ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಕಾರ್ಯಕರ್ತನ ವಿರುದ್ಧ ಆತನ ಪತ್ನಿ ಚಿತ್ರಹಿಂಸೆ ಮತ್ತು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. “ನನ್ನ ಪತಿ ಆತನ ಕೆಲಸಗಳಿಗಾಗಿ ನನ್ನನ್ನು ರಾಜಕಾರಣಿಗಳ ಜೊತೆ ಮಲಗುವಂತೆ ಒತ್ತಾಯಿಸುತ್ತಾನೆ. ರಾಜಕಾರಣಿಗಳ ಕಾಮವಾಂಛೆ ತಣಿಸಲು ಯುವತಿಯರನ್ನು ಸರಬರಾಜು ಮಾಡುತ್ತಾನೆ. ಅಲ್ಲದೆ, ನನ್ನನ್ನು ಹುಚ್ಚು ನಾಯಿಯಂತೆ ವಿಕೃತವಾಗಿ ಕಚ್ಚುತ್ತಾನೆ” ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಅರಕ್ಕೋಣಂ ಜಲ್ಲೆ ಕಾಲೇಜು ವಿದ್ಯಾರ್ಥಿನಿಯಾಗಿರುವ ದೂರುದಾರ ಯುವತಿ ತನ್ನ ಪತಿ, ಡಿಎಂಕೆ ಯುವ ಘಟಕದ ಉಪ ಕಾರ್ಯಕರ್ಶಿ ದೇವಸೇಯಲ್ ಎಂಬಾತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. “ಆತನ ಕೃತ್ಯಗಳನ್ನು ಯಾರಿಗಾದರೂ ಹೇಳಿದರೆ, ಪೊಲೀಸರಿಗೆ ದೂರು ನೀಡಿದರೆ ನನ್ನ ಕುಟುಂಬವನ್ನು ಸುಟ್ಟು ಹಾಕುವುದಾಗಿ ಬದರಿಕೆ ಹಾಕಿದ್ದ” ಎಂದೂ ಆರೋಪಿಸಿದ್ದಾರೆ.
“20 ವರ್ಷದ ಹುಡುಗಿಯರನ್ನು ರಾಜಕಾರಣಿಗಳೊಂದಿಗೆ ಮಲಗುವಂತೆ ಚಿತ್ರಹಿಂಸೆ ನೀಡುವುದೇ ಅವನ ಕೆಲಸ. ಅವನು ನನ್ನನ್ನು ಕಾರಿನಲ್ಲಿ ಹಿಂಸಿಸಿ, ತಾನು ಹೇಳಿದ ಪುರುಷರೊಂದಿಗೆ ಮಲಗಬೇಕೆಂದು ಒತ್ತಾಯಿಸಿದ್ದಾನೆ. ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ನಾನು ದೂರು ನೀಡಿದರೆ, ನನ್ನನ್ನು ತುಂಡು ತುಂಡಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ‘ನೀನು ದೂರು ನೀಡಿದರೆ ಏನೂ ಆಗುವುದಿಲ್ಲ. ಯಾಕೆಂದರೆ, ಪೊಲೀಸರು ನನಗೆ ಸಪೋರ್ಟ್ ಮಾಡುತ್ತಾರೆ’ ಎಂದು ಹೇಳಿದ. ಆತನ ನಿರಂತರ ಹಿಂಸೆಯಿಂದಾಗಿ ನಾನು ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದೆ” ಎಂದು ದೂರಿನಲ್ಲಿ ಸಂತ್ರಸ್ತೆ ಹೇಳಿಕೊಂಡಿದ್ದಾರೆ.
“ಘಾತುಕ, ನನ್ನ ವಿಕೃತ ಪತಿ ವಿರುದ್ಧ ಡಿಎಂಕೆ ನಾಯಕ, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.
ಸಂತ್ರಸ್ತ ಯುವತಿ ದೂರು ದಾಖಲಿಸಿದ ಬಳಿಕ, ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ವಿಪಕ್ಷ ಎಐಎಡಿಎಂಕೆ ವಾಗ್ದಾಳಿ ನಡೆಸಿದೆ.
“ಆರಂಭದಲ್ಲಿ ಸಂತ್ರಸ್ತೆ ನೀಡಿದ ದೂರನ್ನು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದರು. ಅಂತಿಮವಾಗಿ ದೂರು ದಾಖಲಿಸಿಕೊಂಡಿದ್ದಾರೆ. ದೂರು ದಾಖಲಿಸಿಕೊಂಡ ಸಮಯದಲ್ಲಿ, ತನ್ನ ಪತಿಗೆ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ ಅವರೊಂದಿಗೆ ಸಂಪರ್ಕವಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಪ್ರಾಥಮಿಕ ತನಿಖೆಯಲ್ಲಿ ಲೈಂಗಿಕ ದೌರ್ಜನ್ಯವನ್ನು ಸೂಚಿಸುವ ಯಾವುದೇ ಪುರಾವೆಗಳಿಲ್ಲವೆಂದು ಪೊಲೀಸರು ಹೇಳುತ್ತಿದ್ದಾರೆ” ಎಂದು ಎಐಎಡಿಎಂಕೆ ಅಸಮಾಧಾನ ವ್ಯಕ್ತಪಡಿಸಿದೆ.
ತಪ್ಪಿತಸ್ಥರ ವಿರುದ್ಧ ಸರ್ಕಾರವು ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತದೆ. ಪೊಲೀಸರು ತನಿಖೆಯನ್ನು ಆಧಿರಿಸಿ, ಪಕ್ಷವು ಆಂತರಿಕ ಕ್ರಮ ಕೈಗೊಳ್ಳುತ್ತದೆ ಎಂದು ಆಡಳಿತಾರೂಢ ಡಿಎಂಕೆ ಹೇಳಿಕೊಂಡಿದೆ.