ಸಾಲವನ್ನು ತಡವಾಗಿ ವಾಪಸ್ ಕೊಟ್ಟಿದ್ದನ್ನು ಆಕ್ಷೇಪಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ತಾಲ್ಲೂಕಿನ ಸಾವಳಗಿ (ಕೆ) ಗ್ರಾಮದ ಆರು ಜನರಿಗೆ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು 2 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ₹10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಶ್ರೀಮಂತರಾಯ ಸಿದ್ರಾಮಪ್ಪ ಮೂಲಗೆ, ಸಿದ್ದರಾಮ ಸಿದ್ರಾಮಪ್ಪ ಮೂಲಗೆ, ಅಂಬರಾಯ ಸಿದ್ರಾಮಪ್ಪ ಮೂಲಗೆ, ಶಿವಕುಮಾರ ಸಿದ್ರಾಮಪ್ಪ, ನಾಗೇಂದ್ರ ಗಣಪತಿ ಮೂಲಗೆ ಹಾಗೂ ಮಹಾದೇವ ನಾಗೇಂದ್ರಪ್ಪ ಮೂಲಗೆ ಶಿಕ್ಷೆಗೊಳಗಾದ ಅಪರಾಧಿಗಳು.
ಯಶವಂತ್ರಾಯ ಅಂಬಾಜಿ ಕಾಳೆ 12 ವರ್ಷಗಳ ಹಿಂದೆ ₹1 ಲಕ್ಷ ಹಣವನ್ನು ಶ್ರೀಮಂತರಾಯ ಎಂಬುವವರಿಂದ ಪಡೆದಿದ್ದರು. ಕೊಡುವುದು ತಡವಾಗಿದ್ದರಿಂದ ಆಗಾಗ್ಗೆ ವಾಗ್ವಾದಗಳು ನಡೆಯುತ್ತಿದ್ದವು. ಕೈಗಡ ಹಣ ವಾಪಸ್ ನೀಡಿದ ಬಳಿಕವೂ ತಕರಾರು ನಡೆಯುತ್ತಲೇ ಇತ್ತು. 2018ರ ನವೆಂಬರ್ 17ರಂದು ಸಾವಳಗಿ (ಕೆ) ಗ್ರಾಮದಿಂದ ಕರಹರಿ ಗ್ರಾಮದ ಮರೆಗಮ್ಮ ಗುಡಿಯ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಯಶವಂತ್ರಾಯ ಕಾಳೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಂತರ ಹಲ್ಲೆ ನಡೆಸಿದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪಿಎಸ್‌ಐ ಶರಣಬಸಪ್ಪ ಕೆ. ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಶಿಕ್ಷಕರಿಗೆ ಕಿರುಕುಳ ಆರೋಪ : ಬಿಇಒ ಟಿ.ಆರ್.ದೊಡ್ಡೆ ಅಮಾನತು
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು. ದಂಡದ ಹಣದಲ್ಲಿ ₹30 ಸಾವಿರ ಯಶವಂತ್ರಾಯ ಕಾಳೆ ಹಾಗೂ ₹15 ಸಾವಿರವನ್ನು ಇನ್ನೊಬ್ಬ ಗಾಯಾಳು ಅನಿಲಕುಮಾರ್ ಕಾಳೆ ಅವರಿಗೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಆರ್.ನರಸಿಂಹಲು ವಾದ ಮಂಡಿಸಿದ್ದರು.