ಶಿವಮೊಗ್ಗ ನಗರದ ಸೋಮಿನಕೊಪ್ಪದಿಂದ ಗೆಜ್ಜೇನಹಳ್ಳಿಗೆ ಹೋಗುವ ದಾರಿಯ ಬಲಭಾಗದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ 7 ಹಿಲ್ಸ್ ನೂತನ ಬಡಾವಣೆಯ ಪಾರ್ಕ ಪಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಪೊಲೀಸರು ಮೂವರನ್ನು ಬಂಧಿಸಿದ ಘಟನೆ, ಮೇ 17 ರಂದು ನಡೆದಿದೆ.ಖಚಿತ ವರ್ತಮಾನದ ಮೇರೆಗೆ ಸಿಇಎನ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿ ರಾಜೇಂದ್ರ ಕಾಣೋಜಿ ಮಧ್ಯಪ್ರದೇಶದಿಂದ ಗಾಂಜಾ ಸೊಪ್ಪು ತಂದು ಶಿವಮೊಗ್ಗದ ಆರೋಪಿಗಳಿಬ್ಬರಿಗೆ ಮಾರಾಟ ಮಾಡುವ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.ಮಧ್ಯಪ್ರದೇಶ ರಾಜ್ಯದ ಬರವಾನಿ ಜಿಲ್ಲೆಯ ರಾಜ್ಮಾಲಿ ಗ್ರಾಮದ ನಿವಾಸಿ ರಾಜೇಂದ್ರ ಕಾಣೋಜಿ (22), ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ನಿವಾಸಿಗಳಾದ ಜಾವೀದ್ ಅಲ್ಲಿಸಾಬ್ ದೊಡ್ಮನಿ (22) ಹಾಗೂ ಪರಶುರಾಮ್ (19) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಬಂಧಿತರಿಂದ 70 ಸಾವಿರ ರೂ. ಮೌಲ್ಯದ 2 ಕೆಜಿ 735 ಗ್ರಾಂ ತೂಕದ ಒಣ ಗಾಂಜಾ, ಹೊಂಡಾ ಕಂಪನಿಯ ಬೈಕ್, 2 ಮೊಬೈಲ್ ಪೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಇಎನ್ ಕ್ರೈಂ ಪೊಲೀಸ್ ಠಾಣೆ ಡಿವೈಎಸ್ಪಿ ಕೃಷ್ಣಮೂರ್ತಿ ಕೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ಶೇಖರ್, ಹೆಚ್.ಸಿ ಧರ್ಮನಾಯ್ಕ್, ಅವಿನಾಶ್, ಪಿಸಿಗಳಾದ ನಾರಾಯಣಸ್ವಾಮಿ, ಪರಮೇಶ್ವರಪ್ಪ, ಫಿರ್ದೋಸ್ ಅಹಮದ್, ರವಿ, ಆಂಡ್ರ್ಯೂಸ್ ಜೋನ್ಸ್, ಶರತ್ ಕುಮಾರ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ಧಾರೆ.
ಸಿಇಎನ್ ಪೊಲೀಸ್ ಠಾಣಾ ಗುನ್ನೆ ನಂ 40/2025 ಕಲಂ 20(b)(ii)(B) ರ ರೀತ್ಯಾ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಮೇ 18 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.