ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಬೆಂಗಳೂರಿನ ಜೊತೆಗೆ ಕರಾವಳಿ ಜಿಲ್ಲೆಗಳೂ ನಲುಗಿ ಹೋಗಿವೆ. ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 200 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲೂ ಸುಮಾರು 150 ಮಿ.ಮೀ. ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಇನ್ನೂ ನಾಲ್ಕೈದು ದಿನಗಳ ಕಾಲ ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು, ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ರಾಯಚೂರು ಜಿಲ್ಲೆಯ ಓರ್ವ ಮತ್ತು ಬೆಂಗಳೂರಿನಲ್ಲಿ ಮೂವರು ಸೇರಿ ಒಟ್ಟು ನಾಲ್ವರು ಮಳೆಗೆ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಮನೆಗೆ ನುಗ್ಗಿದ್ದ ಮಳೆ ನೀರನ್ನು ಹೊರ ಹಾಕಲು ಹೋಗಿ ವಿದ್ಯುತ್ ಶಾಕ್‌ನಿಂದ ನೆರೆಹೊರೆಯ ಇಬ್ಬರು ಸಾವನ್ನಪ್ಪಿದ್ದಾರೆ, ಗೋಡೆ ಕುಸಿದು ಓರ್ವ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯ ಬಳಿಯ ಬಿ.ಆರ್. ಗುಂಡ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಬಾಲಕ ಹನುಮಗೌಡ ನಾಯಕ (16) ಸಾವನ್ನಪ್ಪಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ವಿರಾಜಪೇಟೆ, ಮಡಿಗೇರಿ ತಾಲೂಕುಗಳು ತೋಯ್ದು ಹೋಗಿವೆ. ಪ್ರವಾಹದಂತೆ ಮಳೆ ನೀರು ಹರಿಯುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಮೈಸೂರು ನಗರದಲ್ಲೂ ಮಳೆ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಹಾಸನ ಜಿಲ್ಲೆಯಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ಸಕಲೇಶಪುರ, ಆಲೂರು, ಹಾಸನ, ಹೊಳೆನರಸೀಪುರ ಹಾಗೂ ಚನ್ನರಾಯಪಟ್ಟಣ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿಯಲ್ಲಿ ಎರಡು ಮನೆಗಳು ಕುಸಿದಿವೆ. ನುಗ್ಗೇಹಳ್ಳಿ, ಬಾಗೂರು ಹೋಬಳಿಯಲ್ಲಿಯೂ ಹೆಚ್ಚು ಮಳೆಯಾಗಿದೆ.
ತುಮಕೂರು ಜಿಲ್ಲೆಯ ವಿವಿಧ ಕಡೆ ಉತ್ತಮ ಮಳೆಯಾಗಿದೆ. ತುಮಕೂರಿನ ಮುದ್ದರಾಮಯ್ಯನ ಪಾಳ್ಯದಲ್ಲಿ ರಂಗಮಣಿ ಎಂಬುವರಿಗೆ ಸೇರಿದ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜಿಲ್ಲೆಯಾದ್ಯಂತ ಕೃಷಿ ಕೆಲಸಗಳು ಚುರುಕುಗೊಂಡಿವೆ. ಬಿತ್ತನೆ ಕಾರ್ಯಗಳು ನಡೆಯುತ್ತಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು, ಮುಳ್ಳಯ್ಯನಗಿರಿ, ಬಾಬಾಬಡುನ್‌ಗಿರಿ, ಅತ್ತಿಗುಂಡಿ, ಕೆಮ್ಮಣ್ಣುಗುಂಡಿ, ಕಡೂರು, ತರೀಕೆರೆ, ಕುದುರೆಮುಖ, ಕಳಸ, ಶೃಂಗೇರಿ, ಕೆರೆಕಟ್ಟೆ, ಬಾಳೆಹೊನ್ನೂರು, ಜಯಪುರ, ಕೊಪ್ಪ, ಕೊಟ್ಟಿಗೆಹಾರ, ಬಣಕಲ್, ಮೂಡಿಗೆರೆ, ಆಲ್ದೂರು, ಎನ್.ಆರ್ ಪುರ, ಲಿಂಗದಹಳ್ಳಿಯಲ್ಲಿ ಭಾರೀ ಮಳೆಯಾಗಿದೆ. ಬಾಳೆಹೊನ್ನೂರು ಪ್ರದೇಶದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಜಿಲ್ಲೆಯಲ್ಲಿ ಮಳೆ ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳು ತಮ್ಮ ಕೆಲಸದ ಕೇಂದ್ರ ಸ್ಥಾನ ತೊರೆಯದಂತೆ ಸೂಚನೆ ನೀಡಲಾಗಿದೆ. ಭೂಕುಸಿತ, ಪ್ರವಾಹ ರೀತಿಯ ಸಂದರ್ಭ ಬಂದರೆ ತ್ವರಿತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ರಕ್ಷಣಾ ತಂಡಗಳನ್ನು ಸನ್ನದ್ಧವಾಗಿರುವಂತೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಮಳೆ ಅನಾಹುತಗಳು ಸಂಭವಿಸಿದರೆ ಕೂಡಲೇ ಅಧಿಕಾರಿಗಳನ್ನು ಸಂಪರ್ಕಿಸಲು ಸಹಾಯವಾಣಿಗಳನ್ನು ತೆರೆಯಲಾಗಿದೆ. ಸಿಡಿಲು ಬಡಿಯುವ ಸಾಧ್ಯತೆಗಳಿದ್ದು, ರೈತರು ಕೃಷಿ ಚಟುವಟಿಕೆಗಳಿಗೆ ತೆರಳಬಾರದು, ಮಕ್ಕಳು ಮತ್ತು ಕಾರ್ಮಿಕರು ಬಯಲಿನಲ್ಲಿನ ಕೆಲಸಗಳಿಗೆ ಹೋಗಬಾರದು, ನಿವಾಸಿಗಳು ಸಾಧ್ಯವಾದಷ್ಟೂ ತಮ್ಮ ಮನೆಗಳು ಅಥವಾ ಸೂಕ್ತ ಕಟ್ಟಡಗಳಲ್ಲಿಯೂ ಇರಬೇಕು ಎಂದು ಸೂಚಿಸಲಾಗಿದೆ.
ಈ ವರದಿ ಓದಿದ್ದೀರಾ?: ಗುಲಬರ್ಗಾ ವಿವಿ ಕರ್ಮಕಾಂಡ-3: ಮೂರು ವರ್ಷಗಳಿಂದ 9,024 ಫಲಿತಾಂಶ ಪೆಂಡಿಂಗ್!
ವಿಜಯನಗರ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ಕಾಂಗ್ರೆಸ್ ಸರ್ಕಾರದ 2 ವರ್ಷದ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾಗಿದೆ. ಆದಾಗ್ಯೂ, ಮಂಗಳವಾರ ಬೆಳಗ್ಗೆಯಿಂದ ಮಳೆ ಕೊಂಚ ಕಡಿಮೆಯಾಗಿದೆ. ಮಳೆಯ ವಾತಾವರಣದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್ ಬಳಸದೆ, ಕಾರಿನಲ್ಲಿಯೇ ಗಂಗಾವತಿಗೆ ತೆರಳಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದೆ. ಶ್ರೀಸಾಯಿ ಲೇಔಟ್, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ಆನೇಕಲ್ ತಾಲೂಕಿನಲ್ಲಿ ರಸ್ತೆಗಳಲ್ಲಿ ಎರಡು ಅಡಿಯಷ್ಟು ನೀರು ಹರಿಯುತ್ತಿದ್ದ ಕಾರಣ, ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸುಮಾರು ನಾಲ್ಕು ಕಿ.ಲೋ ಮೀಟರ್‌ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಳೆ ಅಬ್ಬರದ ನಡುವೆಯೂ ಜನರು ತಮ್ಮ ವಾಹನಗಳಲ್ಲಿ ರಸ್ತೆಯಲ್ಲಿಯೇ ನಿಂತು ರೋಧನೆ ಅನುಭವಿಸಿದ್ದಾರೆ. ಮಳೆ ನೀರು ನಿರ್ವಹಣೆಯ ವೈಫಲ್ಯದ ಕಾರಣಕ್ಕಾಗಿ ಅಧಿಕಾರಿಗಳಿಗೆ ವಾಹನ ಸವಾರರೊಬ್ಬರು ಶಾಪ ಹಾಕುತ್ತಿರುವ ವಿಡಿಯೋವೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರತಿ ವರ್ಷವೂ ಮಳೆಗಾಲದಲ್ಲಿ ಬೆಂಗಳೂರು ಕೆರೆ, ನದಿ ಹಾಗೂ ಸಮುದ್ರದಂತಾಗುತ್ತದೆ. ಆದರೂ, ಸರ್ಕಾರವಾಗಲೀ, ಬಿಬಿಎಂಪಿಯಾಗಲೀ ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಿಸುತ್ತಿವೆ. ಹೀಗಾಗಿಯೇ, ಪ್ರತಿ ವರ್ಷವೂ ಜನರು ಪರದಾಡುವಂತಾಗಿದೆ ಎಂದು ಬೆಂಗಳೂರಿಗರು ಆರೋಪಿಸಿದ್ದಾರೆ.
ಮಳೆಗಾಲ ಆರಂಭಕ್ಕೂ ಮುನ್ನ ಏಪ್ರಿಲ್ ಅಂತ್ಯದ ವೇಳೆಗೆ ಒಳಚರಂಡಿ, ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ, ದುರಸ್ತಿ ಮಾಡಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಅಗತ್ಯ ಕೆಲಸಗಳನ್ನು ಮುಗಿಸಬೇಕು. ಆ ಮೂಲಕ, ಮಳೆಗಾಲವನ್ನು ಎದುರಿಸಲು ಸಜ್ಜಾಗಬೇಕು. ಆದರೆ, ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿಗಳು ಮಳೆ ಆರಂಭವಾದ ಬಳಿಕ ಸ್ವಚ್ಛತಾ ಕಾಮಗಾರಿಗಳನ್ನು ಆರಂಭಿಸುತ್ತವೆ. ರಸ್ತೆಗಳನ್ನು ಅಗೆಯುತ್ತವೆ. ಇದರಿಂದಾಗಿ, ನಗರದಲ್ಲಿ ಮಳೆಯಿಂದ ಇನ್ನಷ್ಟು-ಮತ್ತಷ್ಟು ಸಮಸ್ಯೆಗಳು ತಲೆದೋರುತ್ತಿವೆ ಎಂದು ಬೆಂಗಳೂರು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.