18 ವರ್ಷಗಳ ಹಿಂದೆ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ಯೋಜನೆಗೆ ಸ್ವಾಧೀನ ಮಾಡಿಕೊಳ್ಳಲಾಗಿದ್ದ ಭೂಮಿಗೆ 2014ರ ಕಾಯ್ದೆ ಪ್ರಕಾರ ಪರಿಹಾರ ನೀಡಬೇಕೆಂದು ಭೂಮಿ ಕಳೆದುಕೊಂಡಿರುವ ರೈತರು ಒತ್ತಾಯಿಸಿದ್ದಾರೆ. ಪರಿಹಾರ ಕೊಡಲು ಸಾಧ್ಯವಾಗದಿದ್ದರೆ ಯೋಜನೆಯನ್ನೇ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
74 ಕಿಲೋಮೀಟರ್ ರಸ್ತೆ ಕಾಮಗಾರಿ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ, ಸೋಮವಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಚೇರಿ ಎದುರು ಪಿಆರ್‌ಆರ್ ರೈತ ಹಾಗೂ ನಿವೇಶನದಾರರ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.
“2006ರಲ್ಲಿ ಬಿಡಿಎ 1,818 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಒಂದು ವರ್ಷದ ಬಳಿಕ ಅಂತಿಮ ಅಧಿಸೂಚನೆ ಬಂದಿತ್ತು. ಕಳೆದ 18 ವರ್ಷಗಳಿಂದ, ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಹಣದ ಕೊರತೆಯಿಂದಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಔಪಚಾರಿಕ ಕ್ರಮಗಳನ್ನು ಬಿಡಿಎ ಮುಂದುವರಿಸಿಲ್ಲ” ಎಂದು ರೈತ ಹೋರಾಟಗಾರರು ತಿಳಿಸಿದ್ದಾರೆ.
“2022ರಲ್ಲಿ, ಪಿಆರ್‌ಆರ್ ಅನ್ನು ನೈಸ್ ರಸ್ತೆಯೊಂದಿಗೆ ತಳಕು ಹಾಕಲು ಮತ್ತು ಟೋಲ್ ಪ್ಲಾಜಾಗಳನ್ನು ನಿರ್ಮಿಸಲು 750 ಎಕರೆ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿತು. ಅಧಿಸೂಚಿತ ಭೂಮಿಯಲ್ಲಿ ಸ್ವಾಧೀನ ವಿಳಂಬದಿಂದ ಸಾವಿರಾರು ಮನೆಗಳು ಮತ್ತು ಬಡಾವಣೆಗಳು ತಲೆ ಎತ್ತಿವೆ” ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮುಂದಿನ ಐದು ದಿನ ಸಾಧಾರಣ ಮಳೆ ಸಾಧ್ಯತೆ : ಹವಾಮಾನ ಇಲಾಖೆ
“ಅಧಿಸೂಚಿತ ಭೂಮಿ ಆರು ಕೆರೆ ಮತ್ತು ಪೆಟ್ರೋನೆಟ್ ಗ್ಯಾಸ್ ಪೈಪ್‌ಲೈನ್ ಮೂಲಕ ಹಾದುಹೋಗುತ್ತದೆ. ಅಧಿಸೂಚಿತ ಪ್ರದೇಶದಲ್ಲಿ ಒಂದು ಎಕರೆ ಜಮೀನಿನ ಮಾರುಕಟ್ಟೆ ದರವು 10 ರಿಂದ 14 ಕೋಟಿ ರೂಪಾಯಿ ಇದೆ” ಎಂದು ರೈತರೊಬ್ಬರು ಹೇಳಿದರು.
ಹಳೆಯ ಕಾಯಿದೆಯಂತೆ ಪರಿಹಾರ ನೀಡಲು ಸರ್ಕಾರಕ್ಕೆ ಹಣವಿಲ್ಲದಿದ್ದರೆ ಪಿಆರ್‌ಆರ್ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.