ಕೊಡಗು ಜಿಲ್ಲೆ, ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ. 10 ರಂದು ಕಾಣೆಯಾಗಿದ್ದ ಸಂಪತ್ ನಾಯರ್ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ಆರಂಭಿಸಿದಾಗ ನಾಪತ್ತೆಯಾದ ವ್ಯಕ್ತಿ ಸಕಲೇಶಪುರ ಬಳಿಯ ಎಸಳೂರು ಬಳಿ ಮೃತಪಟ್ಟ ದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದ ಬಿ. ಎಂ. ಕಿರಣ್ (44) ಕಿರಣ್ ಪತ್ನಿ ಸಂಗೀತ (35) ಹಾಗೂ ಚೌಡ್ಲು ಗ್ರಾಮದ ಪಿ.ಎಮ್. ಗಣಪತಿ (43) ಬಂಧಿತ ಆರೋಪಿಗಳಾಗಿದ್ದಾರೆ.
ವೈಯಕ್ತಿಕ ದ್ವೇಷದಿಂದ ಕೊಲೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಆರೋಪಿ ಸಂಗೀತ ಸಂಪತ್ ನಾಯರ್ ನನ್ನು ಸೋಮವಾರಪೇಟೆಯ ಹಾನಗಲ್ ಗೆ ಮೇ. 9 ರಂದು ತಾನು ಪಡೆದ ಸಾಲವನ್ನು ವಾಪಸ್ ನೀಡುತ್ತೇನೆ ಎಂದು ಹೇಳಿ ಬರಮಾಡಿಕೊಂಡಿದ್ದಾಳೆ. ತನ್ನ ಗಂಡ ಕಿರಣ್ ಹಾಗೂ ಸ್ನೇಹಿತ ಗಣಪತಿ ಕೋವಿ ತೋರಿಸಿ ಬೆದರಿಸಿ, ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಬಳಿಕ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆಯನ್ನು ಮರೆ ಮಾಚಲು ಮೃತ ದೇಹವನ್ನು ಸಂಪತ್ ನಾಯರ್ ತಂದಿದ್ದ ಫಿಯೆಟ್ ಪುಂಟೋ ಕಾರಿನಲ್ಲಿ ಸಕಲೇಶಪುರ ತಾಲೂಕು ಒಳಗೂರು ಅರಣ್ಯದಲ್ಲಿ ಮೃತ ದೇಹವನ್ನು ಬಿಸಾಡಿ, ಕಾರನ್ನು ಕಲ್ಲಳ್ಳಿ ಬಳಿ ನಿಲ್ಲಿಸಿದ್ದಾರೆ. ಬೆಂಗಳೂರಿನಿಂದ ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಮೇ.16 ರಂದು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಅನುಸಾರ ಕಿರಣ ನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಗಣಪತಿಯನ್ನು ಮೇ.17 ರಂದು ಬೆಳತಂಗಡಿಯಲ್ಲಿ ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಂಗೀತಳನ್ನು ಮೇ.18 ರಂದು ಸೋಮವಾರಪೇಟೆಯಲ್ಲಿ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದಾಗ ತಾವು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಕೃತ್ಯಕ್ಕೆ ಬಳಸಲಾದ ದೊಣ್ಣೆ, ಕತ್ತಿ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಡಿಕೇರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಆರೋಪಿಗಳು ತಲೆಮರಿಸಿಕೊಳ್ಳಲು ಸಹಕರಿಸಿದ ಇತರರನ್ನು ಕೂಡ ಸದ್ಯದಲ್ಲೇ ಬಂಧಿಸಲಾಗುವುದು. ಕಿರಣ್, ಗಣಪತಿ, ಸಂಪತ್ ನಾಯರ್ ಸ್ನೇಹಿತರಾಗಿದ್ದು. ಮೂವರು, ಹಣಕಾಸು ವ್ಯವಹಾರದಲ್ಲಿ ಪಾಲುದಾರರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಸಾರ್ವಜನಿಕ ಕಚೇರಿಗಳಿಗೆ ರಾಜ್ಯ ಉಪ ಲೋಕಾಯುಕ್ತ ಬಿ. ವೀರಪ್ಪ ಭೇಟಿ; ಸ್ವಯಂ ಪ್ರೇರಿತ ಪ್ರಕರಣ ದಾಖಲು
ಕಿರಣನ ಪತ್ನಿ ಸಂಗೀತಳ ವಿಡಿಯೋ ಒಂದು ಸಂಪತ್ ಬಳಿ ಇದ್ದು ಇದನ್ನು ಇಟ್ಟುಕೊಂಡು ಆತ ಆಗಾಗ ಬ್ಲಾಕ್ಮೇಲ್ ಮಾಡುತ್ತಿದ್ದನು. ಈ ಹಿಂದೆ ಸಂಗೀತ ಕೆಲವು ತಿಂಗಳುಗಳ ಕಾಲ ಸಂಪತ್ ಜೊತೆ ಸಂಸಾರ ನಡೆಸಿದ್ದಳು. ನಂತರ ತನ್ನ ಮೊದಲ ಗಂಡ ಕಿರಣದೊಂದಿಗೆ ಇದ್ದಳು. ಆಕೆ ಪಡೆದುಕೊಂಡ 20 ಲಕ್ಷ ನೀಡದಿದ್ದಾಗ ಸಂಪತ್ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಇದರಿಂದ ಕುಪಿತರಾದ ಕಿರಣ್ ಹಾಗೂ ಸಂಗೀತ ಆಕೆಯ ಸಂಬಂಧಿ ಗಣಪತಿಯೊಂದಿಗೆ ಸೇರಿ ಆತನನ್ನು ಬರ ಮಾಡಿಕೊಂಡು ಕೃತ್ಯ ಎಸಿಗಿದ್ದಾರೆ ಎಂದು ನಡೆದಿರುವ ಘಟನೆ ವಿವರಿಸಿದ್ದಾರೆ.