ಭಾರೀ ಮಳೆಗೆ ತತ್ತರಿಸಿದ ಸಿಲಿಕಾನ್‌ ಸಿಟಿ; ಬಿಬಿಎಂಪಿ ಭಾರೀ ವೈಫಲ್ಯ

Date:

Advertisements

ಬೆಂಗಳೂರು ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿದ್ದಲ್ಲದೆ, ತಗ್ಗು ಪ್ರದೇಶದ ಹಲವು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗಳು ತುಂಬಿ ಹರಿಯುತ್ತಿವೆ, ನೂರಾರು ವಾಹನಗಳು ಕೊಚ್ಚಿ ಹಾದ ಮತ್ತು ಮುಳುಗಡೆಯಾದ ವರದಿಗಳಿವೆ, ದೈನಂದಿನ ಜನಜೀವನ ಅಸ್ತವ್ಯಸ್ತಗೊಂಡಿದ್ದು ಅವಾಂತರಗಳು ಸೃಷ್ಟಿಯಾಗಿವೆ. ನಗರದ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ. ಸಾಧಾರಣ ದಿನಗಳಲ್ಲೇ ಅಸ್ತವ್ಯಸ್ತತೆಗೆ ಹೆಸರಾದ ಬೆಂಗಳೂರು ವಾಹನ ಸಂಚಾರ ಭಾನುವಾರದಿಂದ ಕುಸಿದೇ ಹೋಗಿದೆ. ಪರಿಹಾರ ತಂಡಗಳು ಹಲವೆಡೆಗಳಲ್ಲಿ ದೋಣಿಗಳನ್ನು ಬಳಸಿ ಸ್ಥಳೀಯ ನಿವಾಸಿಗಳಿಗೆ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಿವೆ.

ಪ್ರತಿ ಮಳೆಗಾಲದಂತೆ ಈ ಮಳೆಗಾಲದಲ್ಲೂ ಬಿಬಿಎಂಪಿಯ ಕಾರ್ಯ ಕ್ಷಮತೆಯಲ್ಲಿ ಸ್ವಲ್ಪವೂ ಸುಧಾರಣೆ ಕಂಡುಬಂದಿಲ್ಲ. ಸರ್ಕಾರಗಳು ಬದಲಾದರೂ ಮಳೆಗಾಲದಲ್ಲಿ ಬೆಂಗಳೂರಿಗರ ಪಡಿಪಾಟಲು ಬಗೆಹರಿದಿಲ್ಲ.

ಮಳೆ1 2

ಕಳೆದ 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದಾಗಿದೆ. ಹೆಬ್ಬಾಳ, ಕೋರಮಂಗಲ ಮತ್ತು ಕೆಂಗೇರಿ ಬಳಿಯ ವೃಷಭಾವತಿ ಕಣಿವೆ ಉಕ್ಕಿ ಹರಿದಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮುನ್ಸೂಚನೆ ಬೆಂಗಳೂರಿಗರ ಪಾಲಿಗೆ ದುಃಸ್ವಪ್ನದಂತೆ ಧ್ವನಿಸಿದೆ.

Advertisements

ಭಾನುವಾರ ರಾತ್ರಿ ನಗರದಲ್ಲಿ 103 ರಿಂದ 130 ಮಿಲಿಮೀಟರ್‌ವರೆಗೆ ಮಳೆ ಸುರಿದಿದ್ದು, ಇಡೀ ನಗರದಲ್ಲಿ ಅವಾಂತರ ಸೃಷ್ಟಿಯಾಗಿದೆ. ಅನೇಕ ಬಡಾವಣೆಗಳು ಜಲಾವೃತವಾಗಿವೆ, ನೂರಾರು ವಾಹನಗಳು ಪ್ರವಾಹದಲ್ಲಿ ತೇಲಿ ಹೋಗಿವೆ, ಅನಾಥಾಶ್ರಮಕ್ಕೂ ನೀರು ನುಗ್ಗಿದ್ದು, ರಾತ್ರಿಯಿಡೀ ಜನರು ಜಾಗರಣೆ ಮಾಡಿ ಉಪವಾಸ ಅನುಭವಿಸಿದ್ದಾರೆ. 27 ಮರಗಳು, 43 ಮರದ ರೆಂಬೆ-ಕೊಂಬೆಗಳು ಧರೆಗುರುಳಿವೆ.

ಕಳೆದ ಒಂದು ವಾರದಿಂದ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಮಹದೇವಪುರ ವ್ಯಾಪ್ತಿಯ ಸುಮಾರು 10 ಕಡೆ ಜಲಾವೃತವಾಗಿದ್ದು, ಪ್ರಮುಖವಾಗಿ ಸಾಯಿ ಲೇಔಟ್‌ನಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ಒಂದೂವರೆಯಿಂದ ಎರಡು ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಮನೆಗಳಿಗೂ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಾಯಿತು.

ವಸತಿ ಪ್ರದೇಶಗಳಿಗೂ ನುಗ್ಗಿದ ನೀರು

ಕಾವೇರಿ ನಗರ, ಸಂಪಂಗಿ ರಾಮನಗರದಲ್ಲೂ ಅವಾಂತರಗಳಾಗಿವೆ. ಬೆಂಗಳೂರಿನ ಮೆಜೆಸ್ಟಿಕ್, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್ ವೃತ್ತ, ಜಯನಗರ, ಕೆಆರ್ ಮಾರ್ಕೆಟ್, ಚಾಮರಾಜಪೇಟೆ, ವಿಜಯನಗರ, ಚಂದ್ರಾಲೇಔಟ್ ರಾಜಾಜಿನಗರ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಆರ್ ಆರ್ ನಗರ, ನಾಯಂಡಹಳ್ಳಿ, ಯಶವಂತಪುರ, ಪೀಣ್ಯ, ಬಿಟಿಎಂ ಲೇಔಟ್‌, ಮೈಕೋ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.

ಮಳೆ2 1

ಜಯನಗರದ ಹಲವೆಡೆ ಮರಗಳು ಧರೆಗುರುಳಿವೆ. ಬೊಮ್ಮನಹಳ್ಳಿ, ಬೆಳ್ಳಂದೂರುಗಳ ರಸ್ತೆಯಲ್ಲಿ ನೀರು ನಿಂತಿದೆ. ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು, ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಹರಸಾಹಸ ಪಡುವಂತಾಗಿತ್ತು. ಶಾಂತಿನಗರದಲ್ಲಿರುವ ಸಿಸಿಬಿ ಕಚೇರಿಗೆ ಮಳೆ ನೀರು ನುಗ್ಗಿದ ಪರಿಣಾಮ ಕಚೇರಿಯ ಕೆಳಮಹಡಿಯಲ್ಲಿ ಮೊಣಕಾಲುಮಟ್ಟ ನೀರು ಸಂಗ್ರಹವಾಗಿದ್ದು, ಸಿಬ್ಬಂದಿ ಪರದಾಡಿದ್ದಾರೆ. ಅಷ್ಟೇ ಅಲ್ಲದೆ ಸಿಸಿಬಿ ಕಚೇರಿಯ ಸುಮಾರು 8ಕ್ಕೂ ಹೆಚ್ಚು ಕೋಣೆಗಳಲ್ಲಿದ್ದ ಕಡತಗಳು ಹಾಳಾಗಿವೆ.

ಹೆಚ್​ಎಸ್​ಆರ್​ ಲೇಔಟ್​ನಲ್ಲಿಯೂ ಭಾರೀ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಹೈರಾಣಾಗಿದ್ದಾರೆ. ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಹೆಚ್​ಎಸ್​ಆರ್​ ಲೇಔಟ್​ನ ಫಸ್ಟ್​​ ಸೆಕ್ಟರ್ ಸಂಪೂರ್ಣ ಜಲಾವೃತವಾಗಿದೆ. ಪರಿಣಾಮ ಅಪಾರ್ಟ್ಮೆಂಟ್ ಬೇಸ್ಮೆಂಟ್ ಹಾಗೂ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಿಂದ ನೀರು ಹೊರಹಾಕಲು ಜನರು ಪರದಾಡುವಂತಾಯಿತು. ಕೊತ್ತನೂರು ಹೆಣ್ಣೂರು ಕ್ರಾಸ್​ ಸಂಪೂರ್ಣ ಮುಳುಗಡೆಯಾಗಿದ್ದು, ಮನೆಯೊಳಗಡೆ ನೀರು ನಿಂತಿದ್ದರಿಂದ ನಿವಾಸಿಗಳು ಹೈರಾಣಾಗಿದ್ದರು.

ವೈಟ್ ಟ್ಯಾಪಿಂಗ್ ಕಾಮಗಾರಿ, ರಸ್ತೆಗಳು ಅಸ್ಥವ್ಯಸ್ಥ!

ಬೆಂಗಳೂರಿನ ಅನೇಕ ಕಡೆಗಳಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ರಸ್ತೆಯ ಇಕ್ಕೆಲಗಳನ್ನು ಅಗೆಯಲಾಗಿದೆ. ಅಲ್ಲಲ್ಲಿ ಪ್ರಮುಖ ರಸ್ತೆಗಳನ್ನು ಮುಚ್ಚಲಾಗಿದೆ. ಹೀಗಾಗಿ ಪರ್ಯಾಯ ರಸ್ತೆಗಳಲ್ಲಿ ವಾಹನ ಸವಾರರು ವಾಹನ ಚಲಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಎಲ್ಲೆಡೆ ವಾಹನಗಳ ದಟ್ಟಣೆ ಹೆಚ್ಚಿದ್ದು ಸಂಚಾರ ತೆವಳುವ ದುಸ್ಥಿತಿಗೆ ಇಳಿದಿದೆ.

ಬೆಳಿಗ್ಗೆ ಮತ್ತು ಸಂಜೆ ವೇಳೆ ತೀವ್ರ ಟ್ರಾಫಿಕ್ ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ. ಅನಿವಾರ್ಯವಾಗಿ ಮೆಟ್ರೋ ರೈಲುಗಳನ್ನು ಆಶ್ರಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ಭಾರೀ ಮಳೆ ಸುರಿದು ರಸ್ತೆಗಳು, ಮನೆಗಳು ಜಲಾವೃತವಾದ ಹಿನ್ನೆಲೆಯಲ್ಲಿ ಹಾನಿಗೆ ಒಳಗಾದ ಪ್ರದೇಶಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಒಂದೂವರೆಯಿಂದ ಎರಡು ಅಡಿಯಷ್ಟು ನೀರು ಸಂಗ್ರಹವಾಗಿದ್ದ ಹಿನ್ನೆಲೆಯಲ್ಲಿ ಮಹೇಶ್ವರ್‌ ರಾವ್‌ ಟ್ರ್ಯಾಕ್ಟರ್‌ನಲ್ಲಿ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಸಾಯಿ ಲೇಔಟ್‌, ಮಾನ್ಯತಾ ಟೆಕ್‌ಪಾರ್ಕ್‌, ನಾಗವಾರ ಜಂಕ್ಷನ್ ಸೇರಿದಂತೆ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಹಿಳೆಯೊಬ್ಬರು ಟ್ರ್ಯಾಕ್ಟರ್‌ ಅಡ್ಡಗಟ್ಟಿ ಮುಖ್ಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.

“ಮಳೆ ಬಂದರೆ ಭಾರೀ ಪ್ರಮಾಣ ನೀರು ಶೇಖರಣೆಯಾಗುತ್ತಿದೆ. ಬಿಬಿಎಂಪಿಗೆ ಪೋನ್‌ ಮಾಡಿದರೆ ಸ್ಪಂದಿಸುವುದಿಲ್ಲ. ಪ್ರತಿ ಮಳೆಗೂ ಇದೇ ಪರಿಸ್ಥಿತಿಯಾಗಿದೆ. ಅಧಿಕಾರಿಗಳು ಭೇಟಿ ನೀಡಿದಾಗ ಈ ಬಾರಿ ಸಮಸ್ಯೆ ಪರಿಹಾರ ಮಾಡುತ್ತೇವೆಂದು ಭರವಸೆ ನೀಡಿ ಹೋಗುತ್ತಾರೆ. ಇನ್ನು ಮನೆಗೆ ಪ್ರತಿ ವರ್ಷ ₹10,000 ಆಸ್ತಿ ತೆರಿಗೆ ಪಾವತಿ ಮಾಡುತ್ತೇವೆ. ಚುನಾವಣೆ ಬಂದರೆ ಮತ ಹಾಕುತ್ತೇವೆ. ಈ ಬಾರಿ ಕಸದ ಶುಲ್ಕವನ್ನೂ ಪಾವತಿ ಮಾಡುತ್ತಿದ್ದೇವೆ. ಆದರೆ, ಮಳೆ ಬಂದಾಗ ಮತ್ತದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವುದಾಗಿ ಸಮಾಧಾನ ಪಡಿಸಿದ್ದಾರೆ.

“ಸಾಯಿಲೇಔಟ್ ಅನ್ನು ಬಿಡಿಎ ಅಭಿವೃದ್ಧಿಪಡಿಸಿದ್ದು, ಈ ಪ್ರದೇಶವು ರಾಜಕಾಲುವೆಗಿಂತ ತುಂಬಾ ಕೆಳ ಮಟ್ಟದಲ್ಲಿರುವ ಕಾರಣ ಜಲಾವೃತವಾಗುತ್ತಿದೆ. ರಾಜಕಾಲುವೆ ಹಾದುಹೋಗುವ ಜಾಗದಲ್ಲಿ ರೈಲ್ವೆ ಹಳಿ ಕೆಳಗಿರುವ ನೀರು ಹರಿಯವ ಮಾರ್ಗ ಸಣ್ಣದಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಆಗುತ್ತಿಲ್ಲ. ಈ ಕುರಿತು ರೈಲ್ವೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕಾಲುವೆ ಅಗಲೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯ ಇರುವ ನೀರನ್ನು ಪಂಪ್‌ ಮಾಡಿ ಹೊರ ಹಾಕಲಾಗುತ್ತಿದೆ” ಎಂದು ಅವರು ಮಾಹಿತಿ ನೀಡಿದರು.

“ಸಾಯಿಲೇಔಟ್ ಸ್ಥಳೀಯರ ಅಹವಾಲುಗಳನ್ನು ಆಲಿಸಲಾಗಿದ್ದು, ಜಲಾವೃತವಾಗುವುದನ್ನು ತಪ್ಪಿಸಲು ತಾತ್ಕಾಲಿಕವಾಗಿ ಸಂಪ್ ನಿರ್ಮಿಸಿ ಅಲ್ಲಿ ತುಂಬುವ ನೀರನ್ನು ಹೊರಹಾಕಲು ಪಂಪ್‌ಸೆಟ್ ವ್ಯವಸ್ಥೆ ಮಾಡಲಾಗಿದೆ. ನಿರ್ವಹಣೆಗೆ ತಂಡವನ್ನೂ ನಿಯೋಜಿಸಲಾಗುವುದು. ವಿಪತ್ತು ನಿರ್ವಹಣೆ ಅಡಿ ನೀರು ನುಗ್ಗಿರುವ ಮನೆಗಳನ್ನು ಗುರುತಿಸಿ ಪರಿಹಾರ ನೀಡಲಾಗುವುದು” ಎಂದು ತಿಳಿಸಿದರು.

ಮಹದೇವಪುರ ವಲಯ: ಮಹದೇವಪುರ ವಲಯದ ಸಾಯಿ ಲೇಔಟ್‌ ಸೇರಿದಂತೆ 10 ಕಡೆ ಜಲಾವೃತವಾಗಿರುವ ಪ್ರದೇಶಗಳಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಲು 6 ಟ್ರ್ಯಾಕ್ಟರ್, 2 ಜೆಸಿಬಿ, 35 ಸಿಬ್ಬಂದಿಗಳು, 3 ಅಗ್ನಿ ಶಾಮಕ ವಾಹನ, ಎಸ್‌ಡಿಆ‌ರ್‌ಎಫ್ ತಂಡದಿಂದ 2 ಬೋಟ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಸ್ಥಳೀಯ ನಿವಾಸಿಗಳಿಗೆ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

ಮಾರತ್ತಹಳ್ಳಿಯ ದೀಪ ನರ್ಸಿಂಗ್ ಹೋಮ್, ಚಿನ್ನಪ್ಪನಹಳ್ಳಿ 5ನೇ ಕ್ರಾಸ್, ಪಣತ್ತೂರ್ ರೈಲ್ವೆ ಕೆಳಸೇತುವೆ, ಗ್ರೀನ್ ಹುಡ್, ಇಬ್ಬಲೂರು ಜಂಕ್ಷನ್, ಬಾಲಾಜಿ ಲೇಔಟ್-ಕೊತ್ತನೂರು, ಎ ನಾರಾಯಣಪುರದ ಕೃಷ್ಣ ನಗರ, ಸುನೀಲ್ ಲೇಔಟ್, ಹರಳೂರು, ಬಿಎಸ್‌ಪಿ ಲೇಔಟ್‌ನ ಕಸವನಹಳ್ಳಿ ಕಡೆಗಳಲ್ಲಿ ರಸ್ತೆಗಳ ಮಲೆ ನೀರು ಮತ್ತು ಮನೆಗಳಿಗೆ ನೀರು ನುಗ್ಗಿರುವ ವರದಿಯಾಗಿದ್ದು, ಪಾಲಿಕೆ ಸಿಬ್ಬಂದಿ ಈಗಾಗಲೇ ಕಾರ್ಯಾಚರಣೆ ನಡೆಸಿ ಬಹುತೇಕ ಕಡೆ ಸಮಸ್ಯೆ ಬಗೆಹರಿಸಿರುವುದಾಗಿ ಬಿಬಿಎಂಪಿ ಪಿಆರ್‌ಒ ಸುರೇಶ್‌ ಅವರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದರು.

ಪೂರ್ವ ವಲಯ: ರಾಜಕಾಲುವೆಯಲ್ಲಿ ನೀರು ತುಂಬಿ ಹಿಮ್ಮುಖವಾಗಿ ಚಲಿಸಿರುವ ಪರಿಣಾಮ ಎಚ್‌ಬಿಆರ್ 5, 6, 7, 8ನೇ ಬ್ಲಾಕ್, ಬೈರಸಂದ್ರ ಲೇಔಟ್, ಕೆಂಪೇಗೌಡ ರಸ್ತೆ, ಕಾಮರಾಜ ನಗರ ಪ್ರದೇಶಗಳು ಜಲಾವೃತವಾಗಿದ್ದವು, ನೀರು ಹೊರ ಹಾಕಲು ನಿರ್ವಹಣಾ ತಂಡಗಳು, 6 ಶಿಲ್ಡ್ & ಟ್ರ್ಯಾಕ್ಟರ್‌ಗಳ ತಂಡಗಳು, 2 ಜೆಸಿಬಿಗಳು ಹಾಗೂ 10 ಪಂಪ್‌ಗಳ ವ್ಯವಸ್ಥೆ ಮಾಡಿ ನೀರನ್ನು ಹೊರಹಾಕುವ ಕೆಲಸ ಮಾಡಲಾಗುತ್ತಿದೆ.

ಬೊಮ್ಮನಹಳ್ಳಿ ವಲಯ: ಎಚ್‌ಎಸ್‌ಆರ್ ಲೇಔಟ್ 6 ಮತ್ತು 7ನೇ ಸೆಕ್ಟರ್ ಮತ್ತು ಬನ್ನೇರುಘಟ್ಟ ಬಿಳೇಕಹಳ್ಳಿ ಸಿಗ್ನಲ್‌ನ ರಸ್ತೆಯಲ್ಲಿ ನೀರು ನಿಂತಿರುವುದು, ಯಲಚೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿರುವುದನ್ನು ನಿರ್ವಹಣಾ ತಂಡ ಹಾಗೂ ಪಂಪ್‌ಗಳ ವ್ಯವಸ್ಥೆ ಮಾಡಿ ಸಮಸ್ಯೆ ಬಗೆಹರಿಸಲಾಗಿದೆ.

ದಕ್ಷಿಣ ವಲಯ: ಕೆ-100, ಕೆ-200 ಬೃಹತ್ ನೀರುಗಾಲುವೆಗಳು ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಅಗಲೀಕರಣ ಕಡಿಮೆ ಇರುವ ಪರಿಣಾಮ ನೀರಿನ ಹರಿವಿನ ಮಟ್ಟ ಹೆಚ್ಚಾಗಿ ಮಡಿವಾಳ ಡಾಲರ್ಸ್ ಕಾಲೋನಿ, ಕೋರಮಂಗಲದ 6ನೇ ಬ್ಲಾಕ್, ಈಜೀಪುರ ಪ್ರದೇಶಗಳು ಜಲಾವೃತವಾಗಿದ್ದವು. ಈ ಸಂಬಂಧ ಬೆಳ್ಳಂದೂರು ಬಳಿ ಮಳೆ ನೀರಿನ ಹರಿವಿನ ಮಟ್ಟವನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಜೆಸಿಬಿ ಮೂಲಕ ಬಂಡ್ ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಲಾಗಿದ್ದು, ಈ ಪ್ರದೇಶಗಳಲ್ಲಿ ಜಲಾವೃತ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆ.

ಮುರಿದುಬಿದ್ದ ಮರ
ಕುಮಾರ ಪಾರ್ಕ್‌ನ ಶಾಪಿಂಗ್ ಸ್ಟ್ರೀಟ್ ಬಳಿ ರಸ್ತೆಗೆ ಬಿದ್ದಿದ್ದ ಮರದ ಕೊಂಬೆ. ನೆಟ್ಟಿಗರೋರ್ವರು ಬಿಬಿಎಂಪಿಗೆ ಮಾಹಿತಿ ನೀಡಿದ ಬಳಿಕ ಇದನ್ನು ತೆರವುಗೊಳಿಸಲಾಗಿದೆ.

ವೃಷಭಾವತಿ ವ್ಯಾಲಿ ಗಾಳಿ ಆಂಜನೇಯ ದೇವಸ್ಥಾನದ ಬಳಿ ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿದ್ದು, ಈ ಸಮಸ್ಯೆ ಬಗೆಹರಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಯಲಹಂಕ ವಲಯ: ಚೌಡೇಶ್ವರಿ ನಗರದ ಅಟ್ಟೂರು ವ್ಯಾಪ್ತಿಯಲ್ಲಿ ಸುಮಾರು 15 ಮನೆಗಳಿಗೆ, ಡಿಫೆನ್ಸ್ ಲೇಔಟ್ ಹಾಗೂ ದ್ವಾರಕಾ ನಗರದಲ್ಲಿ ಸುಮಾರು 5 ಮನೆಗಳಿಗೆ ನೀರು ನುಗ್ಗಿದ್ದು, ಸದರಿ ಸ್ಥಳಗಳಲ್ಲಿ ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಮಾಡಲಾಗಿದೆ. ಟಾಟಾ ನಗರ ಮುಖ್ಯರಸ್ತೆಯಲ್ಲಿ ನಿಂತಿದ್ದ ನೀರನ್ನು ತೆರವುಗೊಳಿಸಲಾಗಿದೆ.

ರಾಜರಾಜೇಶ್ವರಿ ನಗರ ವಲಯ: ಐಡಿಯಲ್ಸ್ ಹೋಮ್ಸ್ 1ನೇ ಎ ಕ್ರಾಸ್ ವೃಷಭಾವತಿ ವ್ಯಾಲಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಹಿಮ್ಮುಖವಾಗಿ ಚಲಿಸಿದ ಪರಿಣಾಮ 3 ಹಸು, 1 ಕರು ಹಾಗೂ 1 ಎಮ್ಮೆ ಸೇರಿ 5 ಜಾನುವಾರಗಳು ಮೃತಪಟ್ಟಿವೆ. ಅಲ್ಲದೆ ಸುಮಾರು 12 ಮನೆಗಳಿಗೆ ನೀರು ನುಗ್ಗಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ.

ವಿಜಯಶ್ರೀ ಬಡವಾಣೆ ಹೆಮ್ಮಿಗೆಪುರ ರಾಜಕಾಲುವೆಯಲ್ಲಿ ನೀರು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಜಲಾವೃತವಾಗಿದ್ದು, ಪಾಲಿಕೆಯ ತಂಡ ನಿಯೋಜನೆ ಮಾಡಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಕೆಂಗೇರಿ ಬಳಿಯ ಕೋಟೆ ಲೇಔಟ್‌ನಲ್ಲಿ ಸುಮಾರು 100 ಮನೆಗಳಿಗೆ ನೀರು ನುಗ್ಗಿದ್ದು, 4 ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಕಾರ್ಯ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಾಸರಹಳ್ಳಿ ವಲಯ: ಕೆ ಜಿ ಹಳ್ಳಿ, ಡಿಫೆನ್ಸ್ ಕಾಲೋನಿ, ಮೇಡರಹಳ್ಳಿಯ ಶ್ರೀದೇವಿ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ. ರುಕ್ಕಿಣಿ ನಗರ, ವಿದ್ಯಾನಗರ, ಬಿಟಿಎಸ್ ಲೇಔಟ್‌ಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಪಂಪ್‌ಗಳನ್ನು ಅಳವಡಿಸಿ ನೀರು ತೆರವುಗೊಳಿಸಲಾಗಿದೆ.

ಪಶ್ಚಿಮ ವಲಯ: ಕೆ ಪಿ ಅಗ್ರಹಾರದಲ್ಲಿ ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿ 20 ಮನೆಗಳಿಗೆ ನೀರು ನುಗ್ಗಿದ್ದು, ಸದರಿ ಪ್ರದೇಶದಲ್ಲಿ 4 ಪಂಪ್‌ಗಳನ್ನು ಅಳವಡಿಸಿ ನೀರು ತೆರವು ಕಾರ್ಯ ಮಾಡಲಾಗುತ್ತಿದೆ.

ಧರೆಗುರುಳಿದ ಮರಗಳ ತೆರವು ಕಾರ್ಯಾಚರಣೆ:

ನಗರದಲ್ಲಿ ಧರೆಗುರುಳಿದ ಮರಗಳು, ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲು 30 ತಂಡಗಳನ್ನು ನಿಯೋಜಿಸಲಾಗಿದೆ. ರಾತ್ರಿ ಸುರಿದ ಮಳೆಯಿಂದಾಗಿ 27 ಮರಗಳು, 43 ಮರದ ರೆಂಬೆ/ಕೊಂಬೆಗಳು ಧರೆಗುರುಳಿದ್ದು, ಈಗಾಗಲೇ ಬಹುತೇಕ ಮರ, ಮರದ ರಂಬೆ/ಕೊಂಬೆಗಳನ್ನು ತೆರವುಗೊಳಿಸಲಾಗಿದೆ.

ನಾಗರಿಕರು ಸಹಾಯವಾಣಿ 1533 ಗೆ ಕರೆ ಮಾಡಲು ಮನವಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದಾಗುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ನಾಗರಿಕರು ಕೂಡಲೇ ಬಿಬಿಎಂಪಿ ಸಹಾಯವಾಣಿ ಸಂಖ್ಯೆಯಾದ 1533ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು. ಅದಲ್ಲದೆ ಪಾಲಿಕೆ ಕೇಂದ್ರ ಕಚೇರಿ ಹಾಗೂ 8 ವಲಯಗಳಲ್ಲಿರುವ ನಿಯಂತ್ರಣ ಕೊಠಡಿಗಳ ಸಂಖ್ಯೆಗಳಿಗೆ ಕರೆ ಮಾಡಿ ದೂರು ನೀಡಲು ಬಿಬಿಎಂಪಿ ಕೋರಿದೆ.

ಯಲಹಂಕ ವಲಯದ ಎಲ್ಲಾ ಕೆರೆಗಳು ಭರ್ತಿ: ಯಲಹಂಕ ವಲಯ ವ್ಯಾಪ್ತಿಗೆ 29 ಕೆರೆಗಳು ಎಲ್ಲ ಕೆರೆಗಳೂ ಕೂಡ ಸಂಪೂರ್ಣವಾಗಿ ತುಂಬಿವೆ. ಇನ್ನು ಪ್ರಮುಖವಾಗಿ ಚೌಡೇಶ್ವರಿ ಲೇಔಟ್ ವ್ಯಾಪ್ತಿಯಲ್ಲಿ 103 ಮಿಮೀ ಮಳೆಯಾಗಿದ್ದರೂ ಕೂಡ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನಲ್ಲಿ ಈ ಬಾರಿ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ. ರಮಣಶ್ರೀ ಕ್ಯಾಲಿಫೋರ್ನಿಯಾ ವ್ಯಾಪ್ತಿಯಲ್ಲಿಯೂ ಯಾವುದೇ ಪ್ರದೇಶವು ಜಲಾವೃತವಾಗಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ವಲಯವಾರು ಹೆಚ್ಚು ಮಳೆಯಾಗಿರುವ ಪ್ರದೇಶಗಳ ವಿವರ:

> ರಾಜರಾಜೇಶ್ವರಿ ನಗರ ವಲಯದ ಕೆಂಗೇರಿಯಲ್ಲಿ 132 ಮಿ.ಮೀ

> ಯಲಹಂಕ ವಲಯದ ಚೌಡೇಶ್ವರಿ ನಗರದಲ್ಲಿ 103 ಮಿ.ಮೀ

> ದಕ್ಷಿಣ ವಲಯದ ಕೋರಮಂಗಲದಲ್ಲಿ 96 ಮಿ.ಮೀ

> ಮಹದೇವಪುರ ವಲಯದ ಹೆಚ್.ಎ.ಎಲ್ ವ್ಯಾಪ್ತಿಯಲ್ಲಿ 93 ಮಿ.ಮೀ.

> ದಾಸರಹಳ್ಳಿ ವಲಯದ ಬಾಗಲಗುಂಟೆ ವ್ಯಾಪ್ತಿಯಲ್ಲಿ 89 ಮಿ.ಮೀ.

> ಪಶ್ಚಿಮ ವಲಯ ಕಾಟನ್ ಪೇಟೆ ವ್ಯಾಪ್ತಿಯಲ್ಲಿ 89 ಮಿ.ಮೀ.

> ಪೂರ್ವ ವಲಯದ ಬಾಣಸವಾಡಿ ವ್ಯಾಪ್ತಿಯಲ್ಲಿ 85 ಮಿ.ಮೀ

> ಬೊಮ್ಮನಹಳ್ಳಿ ವಲಯದ ಹೆಚ್.ಎಸ್.ಆರ್ ಲೇಔಟ್ ನಲ್ಲಿ 73 ಮಿ.ಮೀ

ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ಬೆಂಗಳೂರಿನ ಪರಿಸ್ಥಿತಿ ಬದಲಾಗುತ್ತಿಲ್ಲ. ಮಳೆಗಾಲ ಆರಂಭವಾಗುತ್ತಿದಂತೆ ಬೆಂಗಳೂರು ನಗರ ಜಲಾವೃತವಾಗುತ್ತದೆಂಬ ವಾಸ್ತವತೆ ತಿಳಿದಿದ್ದರೂ ಕೂಡ ಅಧಿಕಾರಿಗಳು ಎಚ್ಚೆತ್ತುಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ, ಮಳೆ ಅವಾಂತರ ಸಂಭವಿಸಿದ ಬಳಿಕ ತೆರವು ಕಾರ್ಯಾಚರಣೆಗೆ ಮುಂದಾಗುತ್ತಾ ಬಂದಿದ್ದಾರೆ.

ಇದನ್ನೂ ಓದಿದ್ದೀರಾ? ಸಾಮಾಜಿಕ ಮಾಧ್ಯಮ ಮತ್ತು ಕನ್ನಡ

ಅಧಿಕಾರಿಗಳು ಕ್ರಮ ಕೈಗೊಳ್ಳುವಷ್ಟರಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ಅಪಾರ ಪ್ರಮಾಣದ ಹಾನಿಗಳಾಗಿರುತ್ತವೆ. ಬಳಿಕ ಅಧಿಕಾರಿಗಳು ನಿದ್ದೆಯಿಂದ ಎದ್ದವರಂತೆ ತಡಬಡಾಯಿಸಿಕೊಂಡು ಓಡಾಡುವುದು ಅಭ್ಯಾಸವಾಗಿ ಬಿಟ್ಟಿದೆ.

ಒಂದೆರಡು ದಿನಗಳ ಮಳೆಗೆ ಜನರು ಹೈರಾಣಾಗಿದ್ದು, ನಗರದ ರಸ್ತೆಗಳಲ್ಲಿ ವಾಹನ ಸವಾರರು ಪರದಾಡುವಂತಾಗಿದೆ. ಅಂಗಡಿ, ಮುಂಗಟ್ಟುಗಳ ಮುಂದೆ ಅಗೆದಿಟ್ಟ ರಸ್ತೆಗಳು ಪಾದಚಾರಿಗಳು ಹಾಗೂ ಅಂಗಡಿ ಮಾಲೀಕರಿಗೆ ಇನ್ನಿಲ್ಲದ ಸಮಸ್ಯೆಯನ್ನು ನೀಡುತ್ತಿವೆ. ಬೆಂಗಳೂರು ಮಹಾನಗರವನ್ನು ಗ್ರೇಟರ್ ಬೆಂಗಳೂರು ಮಾಡಲು ಹೊರಟಿರುವ ಸರ್ಕಾರ ನಗರದ ಈ ದುಸ್ಥಿತಿ-ಅವಾಂತರ-ಅವ್ಯವಸ್ಥೆಯ ಕಡೆ ತುರ್ತು ಗಮನ ಹರಿಸಬೇಕಾಗಿದೆ. ಮುಂಗಾರು ಆರಂಭವಾಗುವಷ್ಟರಲ್ಲಿ ಮಳೆ ನೀರು ಸಂಗ್ರಹವಾಗದಂತೆ ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಬೆಂಗಳೂರಿನಲ್ಲಿ ಭಾರೀ ಮಳೆ

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಎರಡು ವರ್ಷವಾಗುವ ಹಿನ್ನೆಲೆಯಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯು ‘ಬೆಂಗಳೂರಿನ ಸಾಧನೆ ಇದುವೇ?’ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.

ಧಾರಾಕಾರ ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಂದ ಬಿಬಿಎಂಪಿ ವಾರ್ ರೂಮ್‌ನಲ್ಲಿ ಮಾಹಿತಿ ಪಡೆದು, ಪರಿಹಾರೋಪಾಯಗಳ ಬಗ್ಗೆ ಸಲಹೆ, ಸೂಚನೆ ನೀಡಿದ್ದಲ್ಲದೇ, ಹಾನಿಗೆ ಒಳಗಾಗಿರುವ ಪ್ರದೇಶಗಳ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ ಅಗತ್ಯ ಕ್ರಮಗಳನ್ನು ಸರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಹಿಂದಿನ ವರ್ಷದ ಲೋಪಗಳಿಂದ ಪಾಠ ಕಲಿಯದ ಸರ್ಕಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ನಗರದಲ್ಲಿ ಅನಾಹುತ ಸರಮಾಲೆಯೇ ಕಾಣಸಿಗುತ್ತಿದೆ. ಮಳೆಗೆ ಮುಂಚಿತವಾಗಿ ಮೋರಿ, ಚರಂಡಿ, ರಾಜ ಕಾಲುವೆಗಳಲ್ಲಿ ಹೂಳು ತೆಗೆಸುವ ಕೆಲಸ ಮಾಡಬೇಕಿತ್ತು. ನಗರದ ಅನೇಕ ಕಡೆ ವೈಟ್ ಟಾಫಿಂಗ್ ಮತ್ತು ರಿಪೇರಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿನ ಅವಶೇಷಗಳನ್ನು ತೆರವು ಮಾಡಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬುದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಬೆಂಗಳೂರು ಮಳೆ ಹಾನಿಯ ವಿಚಾರದಲ್ಲಿ ಸರ್ಕಾರ, ಬಿಬಿಎಂಪಿ ಶಾಶ್ವತ ಪರಿಹಾರ ಕಲ್ಪಿಸಿಕೊಡಲಿ. ಆ ಮೂಲಕ ಜನರು ಮಳೆಯಿಂದ ಅನುಭವಿಸುತ್ತಿರುವ ಸಂಕಷ್ಟಕ್ಕೆ ಮುಕ್ತಿ ನೀಡಲಿ ಎಂಬುದು ಎಲ್ಲರ ಆಶಯ.

WhatsApp Image 2025 07 12 at 17.38.34 e1752322718567
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X