ರಸ್ತೆ ಬದಿ ನಡೆದು ಹೋಗುವಾಗ, ರಸ್ತೆ ದಾಟುವಾಗ ಅಪಘಾತಕ್ಕೆ ಸಿಲುಕಿ ಐದು ವರ್ಷಗಳಲ್ಲಿ 1.5 ಲಕ್ಷ ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ಸಾರಿಗೆ ಸಂಶೋಧನೆ, ಗಾಯ ತಡೆ ಕೇಂದ್ರ ಹಾಗೂ ದೆಹಲಿ ಐಐಟಿ ಜಂಟಿಯಾಗಿ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ರಸ್ತೆಗಳ ಅಗಲ, ಫುಟ್‌ಪಾತ್ ಲಭ್ಯತೆ ಹಾಗೂ ಪಾದಚಾರಿಗಳ ಸಾವಿನ ಬಗ್ಗೆ ವಿಶ್ಲೇಷಣೆ ಮಾಡಲಾಗಿದ್ದು, ವರದಿ ಪ್ರಕಟಿಸಿದೆ. ವರದಿ ಪ್ರಕಾರ, 2019ರ ಜನವರಿಯಿಂದ 2023ರ ಅಂತ್ಯದ ಅವರೆಗೆ ರಸ್ತೆ ಅಪಘಾತಗಳಿಗೆ 1.5 ಲಕ್ಷ ಮಂದಿ ಪಾದಚಾರಿಗಳು ಬಲಿಯಾಗಿದ್ದಾರೆ.
ಅಂದಹಾಗೆ, ಇದೇ ವಾರ, ಭಾರತೀಯ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಪಾದಚಾರಿಗಳಿಗೆ ರಸ್ತೆ ಬಳಕೆಯ ಹಕ್ಕನ್ನು ಖಾತರಿಪಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೆ, ರಸ್ತೆಯಲ್ಲಿ ಪಾದಚಾರಿಗಳಿಗೇ ಮೊದಲ ಹಕ್ಕು ಇದೆ ಎಂದು ಕಾನೂನುಗಳು ಹೇಳುತ್ತವೆ. ಆದರೆ, ರಸ್ತೆ ಮೇಲೆ ನಡೆಯುವ ಕಾರಣಕ್ಕಾಗಿಯೇ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
2019 ಮತ್ತು 2013ರ ನಡುವೆ ರಸ್ತೆ ಅಪಘಾತಗಳಲ್ಲಿ ಒಟ್ಟು 7.9 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ, 1.5 ಲಕ್ಷ ಮಂದಿ ಪಾದಚಾರಿಗಳು. ಉಳಿದವರು ದ್ವಿಚಕ್ರ ವಾಹ, ಕಾರು, ಬಸ್ ಹಾಗೂ ಭಾರೀ ವಾಹನಗಳಲ್ಲಿ ಪ್ರಯಾಣಿಸುವಾಗ ಮತ್ತು ಚಲಾಯಿಸುವಾಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.
ಈ ವರದಿ ಓದಿದ್ದೀರಾ?: ‘ತಿರಂಗಾ ಯಾತ್ರೆ’ ಯಾರಿಗಾಗಿ? ದೇಶಕ್ಕೋ-ಮೋದಿಗೋ?
“ಭಾರತದ ಎಲ್ಲ ರಾಜ್ಯಗಳ ಪೈಕಿ ಕೆಲವು ರಾಜ್ಯಗಳಲ್ಲಿನ ಒಟ್ಟು ರಸ್ತೆಯ ಪೈಕಿ 3% ರಸ್ತೆಗಳು ಮಾತ್ರವೇ ಫುಟ್‌ಪಾತ್ ಹೊಂದಿವೆ. ಹಲವು ರಾಜ್ಯಗಳು 19% ಫುಟ್‌ಪಾತ್‌ಗಳನ್ನು ಹೊಂದಿದ್ದರೆ, ಕೆಲವು ರಾಜ್ಯಗಳಲ್ಲಿ ಗರಿಷ್ಠವೆಂದರೆ 73% ರಸ್ತೆಗಳು ಫುಟ್‌ಪಾತ್ ಹೊಂದಿವೆ ಎಂದು ವರದಿಯು ಹೇಳಿದೆ.
ಈ ಪೈಕಿ, ಮಹಾರಾಷ್ಟ್ರವು ಅತ್ಯಧಿಕ ಪ್ರಮಾಣದ ಫುಟ್‌ಪಾತ್‌ಗಳನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ರಸ್ತೆಯ ಪೈಕಿ ಕೇವಲ 3% ರಸ್ತೆಗಳು ಮಾತ್ರವೇ ಫಟ್‌ಪಾತ್‌ಗಳನ್ನು ಹೊಂದಿವೆ. ಪುದುಚೇರಿ 5% ಫುಟ್‌ಪಾತ್‌ಗಳನ್ನು ಒಳಗೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ, ಜಾಗತಿಕವಾಗಿ ಒಟ್ಟು ರಸ್ತೆ ಅಪಘಾತಗಳಲ್ಲಿ ಸಾವನ್ನುವ ಸಂಖ್ಯೆಯಲ್ಲಿ 21% ಮಂದಿ ಪಾದಚಾರಿಗಳಾಗಿದ್ದಾರೆ ಎಂದು ಹೇಳಿದೆ. ಹೀಗಾಗಿ, ಎಲ್ಲ ರಾಷ್ಟ್ರಗಳು ಉತ್ತಮ ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡಬೇಕು ಎಂದು ವಿಶ್ವಸಂಸ್ಥೆ ಸೂಚಿಸಿದೆ. ಆದಾಗ್ಯೂ, ರಸ್ತೆ ಅಪಘಾತಗಳಿಗೆ ಬಲಿಯಾಗುವ ಪಾದಚಾರಿಗಳ ಸಂಖ್ಯೆ ಕಡಿಮೆಯಾಗಿಲ್ಲ.