ, ಗಾವಲಿಗಳಿದ್ದಾರೆ, ಒಟ್ಟಾರೆ ತಳ ಸಮುದಾಯಗಳ ಬಡವರು ವಾಸ ಮಾಡುವ ತಾಣಗಳು ಇವಾಗಿವೆ. ಇವರೆಲ್ಲರೂ ದಾಖಲೆ ರಹಿತವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವರಿಗೆಲ್ಲ ಊರಿನ ಮಾನ್ಯತೆ ಇಲ್ಲ, ಮನೆಗೆ ದಾಖಲೆ ಇಲ್ಲ. ಇದೇ ಪರಿಸ್ಥಿತಿಯಲ್ಲಿ ದಶಕಗಳಿಂದ ಬಂದಿದ್ದಾರೆ. ಅವರಿಗೆಲ್ಲ ಶಾಶ್ವತ ಪರಿಹಾರ ಕೊಡಬೇಕು ಮತ್ತು ನೆಮ್ಮದಿ ಸಿಗಬೇಕು ಎನ್ನುವ ದೃಷ್ಟಿಯಿಂದ ಕಾನೂನಿಗೆ ತಿದ್ದುಪಡಿ ತರಲಾಗಿತ್ತು.
ಇಲ್ಲಿಯವರೆಗೂ ನಾವು ಈ ಕಾರ್ಯವನ್ನು ಮುಗಿಸಲು ಆಗಿರಲಿಲ್ಲ. ಇದಕ್ಕೆ ಕಾನೂನು ಮಾಡಿದಾಗ ಭರದಿಂದ ಕೆಲಸ ಆರಂಭವಾಯಿತು. ನಂತರ ಬಂದಂತಹ ಸರ್ಕಾರ ನಾಮ್ ಕೆ ವಾಸ್ತೆ ಕೆಲಸ ಮಾಡಿತು. ಬಡವರ ಕೆಲಸ ಮಾಡಿಕೊಡಲು ಯಾಕೋ ಏನೋ ಎಲ್ಲರಿಗೂ ತಾತ್ಸಾರ. ಕೆಲವರು ಕೇಳಿಕೊಂಡು ಮುಂದೆ ಬರುತ್ತಾರೆ, ಇನ್ನು ಕೆಲವರಿಗೆ ನಮ್ಮ ಹತ್ರ ಬರುವ ಶಕ್ತಿಯೂ ಇರುವುದಿಲ್ಲ. ಹೀಗಾಗಿ ಆ ಕಡೆ ರಾಜಕಾರಣಿಗಳು ಲಕ್ಷ್ಯ ಕೊಡುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಸಿಎಂ ಸಿದ್ದರಾಮಯ್ಯ ಅವರು ಈ ಕೆಲಸವನ್ನು ಬೇಗ ಮುಗಿಸಿಕೊಡು ಅಂತ ನನಗೆ ಸೂಚಿಸಿದರು. ನಾನು ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು ಎಂದುಕೊಂಡು 1 ಲಕ್ಷ ಕುಟುಂಬಗಳಿಗೆ ಪಕ್ಕಾ ಹಕ್ಕು ಪತ್ರದ ಗ್ಯಾರಂಟಿ ಕೊಡುತಿದ್ದೇವೆ. ಎಲ್ಲ ಅಕ್ರಮಗಳಿಗೆ ತಡೆಯೊಡ್ಡಿ ನಕಲಿ ಹಕ್ಕುಪತ್ರಗಳ ಸೃಷ್ಟಿಗೆ ಅವಕಾಶವಿಲ್ಲದಂತೆ ನೋಡಿಕೊಳ್ಳುತ್ತಿದ್ದೇವೆ. ನಾಳೆ ಚಾರ್ಲ್ಸ್ ಶೋಭ್ರಾಜ್ನಂತಹ ಕಳ್ಳ ಬಂದರೂ ನಿವೇಶನ ಹಕ್ಕುಪತ್ರ ತಿದ್ದುಪಡಿ ಅಕ್ರಮಕ್ಕೆ ಅವಕಾಶವೇ ಇಲ್ಲ. ಇದು ಸರ್ಕಾರದಿಂದ ಸಂಪೂರ್ಣ ಗ್ಯಾರಂಟಿ.
ಇನ್ನೂ ಸಹ ಕೆಲವು ತಾಂಡಾ, ಹಟ್ಟಿಗಳು ಇದರ ವ್ಯಾಪ್ತಿಗೆ ಬಂದಿಲ್ಲ. ಎಲ್ಲ ಜಿಲ್ಲಾಧಿಕಾರಿಗಳಿಗೆ ಜೂ.31ರ ಗಡುವು ನೀಡಿದ್ದೇನೆ. ಈಗ 3600 ಕಂದಾಯ ಗ್ರಾಮಗಳನ್ನು ಗುರುತಿಸಿದ್ದೇವೆ. ಗುರುತಿಸದೇ ಇರುವುದು ಇನ್ನೂ 500-1000 ಇದ್ದಾವೆ. ಇವೆಲ್ಲವನ್ನು ನಾವು ಗುರುತಿಸಬೇಕು. ಅವುಗಳನ್ನು ಸಹ ಕಂದಾಯ ಗ್ರಾಮಗಳನ್ನಾಗಿ ಮಾಡಲು ನಂಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದೇನೆ. ಕೇಂದ್ರದ ಜಾತಿ ಜನಗಣತಿ ನಡೆದರೆ ಸ್ವಲ್ಪ ಈ ಕಾರ್ಯ ವಿಳಂಬವಾಗಬಹುದು. ಇದು ತಡವಾದರೆ ಆರು ತಿಂಗಳಲ್ಲಿ ಎಲ್ಲ ಕೆಲಸವನ್ನು ಮುಗಿಸುವ ಸಂಕಲ್ಪವನ್ನು ಕಂದಾಯ ಇಲಾಖೆ ಮಾಡಿದೆ.

ಈ ದಿನ.ಕಾಮ್: ಸಾಧನಾ ಸಮಾವೇಶವನ್ನು ಹೊಸಪೇಟೆಯಲ್ಲಿ ಮೇ 20ಕ್ಕೆ ಆಯೋಜಿಸಲಾಗಿದೆ. ಆದರೆ, ಅಲ್ಲಿ ಸಾಧನೆ ಅಂತ ಹೇಳುತ್ತಿರುವುದು ಕಂದಾಯ ಇಲಾಖೆಯದ್ದು ಮಾತ್ರ. ಕಂದಾಯ ಇಲಾಖೆಯ ಕೆಲಸವೇ ಸರ್ಕಾರಕ್ಕೆ ಕಳಸಪ್ರಾಯ ಆಯ್ತಾ?
ಕೃಷ್ಣ ಬೈರೇಗೌಡ: ನಮ್ಮದು ಮೇ 20ಕ್ಕೆ ನಡೆಯುವ ಕಾರ್ಯಕ್ರಮದ ಹೆಸರು ಬಂದು ‘ಸಮರ್ಪಣೆ ಮತ್ತು ಸಂಕಲ್ಪ’. ಎರಡು ವರ್ಷದ ಜನಪರ ಸೇವೆಯ ಸಮರ್ಪಣೆ, ಮುಂದಿನ ಮೂರು ವರ್ಷ ಜನಪರ ಸೇವೆ ನೀಡುವ ಸಂಕಲ್ಪ. ಇದು ನಮ್ಮ ಕಾರ್ಯಕ್ರಮದ ಧ್ಯೇಯೋದ್ದೇಶ. ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ 1 ಲಕ್ಷ ಕುಟುಂಬಗಳ ಬದುಕಿಗೆ ನೆಮ್ಮದಿ, ಅವರ ಬಾಳಿಗೆ ಗ್ಯಾರಂಟಿ ಕೊಡುತ್ತಿದ್ದೇವೆ. ಸೂರಿಗೆ ಗ್ಯಾರಂಟಿ ಇಲ್ಲ ಎಂದ ಮೇಲೆ, ಅನಿಶ್ಚಿತತೆಯ ಬದುಕು ಬದುಕಬೇಕಾದರೆ ಇರುವ ವಾಸದ ಮನೆಗೆ ಗ್ಯಾರಂಟಿ ಇಲ್ಲ ಎಂದರೆ ಬದುಕಿಗೆ ಹೇಗೆ ಗ್ಯಾರಂಟಿ? ಈಗ ವಾಸದ ಮನೆಗೆ ಪಕ್ಕಾ ಹಕ್ಕುಪತ್ರದ ಗ್ಯಾರಂಟಿ ಕೊಡುವ ಮೂಲಕ ಪಕ್ಕಾ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೇವೆ. ಇದಕ್ಕಿಂತ ಇನ್ನೇನು ಒಳ್ಳೆ ಕೆಲಸ ಮಾಡಲು ಸಾಧ್ಯ ಜನಗಳಿಗೆ? ಅದನ್ನು ಎರಡನೇ ವರ್ಷ ಪೂರೈಸಿದ ದಿನ ಜನಗಳಿಗೆ ಸಮರ್ಪಣೆ ಮಾಡುವುದೇ ಕಂದಾಯ ಇಲಾಖೆಗೆ ಸಿಕ್ಕಿರುವ ಸೌಭಾಗ್ಯ. ಎರಡನೇ ವರ್ಷದ ಕಾರ್ಯಕ್ರಮ ನಮ್ಮ ತುತ್ತೂರಿ ಊದುವ ಕಾರ್ಯಕ್ರಮವಲ್ಲ. ಕೇಕ್ ಕಟ್ ಮಾಡಿಕೊಳ್ಳುವ ಕಾರ್ಯಕ್ರಮವಲ್ಲ. ಒಂದು ಲಕ್ಷ ಕುಟುಂಬಗಳಿಗೆ ನಮ್ಮ ಸೇವೆಯನ್ನು ಅರ್ಪಣೆ ಮಾಡುವ ಮುಖಾಂತರ ಅರ್ಥಪೂರ್ಣವಾಗಿ ಸರ್ಕಾರ ಎರಡು ವರ್ಷ ಪೂರೈಸಿದ್ದನ್ನು ಆಚರಣೆ ಮಾಡುತ್ತಿದ್ದೇವೆ. ಇಂತಹ ಕಾರ್ಯಕ್ರಮ ಮಾಡುವ ಜವಾಬ್ದಾರಿ ನಮ್ಮ ಇಲಾಖೆಗೆ ಕೊಟ್ಟಿರುವುದು ನಮಗೆ ಹೆಮ್ಮೆಯ ವಿಷಯ. ನಾವು ಸರ್ಕಾರದ ಕಳಶವಲ್ಲ. ಅದರ ಭಾಗವಷ್ಟೇ.
ಈ ದಿನ.ಕಾಮ್: ಸಾರ್ವಜನಿಕ ವಲಯದಲ್ಲಿ ತಾವು ಅತ್ಯಂತ ಕ್ರಿಯಾಶೀಲ ಸಚಿವರಲ್ಲಿ ಒಬ್ಬರು ಎನ್ನುವ ಅಭಿಪ್ರಾಯವಿದೆ. ತಾವು ಮುತುವರ್ಜಿ ವಹಿಸಿ ಕಂದಾಯ ಗ್ರಾಮ ಮಾನ್ಯತೆಯ ಹಕ್ಕುಪತ್ರ ವಿತರಣೆ ಮಾಡುತ್ತಿದ್ದೀರಿ. ಇದು ನಿಮ್ಮ ಮತ್ತು ಕಂದಾಯ ಇಲಾಖೆಯ ಸಾಧನೆಯೇ ಅಥವಾ ಸರ್ಕಾರದ ಸಾಧನೆಯೇ?
ಕೃಷ್ಣ ಬೈರೇಗೌಡ: ಇದು ಸರ್ಕಾರದ ಸಾಧನೆ. ಕೇವಲ ನಮ್ಮ ಕಂದಾಯ ಇಲಾಖೆಯ ಸಾಧನಾ ಸಮಾವೇಶ ಇದಲ್ಲ. ಬೇರೆ ಬೇರೆ ಇಲಾಖೆಗಳದ್ದೂ ಇದೆ. ಮುಖ್ಯಮಂತ್ರಿಗಳು ಅದನ್ನು ತೀರ್ಮಾನ ಮಾಡುತ್ತಾರೆ. ಮುಂದಿನ ಒಂದು ತಿಂಗಳಲ್ಲಿ ಬೇರೆ ಬೇರೆ ಇಲಾಖೆಗಳಿಂದ ಅವರು ಮಾಡಿರುವ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸ ಆಗಲಿದೆ. ನಾನು ಸರ್ಕಾರದ ಅವಿಭಾಜ್ಯ ಅಂಗ. ಸರ್ಕಾರ ಇಲ್ಲ ಎಂದರೆ ನಾವು ಈ ಕೆಲಸ ಮಾಡಲು ಹೇಗೆ ಸಾಧ್ಯ? ಮುಖ್ಯಮಂತ್ರಿಗಳ ಪ್ರೇರಣೆಯಿಂದಲೇ ನಾವು ಈ ಕೆಲಸ ಮಾಡಿದ್ದೇವೆ. ಸಂಪುಟ ಸಹೋದ್ಯೋಗಿಗಳ ಸಹಕಾರವಿದೆ. ನಮ್ಮ ಶಾಸಕರ ಸಹಕಾರವಿದೆ. ನಮ್ಮದು ಪ್ರಮುಖ ಪಾತ್ರವಿದ್ದರೂ ನಾವು ನಮ್ಮ ಕುಟುಂಬದ ಸದಸ್ಯರಾಗಿ ಈ ಕೆಲಸ ಮಾಡುತಿದ್ದೇವೆ. ಒಟ್ಟಾರೆ ಇದು ನಮ್ಮ ಸರ್ಕಾರದ ಸಾಧನೆ.
ಈ ದಿನ.ಕಾಮ್: ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣೆ ಹಿಂದೆ ನಿಮ್ಮ ಕಾಳಜಿ ಎದ್ದು ಕಾಣುತ್ತಿದೆ. ಆದರೆ ಕರ್ನಾಟಕದ ಚರಿತ್ರೆಯಲ್ಲೇ ಹೆಚ್ಚು ಅಧಿಕಾರ ನಡೆಸಿರುವ ಪಕ್ಷ ನಿಮ್ಮದೇ ಇದೆ. ಈಗ ಹಕ್ಕುಪತ್ರ ವಿತರಿಸುತ್ತಿರುವುದು ಬಹಳ ತಡವಾಯಿತು ಅಂತ ಅನ್ನಿಸುವುದಿಲ್ಲವೇ?
ಕೃಷ್ಣ ಬೈರೇಗೌಡ: ನಾನು ರಾಜಕೀಯಕ್ಕೆ ಬರುವ ಮುಂಚೆಯೇ ಈ ಬಗ್ಗೆ ಪ್ರಶ್ನೆ ಮಾಡಿದ್ಧೆ. ದಾಖಲೆ ರಹಿತ ಗ್ರಾಮಗಳಿಗೆ ದಾಖಲೆ ಸಿಗಬೇಕು ಎನ್ನುವ ಕೂಗು 40 ವರ್ಷದಿಂದ ಕೇಳಿಬರುತ್ತಿದೆ. ಇದಕ್ಕೆ ಕಾನೂನು ತೊಡಕುಗಳು ಸಾಕಷ್ಟು ಇದ್ದವು. ಹೀಗಾಗಿ ಮುಂದಕ್ಕೆ ಹಾಕಿಕೊಂಡೇ ಬರಲಾಗಿದೆ. 2016ರಲ್ಲಿ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ರೈತರ ವಿಷಯದಲ್ಲಿ ಪ್ರವಾಸ ಹಮ್ಮಿಕೊಂಡಾಗ ತಾಂಡಾ ಮತ್ತು ಹಟ್ಟಿ ನಿವಾಸಿಗಳು ಅವರನ್ನು ಭೇಟಿಯಾಗಿ ಕಾಂಗ್ರೆಸ್ ಸರ್ಕಾರದಲ್ಲಿ ನಮಗೆ ಶಾಶ್ವತ ಪರಿಹಾರ ಕೊಡಿ ಎನ್ನುವ ಬೇಡಿಕೆ ಮುಂದಿಟ್ಟರು. ರಾಹುಲ್ ಗಾಂಧಿ ಅವರು ಒಂದು ತೀರ್ಮಾನ ತೆಗೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹತ್ರ ಮಾತನಾಡಿ ಅವರಿಬ್ಬರು ಶಾಶ್ವತ ಪರಿಹಾರ ಕೊಡುವ ಘೋಷಣೆ ಮಾಡಿದರು.
ಹಿಂದೆ ಯಾಕೆ ಮಾಡಲಿಲ್ಲ ಎನ್ನುವುದು ಒಳ್ಳೆಯ ಪ್ರಶ್ನೆಯೇ. ಆದರೆ ಕಾನೂನಿನಲ್ಲಿ ಮಾಡಲು ಅವಕಾಶ ಇರಲಿಲ್ಲ. ಈಗ ಹೇಗೆ ಸಾಧ್ಯವಾಯಿತು ಅಂತನೂ ನೀವು ಪ್ರಶ್ನಿಸಬಹುದು. ಏನೋ ಒಂದು ಕಾಲ ಕೂಡಿಬರಬೇಕು. ರಾಹುಲ್ ಗಾಂಧಿ ಅವರ ನಿರ್ದೇಶನ, ಸಿದ್ದರಾಮಯ್ಯ ಅವರ ಸಂಕಲ್ಪ ಇದೆಲ್ಲದರ ಪ್ರತಿಫಲವಾಗಿ ಇಂದು ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮಗಳ ಹಕ್ಕುಪತ್ರ ಸಿಗುತ್ತಿದೆ.
ಈ ದಿನ.ಕಾಮ್: ಸಂದರ್ಶನದಲ್ಲಿ ರಾಹುಲ್ ಗಾಂಧಿ ಅವರ ಹೆಸರನ್ನು ಮಧ್ಯ ಪ್ರಸ್ತಾಪಿಸಿದ್ದಕ್ಕೆ ಕೇಳುತ್ತಿರುವೆ, ರಾಹುಲ್ ಗಾಂಧಿ ಕಾಂಗ್ರೆಸ್ಸಿಗೆ ದೊಡ್ಡ ಶಕ್ತಿ ಆಗುತ್ತಾರಾ? ಹೇಗೆ?
ಕೃಷ್ಣ ಬೈರೇಗೌಡ: ರಾಹುಲ್ ಗಾಂಧಿ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ ದೇಶಕ್ಕೆ ಶಕ್ತಿ ಆಗುತ್ತಾರೆ. ಅವರ ಗುಣ ಮತ್ತು ಪ್ರಾಮಾಣಿಕತೆ ಹಾಗೂ ಬಡವರ ಪರ ಇರುವಂತಹ ಕಾಳಜಿ. ಇದು ನಿಷ್ಕಲ್ಮಶ. ಇದನ್ನು ಯಾರೂ ಸಹ ಪ್ರಶ್ನಿಸಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಈ ದೇಶದ ಶ್ರೀಸಾಮಾನ್ಯರ ಬಗ್ಗೆ ಇರುವ ಕಾಳಜಿ ಈ ದೇಶಕ್ಕೆ ದೊಡ್ಡ ಆಸ್ತಿ. ಆದರೆ, ಅವರ ಆಡಳಿತದ ಬಗ್ಗೆ ಕೆಲವರು ಒಪ್ಪಬಹುದು ಅಥವಾ ಬಿಡಬಹುದು. ಆದರೆ, ಜನರ ಪರವಾಗಿ ಕೆಲಸ ಮಾಡುವ ಅವರ ಬದ್ಧತೆಯಲ್ಲಿ ಚೂರು ಕಲ್ಮಶವಿಲ್ಲ. ಶುದ್ಧ ಮನಸ್ಸನ್ನು ಹೊಂದಿದ್ದಾರೆ. ನಮಗೆ ರಾಹುಲ್ ಗಾಂಧಿ ಸಹ ಪ್ರೇರಣೆಯಾಗಿದ್ದಾರೆ.
ಈ ದಿನ.ಕಾಮ್: ಕೇಂದ್ರ ಸರ್ಕಾರದ ಜನಗಣತಿ ಜೊತೆಗೆ ಜಾತಿಗಣತಿ ಮಾಡುವ ಘೋಷಣೆ ಹಿಂದೆ ರಾಹುಲ್ ಗಾಂಧಿ ಅವರ ಒತ್ತಡ ಕಾರಣ ಆಯ್ತಾ?
ಕೃಷ್ಣ ಬೈರೇಗೌಡ: ಕೇಂದ್ರ ಸರ್ಕಾರ ಜಾತಿವಾರು ಜನಗಣತಿ ಮಾಡಲು ತೀರ್ಮಾನ ಮಾಡಿದ್ದಾರೆ ಎಂದರೆ ಅದಕ್ಕೆ ಏಕೈಕ ಕಾರಣ ರಾಹುಲ್ ಗಾಂಧಿ. ಇದನ್ನು ಕಳೆದ ಐದಾರು ವರ್ಷಗಳಿಂದ ಪ್ರತಿನಿತ್ಯ ಸತತವಾಗಿ ಕೇಂದ್ರ ಸರ್ಕಾರ ಒಪ್ಪುವವರೆಗೂ ಬಿಡದೇ ಛಲದಂಕ ಮಲ್ಲನಂತೆ ಹೋರಾಟ ಮಾಡಿದ್ದಾರೆ. ಇದೇ ಬಿಜೆಪಿಯವರು ‘ಭಟೆಂಗೆ ತೋ ಕಟೆಂಗೆ’ ಅಂತ ಹೇಳಿ ಜಾತಿಗಣತಿಯನ್ನು ವಿರೋಧಿಸುತ್ತ ಬಂದರು. ಆದರೆ ಇವತ್ತು ಅದೇ ಬಿಜೆಪಿಯವರು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿರುವ ಶಕ್ತಿ ರಾಹುಲ್ ಗಾಂಧಿ ಅವರದ್ದು.

ಈ ದಿನ.ಕಾಮ್: ಈ ಹಕ್ಕುಪತ್ರ ವಿತರಣೆಯಿಂದ ಆ ಕುಟುಂಬಗಳಿಗೆ ಹೇಗೆ ಮೂಲ ಸೌಲಭ್ಯಗಳು ಸಿಗಲಿದೆ?
ಕೃಷ್ಣ ಬೈರೇಗೌಡ: ಇಷ್ಟು ದಿನ ಯಾವ ದಾಖಲೆಗಳು ಇಲ್ಲದೇ ಆ ಕುಟುಂಬಗಳು ಬದುಕಿದ್ದರಿಂದ ಅವರಿಗೆ ಸರ್ಕಾರದ ಮೂಲ ಸೌಲಭ್ಯಗಳು ಸಿಕ್ಕಿಲ್ಲ. ಕೆಲವು ಸಲ ಮನೆ ಬಿದ್ದರೂ ಸಹ ಪರಿಹಾರ ಸಿಗುತ್ತಿರಲಿಲ್ಲ. ಈಗ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಬೇರೆ ಗ್ರಾಮಕ್ಕೆ ಸಿಗುವ ಎಲ್ಲ ಸೌಲಭ್ಯ ಸಿಗಲಿದೆ. ಬ್ಯಾಂಕ್ಗಳಲ್ಲಿ ಅವರಿಗೆ ಸಾಲವೂ ಸಿಗಲಿದೆ. ಇನ್ನೊಬ್ಬರಿಗೆ ಮಾರಾಟ ಸಹ ಮಾಡಬಹುದು. ನಾವು ಕೊಡುವ ದಾಖಲೆ ನೂರಕ್ಕೆ ನೂರು ಪಕ್ಕಾ ಇರಲಿದೆ.
ಈ ದಿನ.ಕಾಮ್: ಸದ್ಯಕ್ಕೆ ಕಂದಾಯ ಗ್ರಮಗಳ ಹಕ್ಕುಪತ್ರ ಪಡೆಯುವವರಿಗೆ ನಿರಾಳತೆ ಸಿಗಲಿದೆ. ಮುಂದೆ ಹತ್ತು ವರ್ಷ ಕಳೆದಾಗ ಮತ್ತೆ ಇದೇ ಸಂದರ್ಭ ಎದುರಾದರೇ ಹೇಗೆ?
ಕೃಷ್ಣ ಬೈರೇಗೌಡ: ದಯವಿಟ್ಟು ಎಲ್ಲೆಂದರಲ್ಲಿ ಮನೆಗಳನ್ನು ಕಟ್ಟಬೇಡಿ. ಯಾವತ್ತಿದ್ದರೂ ಇದು ಸಮಸ್ಯೆಯ ಬದುಕು. ಇನ್ನುಂದೆ ಸರಿಯಾದ ಖಾತೆ ಇಲ್ಲದೇ ಮನೆ ಕಟ್ಟಬೇಡಿ. ಕಾನೂನಿನ ಚೌಕಟ್ಟಿನಲ್ಲಿ ಬದುಕುವುದನ್ನು ರೂಢಿಸಿಕೊಳ್ಳಿ. ಕೆಲವು ಜಿಲ್ಲೆಗಳಲ್ಲಿ ಖಾತೆಯೇ ಇಲ್ಲದ ಸೈಟ್ಗಳನ್ನು ಬೇರೆಯವರು ಕೊಂಡುಕೊಳ್ಳುತ್ತಿದ್ದಾರೆ. ರಿಜಿಸ್ಟ್ರೇಶನ್ ಇಲ್ಲದೇ ಇದೆಲ್ಲ ಸಂಪೂರ್ಣ ಅಕ್ರಮ. ಇಂತಹದ್ದು ಎಲ್ಲಿಯಾದ್ರೂ ಕಂಡುಬಂದರೆ ಸರ್ಕಾರ ಸೂಚನೆ ಕೊಟ್ಟಿದ್ದೇವೆ. ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸೂಚಿಸಿದ್ದೇನೆ.
ಈ ದಿನ.ಕಾಮ್: ಗ್ರಾಮ ಪಂಚಾಯಿತಿಗಳಿಂದ ನಿವೇಶನ ರಹಿತರಿಗೆ ಸರಿಯಾಗಿ ಜಾಗ ಸಿಗುತ್ತಿಲ್ಲ. ಸಹಜವಾಗಿಯೇ ಜನ ಕಡಿಮೆ ದುಡ್ಡಿಗೆ ಎಲ್ಲಿ ಸಿಗುತ್ತೋ ಅಲ್ಲಿ ಮನೆ ಕಟ್ಟಿಸಿಕೊಳ್ಳುತ್ತಾರೆ. ಇದಕ್ಕೆ ಸರ್ಕಾರದಿಂದ ಪರಿಹಾರವೇನು?
ಕೃಷ್ಣ ಬೈರೇಗೌಡ: ಅಕ್ರಮವಾಗಿ ಬಡಾವಣೆ ಆಗುವುದನ್ನು ನಾವು ನಿಲ್ಲಿಸಲೇಬೇಕು. ಲಿಗಲ್ ಆಗಿಯೇ ಬಡಾವಣೆ ಮಾಡುವುದನ್ನು ನಿಯಮಗಳನ್ನು ಸರಳೀಕರಣ ಮಾಡಬೇಕು. ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯವರು ಆ ಬಗ್ಗೆ ಯೋಚಿಸುತ್ತಿದ್ದಾರೆ.
ಈ ದಿನ.ಕಾಮ್: ಎರಡು ವರ್ಷದ ಹಾದಿಯನ್ನು ಸವೆಸಿದ್ದೀರಿ. ಕಂದಾಯ ಇಲಾಖೆಯ ಜವಾಬ್ದಾರಿ ಹೊತ್ತಾಗ ನಿಮ್ಮ ಮುಂದೆ ಇದ್ದ ಸವಾಲುಗಳು ಏನು?
ಕೃಷ್ಣ ಬೈರೇಗೌಡ: ಹುಟ್ಟಿನಿಂದ ಎಲ್ಲವನ್ನು ತಿಳಿದುಕೊಂಡು ಬಂದಿಲ್ಲ. ನಾವು ಒಂದು ಜವಾಬ್ದಾರಿ ತೆಗೆದುಕೊಂಡಾಗ ನೋಡಿ, ಕಲಿಯುವುದು ಬಹಳ ಇರುತ್ತದೆ. ಸರಿಯಾಗಿ ನಮ್ಮ ಕಣ್ಣು, ಕಿವಿ ತೆಗೆದರೆ ಅಲ್ಲಿಯ ಸಮಸ್ಯೆಗಳು ಏನು ಎಂಬುದು ಅರ್ಥವಾಗುತ್ತದೆ. ಅಧಿಕಾರಿಗಳ ಜೊತೆ ಚರ್ಚಿಸಿದರೆ ಸಮಸ್ಯೆಗಳನ್ನು ಬೇಗ ಕಂಡು ಹಿಡಿಯಬಹುದು. ನಮ್ಮ ಪ್ರಯತ್ನದಿಂದ ಪರಿಹಾರ ಸಾಧ್ಯ. ಹಿಂದೆ ಮಂತ್ರಿ ಆದಾಗಲೂ ನಾನು ಇದನ್ನೇ ಅನುಸರಿಸಿದ್ದೇನೆ. ಕಂದಾಯ ಇಲಾಖೆ ಎಂದರೆ ಸಮಸ್ಯೆಗಳ ಆಗರ. ಈ ಇಲಾಖೆಯ ಜವಾಬ್ದಾರಿ ಹೊತ್ತ ಸಚಿವರಿಗೆ ಖುಷಿ ಏನು ಅಂದ್ರೆ, ನಾನು ಅಷ್ಟು ಜಮೀನು ಕೊಡಬೇಕು ಎನ್ನುವುದರ ಕಡೆಯೇ ಹೆಚ್ಚು ಗಮನ ಹರಿಸುತ್ತಾರೆ. ಇದರಿಂದ ಹಳೆಯ ಸಮಸ್ಯೆಗಳ ಬಗ್ಗೆ ಯೋಚಿಸಿಯೇ ಇಲ್ಲ. ನಾನು ಈ ಬಗ್ಗೆ ಹೆಚ್ಚು ಗಮನ ಹರಿಸಿದ್ದೇನೆ.
ಈ ಸುದ್ದಿ ಓದಿದ್ದೀರಾ? ಗುಲಬರ್ಗಾ ವಿವಿ ಕರ್ಮಕಾಂಡ-2: ತಿಪ್ಪೆಗುಂಡಿಯಲ್ಲಿ ಉತ್ತರ ಪತ್ರಿಕೆಗಳ ಬಂಡಲ್!
ಕೆಲವು ಜಿಲ್ಲೆಗಳಲ್ಲಿ ಇನ್ನೂ ಪೋಡಿಯೇ ಆಗಿಲ್ಲ. ನಾನು ಹೊಸ ಜಮೀನು ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಿಂತ ಪೋಡಿಯಾಗದೇ ಅತಂತ್ರದಲ್ಲಿರುವ ಬದುಕನ್ನು ಸರಿಪಡಿಸುತ್ತಿದ್ದೇನೆ. ಅವರೆಲ್ಲ ನಮ್ಮ ಕಚೇರಿಗೆ ಬೇತಾಳ ಅಲೆದಂಗೆ ಅಲೆಯುತ್ತಿದ್ದಾರೆ. ನಾವು ಈಗ ಅವರ ಮನೆ ಬಾಗಿಲಿಗೆ ಹೋಗಿ ಪೋಡಿ ಮಾಡಿಕೊಡುತ್ತಿದ್ದೇವೆ. ಮಂಗಳೂರಲ್ಲಿ 1.40 ಲಕ್ಷ ರೈತರಿಗೆ ದರ್ಕಾಸ್ತನಲ್ಲಿ ಜಮೀನು ಮಂಜೂರಾಗಿದೆ. ಇದೆಲ್ಲ ಸುಮಾರು 50 ವರ್ಷಗಳ ಹಿಂದೆ ಮಂಜೂರಾಗಿದ್ದಾವೆ. ಇವುಗಳಲ್ಲಿ ಈವರೆಗೂ ಕೇವಲ 17 ಸಾವಿರ ಪೋಡಿ ಆಗಿವೆ. ಆರು ತಿಂಗಳಿಂದ ನಾವು ಅಭಿಯಾನ ನಡೆಸುತ್ತಿದ್ದೇವೆ. ಇದರಿಂದ 30 ಸಾವಿರ ಪೋಡಿ ಮಾಡಲು ಅಳತೆ ಮಾಡಿದ್ದೇವೆ. 12,000 ಜನರದ್ದು ಈಗಾಗಲೇ ಪೋಡಿ ಆಗಿದೆ. ಆರು ತಿಂಗಳಲ್ಲಿ 30 ಸಾವಿರ ಜನರಿಗೂ ಪೋಡಿ ಮಾಡಿಕೊಡಲಿದ್ದೇವೆ. ನಮ್ಮ ಗುರಿ 1 ಲಕ್ಷ ಆದರೂ ಮಾಡಿಕೊಡಬೇಕು ಎಂಬುದು.
ಇನ್ನೊಂದು ಉದಾ: ಆರ್ಟಿಸಿಗೆ ಆಧಾರ್ ಲಿಂಕ್ ಮಾಡಿ ಆಸ್ತಿ ಖಾತರಿ ಮಾಡಿದ್ದೇವೆ. 52 ಲಕ್ಷ ಜಮೀನು ಮೃತರ ಹೆಸರಿನಲ್ಲಿವೆ. ಇದನ್ನು ಬಗೆಹರಿಸಲು ಪೌತಿ ಖಾತೆ ಅಭಿಯಾನ ಹಮ್ಮಿಕೊಂಡಿದ್ದೇವೆ. ಮೂಲ ಮಾಲೀಕರ ಹೆಸರಿನಲ್ಲಿ ಪಹಣಿ ಓಡುತ್ತಿದೆ. ಬೇರೆ ಬೇರೆ ಕಾರಣದಿಂದ ವಾರಸುದಾರ ಆಗಿಲ್ಲ. ಅಭಿಯಾನದಲ್ಲಿ ಜನ ಮುಂದೆ ಬಂದರೆ ಪೌತಿ ಖಾತೆಯನ್ನು ಸರ್ಕಾರವೇ ಮಾಡಿಕೊಡಲಿದೆ.
ಹಳೆಯ ದಾಖಲಾತಿಗಳನ್ನು ಅಕ್ರಮವಾಗಿ ತಿದ್ದಲಾಗುತ್ತಿದೆ. ಇದನ್ನು ತಡೆಯಲು ಹಳೆಯ ಎಲ್ಲ ಕಾಗದ ಪತ್ರಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ದೂರುಗಳು ವಿಡಿಯೋ ಸಮೇತ ಬಂದಿವೆ. ಇದೆಲ್ಲ ಅಕ್ರಮಕ್ಕೆ ದಾರಿ ಮಾಡಿಕೊಡುತ್ತಿದೆ. ಇದನ್ನೆಲ್ಲ ತಡೆಯಲು ನಮ್ಮಲ್ಲಿಯ ಮೂಲ ಕಡತಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ನಾನು ಹೊಸ ಕಾರ್ಯಕ್ರಮಗಳನ್ನು ತಂದು ಹೊಗಳಿಸಿಕೊಳ್ಳುವುದಕ್ಕಿಂತ ಹಳೆಯ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ಹುಡುಕುತ್ತಿದ್ದೇನೆ. ಇದು ಎಲ್ಲರಿಗೂ ಅನುಕೂಲವಾಗುತ್ತದೆ. ಇದನ್ನೆಲ್ಲ ಮಾಡಲು ನಾನು ಪ್ರತ್ಯೇಕವಾಗಿ ಬಜೆಟ್ ಕೇಳಿಲ್ಲ. ಇರುವ ಸಿಬ್ಬಂದಿಯಲ್ಲೇ ಈ ಎಲ್ಲ ಕಾರ್ಯವನ್ನು ಮಾಡುತ್ತಿರುವೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.
Thanks for covering these issues. Can it be downloadable? or option to translated in English?