ಕರ್ನಾಟಕ ರಾಜ್ಯಕ್ಕೆ ರಾಷ್ಟ್ರಪತಿಗಳಿಂದ ಅಧಿಸೂಚಿತ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಇಲ್ಲದ ‘ಮೇರಾ’ ಮತ್ತು ‘ಮನ್ಸ’ ಹೆಸರಿನ ಜಾತಿಗಳನ್ನು ಒಳ ಮೀಸಲಾತಿ ಕುರಿತ ಸಮೀಕ್ಷೆಯಲ್ಲಿ ಆದಿದ್ರಾವಿಡ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಿಸಿರುವ ಉಡುಪಿ ಜಿಲ್ಲಾಧಿಕಾರಿಗಳ ಕ್ರಮವನ್ನು ‘ಸಂವಿಧಾನ ವಿರೋಧಿ ಹಾಗೂ ಕಾನೂನು ಬಾಹಿರ’ ಎಂದು ಹೇಳಿರುವ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟವು, ಇದಕ್ಕೆ ತನ್ನ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.
ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ ದೂರು ಸಲ್ಲಿಸಿರುವ ಮಹಾ ಒಕ್ಕೂಟದ ನಿಯೋಗವು, ಸಂವಿಧಾನದ ವಿಧಿ 341(1) ರಡಿಯಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳು ಅಧಿಸೂಚಿಸಿರುವ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 (ತಿದ್ದುಪಡಿಗಳು ಸೇರಿದಂತೆ) ದಲ್ಲಿ ನಮ್ಮ ರಾಜ್ಯಕ್ಕೆ ಪಟ್ಟಿ ಮಾಡಲಾದ 101 ಜಾತಿಗಳನ್ನು ಹೊರತು ಪಡಿಸಿ, ಬೇರೆ ಯಾವುದೇ ಜಾತಿ ಅಥವಾ ಜಾತಿಗಳನ್ನು ಯಾವುದೇ ಕಾರಣಕ್ಕೂ ಈ ಪಟ್ಟಿಗೆ ಅಥವಾ ಪಟ್ಟಿಯಲ್ಲಿರುವ ಯಾವುದೇ ಜಾತಿಗೆ ಸೇರಿಸುವ ಅಥವಾ ಕಡಿತಗೊಳಿಸುವ ಅಧಿಕಾರ ಕೇವಲ ಭಾರತದ ಸಂಸತ್ತಿಗೆ ಮಾತ್ರ ಇದೆ. ಇದರ ಯಾವುದೇ ರೀತಿಯ ಉಲ್ಲಂಘನೆ ಸಂವಿಧಾನ ವಿರೋಧಿ ಹಾಗೂ ಕಾನೂನು ಬಾಹಿರ ಕೃತ್ಯ ಎನಿಸಿಕೊಳ್ಳುತ್ತದೆ ಎಂದು ಸರಕಾರದ ಗಮನ ಸೆಳೆದಿದೆ.

ಇಂದು ಉಡುಪಿಯಲ್ಲಿ ಪತ್ರಿಕಾ ಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಅವರು, ‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇರಾ ಮತ್ತು ಮಾನ್ಸಾ ಜಾತಿ ಎರಡರಲ್ಲಿ ಗೊಂದಲವಿದೆ. ಈ ಜಾತಿಯನ್ನು ಆದಿದ್ರಾವಿಡ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಸರಕಾರಕ್ಕೆ ವರದಿ ಕಳುಹಿಸಲಾಗಿದೆ’ ಎಂದು ಒಳಮೀಸಲಾತಿ ಸಮೀಕ್ಷೆ ಕುರಿತು ಇದೇ ಮೇ 17 ರ ಶನಿವಾರ ಸುದ್ಧಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ ಎಂದು ಉದಯವಾಣಿ (ದಿನಾಂಕ 18.05.2025) ಪತ್ರಿಕೆ ವರದಿ ಮಾಡಿದ್ದು, ಈ ಬಗ್ಗೆ ಮಹಾಒಕ್ಕೂಟವು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಪರ ಪೊಲೀಸ್ ಮಹಾ ನಿರ್ದೇಶಕರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಗಮನವನ್ನೂ ಸೆಳೆದಿದೆ ಎಂದು ತಿಳಿಸಿದ್ದಾರೆ.
‘ಇದನ್ನು ಅತ್ಯಂತ ಆಘಾತಕಾರಿ, ಸಂವಿಧಾನ ವಿರೋಧಿ ಹಾಗೂ ಕಾನೂನು ಬಾಹಿರ ಕ್ರಮ ಎಂದು ಬಣ್ಣಿಸಿರುವ ಲೋಲಾಕ್ಷ, ಕರ್ನಾಟಕ ರಾಜ್ಯಕ್ಕೆ ಅಧಿಸೂಚಿತ ಪರಿಶಿಷ್ಟ ಜಾತಿಗಳ (101 ಜಾತಿಗಳು ಮಾತ್ರಾ) ಪಟ್ಟಿಯಲ್ಲಿ ಇಲ್ಲದ ಮೇರಾ ಮತ್ತು ಮನ್ಸ ಎಂಬ ಎರಡು ಜಾತಿಗಳನ್ನು ಆದಿದ್ರಾವಿಡ ಪಟ್ಟಿಯಲ್ಲಿ (?) ಸೇರಿಸಲು ಸಂವಿಧಾನ ವಿರೋಧಿಯಾಗಿ ಮತ್ತು ಕಾನೂನು ಬಾಹಿರವಾಗಿ ಅವಕಾಶ ಮಾಡಿಕೊಟ್ಟು ಡಾ. ಕೆ. ವಿದ್ಯಾಕುಮಾರಿ ಅವರು ಜಿಲ್ಲಾಧಿಕಾರಿ, ಜಿಲ್ಲಾ ದಂಡಾಧಿಕಾರಿ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ (ದೌರ್ಜನ್ಯ ತಡೆ) ಕಾಯ್ದೆ, 1989 (ತಿದ್ದುಪಡಿಗಳು ಸೇರಿದಂತೆ) ಮತ್ತು ನಿಯಮಾವಳಿ 1995 ರನ್ವಯ ಪರಿಶಿಷ್ಟ ಸಮುದಾಯಗಳ ದೌರ್ಜನ್ಯ ತಡೆ ಕುರಿತು ರಚನೆಯಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಅಧ್ಯಕ್ಷರ ಹುದ್ದೆಗಳ ಘನತೆಗೆ ಮತ್ತು ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ. ಭಾರತದ ಸಂವಿಧಾನದಡಿಯಲ್ಲಿ ಸಂಸತ್ತಿಗೆ ದತ್ತವಾಗಿರುವ ಈ ವಿಶೇಷ ಅಧಿಕಾರವನ್ನು ಓರ್ವ ಜಿಲ್ಲಾಧಿಕಾರಿ ಬಳಸಿರುವುದನ್ನು ಅಧಿಕಾರ ದುರ್ಬಳಕೆಯ ಪರಮಾವಧಿ ಎಂದೇ ಪರಿಗಣಿಸ ಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸದ್ರಿ ಜಿಲ್ಲಾಧಿಕಾರಿಗಳ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ, ಸಂವಿಧಾನ ವಿರೋಧಿ ಮತ್ತು ಕಾನೂನು ಬಾಹಿರ ವಿಧಾನದ ಮೂಲಕ ನಡೆಸಲಾದ ಒಳಮೀಸಲಾತಿ ಕುರಿತ ಸಮೀಕ್ಷೆಗೆ ಕಾನೂನಿನ ಮಾನ್ಯತೆ ಇರಲು ಸಾಧ್ಯವಿಲ್ಲ. ಆದ್ದರಿಂದ, ಇದನ್ನು ರಾಜ್ಯ ಸರಕಾರ ಮತ್ತು ನ್ಯಾ. ಹೆಚ್ ಎನ್ ನಾಗಮೋಹನದಾಸ ಏಕ ಸದಸ್ಯ ವಿಚಾರಣಾ ಆಯೋಗ ಮಾನ್ಯ ಮಾಡಬಾರದು ಮತ್ತು ಈ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ಕ್ರಮಗಳನ್ನು ಸಂಬಂಧ ಪಟ್ಟ ಎಲ್ಲರೂ ತುರ್ತಾಗಿ ಕೈಗೊಳ್ಳಬೇಕು ಎಂದು ಮಹಾ ಒಕ್ಕೂಟದ ಅಧ್ಯಕ್ಷರು ಅಗ್ರಹಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಹಾಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ್ ಕೊಂಚಾಡಿ, ರಾಜ್ಯ ಆದಿದ್ರಾವಿಡ ಸಮಾಜದ ರಾಜ್ಯ ಅಧ್ಯಕ್ಷ ಗಣೇಶ್ ಪ್ರಸಾದ್, ರಾಜ್ಯ ಮುಖಂಡ ಅನಿಲ್ ಕಂಕನಾಡಿ, ಉಡುಪಿಯ ಮುಂಡಾಲ ಸಮಾಜದ ಮುಖಂಡ ಬಿ ಕೆ ರಾಜು ಮತ್ತಿತರರು ಉಪಸ್ಥಿತರಿದ್ದರು.