- ಭಾರೀ ಮಳೆ ಪರಿಣಾಮ ಹಿಮಾಚಲದಲ್ಲಿ 31 ಸಾವು
- ದೆಹಲಿಯಲ್ಲಿ ಯಮುನಾ ನದಿ ಭರ್ತಿಯಾಗಿ ಪ್ರವಾಹ
ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಒಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು ಮಳೆ ಸಂಬಂಧಿತ ಅವಘಡಗಳಲ್ಲಿ ವಾರಾಂತ್ಯ ಜುಲೈ 9ರ ಹೊತ್ತಿಗೆ ಕನಿಷ್ಠ 41 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಮಳೆ ಸಂಬಂಧಿತ ಅವಘಡಗಳಲ್ಲಿ ಹಿಮಾಚಲ ಪ್ರದೇಶವೊಂದರಲ್ಲೇ 31 ಜನರು ಸಾವನ್ನಪ್ಪಿದ್ದಾರೆ. ಪಂಜಾಬ್‌ನಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ಹಿಮಾಚಲ ಪ್ರದೇಶ ಸರ್ಕಾರ ಮಳೆಯಲ್ಲಿ ಸಿಲುಕಿರುವವರ ರಕ್ಷಣೆಗೆ ಆರು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ.
ದೆಹಲಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಜುಲೈ 9 ರಂದು ಅತ್ಯಂತ ತೇವಯುತ ದಿನ ಎಂದು ಕರೆಯಲಾಗಿದೆ. ಇದು 40 ವರ್ಷಗಳಿಗೂ ಹೆಚ್ಚು ಕಾಲದ ನಂತರ ಸಂಭವಿಸಿದ ದಾಖಲೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಅಣೆಕಟ್ಟೆಯ ತಡೆಗೋಡೆ ಕುಸಿತ
ರಾಜ್ಯದ ಪಂಡೋಹ್ ನಗರದ ಮಾರುಕಟ್ಟೆಯಲ್ಲಿ ಬುಧವಾರ (ಜುಲೈ 12) ಹಠಾತ್ ಪ್ರವಾಹ ಉಂಟಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಅಪಾರ ಹಾನಿ ಸಂಭವಿಸಿದೆ.
ಭಾರೀ ಮಳೆ ಪರಿಣಾಮ ತುಂಬಿದ ಅಣೆಕಟ್ಟು ಈ ಹಠಾತ್ ಪ್ರವಾಹಕ್ಕೆ ಕಾರಣವಾಗಿದೆ. ಮಾರುಕಟ್ಟೆಗೆ ಹೊಂದಿಕೊಂಡಿರುವ ಅಣೆಕಟ್ಟೆಗೆ ಅಡ್ಡಲಾಗಿ ನಿರ್ಮಿಸಿರುವ ಒಂಬತ್ತು ಅಡಿ ಎತ್ತರದ ನೀರಿನ ತಡೆಗೋಡೆಯು ರಭಸವಾಗಿ ನುಗ್ಗಿದ ನೀರಿನ ಹೊಡೆತಕ್ಕೆ ಕುಸಿದು ಬಿದ್ದಿದೆ. ಇದರಿಂದ ಅಪಾರ ಪ್ರಮಾಣದ ನೀರು ಮಾರುಕಟ್ಟೆಗೆ ನುಗ್ಗಿ ಹಾನಿ ಉಂಟು ಮಾಡಿದೆ. ಯಾವುದೇ ಮುನ್ಸೂಚನೆ ನೀಡದೆ ಜಲಾಶಯದ ನೀರನ್ನು ಹೊರಬಿಟ್ಟಿರುವುದು ಅನಾಹುತಕ್ಕೆ ಕಾರಣ ಎನ್ನಲಾಗಿದೆ.
ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಮುಂಗಾರು ಮಳೆಯು ಭಾರೀ ಪ್ರಮಾಣದಲ್ಲಿ ಸುರಿಯುತ್ತಿದೆ. ಇದರಿಂದ ಇಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು ಹೆದ್ದಾರಿಗಳು, ಮನೆಗಳು, ಸೇತುವೆಗಳು ಜಲಾವೃತವಾಗಿವೆ. ಅನೇಕರು ಹೆದ್ದಾರಿಗಳು, ಮನೆಗಳಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
ಪಂಡೋಹ್ ಪ್ರದೇಶದಲ್ಲಿ ಶನಿವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ಇಲ್ಲಿನ ಅಣೆಕಟ್ಟಿನಲ್ಲಿ ಪ್ರಮಾಣ ಹೆಚ್ಚಾಗಿತ್ತು. ಈ ಹಿನ್ನೆಲೆ ಅಧಿಕಾರಿಗಳು ಮಂಡಿ ಜಿಲ್ಲೆಯ ಬೀಸ್ ನದಿಗೆ ಹೆಚ್ಚುವರಿ ನೀರು ಬಿಡಲು ಅಣೆಕಟ್ಟಿನ ದ್ವಾರಗಳನ್ನು ತೆರೆದರು. ಬಿಯಾಸ್ ನದಿ ಉಕ್ಕಿ ಹರಿದು ಔಟ್, ಪಂಡೋಹ್ ಗ್ರಾಮಗಳನ್ನು ಬಂಜಾರ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಕೊಚ್ಚಿ ಹೋಗಿವೆ.
ದೆಹಲಿಯಲ್ಲಿ ಯಮುನಾ ನದಿ ಮಟ್ಟ ಹೆಚ್ಚಳ
ಭಾರೀ ಮಳೆ ಪರಿಣಾಮ ದೆಹಲಿಯಲ್ಲಿ ಯಮುನಾ ನದಿ ಮಟ್ಟದಲ್ಲಿ ಹೆಚ್ಚಳವಾಗಿದೆ. ಇದು ಸಾರ್ವಕಾಲಿಕ ದಾಖಲೆ ಮಟ್ಟ ಎಂದು ವರದಿಯಾಗಿದೆ. ಇದು ಬುಧವಾರದ ಅಂತ್ಯಕ್ಕೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಪರಿಸ್ಥಿತಿ ಅವಲೋಕನಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತುರ್ತು ಸಭೆ ನಡೆಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಪೊಲೀಸ್ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಿದೆ.
ಯಮುನಾ ನದಿಯ ನೀರಿನ ಮಟ್ಟ ಸಾರ್ವಕಾಲಿಕ ದಾಖಲೆ ಮಟ್ಟ (207.55 ಮೀಟರ್) ತಲುಪಿದೆ. ಈ ಮೂಲಕ 45 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. 1978ರಲ್ಲಿ ನೀರಿನ ಮಟ್ಟ 207.49 ಮೀಟರ್ ತಲುಪಿತ್ತು ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಹೇಳಿದೆ.
ಯಮುನಾ ನದಿ ನೀರಿನ ಮಟ್ಟ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಪ್ರವಾಹ ಸೇರಿದಂತೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ಲೋಕೋಪಯೋಗಿ ಸಚಿವೆ ಅತಿಶಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಭಾರತದಲ್ಲಿ ಧಾರಾಕಾರ ಮಳೆ: ಅಪಾಯದ ಮಟ್ಟ ಮೀರಿದ ಯಮುನಾ, ಹೈಅಲರ್ಟ್ ಘೋಷಣೆ
ಯಮುನಾ ನದಿ ಮಟ್ಟ ಹೆಚ್ಚಳವಾಗಿ ಪ್ರವಾಹ ಉಂಟಾಗಿದ್ದ ನದಿ ನೀರು ದೆಹಲಿ ಮನೆಗಳು ಹಾಗೂ ಮಾರುಕಟ್ಟೆಗಳಿಗೆ ನುಗ್ಗಿದೆ. ಮಳೆಯು ಇಲ್ಲಿನ ಜನರ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರೀ ಮಳೆ ಪರಿಣಾಮ ಇನ್ನೂ ಮೂರು ದಿನ ಯಮುನಾ ನದಿ ಮಟ್ಟ ಹೆಚ್ಚಳ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನದಿ ಪ್ರದೇಶದಲ್ಲಿನ ಜನವಸತಿಯನ್ನು ಸ್ಥಳಾಂತರಿಸಲಾಗಿದೆ. ರೈಲ್ವೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹಳೆಯ ದೆಹಲಿಗೆ ಭಾರೀ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.