- ಮೊಬೈಲ್ ನಂಬರ್ ಟವರ್ ಡಂಪ್ ಆಧರಿಸಿ ಆರೋಪಿಗಳ ಬೆನ್ನತ್ತಿದ ಪೊಲೀಸರು
- ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಎಂಡಿ ಮತ್ತು ಸಿಇಒ ಕೊಲೆ ಮಾಡಿದ ಆರೋಪಿಗಳು
ರಾಜ್ಯ ರಾಜಧಾನಿ ಬೆಂಗಳೂರಿನ ಪಂಪಾ ಬಡಾವಣೆಯಲ್ಲಿ ಜೋಡಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳವಾರ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಸಿಇಒ ವಿನುಕುಮಾರ್ ಮತ್ತು ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಮಣ್ಯ ಅವರ ಹತ್ಯೆಯಾಗಿದೆ.
ಶಿವಮೊಗ್ಗ ಮೂಲದ ಫೆಲಿಕ್ಸ್ (ಶಬರೀಶ್), ಬೆಂಗಳೂರಿನ ರೂಪೇನಾ ಅಗ್ರಹಾರದ ವಿನಯ್ ರೆಡ್ಡಿ ಹಾಗೂ ಶಿವು ಬಂಧಿತರು. ಇವರನ್ನು ಮೊಬೈಲ್ ನಂಬರ್ ಟವರ್ ಡಂಪ್ ಆಧರಿಸಿ ಬೆನ್ನತ್ತಿದ ಪೊಲೀಸರು ಅಂತಿಮವಾಗಿ ಕುಣಿಗಲ್ ಬಳಿ ಬಂಧಿಸಿದ್ದಾರೆ.
ಪ್ರಕರಣದ ವಿವರ
ಫೆಲಿಕ್ಸ್ ಅಲಿಯಾಸ್ ಜೋಕರ್ ಶಬರೀಶ್ ಎಂಬಾತ ಏರೋನಿಕ್ಸ್ ಇಂಟರ್ನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಈತನನ್ನು ಇತ್ತೀಚೆಗೆ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಕೆಲಸದಿಂದ ತೆಗೆದು ಹಾಕಿದ್ದರು ಎಂದು ತಿಳಿದುಬಂದಿದೆ.
ಫೆಲಿಕ್ಸ್ ಕಂಪನಿಯಿಂದ ಹೊರಬಂದು ತನ್ನದೆ ಸ್ವಂತ ಕಂಪನಿ ಸ್ಥಾಪಿಸಿದ್ದನು. ಈ ಉದ್ಯಮಕ್ಕೆ ಫಣೀಂದ್ರ ಎದುರಾಳಿಯಾಗಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಫೆಲಿಕ್ಸ್, ಎದುರಾಳಿ ಫಣೀಂದ್ರರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.
ಫೆಲಿಕ್ಸ್ ತನ್ನ ಮೂವರು ಸಹಚರರ ಜತೆಗೆ ಸೇರಿ ಪಂಪಾ ಬಡವಾಣೆಯಲ್ಲಿರುವ ಏರೋನಿಕ್ಸ್ ಕಂಪನಿಗೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ತೆರಳಿ ಕಂಪನಿಯ ಎಂಡಿ ಮತ್ತು ಸಿಇಒ ಜೊತೆ ಅರ್ಧ ಗಂಟೆಗಳ ಕಾಲ ಮಾತನಾಡಿದ್ದಾರೆ. ಬಳಿಕ, ಏಕಾಏಕಿ ಫೆಲಿಕ್ಸ್ ತಲ್ವಾರನಿಂದ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದೇ ವೇಳೆ, ಎಂಡಿಯನ್ನು ರಕ್ಷಿಸಲು ಬಂದ ವಿನುಕುಮಾರ್ ಮೇಲೆಯೂ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಈ ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ತುಮಕೂರು ಜಿಲ್ಲೆಯ ಕುಣಿಗಲ್ನಲ್ಲಿ ಬಂಧಿಸಲಾಗಿದೆ.
ಆರೋಪಿಗಳ ಪತ್ತೆಗೆ ಕಾರ್ಯಪ್ರವೃತ್ತರಾದ ಪೊಲೀಸರು
ರಾಜಧಾನಿಯಲ್ಲಿ ಜೋಡಿ ಕೊಲೆ ಪ್ರಕರಣ ದಾಖಲಾಗುತ್ತಿದ್ದಂತೆ, ಅಮೃತಹಳ್ಳಿ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳ ಪತ್ತೆಗೆ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಲ್ಲಿ 5 ತಂಡ ರಚಿಸಿದ್ದರು.
ಆರೋಪಿಗಳ ಪತ್ತೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಮೊಬೈಲ್ ನಂಬರ್ ಟವರ್ ಡಂಪ್ ಆಧರಿಸಿ ಎಸಿಪಿ ರಂಗಪ್ಪ ನೇತೃತ್ವದ ತಂಡದಿಂದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹಾಡಹಗಲೇ ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಮತ್ತು ಸಿಇಒ ಜೋಡಿ ಕೊಲೆ
ಕೊಲೆಗೆ ಸಾಥ್ ನೀಡಿದ ಸಹಚರರು
ಫೆಲಿಕ್ಸ್ನ ಸಹಚರರು ಹಾಗೂ ಆರೋಪಿಗಳಾದ ವಿನಯ್ ಹಾಗೂ ಶಿವು ಎನ್ನುವವರಿಗೆ ಜೋಡಿ ಹತ್ಯೆ ಮಾಡುವ ಉದ್ದೇಶವಿರಲಿಲ್ಲ ಎನ್ನಲಾಗಿದೆ. ಫೆಲಿಕ್ಸ್ ಮಾತು ಕೇಳಿ ಹತ್ಯೆಗೆ ಕೈ ಜೋಡಿಸಿದ್ದಾರೆ.
ಜೋಡಿ ಕೊಲೆಗೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಸುತ್ತಿದ್ದೇವೆ. ಈಗಾಗಲೇ ಪ್ರಮುಖ ಆರೋಪಿಯ ಬಗ್ಗೆ ಮಾಹಿತಿ ಇದೆ. ಹಿಂದುತ್ವ ಸ್ಟೇಟಸ್ ಬಗ್ಗೆ ಮಾಹಿತಿ ಇಲ್ಲ. ತನಿಖೆ ನಡೆಸದೆ ಈ ಹಂತದಲ್ಲಿ ಏನು ಹೇಳಲು ಸಾಧ್ಯವಿಲ್ಲ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಮಾಹಿತಿ ನೀಡಿದ್ದಾರೆ.