“ಸರ್ಕಾರದ ನೀಯಮಗಳನ್ನು ಗಾಳಿಗೆ ತೂರಿ ಯಾವುದೇ ಅಡತಡೆಗಳಿಲ್ಲದೆ ಶಾಸಕರ ಮೂಗಿನ ನೇರಕ್ಕೆ ಖಾಸಗಿ ಕಂಪನಿಗಳು ನೈಸರ್ಗಿಕ ವಿದ್ಯುತ್ ಉತ್ಪಾದನೆಯ ಹೆಸರಿನಲ್ಲಿ ಏಷ್ಯಯಾ ಖಂಡದಲ್ಲಿಯೇ ಅತೀ ಗರಿಷ್ಟ ಪ್ರಮಾಣದ ಭೂಮಿಯನ್ನು ಗದಗ ಜಿಲ್ಲೆ ಒಂದರಲ್ಲಿಯೇ ಮದ್ಯವರ್ತಿಗಳ ಮೂಲಕ ರೈತರಿಂದ ಭೂಮಿಯನ್ನು ಖರೀದಿಸುತ್ತಿವೆ. ಆದರೆ ಸ್ಥಳೀಯ ಶಾಸಕರು ವ್ಯವಸಾಯ ಮಾಡಲು ಭೂಮಿ ಬೇಕು ಎನ್ನುವ ರೈತರಿಗೆ ಭೂಮಿ ನೀಡುತ್ತಿಲ್ಲ” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕ ಕಾರ್ಯದರ್ಶಿ ಎಂ.ಎಸ್.ಹಡಪದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶೀಲ್ದಾರ ಕಚೇರಿಯ ಎದುರು ಸಿಐಟಿಯು ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ರೈತ-ಕಾರ್ಮಿಕರ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
“ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಲಕ್ಷಾಂತರ ಬಡ ದಲಿತ, ಹಿಂದುಳಿದ ವರ್ಗಗಳ ಬಗರ್ ಹುಕಂ ಹಾಗೂ ಅರಣ್ಯ ಸಾಗುವಳಿ ರೈತರ ಭೂಮಿ ಹಕ್ಕು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಸಕ್ರಮ ಸಮಿತಿ ಮುಂದೆ ತರದೇ ತಹಶಿಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಹಂತಗಳಲ್ಲೇ ಕಾನೂನು ಬಾಹಿರವಾಗಿ ವಜಾಗೊಳಿಸಿ ರಾಜ್ಯದ ಎಲ್ಲ ಕಡೆ ನಿರ್ದಯವಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಮೂಲಕ ದೌರ್ಜನ್ಯ ಬಳಸಿ ಒಕ್ಕಲೆಬ್ಬಿಸಲಾಗುತ್ತಿದೆ. ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನವನ್ನು ಮನಸೋ ಇಚ್ಚೆ ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಫಲವತ್ತಾದ ಕೃಷಿ ಭೂಮಿ ಯನ್ನು ಉಳಿಸಿಕೊಳ್ಳದೇ ಆಹಾರ ಭದ್ರತೆಗೆ ಗಂಭೀರ ಆಪಾಯ ತಂದೊಡ್ಡಿದೆ” ಅಸಮಾಧಾನ ವ್ಯಕ್ತಪಡಿಸಿದರು.
“ಶಾಸಕರ ನೇತೃತ್ವದ ಬಗರ್ ಹುಕುಂ ಸಮಿತಿ ತಕ್ಷಣವೇ ಸಮೀಕ್ಷೆ ನಡೆಸಿ ಈ ಭಾಗದ ಅರ್ಹ ಫಲಾನುಭವಿ ರೈತರಿಗೆ ಹಕ್ಕುಪತ್ರ ನೀಡಬೇಕು. ಅಲ್ಲದೇ ಗಜೇಂದ್ರಗಡ ಸುತ್ತಮುತ್ತಲಿನ ಕೆರೆಗಳಿಗೆ ಕೃಷ್ಣ ಭಿ ಸ್ಕೀಂ ಕೊಪ್ಪಳ ಏತ ನೀರಾವರಿ ಮೂರನೇ ಹಂತದ ಯೋಜನೆ ಅಡಿಯಲ್ಲಿ ನೀರು ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಶಾಸಕರಿಗೆ ಆಗ್ರಹಿಸಿದರು.
ಕೃಷಿ ಕೂಲಿಕಾರ್ಮಿಕ ಸಂಘದ ತಾಲ್ಲೂಕ ಅದ್ಯಕ್ಷ ಬಾಲು ರಾಠೋಡ ಮಾತನಾಡಿ, “ಕಳೆದ ವಿಧಾನ ಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕರಾಳ ಕೃಷಿ ಕಾಯ್ದೆಗಳ ರದ್ದತಿ, ಬಲವಂತದ ಭೂ ಸ್ವಾಧೀನಕ್ಕೆ ತಡೆ, ಬಗರ್ ಹುಕಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ರಕ್ಷಣೆ, ಸಂವಿಧಾನ ಹಕ್ಕುಗಳ ಖಾತರಿ, ಕೋಮುವಾದಿ ಕೃತ್ಯಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ, ರೈತರಿಗೆ ಬೆಂಬಲ ಬೆಲೆ ರಕ್ಷಣೆ ಮುಂತಾದ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದರು. ಎರಡು ವರ್ಷಗಳಾದರೂ ಹಿಂದಿನ ಬಿಜೆಪಿ ಸರ್ಕಾರದ ನೀತಿಗಳನ್ನೇ ಮುಂದುವರೆಸುತ್ತಿರುವ ರಾಜ್ಯ ಸರ್ಕಾರ, ವಿದ್ಯುತ್ ಖಾಸಗೀಕರಣ ಸೇರಿದಂತೆ ಮೋದಿ ಸರ್ಕಾರದ ಜನ ವಿರೋಧಿ ಕಾರ್ಪೊರೇಟ್ ಪರವಾದ ಎಲ್ಲಾ ಕ್ರಮಗಳನ್ನು ವೇಗವಾಗಿ ಜಾರಿಗೊಳಿಸುತ್ತಿದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
ಬೀದಿಬದಿ ವ್ಯಾಪಾರಸ್ಥ ಸಂಘದ ತಾಲ್ಲೂಕ ಮುಖಂಡ ಫೀರು ರಾಠೋಡ ಮಾತನಾಡಿ, “ಸ್ಥಳೀಯ ಪುರಸಭೆ ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆಯನ್ನು ಗಾಳಿಗೆ ತೂರಿ ತನ್ನ ಮನಸೋ ಇಚ್ಚೆ ಯಾರದೋ ರಾಜಕೀಯ ಪುಡಾರಿಗಳ ಮಾತುಗಳನ್ನು ಕೇಳಿಸಂಚಾರಕ್ಕೆ ತೊಂದರೆ ಮಾಡುತ್ತಿದ್ದಾರೆ. ಪೋಲೀಸರ ಮೂಲಕ ಭಲವಂತದಿಂದ ಅವರನ್ನು ಸ್ಥಳಾಂತರಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಬೀದಿಬದಿ ವ್ಯಾಪಾರಸ್ಥರಿಗೆ ತುಂಬಾ ತೊಂದರೆ ಆಗುತ್ತಲಿದೆ. ಹಾಗಾಗಿ ಬೀದಿಬದಿ ವ್ಯಾಪಾರಸ್ಥರಿಗೆ ಶಾಸ್ವತ ವ್ಯವಸ್ಥೆ ಕಲ್ಪಿಸಬೇಕು” ಎಂದು ಸ್ಥಳೀಯ ಪುರಸಭೆಯನ್ನು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮನರೇಗಾ ಕಾಮಗಾರಿ ಸ್ಥಳದಲ್ಲಿ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ
ಪ್ರತಿಭಟನಯಲ್ಲಿ ಕರಿಯಮ್ಮ ಗುರಿಕಾರ, ಮೈಬುಸಾಬ ಹವಲ್ದಾರ, ಫಯಾಜ್ ತೋಟದ, ರೂಪಲೇಶ ಮಾಳೋತ್ತರ, ಚನ್ನಪ್ಪ ಗುಗಲೋತ್ತರ, ಅಂದಪ್ಪ ಕುರಿ, ಮಹಾಂತೇಶ ಚಿನ್ನೂರ, ಮೈಸೂರ ರಾಠೋಡ, ವೀರಪ್ಪ ಬಂಡಿವಡ್ಡರ, ವೀರಪ್ಪ ಭೂಸನೂರ, ಪಡಿಯಪ್ಪ ಮಾದರ, ಪರಶೂರಾಮ ಬಡಿಗೇರ, ರಾಜೂ ಮಾಂಡ್ರೆ, ಶಾಮೀದಲಿ ದಿಂಡವಾಡ, ವಿಷ್ಣೂ ಚಂದೂಕರ, ರೇಣುಕಾ ರಾಠೋಡ, ಅಂಬರೇಶ ಚವ್ಹಾಣ, ರಾಘು ಮಾಳೋತ್ತರ, ಪಾಂಡಪ್ಪ ರಾಠೋಡ ಮುಂತಾದವರು ಪಾಲ್ಗೊಂಡಿದ್ದರು.
