ಎರಡು ವರ್ಷ ಪೂರೈಸಿದ ಸನ್ಮಾನ್ಯ ಸಿದ್ದರಾಮಯ್ಯ ಸರ್ಕಾರವನ್ನು ಅಭಿನಂದಿಸುತ್ತಲೇ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಸರ್ಕಾರವನ್ನು ಆಗ್ರಹಿಸಿದೆ.
“ಸನ್ಮಾನ್ಯ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಎರಡು ವರ್ಷಗಳನ್ನು ಪೂರೈಸಿದ ಈ ಸಂದರ್ಭದಲ್ಲಿ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಸರ್ಕಾರವನ್ನು ಅಭಿನಂದಿಸುತ್ತದೆ. ಕಳೆದ ಎರಡು ವರ್ಷಗಳಲ್ಲಿ, ಗ್ಯಾರಂಟಿ ಯೋಜನೆಗಳ ಮೂಲಕ ಬಡ ಜನರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಲು ಕೈಗೊಂಡ ಕ್ರಮಗಳನ್ನು ಪಾಫ್ರೆ ತುಂಬು ಹೃದಯದಿಂದ ಅಭಿನಂದಿಸುತ್ತದೆ. ಆದರೆ, ಇದೇ ಸಂದರ್ಭದಲ್ಲಿ, ಧೀರ್ಘಕಾಲಾವಧಿಗೆ ಜನರ ಜೀವನಕ್ಕೆ ಭದ್ರ ಬುನಾದಿಯಾಗಬಲ್ಲ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಕಳೆದ ಎರಡು ವರ್ಷಗಳಲ್ಲಿ ಕೈಗೊಂಡ ಕಾರ್ಯಕ್ರಮಗಳು ನಿರೀಕ್ಷಿತ ರೀತಿಯಲ್ಲಿರಲಿಲ್ಲವೆಂಬ ಅಂಶವನ್ನು ಈ ಸಂದರ್ಭದಲ್ಲಿ ದಾಖಲಿಸಲು ಪಾಫ್ರೆ ಬಯಸುತ್ತದೆ. ಜೊತೆಗೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಾಯಕತ್ವ ಮತ್ತಷ್ಟು ಕ್ರಿಯಾಶೀಲವಾಗಬೇಕು” ಎಂದು ಅಭಿಪ್ರಾಯಪಟ್ಟಿದೆ.
ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಮೂಲಕ ಪ್ರತಿಯೊಂದು ಶಾಲೆಯನ್ನು ನೆರೆಹೊರೆಯ ಸಮಾನ ಶಾಲೆಯನ್ನಾಗಿ ಪರಿವರ್ತಿಸಿ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸದೆ ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲವೆಂಬ ತನ್ನ ನಿಲುವನ್ನು ಪಾಫ್ರೆ ಮತ್ತೊಮ್ಮೆ ಪುನರುಚ್ಛರಿಸಿದೆ. ಈ ಸಂದರ್ಭದಲ್ಲಿ, ಈ ಹಿಂದೆ ಕಾಂಗ್ರೆಸ್ ಪಕ್ಷವು 2024ರ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಶಿಕ್ಷಣದ ಬಗ್ಗೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ, “ಶಿಕ್ಷಣವು ಸಾರ್ವಜನಿಕ ಒಳಿತಿನಿಂದ ಮತ್ತು ಹಿತದೃಷ್ಟಿಯಿಂದ ಕೂಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಉಚಿತ, ಗುಣಮಟ್ಟದ ಶಿಕ್ಷಣದ ಹಕ್ಕಿದೆ. ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಪ್ರಧಾನವಾಗಿ ಸಾರ್ವಜನಿಕ ಸಂಪನ್ಮೂಲಗಳ ನಿಧಿಯನ್ನು ಪಡೆಯುವ ಸಾರ್ವಜನಿಕ ಸಂಸ್ಥೆಗಳಾಗಿರಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಪೂರಕ ಪಾತ್ರವನ್ನು ವಹಿಸುತ್ತವೆ ಎಂದು ನಾವು ಗುರುತಿಸುತ್ತೇವೆ” ಎಂಬ ಹೇಳಿಕೆಯನ್ನು ಪಾಫ್ರೆ ಸ್ಮರಿಸಿದೆ (ಪುಟ 02-ಕಾಂಗ್ರೆಸ್ ಪ್ರಣಾಳಿಕೆ- ಪಾರ್ಲಿಮೆಂಟರಿ ಚುನಾವಣೆ-2024). (EDUCATION-Education is a public good and every student has the right to free, quality education provided by the state. Schools, colleges and universities should be predominantly public institutions funded by public resources. We recognise that private educational institutions play an important supplementary role)
ಈ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಪರಿಣಾಮಕಾರಿ ಕ್ರಮಗಳನ್ನು ವಹಿಸಬೇಕೆಂದು ಮತ್ತು ಶಿಕ್ಷಣ ಇಲಾಖೆಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಬೇಕೆಂದು ಆಗ್ರಹಿಸಿದೆ.
- ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿಸ್ತೃತ ಸಂಶೋಧನೆಯ ಮೂಲಕ 2017ರಲ್ಲಿ ಸಲ್ಲಿಸಿದ್ದ “ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯನ್ನು” ವಿಧಾನ ಸಭಾ ಅಧಿವೇಶನದಲ್ಲಿ ಚರ್ಚಿಸಿ ಅಂಗೀಕರಿಸಿ ಪೂರ್ಣವಾಗಿ ಜಾರಿಗೊಳಿಸಬೇಕು.
- ಶಿಕ್ಷಣ ಮೂಲಭೂತ ಹಕ್ಕಾಗಿ ಸಂವಿಧಾನದಲ್ಲಿ ಸೇರಿ 23 ವರ್ಷಗಳು ಮತ್ತು ಈ ಮೂಲಭೂತ ಹಕ್ಕನ್ನು ಸಾಕಾರಗೊಳಿಸಲು ಕಾಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರವು ರೂಪಿಸಿ ಜಾರಿಗೊಳಿಸಿದ ಶಿಕ್ಷಣ ಹಕ್ಕು ಕಾಯಿದೆ 2009 ಜಾರಿಗೆ ಬಂದು ಸುಮಾರು 15 ವರ್ಷಗಳು ತುಂಬಿದೆ. ಆದರೆ, ನಾವು ಈವರೆಗೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಮೂಲಭೂತ ಸೌಕರ್ಯಗಳಾದ ಖಾಯಂ ಶಿಕ್ಷಕರು, ಕಲಿಕಾ ಕೊಠಡಿ, ಅಗತ್ಯ ಪಾಠೋಪಕರಣ, ಪೀಠೋಪಕರಣ, ಕ್ರೀಡಾ ಸಾಮಗ್ರಿ, ಕುಡಿಯುವ ನೀರು, ಶೌಚಾಲಯ, ಇತ್ಯಾದಿಗಳನ್ನು ಸಮರ್ಪಕವಾಗಿ ಒದಗಿಸಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಆರ್ ಟಿ ಇ ಅನುಪಾಲನೆ ಕೇವಲ ಶೇಕಡ 26.3. ಅಂದರೆ, 100 ಶಾಲೆಗಳಲ್ಲಿ ಕೇವಲ 23 ಶಾಲೆಗಳು ಈ ಎಲ್ಲಾ ಸೌಲಭ್ಯಗಳನ್ನು ಹೊಂದಿವೆ. ಈ ಕಾರಣದಿಂದ , ಶಿಕ್ಷಣ ಹಕ್ಕು ಕಾಯಿದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂದಿನ ಮೂರು ವರ್ಷಕ್ಕೆ ಒಂದು ಕ್ರಿಯಾ ಯೋಜನೆ ರೂಪಿಸಬೇಕು
- ಕರ್ನಾಟಕ ಅಭಿವೃದ್ಧಿ ಮಾದರಿಯ ಭಾಗವಾಗಿ ಮತ್ತು ಸಾಮಾಜಿಕ ನ್ಯಾಯದ ಆಶಯವನ್ನು ವಿಸ್ತರಿಸಲು ʼಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ವಿಸ್ತರಿಸಲು ಶಿಕ್ಷಣ ಹಕ್ಕು ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಲು, ರಾಜ್ಯದಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು 18 ವರ್ಷದವರೆಗೆ ನಿಷೇಧಿಸಲು ಮತ್ತು ಸಂವಿಧಾನದ ವಿಧಿ 45ರ ಆಶಯದಂತೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸಲು ಅಗತ್ಯ ಸೌಕರ್ಯಕ್ಕೆ ಮತ್ತು ನರ್ಸರಿ ಶಿಕ್ಷಕರ ತರಬೇತಿಗೆ / ನೇಮಕಾತಿಗೆ ವಿಶೇಷ ಕ್ರಮಗಳನ್ನು ವಹಿಸಬೇಕು.
- ಮುಂದಿನ ಮೂರು ವರ್ಷಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಸುಮಾರು 49,338 ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಸುಮಾರು 11,796 ಶಿಕ್ಷಕರ ಹುದ್ದೆಗಳನ್ನು ಖಾಯಂ ಆಗಿ ತುಂಬಲು ಕಾಲಮಿತಿ ಯೋಜನೆಯನ್ನು ರೂಪಿಸಬೇಕು.
- ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ಬಡವರ ಹಾಗು ದಮನಿತರ ಪರವಾಗಿ ಕೆಲಸ ನಿರ್ವಹಿಸುವ ಭರವಸೆಯನ್ನು ಹೊಂದಿರುವ ರಾಜ್ಯ ಸರ್ಕಾರ ಬಡ ಜನರ ಮೂಲ ಆಶಯವಾಗಿರುವ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ಭಾಗವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿ ಅದನ್ನು ಗಟ್ಟಿಗೊಳಿಸಲು ಸಂಪನ್ಮೂಲಗಳು ಸೇರಿದಂತೆ ಎಲ್ಲಾ ಬಗೆಯ ಕ್ರಮ ವಹಿಸಬೇಕು.