ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗುವೊಂದು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮೃತ ಮಗುವಿನ ಕುಟುಂಬಸ್ಥರು ನಿನ್ನೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
ತಾಲೂಕಿನ ಕೆಂಚಿಗೊಂಡನಕೊಪ್ಪ ಗ್ರಾಮದ ಸೌಮ್ಯಾ ಸತೀಶ್ ನಾಯ್ಕ ಎಂಬುವವರು ಭಾನುವಾರ ಬೆಳಗ್ಗೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿ, ಮಂಗಳವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದರು. ಜನನದ ಕೆಲವೇ ಸಮಯದಲ್ಲಿ ಮಗು ಮೃತಪಟ್ಟಿದ್ದು, ವಿಳಂಬವಾದ ಚಿಕಿತ್ಸೆ ಇದಕ್ಕೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯ ಕುರಿತು ತಿಳಿದ ಗ್ರಾಮಸ್ಥರೂ ಸ್ಥಳಕ್ಕೆ ಆಗಮಿಸಿ, ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. “ಸಮಯಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಿದ್ದರೆ ಮಗು ಜೀವಂತ ಉಳಿಯುತ್ತಿತ್ತು. ಕೂಡಲೇ ಆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು, ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶಿವಾನಂದ್, ಪಟ್ಟಣ ಠಾಣೆ ಸಬ್‌ಇನ್ಸ್‌ಪೆಕ್ಟರ್ ಶರತ್ ಆಗಮಿಸಿ ಗ್ರಾಮಸ್ಥರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಘಟನೆ ಸಂಬಂಧ ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಡಾ.ಶಿವಾನಂದ, “ಸೌಮ್ಯಾ ಅವರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಎರಡೂ ಇತ್ತು. ವೈದ್ಯರು ಮಗು ಮತ್ತು ತಾಯಿಯ ಪ್ರಾಣ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ ಮಗು ಅಸುನೀಗಿದೆ. ಮಗುವಿನ ತಾಯಿ ಆರೋಗ್ಯವಾಗಿದ್ದಾರೆ. ಮಗುವಿನ ಸಾವಿನ ಬಗ್ಗೆ ಎಂದು ತಿಳಿಸಿದರು.
“ಶಿಕಾರಿಪುರದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಜಿಲ್ಲೆಯಲ್ಲೇ ಹೆರಿಗೆ ಪ್ರಕರಣಗಳ ಸಂಖ್ಯೆಗಿಂತಲೂ ಮುಂಚಿನ ಸ್ಥಾನದಲ್ಲಿದೆ. ನೂರು ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ಪ್ರತಿದಿನ ಸರಾಸರಿ 10ಕ್ಕಿಂತ ಹೆಚ್ಚು ಹೆರಿಗೆಗಳು ಸಂಭವಿಸುತ್ತಿದ್ದು, ಇತರೆ ತಾಲೂಕುಗಳಿಂದಲೂ ಮಹಿಳೆಯರು ಚಿಕಿತ್ಸೆಗಾಗಿ ಇಲ್ಲಿ ಬರುತ್ತಾರೆ. ಆದರೆ ಇತ್ತೀಚೆಗೆ ಅರಿವಳಿಕೆ ತಜ್ಞರ ಕೊರತೆಯು ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಮುಂಚೆಯೇ ತರಲಾಗಿದೆ. ವೈದ್ಯರ ಕೊರತೆಯ ನಡುವೆ, ಒಬ್ಬರು ಮಾತ್ರ ಬೆಳಿಗ್ಗೆ 9ರಿಂದ ರಾತ್ರಿ 9ರ ತನಕ ಕರ್ತವ್ಯ ನಿರ್ವಹಿಸುತ್ತಿದ್ದರು. ಇದು ಹೆಚ್ಚು ಪ್ರಸವ ಪ್ರಕರಣಗಳನ್ನು ನಿಭಾಯಿಸಲು ಸಾಕಾಗದೆ ಸಮಸ್ಯೆ ಉಂಟುಮಾಡಿದೆ. ಹಿಂದೆ ಈ ಕೊರತೆಯನ್ನು ಪಿಜಿ ವೈದ್ಯ ವಿದ್ಯಾರ್ಥಿಗಳ ನೇಮಕದಿಂದ ಕಡಿಮೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಪಿಜಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಿರುವುದರಿಂದ ಅವರು ಕರ್ತವ್ಯದಲ್ಲಿಲ್ಲ.
ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಾಗರ ತಾಲೂಕಿನ ಆನಂದಪುರದಿಂದ ಒಬ್ಬ ವೈದ್ಯರನ್ನು ಶಿಕಾರಿಪುರ ಆಸ್ಪತ್ರೆಗೆ ನಿಯೋಜಿಸಲಾಗಿದೆ. ಮೇಲಧಿಕಾರಿಗಳ ಮಾಹಿತಿಯಂತೆ, ನಾಳೆ 30ಕ್ಕೂ ಹೆಚ್ಚು ಹೆರಿಗೆಗಳು ನಿರೀಕ್ಷೆಯಲ್ಲಿರುವ ಕಾರಣ, ಇನ್ನೂ ಇಬ್ಬರು ಅರಿವಳಿಕೆ ತಜ್ಞರನ್ನು ಕೂಡ ಸೇವೆಗೆ ನಿಯೋಜನೆ ಮಾಡಲಾಗಲಿದೆ” ಎಂದು ತಿಳಿಸಿದರು.
“ಪ್ರಸ್ತುತ ಡಾ. ಗೋವರ್ಧನ್, ಸೌಮ್ಯಾ ಅವರನ್ನು ಪರೀಕ್ಷೆ ಮಾಡಿದ್ದೂ ತದ ನಂತರ ಅವರು ಕೆಲಸ ಮುಗಿದ ನಂತರ ಸೋಮವಾರ ಬೆಳಗ್ಗೆ ಡಾ. ಪೂಜಾ ಅವರು ಸೌಮ್ಯ ಅವರಿಗೆ ಚಿಕಿತ್ಸೆ ಮುಂದುವರೆಸಿದ್ದರು. ಮಗು ತುಂಬಾ ಚೆನ್ನಾಗಿ ಆರೋಗ್ಯವಾಗಿತ್ತು ಹಾಗೂ ಹೃದಯ ಬಡಿತ ಚೆನ್ನಾಗಿತ್ತು. ಆದರೆ, ತಾಯಿಗೆ ಬಿಪಿ ಮಧುಮೇಹ ಜಾಸ್ತಿ ಆದ ಕಾರಣ ಮಗುವಿನ ಮೆಲೆ ಪರಿಣಾಮ ಬೀರಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದರು. ಆರೋಗ್ಯವಂತ ಮಗು ಸಾವನ್ನಪ್ಪಿರುವುದು ನಮಗೂ ಸಹ ಆಶ್ಚರ್ಯ ಮೂಡಿದೆ” ಎಂದರು.
ವೈದ್ಯರು ಲಂಚ ಪಡೆದು ಚಿಕಿತ್ಸೆ ಕೊಡುತ್ತಾರೆ. ಇದು ಮಾಮೂಲಿ ಆಗಿದೆ. ಅರವಳಿಕೆ ವೈದ್ಯರು ಇಲ್ಲದ ಕಾರಣ ಎರಡು ದಿನ ತಡವಾಗಿ ಹೆರಿಗೆ ಮಾಡಿಸಿದ್ದಾರೆ. ಇಷ್ಟೇ ಅಲ್ಲದೆ ಡಾ.ಗೋವರ್ಧನ್ ಮದ್ಯವ್ಯಸನಿ ಎಂದು ಮೃತ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.
ವೈದ್ಯಧಿಕಾರಿ ಡಾ.ಶಿವಾನಂದ ಈ ದಿನದೊಂದಿಗೆ ಮಾತನಾಡಿ, “ನಾವು ಎಲ್ಲವನ್ನೂ ಪರಿಶೀಲಿಸಿದ್ದೇವೆ. ಆದರೆ ಡಾ.ಗೋವರ್ಧನ್ ಕೆಲಸದ ಸಮಯ ಭಾನುವಾರ ರಾತ್ರಿ ಮುಗಿದಿದೆ. ತದ ನಂತರ ಇದ್ದಂತ ವೈದ್ಯರು ಡಾ.ಪೂಜಾ ಅವರಿಗೆ ಪೇಶಂಟ್ ಮಾಹಿತಿಯನ್ನು ಹಸ್ತಾಂತರ ಮಾಡಿದ್ದರು. ಅದರಂತೆ ಡಾ. ಪೂಜಾ ಚಿಕಿತ್ಸೆ ಮುಂದುವರೆಸಿದ್ದರು. ಆದರೆ, ಸೋಮುವಾರ ಸಂಜೆ 4 ಗಂಟೆಗೆ ಡಾ.ಪೂಜಾ ಕುಟುಂಬಸ್ತರಿಗೆ ತಿಳಿಸಿದ್ದಾರೆ ಬಿಪಿ ಹಾಗೂ ಮಧುಮೇಹ ಸರಿಯಾಗುತ್ತಿಲ್ಲ ಹಾಗಾಗಿ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಆದರೆ, ಕುಟುಂಬದವರು ನಿರಾಕರಿಸಿದರು ಎಂದರು. ಜೊತೆಗೆ ವೈದ್ಯರಾದ ಡಾ.ಗೋವರ್ಧನ್ ಅವರು ಕರ್ತವ್ಯ ವೇಳೆಯಲ್ಲಿ ಮದ್ಯಪಾನ ಮಾಡಿದ ಉದಾಹರಣೆ ಇಲ್ಲ 10 ರಿಂದ 12 ವರ್ಷದಿಂದ ಇಲ್ಲೇ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಇತ್ತೀಚಿನ ದಿನಗಳಲ್ಲಿ ಅವರಿಗೆ ಅರೋಗ್ಯ ಸಮಸ್ಯೆಯಿದೆ. ಬಿಪಿ, ಮಧುಮೇಹ ಹಾಗೂ ಕ್ಯಾನ್ಸರ್ ಆಗಿದೆ ಹೀಗಿರುವ ಕಾರಣ ಅವರು ಸಹ 3 ತಿಂಗಳು ರಜೆಯಲ್ಲಿದ್ದರು. ಈಗ ಸ್ವಲ್ಪ ಗುಣಮುಖರಾಗುತ್ತಿದ್ದಾರೆ” ಎಂದು ಕುಟುಂಬಸ್ಥರ ಆರೋಪವನ್ನು ತಳ್ಳಿಹಾಕಿದರು.
ಇದನ್ನೂ ಓದಿ: ಶಿವಮೊಗ್ಗ | ದೇಶ, ದೇಶದ ಐಕ್ಯತೆ ಮುಖ್ಯ;ಶಿವರಾಜ್ ತಂಗಡಗಿ
ಶಿಕಾರಿಪುರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತ ಘಟನೆ, ಸರ್ಕಾರೀ ಆಸ್ಪತ್ರೆಗಳ ಸಿಬ್ಬಂದಿ ಕೊರತೆ ಮತ್ತು ವ್ಯವಸ್ಥಾಪನಾ ದುರ್ಬಲತೆಗಳನ್ನು ಬೆಳಕಿಗೆ ತಂದಿದೆ. ದಿನೇದಿನೆ ಹೆಚ್ಚುತ್ತಿರುವ ಹೆರಿಗೆ ಪ್ರಕರಣಗಳಿಗೆ ಅನುಗುಣವಾಗಿ ವೈದ್ಯರು ಮತ್ತು ತಜ್ಞರ ನೇಮಕ ಖಂಡಿತವಾಗಿಯೂ ಅಗತ್ಯವಾಗಿದೆ. ತಾತ್ಕಾಲಿಕ ಸಿದ್ಧತೆಗಳು ಜವಾಬ್ದಾರಿಯ ಚಿಹ್ನೆಯಾಗಿದ್ದರೂ, ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವುದು ಅತ್ಯವಶ್ಯ. ಆಸ್ಪತ್ರೆಗಳ ಆರೋಗ್ಯವೇ ಪ್ರಜೆಯ ಆರೋಗ್ಯದ ಪ್ರತಿರೂಪವಾಗಿರುವ ಈ ಸಂದರ್ಭದಲ್ಲಿ, ಸಾರ್ವಜನಿಕ ನಂಬಿಕೆಯನ್ನು ಕಾಪಾಡುವ ನೈತಿಕ ಜವಾಬ್ದಾರಿ ವ್ಯವಸ್ಥಾಪಕರ ಮೇಲಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.