ಎರಡು ಬಾರಿ ಒಲಿಂಪಿಕ್ ಪದಕ ವಿಜೇತ, ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ನಿನ್ನೆ ಕತಾರ್‌ನ ದೋಹಾದಲ್ಲಿ ನಡೆದ ʼದೋಹಾ ಡೈಮಂಡ್ ಲೀಗ್-2025ರಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಬರೋಬ್ಬರಿ 90.23 ಮೀ. ಭರ್ಜಿ ಎಸೆಯುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಈ ಮೂಲಕ ಜಾವೆಲಿನ್ ಕ್ರೀಡಾಕೂಟದಲ್ಲಿ ಅತೀ ದೂರ ಭರ್ಜಿ ಎಸೆದ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದಾರೆ. ಅಲ್ಲದೆ ಜಾವೆಲಿನ್ ಥ್ರೋನಲ್ಲಿ 90 ಮೀ. ಕ್ರಮಿಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನೂ ಸಹ ತಮ್ಮದಾಗಿಸಿಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಜರ್ಮನಿಯ ಜೂಲಿಯನ್ ವೆಬರ್ ಅವರು ಕೊನೆಯ ಎಸೆತದಲ್ಲಿ 91.06 ಮೀ. ದೂರ ಜಾವೆಲಿನ್ ಎಸೆದು ಪ್ರಥಮ ಸ್ಥಾನ ಪಡೆದರು. ಹೀಗಾಗಿ ನೀರಜ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ನೀರಜ್ ನಡೆದು ಬಂದ ಹಾದಿ:
ಹರಿಯಾಣದ ಪಾಣಿಪತ್ ಜಿಲ್ಲೆಯ ಖಂದ್ರಾ ಎಂಬ ಗ್ರಾಮದ ಹುಡುಗ ನೀರಜ್, ಕುಟುಂಬದ ಬೆಂಬಲದಿಂದ ಚಿಕ್ಕವಯಸ್ಸಿನಿಂದಲೇ ತರಬೇತಿ ಪಡೆದರು. ಶಿವಾಜಿ ಕ್ರೀಡಾಂಗಣದಲ್ಲಿ ಒಂದು ವರ್ಷ ತರಬೇತಿ ಪಡೆದ ನಂತರ, ಜಾವೆಲಿನ್ ತರಬೇತುದಾರ ನಸೀಮ್ ಅಹ್ಮದ್ ಅವರಿಂದ ತರಬೇತಿ ಪಡೆಯಲು ಹರಿಯಾಣದ ಪಂಚಕುಲದಲ್ಲಿರುವ ತೌ ದೇವಿ ಲಾಲ್ ಕ್ರೀಡಾ ಸಂಕೀರ್ಣಕ್ಕೆ ಸೇರಿದರು. ಅಲ್ಲಿಂದ ಅವರ ಜಾವೆಲಿನ್ ಒಡನಾಟ ಮೊದಲಾಯಿತು.
2012ರ ಹೊತ್ತಿಗೆ ನೀರಜ್, 16 ವರ್ಷದೊಳಗಿನವರ ಜಾವೆಲಿನ್ ರಾಷ್ಟ್ರೀಯ ಚಾಂಪಿಯನ್ ಆದರು. ನಂತರದ ವರ್ಷಗಳಲ್ಲಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪದಕಗಳನ್ನು ಗೆದ್ದರು. 2014ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಯೂತ್ ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಕೂಟದಲ್ಲಿ ಸ್ಪರ್ಧಿಸಿದರು. ಆ ಸ್ಪರ್ಧೆಯಲ್ಲಿ ನೀರಜ್ ಬೆಳ್ಳಿ ಪದಕ ಪಡೆಯುವ ಮೂಲಕ ಮೊದಲ ಅಂತಾರಾಷ್ಟ್ರೀಯ ಪದಕಕ್ಕೆ ಚುಂಬಿಸಿದ್ದರು. 2016ರಲ್ಲಿ ಚೋಪ್ರಾ ಭಾರತದ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟ, ಬೆಲ್ಜಿಯಂನ ಲೋಕೆರೆನ್‌ನಲ್ಲಿ ನಡೆದ ಗ್ರ್ಯಾಂಡ್ ಪ್ರಿಕ್ಸ್ ಮತ್ತು ಪೋಲೆಂಡ್‌ನ ಬೈಡ್‌ಗೋಸ್ಜ್‌ನಲ್ಲಿ ನಡೆದ ಐಎಎಎಫ್ (ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್) ವಿಶ್ವ ಯು20 ಚಾಂಪಿಯನ್‌ಶಿಪ್‌ಗಳಲ್ಲಿ (ಐಎಎಎಫ್ 2019ರಲ್ಲಿ ವಿಶ್ವ ಅಥ್ಲೆಟಿಕ್ಸ್ ಎಂದು ಹೆಸರಾಯಿತು) ಚಿನ್ನದ ಪದಕಗಳನ್ನು ಗೆದ್ದು ಬೀಗಿದರು. ಬೈಡ್‌ಗೋಸ್ಜ್‌ನಲ್ಲಿ ನಡೆದ ಫೈನಲ್‌ನಲ್ಲಿ ಅವರು 86.48 ಮೀಟರ್ (283.73 ಅಡಿ) ಎಸೆದು 20 ವರ್ಷದೊಳಗಿನವರ ಹೊಸ ದಾಖಲೆಯನ್ನು ಸ್ಥಾಪಿಸಿದರು. 2017ರಲ್ಲಿ ಚೋಪ್ರಾ ಭಾರತದ ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದರು.
ನೀರಜ್ 19 ವರ್ಷದವರಿದ್ದಾಗ, ಅವರ ಕ್ರೀಡಾ ಸಾಧನೆಯ ಆಧಾರದ ಮೇಲೆ ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ ಅಧಿಕಾರಿಯಾಗಿ ಕೆಲಸ ನೀಡಲಾಯಿತು. “ನಾವು ರೈತರು, ಕುಟುಂಬದಲ್ಲಿ ಯಾರಿಗೂ ಸರ್ಕಾರಿ ಕೆಲಸವಿಲ್ಲ ಮತ್ತು ನನ್ನ ಕುಟುಂಬವು ನನ್ನನ್ನು ಕಷ್ಟದಿಂದ ಬೆಂಬಲಿಸುತ್ತಿದೆ” ಎಂದು ಅಂದು ನೀರಜ್ ಪ್ರತಿಕ್ರಿಯಿಸಿದ್ದರು. ಮುಂದುವರೆದು, “ಆದರೆ ನನ್ನ ತರಬೇತಿಯನ್ನು ಮುಂದುವರಿಸುವುದರ ಜೊತೆಗೆ ನನ್ನ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ನನಗೆ ಸಾಧ್ಯವಾಗುತ್ತಿರುವುದು ಈಗ ಒಂದು ರೀತಿಯ ಸಮಾಧಾನ ತಂದಿದೆ” ಎಂದು ಸಂತಸ ವ್ಯಕ್ತಪಡಿಸಿದ್ದರು. ಸೇನೆಯಲ್ಲಿ ಚೋಪ್ರಾ ಅವರನ್ನು ಮಿಷನ್ ಒಲಿಂಪಿಕ್ಸ್ ವಿಂಗ್ ಉಪಕ್ರಮಕ್ಕೆ ಆಯ್ಕೆ ಮಾಡಲಾಯಿತು. ಅಲ್ಲಿ ಸ್ಪರ್ಧೆಗಳಿಗೆ ತರಬೇತಿ ನೀಡುವುದನ್ನು ಮುಂದುವರೆಸಿದರು.
ನೀರಜ್ ಚೋಪ್ರಾ ಮುಡಿಗೇರಿಸಿಕೊಂಡ ಮುಕುಟದ ಮಣಿಗಳಿವು…
ಈವೆಂಟ್ | ಸ್ಥಳ | ದಿನಾಂಕ | ಎಸೆತದ ಅಂತರ | ಪದಕ/ಸ್ಥಾನ |
ದಕ್ಷಿಣ ಏಷ್ಯಾ ಕ್ರೀಡಾಕೂಟ | ಗುವಾಹಟಿ, ಭಾರತ | ಫೆಬ್ರವರಿ 2016 | 82.23 ಮೀಟರ್‌ಗಳು (269.78 ಅಡಿಗಳು) | ಚಿನ್ನ |
IAAF ವಿಶ್ವ U20 ಚಾಂಪಿಯನ್ಶಿಪ್ಗಳು | ಬೈಡ್ಗೋಸ್ಜ್ಜ್, ಪೋಲೆಂಡ್ | ಜುಲೈ 2016 | 86.48 ಮೀಟರ್‌ಗಳು (283.73 ಅಡಿಗಳು) | ಚಿನ್ನ |
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗಳು | ಭುವನೇಶ್ವರ, ಭಾರತ | ಜುಲೈ 2017 | 85.23 ಮೀಟರ್‌ಗಳು (279.63 ಅಡಿಗಳು) | ಚಿನ್ನ |
ಕಾಮನ್‌ವೆಲ್ತ್ ಕ್ರೀಡಾಕೂಟ | ಗೋಲ್ಡ್ ಕೋಸ್ಟ್, ಕ್ವೀನ್ಸ್‌ಲ್ಯಾಂಡ್, ಆಸ್ಟ್ರೇಲಿಯಾ | ಏಪ್ರಿಲ್ 2018 | 86.47 ಮೀಟರ್‌ಗಳು (283.69 ಅಡಿಗಳು) | ಚಿನ್ನ |
ಏಷ್ಯನ್ ಕ್ರೀಡಾಕೂಟ | ಜಕಾರ್ತಾ | ಆಗಸ್ಟ್ 2018 | 88.06 ಮೀಟರ್‌ಗಳು (288.91 ಅಡಿಗಳು) | ಚಿನ್ನ |
ಒಲಿಂಪಿಕ್ ಕ್ರೀಡಾಕೂಟ | ಟೋಕಿಯೋ | ಆಗಸ್ಟ್ 2021 | 87.58 ಮೀಟರ್‌ಗಳು (287.34 ಅಡಿಗಳು) | ಚಿನ್ನ |
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗಳು | ಯುಜೀನ್, ಒರೆಗಾನ್ | ಜುಲೈ 2022 | 88.13 ಮೀಟರ್‌ಗಳು (289.14 ಅಡಿಗಳು) | ಬೆಳ್ಳಿ |
ಡೈಮಂಡ್ ಲೀಗ್ ಫೈನಲ್ | ಜ್ಯೂರಿಚ್ | ಸೆಪ್ಟೆಂಬರ್ 2022 | 88.44 ಮೀಟರ್‌ಗಳು (290.16 ಅಡಿಗಳು) | ಮೊದಲ ಸ್ಥಾನ |
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗಳು | ಬುಡಾಪೆಸ್ಟ್ | ಆಗಸ್ಟ್ 2023 | 88.17 ಮೀಟರ್‌ಗಳು (289.27 ಅಡಿಗಳು) | ಚಿನ್ನ |
ಡೈಮಂಡ್ ಲೀಗ್ ಫೈನಲ್ | ಯುಜೀನ್, ಒರೆಗಾನ್ | ಸೆಪ್ಟೆಂಬರ್ 2023 | 83.80 ಮೀಟರ್‌ಗಳು (274.92 ಅಡಿಗಳು) | ಎರಡನೇ ಸ್ಥಾನ |
ಏಷ್ಯನ್ ಕ್ರೀಡಾಕೂಟ | ಹ್ಯಾಂಗ್ಝೌ, ಚೀನಾ | ಅಕ್ಟೋಬರ್ 2023 | 88.88 ಮೀಟರ್‌ಗಳು (291.6 ಅಡಿಗಳು) | ಚಿನ್ನ |
ಒಲಿಂಪಿಕ್ ಕ್ರೀಡಾಕೂಟ | ಪ್ಯಾರಿಸ್ | ಆಗಸ್ಟ್ 2024 | 89.45 ಮೀಟರ್‌ಗಳು (293.47 ಅಡಿಗಳು) | ಬೆಳ್ಳಿ |
ಇದನ್ನೂ ಓದಿ: ಗುಲಬರ್ಗಾ ವಿವಿ ಕರ್ಮಕಾಂಡ-2: ತಿಪ್ಪೆಗುಂಡಿಯಲ್ಲಿ ಉತ್ತರ ಪತ್ರಿಕೆಗಳ ಬಂಡಲ್!
2021ರ ಟೋಕಿಯೋ ಒಲಂಪಿಕ್ಸ್ ಫೈನಲ್‌ನಲ್ಲಿ ಅವರು 87.58 ಮೀ. (287.34 ಅಡಿ) ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಇದು ಅವರನ್ನು ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕ ವಿಜೇತ ಮತ್ತು ದೇಶದ ಎರಡನೇ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ವಿಜೇತನೆಂಬ ಹೆಗ್ಗಳಿಕೆಗೆ ಪಾತ್ರವನ್ನಾಗಿಸಿತ್ತು.
ಈ ದಾಖಲೆ ಬರೆದವರಲ್ಲಿ ಮೊದಲಿಗರು ಅಭಿನವ್ ಬಿಂದ್ರಾ. ಬೀಜಿಂಗ್‌ನಲ್ಲಿ ನಡೆದ 2008ರ ಒಲಿಂಪಿಕ್ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಅಭಿನವ್ ಚಿನ್ನ ಪಡೆದಿದ್ದರು.
“ಇದು ನಂಬಲಾಗದಂತಿದೆ”.. ಒಲಿಂಪಿಕ್ ಚಿನ್ನದ ಪದಕ ಗೆದ್ದ ನಂತರ ಚೋಪ್ರಾ ಹೇಳಿದ ಮೊದಲ ಮಾತಿದು. ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಂದ ಟ್ವಿಟರ್‌ನಲ್ಲಿ ಅಭಿನಂದನಾ ಪೋಸ್ಟ್‌ಗಳು ಸೇರಿದಂತೆ ಈ ಗೆಲುವಿಗೆ ದೇಶದ ಪ್ರತಿ ಮೂಲೆಯಿಂದಲೂ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿತ್ತು. ಬಳಿಕ ಚೋಪ್ರಾ ʼವೋಗ್ ಇಂಡಿಯಾʼ ಮುಖಪುಟದಲ್ಲಿ ಕಾಣಿಸಿಕೊಂಡ ಮೊದಲ ಪುರುಷ ಕ್ರೀಡಾಪಟು ಎನಿಸಿಕೊಂಡರು. ತಮ್ಮ ಒಲಿಂಪಿಕ್ ಗೆಲುವಿನ ಬಗ್ಗೆ ಮಾತನಾಡುತ್ತಾ, “ಈಗ ಭಾರತದಲ್ಲಿ ಎಲ್ಲರಿಗೂ ಜಾವೆಲಿನ್ ಎಂದರೇನು ಎಂದು ತಿಳಿದಿದೆ. ಅದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ” ಎಂದಿದ್ದರು ನೀರಜ್.
ಚೋಪ್ರಾ, 2022ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ 89.94 ಮೀ. ದೂರ ಭರ್ಜಿ ಎಸೆದು ಭಾರತದ ಪರ ಮತ್ತೊಂದು ರಾಷ್ಟ್ರೀಯ ದಾಖಲೆ ಬರೆದರು. ಇದು ಅವರ ವೃತ್ತಿಜೀವನದ ಅತ್ಯುತ್ತಮ ಎಸೆತವಾಗಿತ್ತು.
2023ರಲ್ಲಿ ಅವರು ಗಾಯದ ಸಮಸ್ಯೆ ಎದುರಿಸುತ್ತಿದ್ದರೂ, ಎರಡು ಮಹತ್ವದ ಚಿನ್ನದ ಪದಕಗಳನ್ನು ಜಯಿಸಿದರು. ಒಂದು- ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ, ಇನ್ನೊಂದು- ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ.
ಇದನ್ನೂ ಓದಿ: ನಾವು ನೀವು ಅರಿಯದ ಬೆಂಗಳೂರಿನ ‘ಬಡವರ ಜಗತ್ತು’ (ಭಾಗ- 1)
ಮೇ 2024ರಲ್ಲಿ ಅವರು ದೋಹಾದ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡರು. ಇದೇ ತಿಂಗಳಲ್ಲಿ ಭುವನೇಶ್ವರದಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ಚಿನ್ನದ ಪದಕ ಗೆದ್ದರು. ನಂತರ ಜೂನ್‌ನಲ್ಲಿ ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನುರ್ಮಿ ಕ್ರೀಡಾಕೂಟದಲ್ಲಿ 85.97 ಮೀ. ಎಸೆದು ಮತ್ತೊಂದು ಚಿನ್ನ ತಂದರು.
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವರು ತಮ್ಮ ಪುರುಷ ಜಾವೆಲಿನ್ ಎಸೆತದಲ್ಲಿ 89.34 ಮೀ. ದೂರ ಎಸೆದು ಫೈನಲ್‌ಗೆ ಅರ್ಹರಾದರು. ಆದರೆ ಫೈನಲ್‌ನಲ್ಲಿ 89.45 ಮೀ. ಎಸೆದು ಎರಡನೇ ಸ್ಥಾನದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತರಾದರು. ಪಾಕಿಸ್ತಾನದ ಅರ್ಷದ್ ನದೀಮ್ ಅವರು 92.97 ಮೀ. ಎಸೆದು ಚಿನ್ನ ಗೆದ್ದರು.
ಕ್ರಿಕೆಟ್ ಅತ್ಯಂತ ಪ್ರಬಲ, ಜನಪ್ರಿಯ ಕ್ರೀಡೆಯಾಗಿರುವ ಭಾರತದಂತಹ ದೇಶದಲ್ಲಿ ನೀರಜ್ ಅವರ ಸಾಧನೆಯೇನೂ ಸಣ್ಣದಲ್ಲ. ಕ್ರಿಕೆಟ್ ತಾರೆಯರು, ಬಾಲಿವುಡ್ ನಟರಷ್ಟೇ ಭಾರತದ ಪರಿಚಯಸ್ಥ ಸಾಧಕರು ಎನ್ನುವಂತೆ ಬಿಂಬಿಸುವಂತಿದ್ದ ಕಾಲವೊಂದಿತ್ತು. ಆದರೀಗ ನೀರಜ್ ಭಾರತದಲ್ಲಿ ಕ್ರಿಕೆಟ್ ತಾರೆಗಳು ಮತ್ತು ಬಾಲಿವುಡ್ ನಟರಷ್ಟೇ ಜನಪ್ರಿಯರಾಗಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದರು. ಇವರು ಒಲಿಂಪಿಕ್ಸ್ ಕ್ರೀಡಾಕೂಟದ ಟ್ರ್ಯಾಕ್ ಹಾಗೂ ಫೀಲ್ಡ್ ವಿಭಾಗದಲ್ಲಿ ಬಂಗಾರದ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ರು. ಇವರು ಕಳೆದ ವರ್ಷ ಪ್ಯಾರೀಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ಎರಡು ಒಲಿಂಪಿಕ್ಸ್ ಪದಕ ಗೆದ್ದ ಕೆಲವೇ ಕೆಲವು ಕ್ರೀಡಾಪಟುಗಳ ಸಾಲಿಗೆ ನೀರಜ್ ಚೋಪ್ರಾ ಸೇರಿದ್ದಾರೆ.
ನೀರಜ್ ಪಾಲಿಗೊಲಿದ ಸೇನಾ ಹುದ್ದೆ ಹಾಗೂ ಪ್ರಶಸ್ತಿಗಳು:
ನೀರಜ್ ಚೋಪ್ರಾ ಅವರಿಗೆ ಭಾರತೀಯ ಸೇನೆಯು ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆಯನ್ನು ನೀಡಿದೆ. 2016ರ ಆಗಸ್ಟ್ 26ರಂದು ಭಾರತೀಯ ಸೇನೆಯಲ್ಲಿ ನೈಬ್ ಸುಬೇದಾರ್ ಹುದ್ದೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿ ನೀರಜ್ ಕರ್ತವ್ಯ ಆರಂಭಿಸಿದ್ದಾರೆ. ಇವರಿಗೆ ಎರಡು ವರ್ಷಗಳ ಬಳಿಕ (2018) ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 2021ರಲ್ಲಿ, ನೀರಜ್ ಅವರು ತಮ್ಮ ಉತ್ತಮ ಕ್ರೀಡಾ ಪ್ರದರ್ಶನಕ್ಕೆ ಖೇಲ್ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದೇ ವರ್ಷದಲ್ಲಿ ಅವರಿಗೆ ಸುಬೇದಾರ್ ಹುದ್ದೆಗೆ ಸೇನೆಯಿಂದ ಬಡ್ತಿ ದೊರೆಯಿತು. 2022ರಲ್ಲಿ ಭಾರತೀಯ ಸೇನೆಯ ಶ್ರೇಷ್ಠ ಶಾಂತಿಕಾಲದ ಗೌರವವಾದ ಪರಮ ವಿಶಿಷ್ಟ ಸೇವಾ ಪದಕ (PVSM) ನೀಡಿ ಗೌರವಿಸಲಾಗಿದೆ. ಸುಬೇದಾರ್ ಮೇಜರ್ ಹುದ್ದೆಗೆ ಬಡ್ತಿಯನ್ನೂ ಪಡೆದರು. ಅದೇ ವರ್ಷ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: ನಾವು ನೀವು ಅರಿಯದ ಬೆಂಗಳೂರಿನ ‘ಬಡವರ ಜಗತ್ತು’ (ಭಾಗ- 2)
ನೀರಜ್ ಮುಂದಿನ ಹೆಜ್ಜೆ:
90 ಮೀ. ಮಾರ್ಕ್ ನಿಂದಾಗಿ ನೀರಜ್ ಚೋಪ್ರಾ ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇದೇ ಮೇ 23ರಂದು ಅಂತಾರಾಷ್ಟ್ರೀಯ ಸರ್ಕಿಟ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಪೋಲೆಂಡ್‌ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಇದೇ ತಿಂಗಳು 24ರಂದು ನೀರಜ್ ಚೋಪ್ರಾ ಬೆಂಗಳೂರಿನಲ್ಲಿ ನಡೆಯಬೇಕಿದ್ದ, ಎನ್‌ಸಿ ಕ್ಲಾಸಿಕ್ ಟೂರ್ನಿಯಲ್ಲಿ ಭಾಗವಹಿಸಬೇಕಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆಯಿಂದಾಗಿ ಈ ಟೂರ್ನಿಯನ್ನು ಮುಂದೂಡಲಾಗಿದೆ.
ನೀರಜ್ ಚೋಪ್ರಾ ಕೇವಲ ಒಬ್ಬ ಕ್ರೀಡಾಪಟುವಾಗು ಇಡೀ ದೇಶಕ್ಕೆ ಪ್ರೇರಣೆಯ ರೂಪವಾಗಿದ್ದಾರೆ. ಪ್ರತಿಯೊಂದು ಎಸೆತದ ಹಿಂದೆ ಇರುವ ಶ್ರಮ, ಆತ್ಮವಿಶ್ವಾಸ ಮತ್ತು ನಿರಂತರ ಸಾಧನೆ ಅವರ ಪ್ರಯಾಣವನ್ನು ವಿಶಿಷ್ಟವಾಗಿಸಿದೆ. ಚಿನ್ನಕ್ಕೆ ಮಾತ್ರವಲ್ಲ, ದಾಖಲೆಗಳಿಗೆ, ಕ್ರೀಡಾ ನೈಪುಣ್ಯತೆಗೆ ಮತ್ತು ಯುವ ಪೀಳಿಗೆಯ ಕನಸುಗಳಿಗೆ ಅವರು ನಿಜವಾಗಿಯೂ ದಿಕ್ಸೂಚಿ. ಮುಂದಿನ ದಿನಗಳಲ್ಲಿ ನೀರಜ್ ಇನ್ನು ಹೆಚ್ಚಿನ ಮೈಲಿಗಲ್ಲುಗಳನ್ನು ತಲುಪಲಿ ಎಂಬುದೇ ಆಶಯ.