ಭಾರತ ಆಪರೇಷನ್ ಸಿಂಧೂರ ನಡೆಸುವುದಕ್ಕೂ ಮುನ್ನವೇ ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು ಎಂಬ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರ ಹೇಳಿಕೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಜೈಶಂಕರ್ ಅವರ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಉಗ್ರರಿಗೆ ಸೂಚನೆ ನೀಡಿ ದಾಳಿ ನಡೆಸುವುದು ಬೇಹುಗಾರಿಕೆ, ಅಪರಾಧ, ದೇಶದ್ರೋಹ” ಎಂದು ಹೇಳಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಇಂದು (ಮೇ 19) ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿ ಆರಂಭಕ್ಕೂ ಮುನ್ನ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಯ ವಿಡಿಯೋವನ್ನು ತೋರಿಸಲಾಗಿದೆ. “ಕಾರ್ಯಾಚರಣೆಯ ಆರಂಭದಲ್ಲಿ, ನಾವು ಪಾಕಿಸ್ತಾನಕ್ಕೆ ‘ನಾವು ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತಿದ್ದೇವೆ ಮತ್ತು ನಾವು ಮಿಲಿಟರಿಯ ಮೇಲೆ ದಾಳಿ ಮಾಡುತ್ತಿಲ್ಲ’ ಎಂದು ಸಂದೇಶವನ್ನು ಕಳುಹಿಸಿದ್ದೆವು” ಎಂದು ವಿದೇಶಾಂಗ ಸಚಿವರು ಹೇಳಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮೊದಲೇ ಮಾಹಿತಿ ನೀಡಿದ್ದು ಅಪರಾಧ: ಜೈಶಂಕರ್ ವಿರುದ್ಧ ರಾಹುಲ್ ವಾಗ್ದಾಳಿ
“ಉಗ್ರರ ಮೇಲೆ ನಿಮಗೆ ಅಷ್ಟೊಂದು ಭರವಸೆಯೇ? ನೀವು ಮೊದಲೇ ಸೂಚನೆ ನೀಡಿದರೂ ಅವರು ಅದೇ ಸ್ಥಳದಲ್ಲಿ ಇರುತ್ತಾರೆಯೇ ಅಥವಾ ಸುಮ್ಮನಿರುತ್ತಾರೆಯೇ? ಭಯೋತ್ಪಾದಕರಿಗೆ ಮೊದಲೇ ಸೂಚನೆ ನೀಡಿ ದಾಳಿ ನಡೆಸಿದರೆ ಅದು ರಾಜತಾಂತ್ರಿಕತೆ ಆಗುತ್ತದೆಯೇ? ಕ್ಷಮಿಸಿ ನಮ್ಮಲ್ಲಿ ಅದನ್ನು ಬೇಹುಗಾರಿಕೆ ಎನ್ನುತ್ತಾರೆ, ರಾಜತಾಂತ್ರಿಕತೆ ಎನ್ನುವುದಿಲ್ಲ. ಇದು ಬೇಹುಗಾರಿಕೆ, ಅಪರಾಧ, ದೇಶದ್ರೋಹ. ಈ ಬೇಹುಗಾರಿಕೆಯ ಇತಿಹಾಸ ದೀರ್ಘವಾಗಿದೆ” ಎಂದು ಪವನ್ ಖೇರಾ ಆರೋಪಿಸಿದ್ದಾರೆ.
“ಈ ಬೇಹುಗಾರಿಕೆಯಿಂದಾಗಿಯೇ ಉಗ್ರ ಅಸರ್ ಮಸೂದ್ ತಪ್ಪಿಸಿಕೊಂಡಿರುವುದೇ? ನೀವು ಮೊದಲೇ ಸೂಚನೆ ನೀಡಿ ಅಸರ್ ಮಸೂದ್ ಅನ್ನು ರಕ್ಷಿಸಿದ್ದೀರಿ. ಇದೇ ಅಸರ್ ಮಸೂದ್ ಅನ್ನು ನೀವು ಈ ಹಿಂದೆಯೂ ರಕ್ಷಿಸಿದ್ದೀರಿ. ಯಾಕೆ ನೀವು ಆತನನ್ನು ಕಾಪಾಡುತ್ತಿದ್ದೀರಿ” ಎಂದು ಪ್ರಶ್ನಿಸಿದ್ದಾರೆ.
“ಮೊದಲೇ ಮಾಹಿತಿ ನೀಡಿ ದಾಳಿ ನಡೆಸಿರುವುದು ನಮ್ಮ ದೇಶಕ್ಕೆ ಅಪಾಯ ಹೆಚ್ಚಿಸಿದೆ. ನಮ್ಮ ದೇಶದ ಸುರಕ್ಷತೆಯ ಆತಂಕ ಅಧಿಕವಾಗಿದೆ. ಅಸರ್ ಮಸೂದ್‌ನಂತೆಯೇ ಹಲವು ಉಗ್ರರು ತಪ್ಪಿಸಿಕೊಂಡಿರಬಹುದು. ಈ ಬಗ್ಗೆ ಪ್ರಧಾನಿ ಮತ್ತು ವಿದೇಶಾಂಗ ಸಚಿವರು ಉತ್ತರಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಪಾಕಿಸ್ತಾನದ ಜೊತೆ ನಿಮ್ಮ ಸಂಬಂಧವೇನು? ನಾವು ಇಂದು ಪ್ರಶ್ನಿಸದಿದ್ದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಪ್ರಶ್ನಿಸುತ್ತದೆ. ಇಂತಹ ಗಂಭೀರ ಸಮಸ್ಯೆಗಳು ಉಂಟಾಗಿದ್ದರೂ ನೀವು ಪ್ರಶ್ನಿಸಿಲ್ಲ ಯಾಕೆ ಎಂದು ನಮ್ಮನ್ನು ಮುಂದಿನ ಪೀಳಿಗೆ ಪ್ರಶ್ನಿಸುವಂತಾಗಬಾರದು. ಈ ಪ್ರಶ್ನೆ ಕೇಳಲು ಸರ್ವಪಕ್ಷ ಸಭೆ ನಡೆಸುವಂತೆ ಒತ್ತಾಯಿಸುತ್ತಿದ್ದೇವೆ. ಆದರೆ ಅದಕ್ಕೆ ಒಪ್ಪುತ್ತಿಲ್ಲ. ಹಾಗಾಗಿ ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನಿಸಬೇಕಾಗಿದೆ” ಎಂದರು.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ ಬಗ್ಗೆ ಪೋಸ್ಟ್ ಮಾಡಿದ ಪ್ರಾಧ್ಯಾಪಕ ಅಲಿ ಖಾನ್ ಬಂಧನ; ಸಚಿವ ವಿಜಯ್ ಶಾ ಬಂಧನವೇಕಿಲ್ಲ: ವಿಪಕ್ಷಗಳ ಪ್ರಶ್ನೆ
“ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರ ಯಾವ ಗೌಪ್ಯ ಮಾಹಿತಿ ಅಮೆರಿಕ, ಚೀನಾದ ಬಳಿಯಿದೆ ಎಂದು ತಿಳಿದಿಲ್ಲ. ಇಬ್ಬರೂ ಕೂಡಾ ಅಮೆರಿಕ, ಚೀನಾದ ಬಗ್ಗೆ ಮಾತನಾಡುವುದಿಲ್ಲ. ಪ್ರಧಾನಿ ಚೀನಾ, ಅಮೆರಿಕಕ್ಕೆ ಕ್ಲೀನ್‌ಚಿಟ್ ನೀಡುತ್ತಾರೆ. ಜೈಶಂಕರ್ ಚೀನಾದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಕಾರಣವೇನು” ಎಂದು ಪ್ರಶ್ನಿಸಿದರು. ನಿಮ್ಮ ಯಾವ ಮಾಹಿತಿಯೂ ಅವರ ಬಳಿ ಇರಬಹುದು. ಅದು ನಮಗೆ ಬೇಕಾಗಿಲ್ಲ. ಆದರೆ ದೇಶಕ್ಕೆ ನಷ್ಟವಾಗಬಾರದು ಎಂದರು.
“ಪಾಕಿಸ್ತಾನದ ಟಿವಿಯಲ್ಲಿ ಕಾಂಗ್ರೆಸ್ ನಾಯಕರ ಯಾವುದೇ ಹೇಳಿಕೆ ಪ್ರಸಾರವಾದರೆ ಕಾಂಗ್ರೆಸ್ ನಾಯಕರನ್ನು ದೇಶದ್ರೋಹಿಗಳೆಂದು ಹೇಳುತ್ತೀರಿ. ಈಗ ಜೈಶಂಕರ್ ಅವರ ಹೇಳಿಕೆಯನ್ನು ಪಾಕಿಸ್ತಾನದ ಟಿವಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈಗ ಏನು ಹೇಳುತ್ತೀರಿ” ಎಂದು ಮಾಧ್ಯಮಗಳನ್ನು ಪ್ರಶ್ನಿಸಿದರು.
“ತಮ್ಮನ್ನು ತಾವು ಹುಲಿ ಎಂದು ಹೇಳಿಸಿಕೊಳ್ಳುವ ಕಾಯಿಲೆ ಈಗ ಎಲ್ಲರಿಗೂ ಹರಡಿದೆ. ಮೋದಿ ಅವರು ಬಾಲ್ಯದಲ್ಲಿ ಮೊಸಳೆ ಹಿಡಿದಿದ್ದರು ಎಂದು ಹೇಳಲಾಗುತ್ತದೆ. ಆದರೆ ಈಗ ಡೊನಾಲ್ಡ್ ಟ್ರಂಪ್ ಎದುರು ಬಾಯಿ ತೆರೆಯಲ್ಲ. ಬಾಲ್ಯದಲ್ಲಿ ಮೊಸಳೆ ಹಿಡಿದಿರುವವರು ಡೊನಾಲ್ಡ್ ಟ್ರಂಪ್‌ಗೆ ಪ್ರತ್ಯುತ್ತರವನ್ನಾದರೂ ನೀಡಿ. ತಮ್ಮ ಬಗ್ಗೆ ಬ್ರಾಂತಿ ಹುಟ್ಟಿಸುವ ಅಭ್ಯಾಸವಿದ್ದಂತೆ. ಪ್ರಾಯಶಃ ಹಿಂದಿ ಸಿನಿಮಾ ನೋಡಿ ಬೆಳೆದಿರಬೇಕು” ಎಂದು ವ್ಯಂಗ್ಯವಾಡಿದರು.
