ಅಡಕೆ ಖೇಣಿ ವ್ಯಾಪಾರ ಮಾಡುತ್ತಿದ್ದ ಹೇಮಣ್ಣ ಎಂಬುವರ ಭೀಕರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪದ ಮೇರೆಗೆ, ಶಿವಮೊಗ್ಗ ನಗರದ ರೌಡಿಶೀಟರ್ ಮಂಜನ ಕಾಲಿಗೆ ಹೊಳೆಹೊನ್ನೂರು ಠಾಣೆ ಪೊಲೀಸರು ಗುಂಡಿಕ್ಕಿ ಬಂಧಿಸಿದ ಘಟನೆ ಇಂದು ನಡೆದಿದೆ.
ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಬಡಾವಣೆ ನಿವಾಸಿಯಾದ ಮಂಜುನಾಥ್ ಯಾನೆ ಚಳಿ ಮಂಜ (41) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ವಿನೋಬನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗ ತಾಲೂಕಿನ ಹೊಳಲೂರು ಸಮೀಪ ಈತ ಅಡಗಿಕೊಂಡಿರುವ ಮಾಹಿತಿ ಪಡೆದ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ನೇತೃತ್ವದ ಹೊಳೆಹೊನ್ನೂರು ಠಾಣೆಯ ಪೊಲೀಸ್ ತಂಡ ಬಂಧನಕ್ಕೆ ತೆರಳಿದೆ.

ಪೊಲೀಸರು ಬಂಧಿಸಲು ಬಂದಿರುವ ಸುಳಿವರಿತ ಆರೋಪಿ ಮಂಜ ತಪ್ಪಿಸಿಕೊಳ್ಳಲು ಮುಂದಾಗಿ ಪೊಲೀಸ್ ಸಿಬ್ಬಂದಿ ಪ್ರಕಾಶ್ ಮೇಲೆ ಹಲ್ಲೆ ನಡೆಸಲು ಮುಂದಾದಾಗ ತಮ್ಮ ಸಿಬ್ಬಂದಿಯನ್ನು ರಕ್ಷಿಸಲು ತಕ್ಷಣವೇ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.