ಚಿಕ್ಕನಾಯಕನಹಳ್ಳಿ | ತಲ್ಲಣಗಳನ್ನು ನಿರುದ್ವಿಗ್ನತೆಯಲ್ಲಿ ದಾಖಲಿಸುವ ಬರಹಗಾರ, ಗುರುಪ್ರಸಾದ್ ; ಅಗ್ರಹಾರ ಕೃಷ್ಣಮೂರ್ತಿ

Date:

Advertisements

ತನ್ನ ಪರಂಪರೆಗಳಿಗೆ ಮತ್ತೆಮತ್ತೆ ಹಿಂದಿರುಗುವ ಬರಹಗಾರ, ಗುರುಪ್ರಸಾದ್ ; ಡಾ  ರವಿಕುಮಾರ್ ನೀಹ

ಚಿಕ್ಕನಾಯಕನಹಳ್ಳಿ ಸೋಮವಾರ (ದಿ.19.05.2025) ಬೆಳಗ್ಗೆ ಪಟ್ಟಣದ ತೀನಂಶ್ರೀ ಭವನದಲ್ಲಿ ಬರಹಗಾರ ಗುರುಪ್ರಸಾದ್ ಕಂಟ್ಲಗೆರೆಯವರ ‘ನಾಟಿ-ಹುಂಜ’ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮ ಜರುಗಿತು. ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು ಹಾಗೂ ವಿಮರ್ಶಕರೂ ಆಗಿರುವ ಡಾ ರವಿಕುಮಾರ್ ನೀಹಾ ಪುಸ್ತಕದ ಕುರಿತು ವಿಸ್ತಾರವಾಗಿ ಮಾತಾಡಿದರು. ಶ್ರೀ ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

Advertisements

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಗ್ರಹಾರ ಕೃಷ್ಣಮೂರ್ತಿ, ವಿದ್ಯಾರ್ಥಿ ದೆಸೆಯಲ್ಲಿ ಹಾಸ್ಟೆಲ್-ಬದುಕಿನ ಬೆಲೆ ಕಟ್ಟಲಾಗದ ಆಸ್ತಿಯಂತಿದ್ದ ಟ್ರಂಕು ಮತ್ತು ತಟ್ಟೆಯನ್ನು ಕುರಿತೇ ಕತೆ ರಚಿಸಿದ ಗುರುಪ್ರಸಾದ್, ಅದನ್ನೇ ಒಂದು ಅನುಭವ-ಕಥನವನ್ನಾಗಿ ಪ್ರಕಟಿಸಿದ್ದಾರೆ. ತನ್ನ ಸಮಕಾಲೀನತೆಯನ್ನು ಪರಿಗ್ರಹಿಸಿ ಕತೆ ಬರೆಯುವ ಲೇಖಕ ಗುರುಪ್ರಸಾದರು, ದಲಿತಲೋಕದಲ್ಲಿ ಬಾಲ್ಯಕಾಲದಿಂದಲೇ ದಟ್ಟವಾಗಿ ಸಿಗುವ ಬಡತನ, ಅವಮಾನಗಳ ಸಾಮಗ್ರಿಯನ್ನು ಬಳಸಿ ಸಮಕಾಲೀನ ದಲಿತ ಕಥನಗಳನ್ನು ಸೃಜಿಸುತ್ತಿದ್ದಾರೆ ಎಂದರು.

1001461332

ಯಾವುದೇ ಉದ್ವಿಗ್ನತೆಯಿಲ್ಲದೆ ನಿರುದ್ವಿಗ್ನನಾಗಿ ಬರೆಯುವ ಗುರುಪ್ರಸಾದರಲ್ಲಿ ಅಪಾರ ಭರವಸೆಯನ್ನು ಕಾಣಬಹುದು. ಅವರು ತನ್ನ ಕಾಲದ ತಲ್ಲಣಗಳನ್ನು ಯಾವುದೇ ನಿರುದ್ವಿಗ್ನತೆಯಿಲ್ಲದೆ ತಣ್ಣಗೆ ದಾಖಲಿಸುವ ಬರಹಗಾರ.‌ ದಲಿತಲೋಕದ ಸಮಕಾಲೀನ ಲೇಖಕರಲ್ಲಿ ಗುರುಪ್ರಸಾದರ ಪ್ರತಿಭೆ ಭರವಸೆದಾಯಕ…. ಎಂದು ಅವರು ಪ್ರಶಂಸಿಸಿದರು.

ತನ್ನ ನೆಲೆ ಮತ್ತು ಪರಂಪರೆಗಳಿಗೆ ಮತ್ತೆಮತ್ತೆ ಹಿಂದಿರುಗುವ ಬರಹಗಾರ ಗುರುಪ್ರಸಾದ್ ; ಡಾ ರವಿಕುಮಾರ್ ನೀಹ

ಬಹುಶಃ ಒಡಲಾಳದ ಕೋಳಿ ಕಳುವಿನಿಂದ ಶುರುವಾದ ಕನ್ನಡದ ಆಧುನಿಕ ದಲಿತ-ಸಾಹಿತ್ಯ, ಈಗ ಈ ನಾಟಿಹುಂಜದ ಬಳಿಗೆ ಬಂದು ನಿಂತಿದೆಯೇ….. ಎಂಬ ಪ್ರಶ್ನೆ ಹುಟ್ಟುತ್ತಿದೆ! ಹಾಗೆ ನೋಡಿದರೆ ಇಲ್ಲಿ, ನಾಟಿ ಎಂಬ ಪದವೇ ಸಮಂಜಸವಾದ ಪದವಲ್ಲ. ಯಾಕೆಂದರೆ, ನಾಟಿ ಅನ್ನುವಂತಹ ಪದ ಬಂದದ್ದೇ ವಸಾಹತುಶಾಹಿಯಿಂದ! ಕಲೋನಿಯಲ್-ಗ್ರಹಿಕೆಗಳು ಯಾವುದನ್ನು ನೇಟಿವ್ ಎಂದು ಬಗೆದವೋ ಅವನ್ನೇ ನಾವು ನಾಟಿ ಎಂದು ಒಪ್ಪಿ-ಸ್ವೀಕರಿಸಿ ಬಳಸಲಾರಂಭಿಸಿದ್ದು! ಹಾಗಾಗಿ,ನಾಟಿ ಮತ್ತು ಹುಂಜ ಎಂಬ ಎರಡು ಪದಗಳನ್ನು ಒಟ್ಟಿಗೇ ಸೇರಿಸಿ ಬಳಸಲು ಬರುವುದಿಲ್ಲ. ಯಾಕೆಂದರೆ, ಹುಂಜ ಎಂಬುದು ಲಿಂಗ-ಸೂಚಕ. ಆದರೆ, ಫಾರಂ ಕೋಳಿ ಹಾಗೂ ಬ್ರಾಯ್ಲರ್ ಕೋಳಿ ತಳಿಗಳಲ್ಲಿ ಹುಂಜ ಎಂಬುದಕ್ಕೆ ಆಸ್ಪದವೇ ಇಲ್ಲ! ಇನ್ನು ನಾಟಿಕೋಳಿ’ಗಳಲ್ಲಿ ಮಾತ್ರ ಹುಂಜ ಅನ್ನುವ ಪದ ಬಳಕೆಯಲ್ಲಿದೆ! ಕೇವಲ ಹುಂಜ ಎಂಬುದಿದೆ, ನಾಟಿ-ಹುಂಜ ಎಂಬ ಪದ ಅಲ್ಲೂ ಇಲ್ಲ. ಹಾಗಾಗಿ, ನಾಟಿ ಎಂಬುದಕ್ಕೇ ಒತ್ತುಕೊಟ್ಟು ನಾಟಿ-ಹುಂಜ ಎಂದು‌ ಪದ ಬಳಸುವ ಅಗತ್ಯವೇನಿರಲಿಲ್ಲ! ಹುಂಜ ಎಂಬ ಪದ ಬಳಸಿದ್ದಿದ್ದರೆ ಸಾಕಿತ್ತು. ಆದರೆ, ಸ್ಥಳೀಯ, ದೇಸೀ, ನೆಲೆ ಅನ್ನುವಂತಹ ಮಾತು ಮತ್ತು ಭಾಷೆಗಳ ಮೇಲೆ ಬೀರಿದ ಕಲೋನಿಯಲ್-ಪ್ರಭಾವಗಳು, ಹೇಗೆ ಭಾಷೆಯನ್ನೂ ದುಡಿಸಿಕೊಂಡಿವೆ. ಮತ್ತಿದರಿಂದ ಸ್ಥಳೀಯ ಸಮಾಜಗಳು ಮತ್ತು ತಳ ಸಮುದಾಯಗಳ ಮಾತು ಮತ್ತು ಭಾಷೆಯೂ ಹೇಗೆ ಇದರ ಪ್ರಭಾವಕ್ಕೊಳಗಾದವು ಎಂಬುದನ್ನೂ ಈ ‘ನಾಟಿ-ಹುಂಜ’ ಪದ ಸಂಕೇತಿಸುತ್ತದೆ! ಇಲ್ಲಿ, ವಸಾಹತು-ತಲ್ಲಣಗಳ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು, ಅದು ಬೀರಿದ ಪ್ರಭಾವಗಳಿಂದ ಚಲಾವಣೆಗೆ ಬಂದ ಪದಗುಚ್ಛಗಳನ್ನು ಪ್ರಸ್ತುತಪಡಿಸುವ ಕಾವ್ಯಪ್ರತಿಭೆಯನ್ನೂ ಇಲ್ಲಿ ತಳ್ಳಿ ಹಾಕಲಾಗದು ಎಂದು ನುಡಿದ ಡಾ ರವಿಕುಮಾರ್ ನೀಹಾ, ಶೋಧ ಮತ್ತು ವಿಮರ್ಶಕ ಸಂಶಯಗಳ ಜೊತೆಗೇ ಗುರುಪ್ರಸಾದರ ನಾಟಿ-ಹುಂಜ ಕಥಾಸಂಕಲನದ ಕುರಿತು ಮಾತು ಪ್ರಾರಂಭಿಸಿದರು.

1001461331

ತುಮಕೂರು ಭಾಗದ ಪರಿಸರದ ಒಳಗಡೆಯಿಂದ ತನ್ನ ರಚನೆಗಳನ್ನು ಹೆಕ್ಕಿಕೊಳ್ಳುತ್ತಿರುವ ಗುರುಪ್ರಸಾದ್ ಕಂಟ್ಲಗೆರೆ, ಕನ್ನಡ-ವಿವೇಕದ ಒಳವಿಸ್ತಾರದಲ್ಲಿ ಎಲ್ಲಿ ನಿಲ್ಲಬಲ್ಲರು….ಎಂಬುದನ್ನು ವಿವೇಚಿಸಲು ಯತ್ನಿಸಿದ ಡಾ ರವಿಕುಮಾರ್ ನೀಹ, ಗುರುಪ್ರಸಾದರ ಅಷ್ಟೂ ಬರಹ-ರಚನೆಗಳ ಒಟ್ಟೂ ಸಾರವನ್ನು ಬಸಿದು ಸಮಕಾಲೀನ-ಲೇಖಕನ ದಿಟ್ಟಿ-ಕಾಣ್ಕೆಯನ್ನು ಹೆಕ್ಕಿತೋರಲು ಪ್ರಯತ್ನಪಟ್ಟರು. 

ಕಪ್ಪು-ಕೋಣಗಳು ಎಂಬ ಮೊದಲ ಸಂಕಲನದ ಸಂದರ್ಭದಿಂದಲೂ ಗುರುಪ್ರಸಾದರ ಕತೆ-ಕವನಗಳನ್ನು ಗಮನಿಸುತ್ತಾ ಬರುತ್ತಿರುವ ತಾವು, ಗುರುಪ್ರಸಾದರ ಬರಹಗಳಲ್ಲಿನ ವಸಾಹತುಶಾಹಿ-ಪ್ರಶ್ನೆಗಳು ಹೇಗೆ ಮುಖ್ಯವಾದವು…. ಎಂಬುದನ್ನು ಉದ್ದಕ್ಕೂ ತಾನು ವಿವೇಚಿಸುತ್ತಾ ಬರುತ್ತಿದ್ದೇನೆ ಎಂದರು.

ಹೆಂಡ ಇದ್ದರೆ ಗಂಡಿದ್ದಂಗೆ ; ಬಾಡಿದ್ರೆ ಬಳಗಿದ್ದಂಗೆ ; ಮೀನಿದ್ರೆ ಮಿಂಡ ಇದ್ದಂಗೆ…. ಎಂದು ಬಗೆವ ಜನಪದರು ಬಾಡೇ-ಗಾಡು ಎಂಬಂತೆ ತಮ್ಮ ಆಹಾರವನ್ನು ಸಂಭ್ರಮಿಸುತ್ತಾರೆ. ತಿನ್ನುಣ್ಣುವ ಜನಪದರಲ್ಲಿರುವ ಹೆಂಡ-ಬಾಡಿನ ಈ ಸಂಸ್ಕೃತಿಯನ್ನು ಅವಮಾನದ, ಸೂತಕದ ಸ್ಥಿತಿಗೆ ತಂದಿಟ್ಟಿರುವ ಪಟ್ಟಭದ್ರ-ವ್ಯವಸ್ಥೆಯನ್ನು ಗುರುಪ್ರಸಾದರ ಕತೆಗಳು ಪ್ರಶ್ನಿಸುತ್ತವೆ. ಮತ್ತು, ಆಹಾರದ ಮೇಲಿನ ಯಾಜಮಾನ್ಯವನ್ನು ಇದಿರುಗೊಳ್ಳುತ್ತಲೇ, ಆ ಯಾಜಮಾನ್ಯದ ಒಳಗೂ ಇರುವ ಹಂತ-ಹಂತದ ಉಪ-ಯಾಜಮಾನ್ಯವನ್ನು ಬತ್ತಲುಗೊಳಿಸುತ್ತಾರೆ. ಅಂದರೆ, ತಾನು ಯಾವ ಪ್ರಾಣಿಯ ಮಾಂಸ-ಸೇವನೆ ಮಾಡುತ್ತೇನೋ ಅದರ ಆಧಾರದಲ್ಲಿ ಯಾಜಮಾನ್ಯದ ಅಂತಸ್ತು ಮತ್ತು ಹಂತ ನಿಗದಿಯಾಗುತ್ತಿರುವ ಮನೋ-ಸಾಮಾಜಿಕ ವ್ಯವಸ್ಥೆಯ ಜಾಢ್ಯವನ್ನು ಅಲುಗಾಡಿಸಲು ಇಲ್ಲಿನ ಕತೆಗಳು ಯತ್ನಿಸಿದಂತೆ ಕಾಣುತ್ತದೆ!

ಕತೆಗಳಲ್ಲಿ, ವಸ್ತು ಮತ್ತು ವಿಷಯಕ್ಕಿಂತ ಮಿಗಿಲಾಗಿ ಮನುಷ್ಯ-ವ್ಯಾಪಾರವಷ್ಟೇ ಇದ್ದರೆ ಸಾಕು’ ಎಂದು ಹೇಳಿರುವ ‘ದೇವನೂರ ಚೆಲುವ ಮಾದೇವ’ರ ನಿಲುವನ್ನು ಗುರುಪ್ರಸಾದ್ ಅನುಸರಿಸುತ್ತಿರುವಂತೆ ಕಾಣುತ್ತಿದೆ. ಇವರ ಕತೆಗಳಲ್ಲಿ ವಸ್ತುವಿಗಿಂತ ಮುಖ್ಯವಾಗಿ ಮನುಷ್ಯ-ವ್ಯಾಪಾರವೇ ಹೆಚ್ಚು’ ಎಂದು ಡಾ ರವಿಕುಮಾರ್ ನೀಹ ಅಭಿಪ್ರಾಯಪಟ್ಟರು.

1001461331 1

‘ಹೂಸು ಬಿಟ್ಟವ್ರು ಯಾರು ಎಂದರೆ ಮಾಸಿದ ಸೀರೆಯವ್ಳು’ ಎಂಬಷ್ಟು ಸಲೀಸು-ಸದರಕ್ಕೆ ಸಿಲುಕಿದ ಬಡತನ ಮತ್ತು ಅದರಿಂದ ಕ್ಷಣಕ್ಷಣಕ್ಕೂ ಇದಿರಾಗುವ ಅವಮಾನವನ್ನು ತನ್ನ ರಚನೆಗಳಲ್ಲಿ ಗುರುಪ್ರಸಾದ್ ಹಿಡಿಯಲು ಯತ್ನಿಸುತ್ತಿರುವುದು ವಿಶೇಷದ್ದಾಗಿದೆ.

ಮತ್ತೆ ಮತ್ತೆ ತನ್ನ ನೆಲೆಗಳಿಗೆ ಹಿಂತಿರುಗುವ, ತನ್ನ ಪರಂಪರೆಗಳಿಗೆ ಹಿಂತಿರುಗುವ, ತನ್ನ ಒಟ್ಟೂ ಸಂಸ್ಕೃತಿಯ ಕಡೆಗೆ ಹಿಂತಿರುಗುವ ‘ಗೂಗಿ-ವಾ-ಥಿಯಾಂಗೊ’ ವಿವೇಕದ ಮಾದರಿಯನ್ನು ಇಲ್ಲಿ ಅನುಕರಿಸಲು ಗುರುಪ್ರಸಾದ್ ಯತ್ನಿಸುತ್ತಿದ್ದಾರೆ. ಹೀಗಾಗಿ, ವಸಾಹತು ತಲ್ಲಣಗಳ ಚರ್ಚೆ, ಲಿಂಗಬೇಧ-ಜಾತಿಬೇಧವಿಲ್ಲದ ಮತ್ತು ಸಮಾನತೆ-ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಒಂದು ಆದರ್ಶ ಸಮಾಜವನ್ನು ಕಟ್ಟುವ ಐಡಿಯಲಿಸ್ಟಿಕ್ ಆಶಯ, ಮತ್ತೂ ಮುಖ್ಯವಾಗಿ ತನ್ನೆದುರಿಗಿನ ವಾಸ್ತವದ ದಂದುಗಗಳನ್ನು ಎಲ್ಲರ ಕಣ್ಣೆದುರಿಗೆ ಇಡಬೇಕು ಎನ್ನುವ ತುಡಿತವನ್ನು ಗುರುಪ್ರಸಾದರ ರಚನೆಗಳು ತೀವ್ರವಾಗಿ ಹೊರಸೂಸುತ್ತವೆ.

ಈಗಾಗಲೇ ಎಂಟು ಕೃತಿಗಳನ್ನು ಪ್ರಕಟಿಸಿರುವ ಗುರುಪ್ರಸಾದ್ ಮತ್ತು ಅವರ ಬರಹಗಳ ಕುರಿತು ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸಿಂಗದಹಳ್ಳಿ ರಾಜಕುಮಾರ್,  ದೇಶ-ಕಾಲಗಳಲ್ಲಿ ಜನಪರವಾದ ಯಾವುದೇ ಚಳವಳಿ ಅಥವಾ ಆಂದೋಲನಗಳ ಹುಟ್ಟಿಗೆ ಕಾವ್ಯ ಮತ್ತು ಸಾಹಿತ್ಯ ಮೂಲಪ್ರೇರಕ. ಕವಿ, ಸಾಹಿತಿ, ಬರಹಗಾರರು ಸಮಾಜಮುಖಿಯಾಗಿ ಚಿಂತಿಸಬಲ್ಲರು. ವಿಶೇಷವಾದ ಸಂವೇದನೆಗಳನ್ನು ಹೊಂದಿರುವ ಬರಹಗಾರರು ಸಮಾಜವನ್ನು ತಿದ್ದುವ ರಚನೆಗಳನ್ನು ಪ್ರಕಟಿಸಬೇಕು. ಮನುಷ್ಯ-ಸಮಾಜದಲ್ಲಿ ಮಾನವೀಯ ಕಾಳಜಿಗಳನ್ನು ಜಾಗೃತಗೊಳಿಸುವ ಕೆಲಸಗಳನ್ನು ಮಾಡಬೇಕು…. ಎಂದು ಹೇಳಿ ಬರಹಗಾರ ಗುರುಪ್ರಸಾದಗೆ ಅಭಿನಂದಿಸಿದರು.

ಸಾಹಿತಿ ತೀನಂಶ್ರೀ ಹಾಗೂ ಸಾ ಶಿ ಮರುಳಯ್ಯ ಮತ್ತು ರಂಗ-ಕಲಾವಿದ ಸಿ ಬಿ ಮಲ್ಲಪ್ಪನವರನ್ನು ಸ್ಮರಿಸುತ್ತಾ ಮಾತನಾಡಿದ ಹಿರಿಯ ಹೋರಾಟಗಾರ ಕುಂದೂರು ತಿಮ್ಮಯ್ಯನವರು,  ತಾಲ್ಲೂಕಿನ ಕುಗ್ರಾಮದ ಗುರುಪ್ರಸಾದ್ ಎಂಬ ಒಬ್ಬ ಹುಡುಗ ಕನ್ನಡ ಸಾಹಿತ್ಯಲೋಕದಲ್ಲಿ ಸಾಧಿಸಿರುವ ಸಾಧನೆಯಿಂದಾಗಿ, ಇವತ್ತು ಆತ ಕೇವಲ ಒಬ್ಬ ವ್ಯಕ್ತಿಯಲ್ಲ ; ಒಂದು ಶಕ್ತಿ ಎಂಬುದನ್ನು ಶ್ಲಾಘಿಸಿ ಅಭಿನಂದಿಸಿದರು. 

ನಿತ್ಯ ಹಸೀಕಸ ಮತ್ತು ಒಣಕಸವನ್ನು ವಿಂಗಡಿಸಿ ಪೌರಕಾರ್ಮಿಕರ ವಾಹನಕ್ಕೆ ಸುರಿಯುವ ತಮ್ಮ ಕೆಲಸದಲ್ಲಿ, ಗುರುಪ್ರಸಾದರ ಅಟ್ರಾಸಿಟಿ ಕತೆಯನ್ನು ಸ್ಮರಿಸುವ ತಮ್ಮ ಅಭ್ಯಾಸವನ್ನು ವಿವರಿಸಿದ ನೃತ್ಯಗಾರ್ತಿ ವಾಣಿ ತಿಪಟೂರು, ತಾವು ಗುರುಪ್ರಸಾದರ ಅಭಿಮಾನಿ ಎಂದು ನುಡಿದರು.

1001461329

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್ ಪರಶಿವಮೂರ್ತಿ ಮಾತನಾಡಿ, ಗುರುಪ್ರಸಾದ್ ಕಂಟ್ಲಗೆರೆ ತಮ್ಮ ಸಹೋದ್ಯೋಗಿ ಆಗಿರುವುದನ್ನು ನೆನಪಿಸಿ, ಅವರಲ್ಲಿರುವ ಬರೆಯುವ ಪ್ರತಿಭೆಯನ್ನು ಮನಸಾರೆ ಪ್ರಶಂಸಿಸಿದರು.

ಬರಹಗಾರ ಗುರುಪ್ರಸಾದ್ ಮಾತನಾಡಿ, ನಗರ-ನೈರ್ಮಲ್ಯ ಮತ್ತು ಸ್ವಚ್ಛತಾ ಕೆಲಸಗಳನ್ನು ಮಾಡುವ ಪೌರ-ಕಾರ್ಮಿಕರು ಕಥಾಸಂಕಲನ ಬಿಡುಗಡೆಯ ಸಮಾರಂಭದಲ್ಲಿ ಹೆಚ್ಚಿನ ಖುಷಿಪಟ್ಟರು. ಅವರ ಜೊತೆ ಗುರುತಿಸಿಕೊಳ್ಳಲು ನಾನು ತುಂಬಾ ಹೆಮ್ಮೆಪಡುತ್ತೇನೆ. ಒಬ್ಬ ಪೌರ-ಕಾರ್ಮಿಕನ ಬದುಕೂ ಮತ್ತು ನನ್ನ ಬದುಕೂ ಬೇರೆಯಲ್ಲ. ಈ ಕಥಾಸಂಕಲನದಲ್ಲಿ ಪೌರ-ಕಾರ್ಮಿಕರ ಬದುಕಿನ ಬಹುಮುಖ್ಯ ಅಂಶಗಳನ್ನು ಮುಂದಿಡುವಂತಹ ಕಥೆಗಳೂ ಇವೆ. ಅವರ ಬದುಕು-ಬವಣೆಗಳು ಕತೆಯ ಒಳಗಿವೆ. ಹಿರಿಯರು,ಬಂಧುಗಳು, ಸ್ನೇಹಿತರು ಮತ್ತು ನಮ್ಮೂರಿನ ಜನ ಹಾಗೂ ನನ್ನ ಕುಟುಂಬದದವರನ್ನು ನಾನು ಈ ಸಂದರ್ಭದಲ್ಲಿ ನೆನೆಯುತ್ತೇನೆ ಎಂದರು.

ಶ್ರೀ ಮೃತ್ಯುಂಜಯ ದೇಶೀಕೇಂದ್ರ ಸ್ವಾಮಿಗಳು ಹಾಗೂ ಬಿಇಓ ಕಾಂತರಾಜು ಬರಹಗಾರ ಗುರುಪ್ರಸಾದರನ್ನು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಅಗ್ರಹಾರ ಕೃಷ್ಣಮೂರ್ತಿ, ಡಾ ರವಿಕುಮಾರ್ ನೀಹ, ಮನು ಚಕ್ರವರ್ತಿ, ಕುಂದೂರು ತಿಮ್ಮಯ್ಯ, ಸಿಂಗದಹಳ್ಳಿ ರಾಜಕುಮಾರ್, ಬಿಇಓ ಕಾಂತರಾಜು, ಆರ್ ಪರಶಿವಮೂರ್ತಿ, ಸಿ ಜಿ ಗವಿರಂಗಯ್ಯ, ಶ್ರೀಧರಮೂರ್ತಿ, ವಾಣಿ ತಿಪಟೂರು, ಕುಂದೂರು ಮುರಳಿ, ರಮೇಶ್ ಯರೇಕಟ್ಟೆ, ಭೀಮಬಂಧು ಪ್ರವೀಣ್, ಡ್ಯಾಗೇರಹಳ್ಳಿ ವಿರೂಪಾಕ್ಷ, ಕಂಟ್ಲಗೆರೆ ರಂಗಸ್ವಾಮಿ, ಗುರುಪ್ರಸಾದ್ ಕಂಟ್ಲಗೆರೆ, ಕೃಷ್ಣಮೂರ್ತಿ ಬಿಳಿಗೆರೆ, ಬಾಳೆಕಾಯಿ ಶಿವನಂಜಯ್ಯ, ರಘು ಬಿಳಿಗೆರೆ ಮತ್ತಿತರರು ಉಪಸ್ಥಿತರಿದ್ದರು.

ವರದಿ – ಸಂಚಲನ ಚಿಕ್ಕನಾಯಕನ ಸೀಮೆಯಿಂದ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X