ರೈತರು, ಕಾರ್ಮಿಕರು, ಮಹಿಳೆಯರು, ದಲಿತರು, ವಿದ್ಯಾರ್ಥಿಗಳ ಹಿತ ಕಾಪಾಡದೆ ಕಾರ್ಪೋರೇಟ್ ಮತ್ತು ಧರ್ಮಾಂಧರ ಹಿತ ಕಾಪಾಡಲು ಬಿಜೆಪಿ ಹಾಕಿದ ಮಾರ್ಗದಲ್ಲೇ ಮುಂದುವರಿಯುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನು ತಪ್ಪಿಕೊಂಡಿದ್ದು ಹೀಗೆಯೇ ಮುಂದುವರಿದರೆ ದೆಹಲಿ ಮಾದರಿಯ ಹೋರಾಟವನ್ನು ಎದುರಿಸಬೇಕಾಗಿದೆ ಎಂದು ಸಂಯುಕ್ತ ಹೋರಾಟ – ಕರ್ನಾಟಕ ಇದರ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಎರಡು ವರ್ಷ ಪೂರ್ಣಗೊಂಡ ಪ್ರಯುಕ್ತ ರಾಜ್ಯ ಸರ್ಕಾರ ನಡೆಸುತ್ತಿರುವ ‘ಸಾಧನಾ ಸಮಾವೇಶ’ದ ನೈತಿಕತೆಯನ್ನು ಪ್ರಶ್ನಿಸಿ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಗಳ ಆಶ್ರಯದಲ್ಲಿ ಸಂಯುಕ್ತ ಹೋರಾಟ – ಕರ್ನಾಟಕ ಬೆಂಗಳೂರಿನ ಗಾಂಧಿ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನ ಚಳವಳಿಗಳಿಂದ ಜನಾಗ್ರಹ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭೂ ಮತ್ತು ಎಪಿಎಂಸಿ ಕಾಯ್ದೆಯ ತಿದ್ದುಪಡಿ, ಜಾನುವಾರು ನಿಷೇಧ ಕಾಯ್ದೆ, ನಾಲ್ಕು ಲೇಬರ್ ಕೋಡ್ ಗಳು, ಕಾರ್ಮಿಕರ ದುಡಿಮೆಯ ಅವಧಿ 8ರಿಂದ 12 ಗಂಟೆಗೆ ಏರಿಸುವ ನಿಯಮವನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಾಗ, ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಈ ನೀತಿಗಳನ್ನು ಅಧಿವೇಶನದಲ್ಲಿ ವಿರೋಧಿಸಿತ್ತು. ಬೀದಿಯಲ್ಲಿ ಹೋರಾಟ ಮಾಡುತ್ತಿದ್ದ ನಮ್ಮ ಜೊತೆ ಕಾಂಗ್ರೆಸ್ ಕೂಡಾ ಕೈ ಜೋಡಿಸಿತ್ತು. ಚುನಾವಣೆಗೆ ಮೊದಲು ನಡೆದ ‘ಕಿಸಾನ್ ಪಂಚಾಯತ್’ನಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಕಾಯ್ದೆಗಳನ್ನು ರದ್ದು ಮಾಡುವುದಾಗಿ ಪ್ರಮಾಣ ಪತ್ರಕ್ಕೆ ಸಹಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಬಿಜೆಪಿ ಜಾರಿಗೆ ತಂದ ಎಲ್ಲಾ ಕಾಯ್ದೆಗಳನ್ನು ರದ್ದುಪಡಿಸದೆ ಯಥಾವತ್ತಾಗಿ ಮುಂದುವರಿಸಿದೆ. ಕಾಂಗ್ರೆಸ್ ಕೊಟ್ಟ ಮಾತು ತಪ್ಪಿದ್ದು ಇದೇ ಎರಡು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಕಾರ್ಪೋರೇಟ್ ಮತ್ತು ಧಮಾಂದರ ಹಿತಾಸಕ್ತಿ ಕಾಪಾಡುವುದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ದೇವನಹಳ್ಳಿಯ ಚನ್ನರಾಯಪಟ್ಟಣದ ಫಲವತ್ತಾದ 1,777 ಎಕರೆ ಕೃಷಿ ಭೂಮಿಯನ್ನು ರಾಜ್ಯ ಸರ್ಕಾರ ಬಲವಂತವಾಗಿ ರೈತರಿಂದ ಸ್ವಾಧೀನ ಪಡಿಸಿಕೊಳ್ಳುತ್ತಿದೆ. 15 ಲಕ್ಷ ಬಗರ್ ಹುಕುಂ ರೈತರ ಅರ್ಜಿಗಳನ್ನು ತಿರಸ್ಕರಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರ, ಬಡವರಿಗೆ ಮನೆಗಳನ್ನು ಸಕ್ರಮಗೊಳಿಸದ, ನೆಲ ಇಲ್ಲದವರಿಗೆ ನಿವೇಶನ ಹಂಚುವಲ್ಲಿ ವಿಫಲವಾಗಿದೆ. ಆದರೂ ಕಾರ್ಪೋರೇಟ್ ಗಳ ಭೂದಾಹ ತಣಿಸಲು ಭೂ ಬ್ಯಾಂಕ್ ರೂಪಿಸಲು ಹೊರಟಿರುವದು ಖೇದಕರ ಎಂದರು.
ರೈತರ ಬೆಳೆಯ ಸುರಕ್ಷತೆಗಿದ್ದ ಕ್ರಮಗಳನ್ನೆಲ್ಲಾ ರದ್ದುಗೊಳಿಸಿ ರೈತರ ಬೆಳೆಯ ಮೇಲೆ ಖಾಸಗಿಯವರು ನಿಯಂತ್ರಣ ಸಾಧಿಸಲು ಅವಕಾಶ ನೀಡುವ ಎನ್.ಪಿ.ಎಫ್.ಎ.ಎಂ. ಹೊಸ ನೀತಿಯನ್ನು ಕೇಂದ್ರ ಸರ್ಕಾರ ಜಾರಿ ತಂದಿದೆ. ಇದನ್ನು ತಿರಸ್ಕರಿಸಬೇಕಾದ ರಾಜ್ಯ ಸರ್ಕಾರ ಈ ಕರಡನ್ನು ರಾಜ್ಯ ಬೆಲೆ ಆಯೋಗಕ್ಕೆ ಕಳುಹಿಸಿ ಅನುಷ್ಟಾನಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡುವಂತೆ ಸೂಚಿಸಿದೆ. ಇದು ರಾಜ್ಯ ಸರ್ಕಾರದಿಂದ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸವಾಗಿದೆ ಎಂದರು.
ಕಾರ್ಮಿಕ ವರ್ಗಕ್ಕೆ ಇದ್ದ ಎಲ್ಲಾ ಹಕ್ಕುಗಳನ್ನು ಕಸಿದು ಮುಂದಿನ ಯುವ ಪೀಳಿಗೆಯನ್ನು ಅಗ್ಗದ ಕೂಲಿ ಕೊಟ್ಟು, ಯಾವುದೇ ಭದ್ರತೆ ಇಲ್ಲದೆ ದಿನದ 12 ಗಂಟೆ ಕೆಲಸ ಮಾಡುವ 4 ಲೇಬರ್ ಕೋಡ್ ಗಳನ್ನು ತರಲಾಗುತ್ತಿದೆ. ಈ ಕಾಯ್ದೆ ಮೂಲಕ ಹೋರಾಡುವ ಹಕ್ಕು, ವೇತನದ ಹಕ್ಕು, ಕೆಲಸದ ಹಕ್ಕು, ಸಾಮಾಜಿಕ ಭದ್ರತೆಯ ಹಕ್ಕು, ಮಹಿಳಾ ಕಾರ್ಮಿಕರ ಸುರಕ್ಷತೆಯ ಹಕ್ಕನ್ನು ಕಸಿಯಲಾಗುತ್ತಿದೆ. ರಾಹುಲ್ ಗಾಂಧಿ ಈ ಕಾಯ್ದೆ ವಿರುದ್ಧ ಕಿಡಿಗಾರುತ್ತಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ಮಾಡಲು ಹೊರಟಿರುವುದು ರಾಜ್ಯದ ಜನರ ದುರಂತವಾಗಿದೆ ಎಂದರು.
ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ನೀತಿಯನ್ನು ರೂಪಿಸಿ ಅತ್ಯಂತ ಶೋಷಿತ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿಗೆ ಶೇ. 40ರಷ್ಟು ಬಜೆಟ್ ಅನ್ನು ಮೀಸಲಿಡುವ ಕ್ರಾಂತಿಕಾರಿ ತೀರ್ಮಾನವನ್ನು ಕಾಂಗ್ರೆಸ್ ಸರ್ಕಾರವೇ ತೆಗೆದುಕೊಂಡಿತ್ತು. ಆದರೆ ಈ ನಿರ್ಣಯ ಕಾಗದದ ಮೇಲಷ್ಟೇ ಉಳಿದಿದೆ. ಅನ್ಯ ಉದ್ದೇಶಗಳಿಗೆ ಎಲ್ಲಾ ಹಣ ಹರಿದು ಹೋಗಿ ದಲಿತ ಸಮುದಾಯದ ಅಭಿವೃದ್ಧಿಗೆ ಏನೂ ಉಳಿಯದಂತೆ ಮಾಡಲಾಗಿದೆ. ಹಣ ಇಲ್ಲವೆಂದು ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳಿಗೆ ಸ್ಕಾಲರ್ ಶಿಪ್ ಮತ್ತು ಹಾಸ್ಟೆಲ್ ಸೌಲಭ್ಯವನ್ನು ನಿಲ್ಲಿಸಲಾಗಿದೆ ಎಂದು ಹೋರಾಟಗಾರರು ಆರೋಪಿಸಿದರು.
ಸಂಪನ್ಮೂಲವನ್ನು ಕ್ರೂಢೀಕರಿಸಲು ಖಾಸಗಿ ಕಂಪೆನಿಗಳ ಮೇಲೆ ಮತ್ತು ಅತಿ ಶ್ರೀಮಂತ ವರ್ಗದ ಮೇಲೆ ರಾಜ್ಯ ಸೆಸ್ ಹಾಕುವ ಬದಲು ಜನಸಾಮಾನ್ಯರಿಂದ ಹಣ ಹಿಂಡುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಸ್ಟಾಂಪ್ ಪೇಪರ್, ಪಾಣಿ, ಪೋಡಿ ಶುಲ್ಕ, ವಿದ್ಯುತ್ ದರ, ಸಾರಿಗೆ ದರ ಏರಿಸಲಾಗುತ್ತಿದೆ. ರೈತರಿಗಿದ್ದ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಕಡಿತಗೊಳಿಸಲಾಗುತ್ತಿದೆ ಎಂದು ಸಭೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ ಮುಂದಿನ ಮೂರು ವರ್ಷದಲ್ಲಾದರೂ ಸರ್ಕಾರ ಜನಪರವಾಗಿರಬಹುದೇ?
ಭೂ ಮತ್ತು ಎಪಿಎಂಸಿ ಕಾಯ್ದೆಯ ತಿದ್ದುಪಡಿ, ಜಾನುವಾರು ನಿಷೇಧ ಕಾಯ್ದೆ, ನಾಲ್ಕು ಲೇಬರ್ ಕೋಡ್ ಗಳು, ಕಾರ್ಮಿಕರ ದುಡಿಮೆಯ ಅವಧಿ ಹೆಚ್ಚಳ ಮೊದಲಾದ ಎಲ್ಲಾ ಕಾಯ್ದೆಗಳನ್ನು ಕೂಡಲೇ ರದ್ದು ಮಾಡಬೇಕು. ಬಲವಂತದ ಭೂ ಸ್ವಾಧೀನ ಕೂಡಲೇ ಕೈ ಬಿಡಬೇಕು. ಬಗರ್ ಹುಕುಂ ರೈತರಿಗೆ ಒನ್ ಟೈಮ್ ಸೆಟಲ್ಮೆಂಟ್ ಅಡಿ ಹಕ್ಕುಪತ್ರ ನೀಡಬೇಕು. ಬಡ ಕುಟುಂಬಗಳಿಗೆ ಸೂರು ಒದಗಿಸಲು ಬೃಹತ್ ನಿವೇಶನ ಅಭಿಯಾನ ಹಮ್ಮಿಕೊಳ್ಳಬೇಕು. ಎನ್.ಪಿ.ಎಫ್.ಎ.ಎಂ. ನೀತಿಯನ್ನು ತಿರಸ್ಕರಿಸಬೇಕು. ನರೇಗಾ ಯೋಜನೆಯನ್ನು ಉಳಿಸಲು ಮತ್ತು ವಿಸ್ತರಿಸಲು ಕ್ರಮವಹಿಸಬೇಕು. ಲೇಬರ್ ಕೋಡ್‌ಗಳನ್ನು ತಿರಸ್ಕರಿಸಬೇಕು. ದಲಿತ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ ನೀಡಬೇಕು. ರಾಜ್ಯದಲ್ಲಿ ಹೆಚ್ಚಿದ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಿದರು.
ಚಳವಳಿಯ ಎಚ್ಚರಿಕೆಯನ್ನು ಸರ್ಕಾರ ನಿರ್ಲಕ್ಷಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಬೀದಿಗೆ ಇಳಿಯುವ ಅನಿವಾರ್ಯ ಎದುರಾಗಲಿದೆ. ಬಿಜೆಪಿಯ ದಾರಿಯಿಂದ ಕಾಂಗ್ರೆಸ್ ಸರ್ಕಾರ ಹೊರ ಬರಬೇಕು. ಕಾಂಗ್ರೆಸ್ ಸರ್ಕಾರ ಕಾರ್ಪೋರೇಟ್ ಹಿತಾಸಕ್ತಿ ಕಾಪಾಡುವುದೇ ಮುಂದುವರಿಸಿದರೆ ಬೆಂಗಳೂರಿಗೆ ಮುತ್ತಿಗೆ ಹಾಕುವ ಮೂಲಕ ದೆಹಲಿ ಮಾದರಿಯ ಅನಿರ್ಧಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಮೀನಾಕ್ಷಿ ಸಂದರಂ, ಎ.ಐ.ಸಿ.ಸಿ.ಟಿ.ಯು. ರಾಜ್ಯಾಧ್ಯಕ್ಷ ಪಿ.ಪಿ.ಅಪ್ಪಣ್ಣ, ಎ.ಐ.ಎ.ಡಬ್ಲ್ಯು.ಯು. ರಾಜ್ಯಾಧ್ಯಕ್ಷ ಎಂ. ಪುಟ್ಟಮಾದು, ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್, ರಾಜ್ಯ ಕಾರ್ಯದರ್ಶಿ ಕುಮಾರ್ ಸಮತಲ, ಎ.ಐ.ಯು.ಕೆ.ಎಸ್. ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಡಿಎಚ್ ಪೂಜಾರ್, ಜನವಾದಿ ಮಹಿಳಾ ಸಂಘಟನೆಯ ದೇವಿ, ಗ್ರಾಕುಸ್ ಸಂಘದ ಮಲ್ಲೇಶ್, ರಾಜ್ಯ ಮಹಿಳಾ ಒಕ್ಕೂಟದ ಮೋಕ್ಷಮ್ಮ, ಸಿ.ಐ.ಟಿ.ಯು. ರಾಜ್ಯಾಧ್ಯಕ್ಷ ಎಸ್.ವರಲಕ್ಷ್ಮೀ ಉಪಸ್ಥಿತರಿದ್ದರು.