ಲಾಕ್ ಮಾಡಿದ ಕಾರಿನಲ್ಲಿ ಸಿಲುಕಿಕೊಂಡು ನಾಲ್ವರು ಮಕ್ಕಳು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ವಿಜಯನಗರ ಕಂಟೋನ್ಮೆಂಟ್ ವ್ಯಾಪ್ತಿಯ ದ್ವಾರಪುಡಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ವರು ಮಕ್ಕಳು ಆಟವಾಡುತ್ತಾ ನಿಲ್ಲಿಸಿದ್ದ ಕಾರಿಗೆ ನುಗ್ಗಿದರು. ಈ ವೇಳೆ ಕಾರಿನ ಬಾಗಿಲುಗಳು ಲಾಕ್ ಆಗಿ ಮಕ್ಕಳು ಕಾರಿನೊಳಗಡೆ ಸಿಲುಕಿದ್ದಾರೆ. ಬೆಳಿಗ್ಗೆಯಿಂದ ಮಕ್ಕಳು ಕಾಣದ ಕಾರಣ ಅವರ ಪೋಷಕರು ಹುಡುಕಾಡಿದಾಗ ಸ್ಥಳೀಯ ಮಹಿಳಾ ಮಂಡಳಿ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಿಲ್ಲಿಸಿದ್ದ ಕಾರಿನ ಬಾಗಿಲುಗಳು ಲಾಕ್ ಆಗಿರಲಿಲ್ಲ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಉಸಿರುಗಟ್ಟಿಸಿ ವಿದೇಶಿ ಮಹಿಳೆ ಕೊಲೆ; ಶಂಕೆ
ಮೃತ ಮಕ್ಕಳನ್ನು ಉದಯ್(8), ಚಾರುಮತಿ(8), ಚರಿಷ್ಮಾ(6) ಮತ್ತು ಮನಸ್ವಿ (6) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಿಗ್ಗೆ ಮಕ್ಕಳು ಆಟವಾಡಲು ಹೋಗಿದ್ದರು. ಚಾರುಮತಿ ಮತ್ತು ಚರಿಷ್ಮಾ ಸಹೋದರಿಯರು, ಉಳಿದ ಇಬ್ಬರು ಅವರ ಸ್ನೇಹಿತರು. ಬಹಳ ಹೊತ್ತಾದರೂ ಮಕ್ಕಳು ಮನೆಗೆ ಬರದ ಕಾರಣ ಪೋಷಕರು ಹುಡುಕಾಡಿದ್ದಾರೆ.
ಕಳೆದ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಕಾರಿನಲ್ಲಿ ಸಿಲುಕಿ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ನಾಲ್ಕು ಮತ್ತು ಐದು ವರ್ಷದ ಇಬ್ಬರು ಮಕ್ಕಳು ಮೃತರಾಗಿದ್ದರು.
