ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ (ಎಲ್ಎಡಿ) ನಿಧಿಯಡಿ ದೆಹಲಿಯಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ನೀಡಲಾಗುತ್ತಿದ್ದ ಮೊತ್ತವನ್ನು ವಾರ್ಷಿಕ 15 ಕೋಟಿ ರೂ.ನಿಂದ 5 ಕೋಟಿ ರೂ.ಗೆ ದೆಹಲಿ ಬಿಜೆಪಿ ಸರ್ಕಾರ ಇಳಿಸಿದೆ.
2024ರ ಅಕ್ಟೋಬರ್ನಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿಯನ್ನು ಹೀನಾಯವಾಗಿ ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ, ದೆಹಲಿಯಲ್ಲಿ ನಾನಾ ಬದಲಾವಣೆಗಳಾಗುತ್ತಿವೆ. ಖಾಸಗಿ ಶಾಲೆಗಳ ಶಿಕ್ಷಣ ಶುಲ್ಕ ಹಾವಳಿ ಮತ್ತೆ ಹೆಚ್ಚಾಗಿದೆ. ಜನಪರ ಯೋಜನೆಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳಿವೆ.
ಈ ನಡುವೆಯೇ, ಎಲ್ಡಿಎ ನಿಧಿಯಡಿ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಶಾಸಕರಿಗಾಗಿ ನೀಡಲಾಗುವ ಅನುದಾನದಲ್ಲಿ ಬರೋಬ್ಬರಿ ತಲಾ 10 ಕೋಟಿ ರೂ. ಕಡಿತಗೊಳಿಸಲಾಗಿದೆ. 15 ಕೋಟಿ ರೂ.ನಿಂದ 5 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 2ರಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಅನುದಾನ ಕಡಿತಗೊಳಿಸಿ ದೆಹಲಿ ನಗರಾಭಿವೃದ್ಧಿ ಇಲಾಖೆಯು ಆದೇಶ ಹೊರಡಿಸಿದೆ.
ದೆಹಲಿಯಲ್ಲಿನ 70 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಎಲ್ಎಡಿ ಅಡಿಯಲ್ಲಿ ವಾರ್ಷಿಕ 350 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಹಿಂದೆ, ಎಎಪಿ ಸರ್ಕಾರದಲ್ಲಿ ಎಲ್ಎಡಿ ನಿಧಿಯಲ್ಲಿ ವಾರ್ಷಿಕ 1,050 ಕೋಟಿ ರೂ. ಮೀಸಲಿಡಲಾಗುತ್ತಿತ್ತು.