ವಿರೋಧ ಪಕ್ಷವು ವಿಫಲವಾಗಿದೆ. ಹೀಗಾಗಿ ಹಿಂದೂ ಮತಗಳನ್ನು ಕ್ರೋಢೀಕರಿಸಿಕೊಂಡು ಬಿಜೆಪಿ ನಿರಂತರವಾಗಿ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಹಾಗೆಯೇ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಪಕ್ಷ ಮೋದಿ ವಿರೋಧಿ ಮತಗಳನ್ನು ವಿಭಜಿಸುತ್ತದೆ ಎಂಬ ವಾದವನ್ನು ತಿರಸ್ಕರಿಸಿದರು.
ಈ ಬಗ್ಗೆ ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, “ನೀವು ನನ್ನ ಮೇಲೆ ಹೇಗೆ ಆರೋಪ ಹೊರಿಸಬಹುದು ಎಂದು ಹೇಳಿ? ನಾನು 2024ರ ಸಂಸತ್ ಚುನಾವಣೆಯಲ್ಲಿ ಹೈದರಾಬಾದ್, ಔರಂಗಾಬಾದ್, ಕಿಶನ್‌ಗಂಜ್ ಮತ್ತು ಇತರ ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿ 240 ಸ್ಥಾನಗಳನ್ನು ಪಡೆದಿದೆ. ಇದಕ್ಕೆ ನಾನು ಜವಾಬ್ದಾರನಾಗುತ್ತೇನೆಯೇ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ದೆಹಲಿ | ಅಸಾದುದ್ದೀನ್ ಒವೈಸಿ ಮನೆ ಮೇಲೆ ಕಪ್ಪು ಮಸಿ ಎಸೆದ ದುಷ್ಕರ್ಮಿಗಳು; ‘ಹೆದರಲ್ಲ’ ಎಂದ ಸಂಸದ
“ವಿರೋಧ ಪಕ್ಷವು ವಿಫಲವಾಗಿರುವ ಕಾರಣದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ಬಿಜೆಪಿ ಸುಮಾರು ಶೇಕಡ 50ರಷ್ಟು ಹಿಂದೂ ಮತಗಳನ್ನು ಕ್ರೋಢೀಕರಿಸಿಕೊಂಡು ಚುನಾವಣೆಗಳಲ್ಲಿ ಗೆಲ್ಲುತ್ತಿದೆ. ಬಿಜೆಪಿ ಗೆಲುವಿಗೆ ನಮ್ಮನ್ನು ದೂಷಿಸುವುದು. ನಮ್ಮನ್ನು ಬಿಜೆಪಿಯ ಬಿ-ಟೀಮ್ ಎಂದು ಕರೆಯುವುದು ವಿಪಕ್ಷದ ದ್ವೇಷದ ಪ್ರತೀಕವೇ ಹೊರತು ಬೇರೇನಿಲ್ಲ. ನಮಗೆ ಹೆಚ್ಚಾಗಿ ಮುಸ್ಲಿಮರ ಮತ ಸಿಗುತ್ತದೆ ಎಂಬ ಸಿಟ್ಟು ಅವರಲ್ಲಿದೆ” ಎಂದು ಓವೈಸಿ ದೂರಿದರು.
AIMIM ಅನ್ನು ಭದ್ರಕೋಟೆಯಾದ ಹೈದರಾಬಾದ್ ಮಾತ್ರವಲ್ಲದೇ ಇತರೆ ಕಡೆಯೂ ಬೆಳೆಸಲು ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಅಪಹಾಸ್ಯ ಮಾಡಿವೆ. ಓವೈಸಿ ಬಿಜೆಪಿ ವಿರೋಧಿ ಮುಸ್ಲಿಮರ ಮತಗಳನ್ನು ಕಸಿದು ಕೊನೆಗೆ ಬಿಜೆಪಿಗೆ ಲಾಭ ಮಾಡಿಕೊಡುತ್ತದೆ ಎಂಬುದು ವಿಪಕ್ಷಗಳ ಅಭಿಪ್ರಾಯವಾಗಿದೆ. ಈ ವಾದವನ್ನು ಓವೈಸಿ ತಿರಸ್ಕರಿಸಿದ್ದಾರೆ.
VIDEO | AIMIM chief Asaduddin Owaisi (@asadowaisi), in an exclusive interview conducted by PTI CEO & Editor-in-Chief Vijay Joshi, talks about the April 22 Pahalgam terror attack and 'Operation Sindoor'. He says, "Kashmiri Muslims have outrightly condemned this (Pahalgam attack).… pic.twitter.com/Y246CdrV58
— Press Trust of India (@PTI_News) May 18, 2025
“ಸಮಾಜದ ಪ್ರತಿಯೊಂದು ವಿಭಾಗವು ರಾಜಕೀಯ ನಾಯಕತ್ವವನ್ನು ಹೊಂದಿರುವಾಗ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಆದರೆ ಮುಸ್ಲಿಮರು ತಮ್ಮ ರಾಜಕೀಯ ಧ್ವನಿಯನ್ನು ಎತ್ತುವ, ರಾಜಕೀಯ ನಾಯಕತ್ವವನ್ನು ಹೊಂದಿರಬೇಕು ಎಂಬುದನ್ನು ನೀವು ಬಯಸುವುದಿಲ್ಲ” ಎಂದು ಓವೈಸಿ ಹೇಳಿದ್ದಾರೆ. ಕಾಂಗ್ರೆಸ್ ಅನ್ನು ಉಲ್ಲೇಖಿಸಿ ನೀವು ಈ ಹೇಳಿಕೆ ನೀಡುತ್ತಿದ್ದೀರಾ ಎಂಬ ಸಂದರ್ಶಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಓವೈಸಿ, ಬಿಎಸ್‌ಪಿ, ಎಸ್‌ಪಿ ಮತ್ತು ಬಿಜೆಪಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳನ್ನು ಉಲ್ಲೇಖಿಸುತ್ತಿರುವುದಾಗಿ ಹೇಳಿದ್ದಾರೆ.
“ಯಾದವ ಒಬ್ಬ ನಾಯಕನಾಗುತ್ತಾನೆ, ಮುಸಲ್ಮಾನ ಭಿಕ್ಷುಕನಾಗುತ್ತಾನೆ. ಮೇಲ್ಜಾತಿಯ ಒಬ್ಬ ನಾಯಕನಾಗುತ್ತಾನೆ, ಮುಸಲ್ಮಾನ ಭಿಕ್ಷುಕನಾಗುತ್ತಾನೆ. ಅದು ಎಷ್ಟು ನ್ಯಾಯ, ಹೇಳಿ” ಎಂದು ಓವೈಸಿ ಪ್ರಶ್ನಿಸಿದರು.
“ಭಾರತದ ಸಮಗ್ರತೆ ಮತ್ತು ಭದ್ರತೆಯ ಪ್ರಶ್ನೆ ಬಂದಾಗ ನಾವು ಮುಂದೆ ಬಂದು ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲುತ್ತೇವೆ. ಆದರೆ ನಾವು ನಮ್ಮ ಮನೆಯೊಳಗಿನ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾಗಿದೆ, ಅಲ್ಲವೇ”ಎಂದು ಕೇಳಿದರು.
“ಸುಮಾರು ಶೇಕಡ 15ರಷ್ಟು ಜನಸಂಖ್ಯೆಯನ್ನು ಹೊಂದಿರುವ ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಗುಂಪಾಗಿದ್ದರೂ, ಮುಸ್ಲಿಮರು ಶಾಸಕಾಂಗ ಮತ್ತು ಸಂಸತ್ತಿನಲ್ಲಿ ಕೇವಲ ಶೇಕಡ 4ರಷ್ಟು ಭಾಗಿತ್ವವನ್ನು ಹೊಂದಿದ್ದಾರೆ. ರಾಜಕೀಯ ಪಕ್ಷಗಳು ಮುಸ್ಲಿಮರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ. ಮತ್ತೆ ಜನರು ಮುಸ್ಲಿಮರಿಗೆ ಮತ ಹಾಕುವುದಿಲ್ಲ” ಎಂದು ಹೇಳಿದರು.
