ರಾಮನಗರ ಜಿಲ್ಲೆಯ ಬಿಡದಿ ಬಳಿಯ ಭದ್ರಾಪುರದಲ್ಲಿ ಅಪ್ರಾಪ್ತ ಬಾಲಕಿಯದ್ದು ಕೊಲೆಯಲ್ಲ, ಬದಲಿಗೆ ರೈಲು ಅಪಘಾತವಾಗಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ ಗೌಡ ಅವರು ಹೇಳಿದ್ದಾರೆ. 15 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯಾಗಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆಯಲ್ಲ ಅಪಘಾತ ಎಂದು ತಿಳಿದುಬಂದಿದೆ ಎಂದು ವರದಿಯಾಗಿದೆ.
ಸೋಮವಾರ ಮರಣೋತ್ತರ ಪರೀಕ್ಷೆಯ ವರದಿ ಸಿಕ್ಕಿದೆ. ಜೊತೆಗೆ ರೈಲು ಅಪಘಾತದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯು ವಾಟ್ಸಾಪ್ ಮೂಲಕ ಹರಿದಾಡಿದೆ. ಪೊಲೀಸರು ಈ ವಿಡಿಯೋ ಅಸಲಿ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಡದಿ | ಮೂಕ ಬಾಲಕಿ ಅಪಹರಿಸಿ ಕೊಲೆ, ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಸಂಸ್ಕಾರ
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ ಗೌಡ, “ಬಾಲಕಿಯ ಮರಣೋತ್ತರ ಪರೀಕ್ಷೆ ವರದಿ ಮತ್ತು ಎಫ್‌ಎಸ್‌ಎಲ್ ವರದಿ ಸಿಕ್ಕಿದೆ. ಎಲ್ಲಾ ಆಯಾಮಗಳಿಂದ ಈ ಪ್ರಕರಣದ ತನಿಖೆ ನಡೆಸಲಾಗಿದೆ. ಈ ಪ್ರಕರಣದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು” ಎಂದು ಹೇಳಿದರು.
“ಎಫ್‌ಎಸ್‌ಎಲ್ ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ತಲೆಗೆ ಏಟಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ ತನಿಖೆಯಲ್ಲಿ ರೈಲ್ವೆ ಇನ್ಸ್‌ಟಿಟ್ಯೂಟ್ ಕ್ಯಾಮೆರಾ ವಿಡಿಯೋ ಲಭಿಸಿದೆ. ಎರಡು ಸಿಸಿ ಕ್ಯಾಮೆರಾದಲ್ಲಿ ಬಾಲಕಿಯ ಚಲನವಲನದ ಪರಿಶೀಲಿಸಿದ್ದೇವೆ. ರೈಲ್ವೆ ಅಪಘಾತದಿಂದ ಬಾಲಕಿ ಮೃತಪಟ್ಟಿರುವುದು ಖಚಿತವಾಗಿದೆ” ಎಂದು ಹೇಳಿದರು.
ರಾಮನಗರ ಜಿಲ್ಲೆ ಬಿಡದಿಯಲ್ಲಿ ಮಾತು ಬಾರದ ಮತ್ತು ಕಿವಿ ಕೇಳದ ಬಾಲಕಿಯು ಶವವಾಗಿ ಪತ್ತೆಯಾಗಿದ್ದಳು. “ತಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ಹಂತಕರನ್ನು ಪೊಲೀಸರು ಬಂಧಿಸುವವರೆಗೆ ಆಕೆಯ ಶವಸಂಸ್ಕಾರ ಮಾಡುವುದಿಲ್ಲ” ಎಂದು ಹೇಳಿ ಪೋಷಕರು ಹೇಳಿದ್ದರು.
ಇದಾದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅದಾದ ಬಳಿಕ ಕೊನೆಗೆ ಅಧಿಕಾರಿಗಳು ಪಾಲಕರ ಮನವೊಲಿಸಿದ್ದು, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಥಳಕ್ಕೆ ಧಾವಿಸಿದ ನಂತರ ಸ್ಥಳೀಯ ಸ್ಮಶಾನದಲ್ಲಿ ಬಾಲಕಿಯ ಅಂತ್ಯಸಂಸ್ಕಾರ ನಡೆದಿದೆ.
