ವಿಚಾರ ಹಂಚಿದರೆ ವಿಚಾರಣೆ, ಜೈಲು; ಇದು ನವಭಾರತದ ನವ ನಿಯಮವೆ?

Date:

Advertisements
ಇಂದಿನ ರಾಜಕೀಯ ವಾತಾವರಣದಲ್ಲಿ ಯಾರಾದರೂ ಆಡಳಿತಾರೂಢ ಪಕ್ಷವನ್ನು ಟೀಕಿಸಿದರೆ, ಅವರನ್ನು ಕೂಡಲೇ "ದೇಶದ್ರೋಹಿ", "ಸಾಮಾಜಿಕ ಶತ್ರು" ಅಥವಾ "ರಾಷ್ಟ್ರವಿರೋಧಿ" ಎಂದು ಹಣೆಪಟ್ಟಿ ಕಟ್ಟಿ ಜೈಲಿಗಟ್ಟುವುದು ಸಾಮಾನ್ಯವಾಗಿದೆ. 

ದೇಶದ ಭದ್ರತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ನಡುವೆ ಗಡುಸಾಗಿ ನಿಂತಿರುವ ಒಂದು ವಿಚಾರ ಕಳೆದ ಕೆಲ ದಿನಗಳಿಂದ ಹೆಚ್ಚು ಗಮನ ಸೆಳೆಯುತ್ತಿದೆ. ಅದು- ದೆಹಲಿಯ ಅಶೋಕ ವಿಶ್ವವಿದ್ಯಾಲಯದ ರಾಜಕೀಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಅಲಿ ಖಾನ್ ಮಹ್ಮದಾಬಾದ್ ಅವರ ಬಂಧನ.

ʼಆಪರೇಷನ್ ಸಿಂಧೂರʼ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಪ್ರಸ್ತಾಪಿಸಿದ್ದಕ್ಕಾಗಿ, ಭಾರತೀಯ ನ್ಯಾಯ ಸಂಹಿತೆಯ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವುದು, ದೇಶದ್ರೋಹ ಸೇರಿದಂತೆ ತೀವ್ರ ಆರೋಪಗಳಡಿಯಲ್ಲಿ ಮೇ 18ರಂದು ಹರಿಯಾಣದ ಸೋನಿಪತ್ ಪೊಲೀಸರು ಅಲಿ ಖಾನ್‌ ಅವರನ್ನು ಬಂಧಿಸಿದ್ದಾರೆ. ಇದು ಕೇವಲ ಒಂದು ಪೋಸ್ಟ್‌ನ ಪರಿಣಾಮವೇ? ಎನ್ನುವ ಪ್ರಶ್ನೆಯನ್ನು ಪರಾಮರ್ಶಿಸಬೇಕಿದೆ.

ಹರಿಯಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಹಾಗೂ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯೋಗೇಶ್‌ ಜಥೇರಿ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರೊಫೆಸರ್‌ ವಿರುದ್ಧ ಪ್ರತ್ಯೇಕ ಎರಡು ಎಫ್‌ಐಆರ್‌ ದಾಖಲಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಅವರ ಬಂಧನಕ್ಕೆ ಕಾರಣವಾಗಿದ್ದು, ಅವರ ಫೇಸ್‌ಬುಕ್‌ ಪೋಸ್ಟ್‌ಗಳು. ಇವುಗಳಲ್ಲಿ ಸೇನೆಯ ಮಹಿಳಾ ಯೋಧರ ಕುರಿತು ಮಾಡಿದ ಟಿಪ್ಪಣಿಗಳು ಮತ್ತು ʼಆಪರೇಷನ್‌ ಸಿಂಧೂರʼ ಕಾರ್ಯಾಚರಣೆಯ ಸ್ವರೂಪದ ಬಗೆಗಿನ ಸ್ವ-ಸಮಾಲೋಚನೆ ಸೇರಿವೆ.

Advertisements

ಖಾನ್‌ ಅವರ ಪೋಸ್ಟ್‌, “ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಸೇರಿದಂತೆ ಸಮವಸ್ತ್ರದಲ್ಲಿರುವ ಮಹಿಳೆಯರನ್ನು ಅವಹೇಳನ ಮಾಡುವುದು, ವೃತ್ತಿಪರ ಅಧಿಕಾರಿಗಳ ಪಾತ್ರಗಳನ್ನು ದುರ್ಬಲಗೊಳಿಸುವುದು ಮತ್ತು ʼಜನಾಂಗೀಯ ಹತ್ಯೆʼ, ʼಅಮಾನವೀಯತೆʼ ಮತ್ತು ʼಬೂಟಾಟಿಕೆʼಯನ್ನು ಪದೇ ಪದೇ ಉಲ್ಲೇಖಿಸಿ ಭಾರತ ಸರ್ಕಾರವನ್ನು ದುರುದ್ದೇಶಪೂರಿತವಾಗಿ ಆರೋಪಿಸುವ ಮೂಲಕ ಸತ್ಯಗಳನ್ನು ತಪ್ಪಾಗಿ ನಿರೂಪಿಸಿದೆ” ಎಂದು ಮಹಿಳಾ ಆಯೋಗ ಪ್ರೊಫೆಸರ್‌ಗೆ ನೀಡಿದ್ದ ತನ್ನ ಸಮನ್ಸ್‌ನಲ್ಲಿ ಉಲ್ಲೇಖಿಸಿತ್ತು.

ಅಸಲಿಗೆ ಡಾ. ಅಲಿ ಖಾನ್‌ ಅವರ ಪೋಸ್ಟ್‌ನಲ್ಲೇನಿತ್ತು? (ಕನ್ನಡ ಅನುವಾದ)

“ಭಾರತವು ಪಾಕಿಸ್ತಾನಕ್ಕೆ ಸಂಬಂಧಿಸಿದ ತನ್ನ ತಂತ್ರವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ಈಗ ಪಾಕಿಸ್ತಾನ ಮೂಲದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆ ನೀಡಿ, ಭಯೋತ್ಪಾದಕರಿಗೆ ಮಾತ್ರವಲ್ಲ, ಪಾಕಿಸ್ತಾನದ ಸೇನೆಗೂ ಹೊಣೆಗಾರಿಕೆ ಒಪ್ಪಿಸಲಾಗಿದೆ. ಕಾರಣ, ಪಾಕಿಸ್ತಾನ ಸೇನೆ ಹಲವು ವರ್ಷಗಳಿಂದ ಭಯೋತ್ಪಾದಕರನ್ನು ಬಳಸಿಕೊಂಡು ದ್ವೇಷ ಹುಟ್ಟಿಸುತ್ತಾ ಬಂದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾವೇ ಬಲಿಪಶು ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದೆ.

ʼಆಪರೇಷನ್ ಸಿಂಧೂರ್ʼ ಇಡೀ ಭಾರತ–ಪಾಕಿಸ್ತಾನ ಸಂಬಂಧದ ಪರಿಭಾಷೆಗೂ ಹೊಸ ಅರ್ಥ ನೀಡಿದೆ. ಈಗಾಗಲೇ ಸೈನಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಪ್ರತಿಕ್ರಿಯೆಯೂ ಬರುತ್ತಿದೆ. ಇನ್ನು ಭಯೋತ್ಪಾದಕರೂ, ಪಾಕ್ ಸೇನೆಯೂ ಬೇರೆ ಬೇರೆ ಎಂದು ಹೇಳಲಾಗದು. ಆದರೂ ಭಾರತೀಯ ಸೇನೆ ಪಾಕಿಸ್ತಾನದ ನಾಗರಿಕ ಸ್ಥಳಗಳಿಗೆ ಅಥವಾ ಸೇನಾ ನೆಲೆಗಳಿಗೆ ದಾಳಿ ಮಾಡಿಲ್ಲ. ಈ ಹಂತದಲ್ಲಿ ಯುದ್ಧದ ಉಲ್ಬಣದ ಆತಂಕ ತಪ್ಪಿಸಲು ಕಾಳಜಿ ವಹಿಸಲಾಗಿದೆ. ʼನೀವು ಭಯೋತ್ಪಾದಕರನ್ನು ನಿಯಂತ್ರಿಸದಿದ್ದರೆ, ಆ ಕೆಲಸ ನಾವು ಮಾಡಬೇಕಾಗುತ್ತದೆ!ʼ ಎನ್ನುವ ಸ್ಪಷ್ಟ ಸಂದೇಶವನ್ನು ಭಾರತೀಯ ಸೇನೆ ನೀಡಿದೆ.

ನಾಗರಿಕರ ಜೀವಹಾನಿ ಎಲ್ಲೆಡೆ ದುಃಖದ ಸಂಗತಿಯೇ– ಇದು ಯುದ್ಧವನ್ನು ತಪ್ಪಿಸಬೇಕು ಎನ್ನುವುದಕ್ಕೆ ಮುಖ್ಯ ಕಾರಣವಾಗಿದೆ. ಇದಕ್ಕಿಂತಲೂ ದುಃಖಕರ ವಿಷಯವೇನೆಂದರೆ– ಕೆಲವು ಜನ ಯುದ್ಧಕ್ಕಾಗಿ ಕೇಕೆ ಹಾಕುತ್ತಿದ್ದಾರೆ. ಆದರೆ ಅವರು ಯುದ್ಧವನ್ನು ನೋಡಿಯೇ ಇಲ್ಲ, ಯುದ್ಧಭೂಮಿಗೆ ಕಾಲಿಟ್ಟಿಲ್ಲ. ತಾಲೀಮುಗಳ ಭಾಗವಾಗಿದ್ದರೆ ಮಾತ್ರ ಯೋಧರಾಗಲಾಗದು. ಯುದ್ಧದಲ್ಲಿ ನಷ್ಟ ಅನುಭವಿಸಿದವರ ನೋವನ್ನು ಅವರು ಎಂದಿಗೂ ಅರ್ಥಮಾಡಿಕೊಳ್ಳಲಾರರು. ಯುದ್ಧ ತೀಕ್ಷ್ಣವಾದದ್ದು. ಬಡವರು ಬಳಲುತ್ತಾರೆ, ರಾಜಕಾರಣಿಗಳು ಮತ್ತು ಸೇನಾ ವ್ಯವಹಾರಕ್ಕಿರುವ ಕಂಪನಿಗಳು ಮಾತ್ರ ಲಾಭ ಪಡೆಯುತ್ತವೆ.

ರಾಜಕೀಯ ತೊಂದರೆಗಳಿಗೆ ಸೈನಿಕ ಪರಿಹಾರ ಸರಿಯಾದ ಮಾರ್ಗವಲ್ಲ. ಆಗಾಗ ಅದು ಅನಿವಾರ್ಯವಾಗಬಹುದು. ಆದರೆ ಸಾಮಾನ್ಯವಾಗಿ ರಾಜಕೀಯ ಸಮಸ್ಯೆಗಳಿಗೆ ರಾಜಕೀಯ ಸಮಾಧಾನವೇ ಅಗತ್ಯ ಎಂಬುದನ್ನು ಇತಿಹಾಸ ತಿಳಿಸುತ್ತದೆ. ಇದರ ಜತೆಗೆ ನನಗೆ ಖುಷಿಯಾದದ್ದು ಏನೆಂದರೆ– ಕೆಲವರು ಕರ್ನಲ್ ಸೋಫಿಯಾ ಖುರೇಷಿಯ ಸಾಧನೆಗೆ ಶ್ಲಾಘನೆ ಸಲ್ಲಿಸಿದ್ದಾರೆ. ಆದರೆ, ಅಂಥವರೆಲ್ಲಾ ಆಗಾಗ ಮುಸ್ಲಿಮರ ವಿರುದ್ಧವಾಗಿ ನಡೆಯುವ ಬುಲ್ಡೋಜರ್ ರಾಜಕೀಯವನ್ನೋ ಅಥವಾ ಗುಂಪು ಹತ್ಯೆಗಳನ್ನೋ ನೋಡಿದಾಗ ಮೌನವಾಗುತ್ತಾರೆ. ರಕ್ಷಣೆ ಪಡೆಯಬೇಕು ಎಂಬ ಒತ್ತಾಯ ಎಲ್ಲರಿಗೂ ಸಮಾನವಾಗಿರಬೇಕಲ್ಲವೆ?

WhatsApp Image 2025 05 20 at 5.29.28 PM

ಅವರ (ಮಹಿಳಾ ಸೇನೆ ಅಧಿಕಾರಿಗಳ) ಮಾತುಗಳು ʼದೃಗ್ವಿಜ್ಞಾನʼ (ವಿಶ್ಲೇಷಣಾತ್ಮಕ ಮಾತು) ಆಗಿದ್ದರೂ, ಅದು ನೆಲದ ಮೇಲೆ ಜೀವನದಲ್ಲಿ ಅನ್ವಯವಾಗಬೇಕು. ಇಲ್ಲದಿದ್ದರೆ ಅದು ಕೇವಲ ಪ್ರದರ್ಶನ ಮಾತ್ರವಾಗುತ್ತವೆ. ಇನ್ನೊಂದು ತೀಕ್ಷ್ಣ ಅಂಶವೆಂದರೆ, ಕೆಲ ಮುಸ್ಲಿಂ ನಾಯಕರಿಂದ ʼಪಾಕಿಸ್ತಾನ್ ಮುರ್ದಾಬಾದ್ʼ ಎಂಬ ಘೋಷಣೆ ಕೇಳಿದಾಗ, ಕೆಲವರು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅದೇ ಮಾತುಗಳನ್ನು ಪಾಕಿಸ್ತಾನದಲ್ಲಿ ಹೇಳಿದವರನ್ನು ಟೀಕಿಸಿದ್ದಾರೆ. ಇದು ಸಂಕುಚಿತ ರಾಜಕೀಯದ ಉದಾಹರಣೆಯಾಗಿದೆ. ಕೋಮುವಾದವು ಹೇಗೆ ರಾಜಕೀಯವನ್ನು ಆವರಿಸಿಕೊಳ್ಳುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ನನಗೆ ಆ ಪತ್ರಿಕಾಗೋಷ್ಠಿಯು ಕೇವಲ ಕ್ಷಣಿಕ ದೃಶ್ಯದಂತೆ ಕಂಡಿತ್ತು. ಬಹುಶಃ ಅದು ಒಂದು ಭ್ರಮೆಯಂತಿತ್ತು ಅಥವಾ ಪಾಕಿಸ್ತಾನ ನಿರ್ಮಿತ ತರ್ಕಕ್ಕೆ ತಡೆಯಾಗಿ ನಿಲ್ಲುವ ಭಾರತದ ಒಂದು ಸೂಚನೆಯಂತೂ ಆಗಿತ್ತು. ನಾನು ಈಗಾಗಲೇ ಹೇಳಿದಂತೆ, ಸಾಮಾನ್ಯ ಮುಸ್ಲಿಮರು ಎದುರಿಸುತ್ತಿರುವ ನೆಲದ ನಿಜವಾದ ಸ್ಥಿತಿ, ಸರ್ಕಾರ ತೋರಿಸಲು ಯತ್ನಿಸಿದ ಚಿತ್ರಣಕ್ಕಿಂತ ಭಿನ್ನವಾಗಿದೆ. ಆದರೆ ಇದೇ ಸಂದರ್ಭದಲ್ಲಿ, ಆ ಪತ್ರಿಕಾಗೋಷ್ಠಿಯು ಭಾರತವು ಇನ್ನೂ ಸಂಪೂರ್ಣವಾಗಿ ತನ್ನ ವೈವಿಧ್ಯದ ಏಕತೆಯ ಕಲ್ಪನೆಯಿಂದ ದೂರ ಹೋಗಿಲ್ಲ ಎಂಬುದನ್ನೂ ತೋರಿಸುತ್ತದೆ.” ಇದು ಅಲಿ ಖಾನ್‌ ಅವರ ಪೋಸ್ಟಿನ ಕನ್ನಡ ರೂಪ.

ಈ ಪೋಸ್ಟಿನಲ್ಲಿ ಎಲ್ಲಿಯೂ, ಯಾವ ಕೋನದಲ್ಲಿಯೂ ಭಾತೃತ್ವ ಒಡೆಯುವ, ಸಮುದಾಯದ ನಡುವೆ ದ್ವೇಷ ಬಿತ್ತುವ, ದೇಶದ ಏಕತೆಗೆ ಮಾರಕವಾಗುವ ಹೇಳಿಕೆ ಕಾಣ ಸಿಗುವುದಿಲ್ಲ. ಬದಲಾಗಿ ದೇಶದ ಏಕತೆಯನ್ನು ಸಾರುವ, ಬಹುತ್ವ ವಾದವನ್ನು ಶ್ಲಾಘಿಸುವ, ಸೇನೆಗೆ ಸೇನಾ ಅಧಿಕಾರಿಗಳಿಗೆ ಗೌರವ ಸೂಚಿಸುವ, ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಪರವಾಗಿ ಎಚ್ಚರಿಕೆ ನೀಡುವ ಮಾತುಗಳಿವೆ. ಆದರೆ, ಅವುಗಳನ್ನೆಲ್ಲ ಬದಿಗೊತ್ತಿ ದೇಶದ್ರೋಹದ ಪ್ರಕರಣ ದಾಖಲಿಸುವಂಥ ಮಹಾ ತಪ್ಪೊಂದು ಹರಿಯಾಣದ ಮಹಿಳಾ ಆಯೋಗಕ್ಕೆ ಆ ಪೋಸ್ಟಿನಲ್ಲಿ ಕಂಡಿದೆ. ಬಿಜೆಪಿ ನಾಯಕರ ದ್ವಂದ್ವ ನೀತಿಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ದೇಶದ್ರೋಹವಾಗಬಹುದಾ ಎನ್ನುವುದು ಈಗಿನ ಸವಾಲು.

ಸೇನೆಯ ಮಹಿಳಾ ಅಧಿಕಾರಿಗಳನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಸಮನ್ಸ್‌ ಜಾರಿ ಮಾಡಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಅವರಿಗೆ ನಿಜಕ್ಕೂ ಮಹಿಳೆಯರ ಪರವಾಗಿ ಕಾಳಜಿ ಇದ್ದರೆ ಅದನ್ನು ಒಪ್ಪಲೇಬೇಕು. ಆದರೆ, ಮಧ್ಯಪ್ರದೇಶದ ಬಿಜೆಪಿ ಸಚಿವ ವಿಜಯ್‌ ಶಾ, “ಕರ್ನಲ್‌ ಸೋಫಿಯಾ ಖುರೇಷಿ ಉಗ್ರವಾದಿಗಳ ಸಹೋದರಿ” ಎಂಬ ಹೇಳಿಕೆ ನೀಡಿದಾಗ ಅವರ ವಿರುದ್ಧ ಸಮನ್ಸ್‌ ಜಾರಿ ಮಾಡುವುದಿರಲಿ ಕನಿಷ್ಠ ಒಂದು ಹೇಳಿಕೆಯನ್ನೂ ನೀಡಲಿಲ್ಲ. ಅಷ್ಟೇ ಅಲ್ಲ ಮಹಾರಾಷ್ಟ್ರ ಸರ್ಕಾರ ಕೂಡ ಆ ಮಂತ್ರಿಯ ವಿರುದ್ಧ ಯಾವುದೇ ಕ್ರಮ ಜರುಗಿಸಲಿಲ್ಲ. ಸೇನೆಯ ಅಧಿಕಾರಿಯೊಬ್ಬರನ್ನ ಭಯೋತ್ಪಾದಕರ ತಂಗಿ ಎಂದದ್ದು ದೇಶದ್ರೋಹವಾಗಲೇ ಇಲ್ಲ. ಯಾವ ಕೇಸೂ ಬೀಳಲಿಲ್ಲ.

ಇದನ್ನೂ ಓದಿ: ಭ್ರಮಾಲೋಕದಲ್ಲಿ 24/7 ನ್ಯೂಸ್ ಚಾನೆಲ್‌ಗಳು: ಯುದ್ಧ ಸುದ್ದಿಗಳಿಂದಲೂ ಟಿಆರ್‌ಪಿ ಕುಸಿತ!

ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಜಗದೀಶ ದೇವಡಾ ಕೂಡ ಇದೇ ರೀತಿ ಉದ್ಧಟತನ ತೋರಿದ್ದು ಗೊತ್ತೇ ಇದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಭರದಲ್ಲಿ, “ಭಯೋತ್ಪಾದನೆಯನ್ನು ಪೋಷಿಸುವವರಿಗೆ ತಕ್ಕ ಉತ್ತರ ನೀಡಿದ್ದಕ್ಕಾಗಿ ನಾವು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಅವರ ಕಾರ್ಯಕ್ಕೆ ಇಡೀ ದೇಶ, ಸೈನಿಕರು, ಸೇನೆ ಅವರ ಕಾಲುಗಳಿಗೆ ನಮಸ್ಕರಿಸುತ್ತದೆ” ಎಂದಿದ್ದರು.

“ಇದು ಸೇನೆಗೆ ಮಾಡುವ ಅವಮಾನವಲ್ಲವೇ? ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು. ಒಂದು ವೇಳೆ ಬಿಜೆಪಿ ಅವರ ವಿರುದ್ಧ ಕ್ರಮ ಜರುಗಿಸಲು ವಿಫಲವಾದರೆ ಇದು ಬಿಜೆಪಿ ಅನುಮತಿಯೊಂದಿಗೆ ನೀಡಿದ ಹೇಳಿಕೆ ಎಂದಾಗುತ್ತದೆ. ಅದಕ್ಕೆ ಪಕ್ಷದ ಬೆಂಬಲವೂ ಇದೆ ಎಂದರ್ಥ” ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದರು. ಆದರೆ ಇದ್ಯಾವುದಕ್ಕೂ ಮಧ್ಯಪ್ರದೇಶ ಸರ್ಕಾರವಾಗಲೀ ಘನತೆವೆತ್ತ ಬಿಜೆಪಿ ರಾಷ್ಟ್ರೀಯ ನಾಯಕರುಗಳಾಗಲೀ ಕ್ಯಾರೇ ಎನ್ನಲಿಲ್ಲ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಮಂತ್ರಿ, ಉಪಮುಖ್ಯಮಂತ್ರಿಗಳು ಸೇನೆಯನ್ನು ಅವಮಾನಿಸುವಂತಹ ಬಹಿರಂಗ ಹೇಳಿಕೆ ನೀಡಿದರೆ ಅದು ಸ್ವಾಮಿ ನಿಷ್ಠೆ, ದೇಶಪ್ರೇಮ… ಅದೇ ಸಾಮಾಜಿಕ ಜವಾಬ್ದಾರಿ ಹೊತ್ತ ಸ್ಥಾನದಲ್ಲಿರುವ ಅಧ್ಯಾಪಕರೊಬ್ಬರು ಸೇನೆಯನ್ನು ಶ್ಲಾಘಿಸುವುದರ ಜತೆಗೆ ದೇಶದ ನೆಲದಲ್ಲಿ ನಡೆಯುತ್ತಿರುವ ಸಮುದಾಯಗಳ ಶೋಷಣೆಗೆ ಮೌನ ವಹಿಸುವ ನೀತಿಯನ್ನು ಪ್ರಶ್ನಿಸಿದ್ದು ದೇಶದ್ರೋಹ. ಇದು ಯಾವ ತಂತ್ರವೋ ಅರ್ಥವಾಗುತ್ತಿಲ್ಲ.

ಬಿಜೆಪಿಯ ಪ್ರಸ್ತುತ ನಿಲುವುಗಳು ತೀವ್ರ ದ್ವಂದ್ವವನ್ನು ಪ್ರತಿಬಿಂಬಿಸುತ್ತಿರುವುದಂತು ಸತ್ಯ. ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿದರೆ ʼರಾಷ್ಟ್ರಭಕ್ತʼ, ಆದರೆ ದೇಶದ ಒಳಗಿನ ದೋಷಗಳನ್ನು ಅಥವಾ ಸೇನೆಯ ದುರಪಯೋಗವನ್ನು ಪ್ರಶ್ನಿಸಿದರೆ, ʼದೇಶದ್ರೋಹಿʼ ಎಂಬ ಲೇಬಲ್. ಇದು ಸರಳ ವಿವೇಚನೆಗೆ ಸಾಧ್ಯವಿಲ್ಲದ ರಾಜಕೀಯ ನಾಟಕವಾಗುತ್ತಿದೆ. ಒಂದೆಡೆ, ಸೇನೆಯ ಮಹಿಳಾ ಸದಸ್ಯರ ಸಾಧನೆಗಳನ್ನು ಶ್ಲಾಘಿಸುವುದು ರಾಷ್ಟ್ರೀಯ ಗೌರವದ ರೂಪದಲ್ಲಿ ವರ್ಣನೆಗೊಳ್ಳುತ್ತಿದೆ. ಆದರೆ, ಇದೇ ಸಾಧನೆಗಳನ್ನು ನಿಜವಾದ ಸಾಮಾಜಿಕ ನ್ಯಾಯದ ದೃಷ್ಟಿಕೋನದಿಂದ ಪ್ರಶ್ನಿಸಿದವರು ಹೀಗೆಯೇ ಬಂಧನಕ್ಕೊಳಗಾಗುತ್ತಿದ್ದಾರೆ. ವಾಸ್ತವವಾಗಿ, ಇದು ಪ್ರಶ್ನೆ ಮಾಡದ ಸರ್ವಾಧಿಕಾರ ತತ್ವದ ಮೇಲೆ ಹೊಸ ಭಾರತ ನಿರ್ಮಾಣ ಮಾಡಲು ಮುಂದಾಗಿರುವ ಶಕ್ತಿಯ ದರ್ಪದ ಸಂಕೇತವಾಗಿದೆ.

ಇದೀಗ ‘ಆಪರೇಷನ್ ಸಿಂಧೂರ್’ ಕುರಿತ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಪ್ರೊ. ಅಲಿ ಖಾನ್ ಮಹ್ಮದಾಬಾದ್ ಅವರನ್ನು ಸೋನಿಪತ್ ನ್ಯಾಯಾಲಯ ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮಹ್ಮದಾಬಾದ್‌ರನ್ನು ಭಾನುವಾರ ದೆಹಲಿಯಲ್ಲಿ ಬಂಧಿಸಿ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು.

ಇಂದು ಅವರನ್ನು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಜಾದ್ ಸಿಂಗ್ ಅವರ ಮುಂದೆ ಹಾಜರುಪಡಿಸಲಾಯಿತು. ಮೂಲಗಳ ಪ್ರಕಾರ, ಪೊಲೀಸರು ಇನ್ನೂ ಏಳು ದಿನಗಳ ಕಸ್ಟಡಿಗೆ ಒಪ್ಪಿಸುವಂತೆ ಕೇಳಿದರು. ಆದರೆ, ನ್ಯಾಯಾಧೀಶರು ಆ ಮನವಿಯನ್ನು ತಿರಸ್ಕರಿಸಿ, ಖಾನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಈ ಬೆಳವಣಿಗೆಯನ್ನು ಅವರ ವಕೀಲ ಕಪಿಲ್ ಅವರು ತಿಳಿಸಿದ್ದಾರೆಂದು ಬಾರ್ ಅಂಡ್ ಬೆಂಚ್‌ ವರದಿ ಮಾಡಿದೆ.

ಇದನ್ನೂ ಓದಿ: ಬಿಬಿಎಂಪಿ ಯುಗಾಂತ್ಯ: ಏನಿದು ಗ್ರೇಟರ್‌ ಬೆಂಗಳೂರು?

ಭಯೋತ್ಪಾದನೆ ವಿರುದ್ಧದ ಹೋರಾಟದ ಹೆಸರಿನಲ್ಲಿ ಹಿಂಸೆಗೆ ಬಲಿಯಾದ ಮುಸ್ಲಿಂ ಸಮುದಾಯದ ಸ್ಥಿತಿಗತಿಯನ್ನು ಪ್ರಶ್ನಿಸುವವರು ದಂಡನೆಗೆ ಒಳಗಾಗುತ್ತಿದ್ದಾರೆ. ಆದರೆ ಗುಂಪು ಹಲ್ಲೆಗಳ ಆರೋಪಿಗಳನ್ನು ರಾಜ್ಯಸಭೆಗೆ ಕಳಿಸುವ ʼನೈತಿಕತೆʼಯನ್ನು ಯಾರು ಪ್ರಶ್ನಿಸಬೇಕು? ಇಂತಹ ದ್ವಂದ್ವ ನೀತಿಗಳು ಭಾರತೀಯ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಆಪತ್ತು ತಂದಂತೆಯೇ ಅಲ್ಲದೆ, ದೇಶದೊಳಗಿನ ಭಿನ್ನತೆಯನ್ನು ಮತ್ತಷ್ಟು ಆಳಗೊಳಿಸುತ್ತವೆ. ಸರ್ಕಾರವನ್ನು ಟೀಕಿಸುವ ಸಾಮಾನ್ಯ ಪ್ರಜೆಯ ನಿಷ್ಠಾವಂತ ಪ್ರಶ್ನೆಗಳಿಗೂ ಜೈಲು ದಂಡನೆ ನೀಡುವ ಈ ಪ್ರವೃತ್ತಿ ಮುಂದುವರಿದರೆ, ಭಾರತವೊಂದು ಘೋಷಣೆಯ ಪ್ರಜಾಪ್ರಭುತ್ವವಾಗಿಯೇ ಉಳಿಯಲಿದೆ; ಅರ್ಥಪೂರ್ಣತೆಯಲ್ಲಲ್ಲ.

ಅಲಿ ಖಾನ್‌ ಅವರ ಪ್ರಕರಣ ಮುನ್ನೆಲೆಯಲ್ಲಿ ಓಡಾಡುತ್ತಿರುವ ಈ ಹೊತ್ತಿನಲ್ಲಿ ಖ್ಯಾತ ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ “My name is Khan… And I am not Anti National” ಎಂಬ ಜನಪ್ರಿಯ ಡೈಲಾಗ್‌ ನೆನಪಾಗುತ್ತದೆ. ಜಾತ್ಯತೀತವಾದ ಈ ದೇಶದಲ್ಲಿ ಮುಸ್ಲಿಮರು ತಮ್ಮನ್ನು ತಾವು ʼದೇಶದ್ರೋಹಿಗಳಲ್ಲ, ರಾಷ್ಟ್ರ ವಿರೋಧಿಗಳಲ್ಲʼ ಎಂದು ಹೇಳಿಕೊಂಡು ಓಡಾಡುವ ಪರಿಸ್ಥಿತಿ ಇದೆ.

ಸೇನೆಯನ್ನು ಅವಮಾನಗೊಳಿಸುವುದು ದೇಶದ್ರೋಹವಲ್ಲವೇ? ದೇಶದ್ರೋಹವೆನ್ನುವುದು ಒಂದು ಪಕ್ಷದ ಹಳದಿ ಕನ್ನಡಕದಿಂದ ನೋಡಬೇಕಾದ ತತ್ವಶಾಸ್ತ್ರವೋ? ಅಥವಾ ಅಧಿಕಾರ ಲಾಬಿಗೆ ಆಡಳಿತ ಪಕ್ಷ ಏನು ಮಾಡಿದರೂ ಸಮರ್ಥಿಸಲಾಗುವುದು ಎನ್ನುವ ಪಕ್ಷಪಾತವೋ? ಉತ್ತರಿಸುವವರು ಬೇಕಾಗಿದ್ದಾರೆ.

ಭಾರತದ ಪ್ರಜಾತಂತ್ರ ವ್ಯವಸ್ಥೆಯ ಮೂಲಭೂತ ತತ್ವವೆಂದರೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು. ಆದರೆ ಇಂದಿನ ರಾಜಕೀಯ ವಾತಾವರಣದಲ್ಲಿ ಯಾರಾದರೂ ಆಡಳಿತಾರೂಢ ಪಕ್ಷವನ್ನು ಟೀಕಿಸಿದರೆ, ಅವರನ್ನು ಕೂಡಲೇ “ದೇಶದ್ರೋಹಿ”, “ಸಾಮಾಜಿಕ ಶತ್ರು” ಅಥವಾ “ರಾಷ್ಟ್ರವಿರೋಧಿ” ಎಂದು ಹಣೆಪಟ್ಟಿ ಕಟ್ಟಿ ಜೈಲಿಗಟ್ಟುವುದು ಸಾಮಾನ್ಯವಾಗಿದೆ. ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ ಪ್ರಕರಣದಲ್ಲಿ ಸಹ ಅವರು ಕೇವಲ ತಮ್ಮ ವೈಚಾರಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಬಂಧನಕ್ಕೊಳಗಾಗಿದ್ದಾರೆ. ಈ ತಾಳ್ಮೆಯ ಕೊರತೆ ಮತ್ತು ನೈತಿಕ ಶಕ್ತಿಯ ಮೇಲಿನ ದೌರ್ಜನ್ಯ ಪ್ರಜಾತಂತ್ರಕ್ಕೆ ಅಪಾಯವನ್ನುಂಟುಮಾಡುತ್ತದೆ. ಅಧಿಕಾರವನ್ನು ಪ್ರಶ್ನಿಸುವ ಧೈರ್ಯವಿಲ್ಲದ ಸಮಾಜದಲ್ಲಿ ವಾಸ್ತವಿಕ ಪ್ರಗತಿ ಸಾಧ್ಯವಿಲ್ಲ. ಶ್ರದ್ಧೆಯ ಹೆಸರಿನಲ್ಲಿ ಭಯವನ್ನು ಬಿತ್ತುವ ಪ್ರಸ್ತುತ ರಾಜಕೀಯ ವ್ಯವಸ್ಥೆಯಿಂದ ಎಚ್ಚರಿಕೆಯಿಂದಿರಬೇಕಾದ ಅನಿವಾರ್ಯತೆಯಿದೆ.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

Download Eedina App Android / iOS

X